ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ತಂದ ಮುತ್ಸದ್ದಿ ರಾಮಕೃಷ್ಣ ಹೆಗಡೆ

By * ಗೋವಿಂದ ಎಂ. ಕಾರಜೋಳ, ಸಚಿವರು
|
Google Oneindia Kannada News

rk-hegde-85th-birth-day-lokayukta-founder
ನವದೆಹಲಿಯಲ್ಲಿ ಇದೀಗ ಅಣ್ಣಾ ಹಜಾರೆಯವರು ಉಪವಾಸ ನಿಲ್ಲಿಸಿದ್ದಾರೆ. ಸತ್ಯಾಗ್ರಹ ನಿಲ್ಲಿಸಿದ ಮರುದಿನ ನಾಡಿನ ಚೈತನ್ಯಶೀಲ ಧುರೀಣ ರಾಮಕೃಷ್ಣ ಹೆಗಡೆಯವರ 85ನೆಯ ಜನ್ಮದಿನ ಬಂದಿದೆ.

ಅಣ್ಣಾ ಹಜಾರೆಯವರ ಸೃಜನಶೀಲ ಚಿಂತನೆಗಳಿಗೂ ರಾಮಕೃಷ್ಣ ಹೆಗಡೆಯವರು ಕಾರ್ಯರೂಪಕ್ಕೆ ತಂದ ರಚನಾತ್ಮಕ ಯೋಜನೆಗಳಿಗೂ ಸಾಮ್ಯ ಇರುವುದು ಹೆಗಡೆಯವರ ಪ್ರಸ್ತುತತೆಗೆ ನಿದರ್ಶನ.

ಮುಖ್ಯಮಂತ್ರಿಗಳಾಗಿದ್ದಾಗ ಹೆಗಡೆಯವರು ಧಾರವಾಡ ಜಿಲ್ಲೆಯ ಒಂದು ಪ್ರವಾಸದಲ್ಲಿದ್ದರು. ನಾನು ಅವರೊಂದಿಗೆ ಇದ್ದೆ. ಅಂದು ಗೋಕುಲಾಷ್ಟಮಿ. ಅಂದೇ ಅವರ ಜನ್ಮದಿನ.

ನಾವಿದ್ದುದು ಶಿಗ್ಗಾವಿಯಲ್ಲಿ. 'ಜನ್ಮದಿನ ಹೇಗೆ ಆಚರಿಸೋಣ' ಎಂಬ ಕಾರ್ಯಕರ್ತರ ಉತ್ಸಾಹಕ್ಕೆ ಹೆಗಡೆಯವರೇ ಪರಿಹಾರ ಸೂಚಿಸಿದ್ದರು. ಶಿಗ್ಗಾವಿಯ ಬಳಿ ಇದ್ದ ಸಂತ, ದಾರ್ಶನಿಕ, ಕವಿ ಶಿಶುನಾಳ ಷರೀಫರ ಗದ್ದುಗೆಗೆ ಹೋಗಿ, ಸಂತನ ದರ್ಶನ ಪಡೆದು ಹೆಗಡೆಯವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಪ್ರಜಾತಂತ್ರ ವ್ಯವಸ್ಥೆಯ ನಮ್ಮ ಸಾರ್ವಜನಿಕ ಜೀವನದಲ್ಲಿ, ಅದರಲ್ಲಿಯೂ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಬಗೆಗೆ ಅಣ್ಣಾ ಹಜಾರೆ ಮತ್ತು ಹೆಗಡೆ ಬಹುತೇಕ ಏಕರೀತಿಯ ಚಿಂತನೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಇಪ್ಪತ್ತೈದು ವರುಷಗಳಿಂದ ಜಾರಿಯಲ್ಲಿರುವ ಲೋಕಾಯುಕ್ತ ವ್ಯವಸ್ಥೆಯನ್ನು ರೂಪಿಸಿದವರು ರಾಮಕೃಷ್ಣ ಹೆಗಡೆ. 1986 ರಿಂದ ಇಂದಿನವರೆಗೆ ಆಡಳಿತದಲ್ಲಿ ಭ್ರಷ್ಟಾಚಾರ ನುಸುಳದಂತೆ ಹಲವಾರು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಲೋಕಾಯುಕ್ತ ಸಂಸ್ಥೆ ಶ್ರಮಿಸುತ್ತಿರುವುದನ್ನು ನಾವು ಕಂಡಿದ್ದೇವೆ.

ಭ್ರಷ್ಟಾಚಾರದಲ್ಲಿ ತೊಡಗಿದ ಅತಿರಥ, ಮಹಾರಥರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತಲೆ ತಗ್ಗಿಸುವ ಸ್ಥಿತಿ ಮೂಡಿಸಲು ಲೋಕಾಯುಕ್ತ ಸಂಸ್ಥೆಯೇ ಕಾರಣ.

ಭ್ರಷ್ಟಾಚಾರ, ವಂಚನೆ, ಅಕ್ರಮ, ಅವ್ಯವಹಾರ, ಸ್ವಜನ ಪಕ್ಷಪಾತ-ಇವೇ ಮೊದಲಾದ ದುರ್ವ್ಯಸನಗಳಿಗೆ ಬಲಿಯಾದ ಜನನಾಯಕರ ಮುಖವಾಡ ಬಯಲಾಗಿ, ಅಂತಹ ವ್ಯಕ್ತಿಗಳು ಶಿಕ್ಷೆಗೆ ಗುರಿಯಾದರೆ ಲೋಕಾಯುಕ್ತ ಕಾನೂನಿನ ಶಿಲ್ಪಿ ರಾಮಕೃಷ್ಣ ಹೆಗಡೆಯವರಿಗೆ ಬೇರೇನೂ ಸೂಕ್ತ ಶ್ರದ್ಧಾಂಜಲಿಯ ಅವಶ್ಯಕತೆ ಇಲ್ಲ. ಇಂದು ಅಣ್ಣಾ ಹಜಾರೆಯವರ ಅಭಿಲಾಷೆಯೂ ಇದೇ ಆಗಿದೆ.

ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯ ಘನತೆ, ಕಾರ್ಯವ್ಯಾಪ್ತಿ ಮತ್ತು ಉತ್ತರದಾಯಿತ್ವ ಪ್ರತಿಷ್ಠೆಯನ್ನು ಹೆಚ್ಚಿಸಿದವರು ಇತ್ತೀಚೆಗೆ ನಿವೃತ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು. ಚುನಾವಣೆ ಆಯೋಗಕ್ಕೆ ಹೊಸ ರೂಪ ತಂದಿತ್ತ ಟಿ.ಎನ್.ಶೇಷನ್‌ರಷ್ಟೆ ದಕ್ಷತೆ, ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದವರು ನ್ಯಾ. ಸಂತೋಷ್ ಹೆಗ್ಡೆ.

ಇಂದು ಸಂತೋಷ್ ಹೆಗ್ಡೆಯವರು ಅಣ್ಣಾ ಹಜಾರೆಯೊಂದಿಗೆ ಕೈಜೋಡಿಸಿರುವುದು ಸಹಿತ ಲೋಕಾಯುಕ್ತ ಕಾನೂನಿನ ಜೊತೆಗೆ ರಾಮಕೃಷ್ಣ ಹೆಗಡೆಯವರಿಗೆ ದೇಶ ಸಲ್ಲಿಸಬಹುದಾದ ಒಂದು ಕಾಣಿಕೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಮಾದರಿಯನ್ನು ದೇಶದ ಎಲ್ಲಾ ರಾಜ್ಯಗಳು ಅನುಸರಿಸುವಂತಾದಲ್ಲಿ ರಾಮಕೃಷ್ಣ ಹೆಗಡೆಯವರ ಕೊಡುಗೆ ಅಜರಾಮರವಾಗುವುದೆಂದು ಭಾವಿಸುವವರಲ್ಲಿ ನಾನೂ ಒಬ್ಬ.

English summary
Today is (Aug 29) Former Karnataka chief minister Ramakrishna Hegde's 85th birth day. Kannada and Culture Minister Govinda Karajola remembers RK Hegde who established Lokayukta in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X