ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಈ ಯಪ್ಪನ ಮೇಲೆ ಮೊದಲೇ ಡೌಟಿತ್ತು!

By ಶಾಂತಲಾ ಡಿ.ವಿ., ಬೆಂಗಳೂರು
|
Google Oneindia Kannada News

I had doubt on Rishi Kumar swamiji
ಫೇಸ್ ಬುಕ್ಕಿನಲ್ಲಿ ಇವತ್ತೊಂದು ಉತ್ತಮವಾದ ಚರ್ಚೆಯೊಂದನ್ನು ನೋಡಿದೆ. ಶಕುಂತಲಾ ಅಯ್ಯರ್ ಎಂಬುವವರೊಬ್ಬರು ಈ ಚರ್ಚೆಗೆ ನಾಂದಿ ಹಾಡಿದ್ದಾರೆ. ಉತ್ತಮ ಆಡಳಿತಕ್ಕಾಗಿ ಡ್ರೆಸ್ ಕೋಡ್ ಬರೆಯಲು ತಮಗೇನಾದರೂ ಕೇಳಿಕೊಂಡರೆ,

1) ರಾಜಕಾರಣಿಗಳು ಬಿಳಿ ಬಟ್ಟೆ ಧರಿಸಬಾರದು. ಏಕೆಂದರೆ ಅವರು ಶ್ವೇತ ದಿರಿಸಿಗೆ ಅರ್ಹರಲ್ಲ.
2) ನಿಜವಾದ ಯೋಗಿಗಳನ್ನು ಹೊರತುಪಡಿಸಿ ಯಾವ ಸ್ವಾಮೀಜಿಗಳೂ ಕಾವಿ ಧರಿಸಬಾರದು. ಏಕೆಂದರೆ, ಕಾವಿ ತ್ಯಾಗ ಸಂಕೇತ, ಆಸ್ತಿಪಾಸ್ತಿ ಸಂಗ್ರಹಿಸಲಿಕ್ಕಲ್ಲ.
3) ಮಕ್ಕಳಿಗೆ ಸಮವಸ್ತ್ರ ಇರಲೇಬಾರದು. ಏಕೆಂದರೆ, ಮಕ್ಕಳು ಯಾವತ್ತೂ ಕಲರ್‌ಫುಲ್ ಆಗಿರಬೇಕು.

ಇವು ನಿಜಕ್ಕೂ ಒಪ್ಪುವಂತಹ ಮಾತುಗಳು. ಅದರಲ್ಲೂ ನಿಜಕ್ಕೂ ಸಮಾಜದ ಒಳಿತಿಗಾಗಿ ಚಿಂತಿಸುತ್ತಿರುವವರು, ವಿದ್ಯಾಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಜನೆ ಮಾಡುತ್ತಿರುವವರು, ತ್ಯಾಗಮಯಿಯಾಗಿ ಜೀವಿಸುತ್ತಿರುವ ಮಠಾಧಿಪತಿಗಳು, ಸ್ವಾಮೀಜಿಗಳನ್ನು ಹೊರತುಪಡಿಸಿ ಉಳಿದವರಿಗೆ ಕಾವಿ ಇರಲೇಬಾರದು ಎಂಬುದು ಇಲ್ಲಿಯ ವಾದ.

ಕಾವಿ ಧರಿಸಿಬಿಟ್ಟರೆ ತಾವು ಸ್ವಾಮೀಜಿಗಳಂತಾಗಿಬಿಡುತ್ತೇವೆ, ರಾಜಕಾರಣಿಗಳೆಲ್ಲ ತಮ್ಮ ಕಾಲಿಗೆ ಎರಗಿಬಿಡುತ್ತಾರೆ, ಇಡೀ ಸಮಾಜ ತಮ್ಮ ಪಾದಧೂಳಿ ಹಣೆಗೆ ಇಟ್ಟುಕೊಂಡೇ ಮುಂದಡಿಯಿಡುತ್ತದೆ, ಏನೇ ಕೃತ್ಯ ಎಸಗಿದರೂ ಕೇಳುವವರಿರುವುದಿಲ್ಲ ಎಂಬ ಮನೋಭಾವದಿಂದ ಕಂಡಕಂಡವರೆಲ್ಲ ಸ್ವಾಮೀಜಿಯ ಗೆಟಪ್ ಧರಿಸುತ್ತಿದ್ದಾರೆ. ಕೋಟಿ ಕೋಟಿ ಹಣ, ಕಾರು ಕೇಳಲು ಸಿಕ್ಕಿಬಿದ್ದಿರುವ ಕಾಳಿಕಾ ಮಠದ ಋಷಿಕುಮಾರ (ಸ್ವಾಮೀಜಿ) ಇಂಥ ವಿದ್ಯಮಾನಕ್ಕೆ ಜ್ವಲಂತ ಸಾಕ್ಷಿ.

ಇವನು ಒಬ್ಬನಾದರೆ ಇನ್ನೊಬ್ಬ ನಿತ್ಯಾನಂದ (ಸ್ವಾಮಿ). ಇಬ್ಬರೂ ತಾವೇ ಸಾಚಾಗಳು, ಇನ್ನೊಬ್ಬರು ಅನಾಚಾರಿಗಳು ಎಂದು ಒಬ್ಬರನ್ನೊಬ್ಬರ ಅಂಗಿ ಹಿಡಿದಿ ಕಿತ್ತಾಡಿದವರೇ. ಇಂಥವರಿಂದಾಗಿ ಮಠಾಧಿಪತಿಗಳನ್ನು ಸೇರಿಸಿ ಎಲ್ಲ ಕಾವಿಧಾರಿಗಳನ್ನು ಜನರು ಅನುಮಾನದಿಂದ ನೋಡುವಂತಾಗಿದೆ. ಯಾವ ಕಾವಿಧಾರಿಯೊಳಗೆ ಎಂತಹ ಹಾವು ಸೇರಿಕೊಂಡಿರುತ್ತದೋ? ಇಂಥವರಿಗೆಲ್ಲ ಕಂಡಕೂಡಲೆ ಯಾಕೆ ಅಡ್ಡ ಬೀಳುತ್ತಾರೋ ಈ ಜನರು?

ಈ ಯಪ್ಪನ ಬಗ್ಗೆ ನನಗೆ ಮೊದಲೇ ಡೌಟಿತ್ತು. ಲೆಕ್ಕಕ್ಕೇ ಇಲ್ಲದಿದ್ದ ಈ ಋಷಿಕುಮಾರ, ನಿತ್ಯಾನಂದ-ಆರತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಒಂದೊಂದೇ ಚಾನಲ್ಲುಗಳಲ್ಲಿ ವಕ್ಕರಿಸಲು ಶುರುಮಾಡಿದ್ದ. ಒಂದು ಚಾನಲ್ಲು ಈತನನ್ನು ಪರ್ಮನೆಂಟಾಗಿ ಅಪಾಯಿಂಟ್ಮೆಂಟ್ ಮಾಡಿದೆಯೇನೋ ಎನ್ನುವಷ್ಟರ ಮಟ್ಟಿಗೆ ಪ್ಯಾನಲ್ ಚರ್ಚೆಗಳಲ್ಲಿ ಅವತರಿಸುತ್ತಿದ್ದ. ಆಂಕರುಗಳಿಗೆ ಕೂಡ ಅವಕಾಶ ನೀಡದಂತೆ ಪುಂಖಾನುಪುಂಖವಾಗಿ ಈತನ ಬಾಯಿಯಿಂದ ಬರುತ್ತಿದ್ದ ಪದಗಳನ್ನು ಕೇಳುತ್ತಿದ್ದರೆ ಈತ ಬರೀ ಮಾತಿನ ಸ್ಟಂಟ್ ಮಾಸ್ಟರ್ ಎಂದು ಯಾರಿಗಾದರೂ ಅನುಮಾನ ಬರುತ್ತಿತ್ತು.

ಋಷಿಕುಮಾರನ ಮಾತಿನ ಆರ್ಭಟ ಕಂಡು ಇಡೀ ಕಾವಿಸಮೂಹವೇ ಬೆಚ್ಚಿಬಿದ್ದಿತ್ತು. ನಿತ್ಯಾನಂದ ಅರೆಸ್ಟ್ ಆಗಲೇಬೇಕೆಂದು ಈತ ಉಪವಾಸಕ್ಕೆ ಕುಳಿತು ಆಸ್ಪತ್ರೆ ಸೇರಿದ ನಾಟಕವಾಡಿದ್ದೇನು, ಯಾರದೋ ಮಕ್ಕಳನ್ನು ನಿತ್ಯಾನಂದ ಹಿಡಿದಿಟ್ಟುಕೊಂಡಿದ್ದಾನೆಂದು ಯಾರೋ ತಂದೆತಾಯಿಯರಿಗಾಗಿ ಗಳಗಳನೆ ಅತ್ತಿದ್ದೇನು, ನಟ ಯಶ್ ವಿರುದ್ಧ ಚೀಟಿ ಅವ್ಯವಹಾರ ಬಯಲಿಗೆಳೆದ ಆರೋಪ ಮಾಡಿದ ಹಾರಾಟ ಮಾಡಿದ್ದೇನು. ಮಾತನ್ನೇ ಬಂಡವಾಳ ಮಾಡಿಕೊಂಡಿದ್ದ ಋಷಿ ಈಗ ಸ್ಟಿಂಗ್ ಆಪರೇಷನ್ನಿನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಈಗಂತೂ ಪ್ರತಿ ಚಾನಲ್ಲಿನಲ್ಲಿ ಕಾವಿಧಾರಿಗಳನ್ನು ಕೂಡಿಸಿಕೊಂಡು ಪ್ಯಾನಲ್ ಡಿಸ್ಕಶನ್ ಮಾಡದಿದ್ದರೆ ಜನರನ್ನು ಸೆಳೆಯವುದು ಕಷ್ಟ ಎಂದು ತಿಳಿದಂತಿವೆ. ಯಡಿಯೂರಪ್ಪ ಬಿಜೆಪಿ ಬಿಡ್ತಾರಾ ಇಲ್ಲವಾ, ಅವರ ಜಾತಕ ಏನು ಹೇಳುತ್ತೆ, ಪ್ರಳಯ ಸಂಭವಿಸುತ್ತಾ ಇಲ್ಲವಾ ಇಂಥವೇ ವಿಷಯ ಇಟ್ಟುಕೊಂಡು ಜ್ಯೋತಿಷಿಗಳನ್ನು, ಕಾವಿಧಾರಿಗಳನ್ನು ಸ್ಟುಡಿಯೋಗೆ ಕರೆಸಿ ಚರ್ಚೆ ಮಾಡಿದ್ದೇ ಮಾಡಿತ್ತು. ಇಂಥ ಚರ್ಚೆಗಳಿಂದ ಜನರಿಗೆ ಸಖತ್ ಮನರಂಜನೆ ಸಿಗುತ್ತಿದೆಯೇ ಹೊರತು, ಸಮಾಜಕ್ಕೆ ನೈಯಾಪೈಸೆ ಪ್ರಯೋಜನವಾಗುತ್ತಿಲ್ಲ. ಕೆಲಸಕ್ಕೆ ಬಾರದ ಕಾವಿಧಾರಿಗಳನ್ನು ಲೈಮ್ ಲೈಟಿಗೆ ತಂದು ಅವರ 'ಪ್ರಭಾವ' ಬೆಳೆಯುವಂತೆ ಮಾಡಿದ್ದೇ ಟಿವಿ ಚಾನಲ್ಲುಗಳು ಎಂಬಂತಾಗಿದೆ.

ಜ್ಞಾನವಂತ ಸ್ವಾಮೀಜಿಗಳಿಂದ ಟಿವಿಗಳ ಮುಖಾಂತರ ನಮ್ಮ ಅರಿವನ್ನು ಬೆಳೆಸಿಕೊಳ್ಳುವುದು ಒಳ್ಳೆಯದೆ. ಆದರೆ, ಕಾವಿಧಾರಿಗಳಲ್ಲಿ ಯಾರು ಅಸಲಿ, ಯಾರು ನಕಲಿ ಎಂಬುದನ್ನು ಅರಿಯಲು ವಿಫಲರಾದರೆ ಋಷಿಕುಮಾರ ಮಾಡಿದಂತಹ ಅನಾಹುತಗಳಾಗುತ್ತವೆ. ಇದಕ್ಕೆಲ್ಲ ಯಾರು ಹೊಣೆ? ಋಷಿಕುಮಾರ ಯಾರೆಂದೇ ತಿಳಿದಿರದಿದ್ದರೆ ಆತ ಹದ್ದುಮೀರಿ ಬೆಳೆಯುತ್ತಿರಲಿಲ್ಲ. ಬಡಾಯಿ ಕೊಚ್ಚಿಕೊಳ್ಳುತ್ತಲೇ ಬಂಡವಾಳ ಮಾಡಿಕೊಂಡ ಕಾಳಿ ಸ್ವಾಮಿಯ ಬಂಡವಾಳವೆಲ್ಲ ಬಯಲಾಗಿದೆ. ನಿತ್ಯಾನಂದ ಇನ್ನಷ್ಟು ಜೋರಾಗಿ ನಗುತ್ತಿರಬಹುದು. ಇಂಥ ನನ್ಮಕ್ಕಳ ಕಾವಿ ಕಿತ್ತುಬಿಸಾಡುವ ತಾಕತ್ತು ಯಾರಿಗಿದೆ?

English summary
Letter to the editor : Shanthala DV from Bangalore says when she saw Rishi Kumar swamiji on TV she had doubts about his credentials. Now, her doubts have come true. Rishi Kumar of Kali Matha was caught in a sting operation by Public TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X