ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಕೃಷ್ಣ ಹೆಗಡೆ ಇಂದಿಗೂ ಪ್ರಸ್ತುತವಾಗುವುದು ಏಕೆಂದರೆ...

By * ಗೋವಿಂದ ಎಂ. ಕಾರಜೋಳ, ಸಚಿವರು
|
Google Oneindia Kannada News

ramakrishna-hegde-birth-day-karajola-remembers
ಭಾರತ ಕಂಡ ವರ್ಣರಂಜಿತ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆಯವರೂ ಒಬ್ಬರು. ಅವರದು ದೂರದೃಷ್ಟಿ, ವಾಸ್ತವಿಕ ಪ್ರಜ್ಞೆ, ಮುತ್ಸದ್ದಿತನ, ಆಡಳಿತ ಜಾಣ್ಮೆ ಮತ್ತು ಸಂಘಟನಾ ಚತುರತೆ.

ಸರ್ವೋದಯ ಕಾರ್ಯಕರ್ತೆ ಮಹಾದೇವಿ ತಾಯಿಯ ಚಿಕ್ಕ ತಮ್ಮ, ದೊಡ್ಮನೆ ರಾಮಕೃಷ್ಣ ಹೆಗಡೆಯವರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ರಾಜಕಾರಣಕ್ಕೆ ಬಂದವರು. ಹೆಗಡೆಯವರಿಗೆ ಹೋಲಿಸಿದರೆ ನಾನು ಇತ್ತೀಚಿನ ರಾಜಕಾರಣಿ.

ನಾವು ಸಹಿತ ಸಮಾಜವಾದಿ ಚಿಂತನೆಯ ಜನತಾ-ಜನತಾದಳ ಪರಿವಾರದ ಬಂಧುಗಳು. ನಾವು ರಾಜಕಾರಣಕ್ಕೆ ಕಾಲಿಟ್ಟಾಗ ರಾಜಕೀಯ ಮತ್ತು ತತ್ವ ಸಿದ್ಧಾಂತಗಳ ವಲಯಗಳಲ್ಲಿ ಆಗುತ್ತಿದ್ದ ತೀವ್ರಗತಿಯ ಬದಲಾವಣೆಗಳನ್ನು ಕಂಡು ಗಾಬರಿಗೊಂಡಿದ್ದೆವು.

1978ರ ಸುಮಾರಿನಲ್ಲಿ ಅಂದಿನ ಹಿರಿಯ ಸಮಾಜವಾದಿ ಧುರೀಣ ಚಂದ್ರಶೇಖರ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಜನತಾ ಪಕ್ಷವನ್ನು ಉಳಿಸಿಕೊಳ್ಳಲು ನಡೆಸಿದ್ದ ಹೋರಾಟವನ್ನು ಮನಸಾರೆ ಮೆಚ್ಚಿ ನಾನು ರಾಜಕೀಯಕ್ಕೆ ಬಂದಿದ್ದೆ.

1983ರ ವಿಧಾನಸಭಾ ಚುನಾವಣೆಯ ನಂತರ ರಾಮಕೃಷ್ಣ ಹೆಗಡೆಯವರು ತೋರಿದ ಅಸಾಧಾರಣ ಬುದ್ಧಿವಂತಿಕೆ ನಮ್ಮ ಮನಸ್ಸನ್ನು ಸೂರೆಗೊಂಡಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಕ್ರಾಂತಿ ರಂಗದ ಜೊತೆಗೂಡಿ ರಾಮಕೃಷ್ಣ ಹೆಗಡೆಯವರ ಜನತಾ ಪರಿವಾರ ಕೇವಲ 95 ಸ್ಥಾನ ಗಳಿಸಿತ್ತು. ಹಿರಿಯ ನಾಯಕ ನಿಜಲಿಂಗಪ್ಪ ಮತ್ತು ಚಂದ್ರ ಶೇಖರರ ಪ್ರಯತ್ನದಿಂದಾಗಿ ರಾಮಕೃಷ್ಣ ಹೆಗಡೆಯವರು ಅತಿ ಸೂಕ್ಷ್ಮ ಬಹುಮತದ ಮುಖ್ಯಮಂತ್ರಿ ಸ್ಥಾನದ ಸಾರಥ್ಯ ಹಿಡಿದಿದ್ದರು.

ಹೆಗಡೆ ಮಂತ್ರಿ ಮಂಡಲ ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ವಾತಾವರಣ ನೆಲೆಗೊಂಡಿತ್ತು. ಜೆ.ಎಚ್. ಪಟೇಲರು ಹಾಸ್ಯದ ಮಾತುಗಳಿಂದ ವರ್ಣಿಸುತ್ತಿದ್ದಂತೆ 'ಮುದಿ ಎತ್ತಿನ ತೆನೆ ಜೋತಾಡಿ ಬೀಳುವುದನ್ನು ನರಿ ನೋಡುತ್ತ ದಾರಿ ಸವೆಸಿತ್ತು'.

ಒತ್ತಡ, ಅನಿಶ್ಚಿತತೆ, ಪಕ್ಷಾಂತರ, ಹುನ್ನಾರ, ಇತ್ಯಾದಿ ಪ್ರತಿಕೂಲಗಳ ನಡುವೆ ಹೆಗಡೆ ಆಡಳಿತ ದೃಢವಾಗಿ ಮುಂದುವರಿದುದನ್ನು ನೆನೆಸಿಕೊಂಡರೆ ಇಂದಿಗೂ ಮೈನವಿರೇಳುತ್ತದೆ.

ಭಾವೋದ್ವೇಗವಿಲ್ಲದ ವಿಚಾರಶೀಲತೆ ರಾಮಕೃಷ್ಣ ಹೆಗಡೆಯವರ ಕಾರ್ಯಶೈಲಿಯ ಗುಟ್ಟಾಗಿತ್ತು. ಹಿಂದಿನ ನಾಯಕರುಗಳಾದ ನಿಜಲಿಂಗಪ್ಪ ಮತ್ತು ದೇವರಾಜ ಅರಸರಿಂದ ಹೆಗಡೆಯವರು ಕಲಿತ ವಿದ್ಯೆ ಇದು.

ಅಸಾಧಾರಣ ಜಾಣ್ಮೆಯೊಂದಿಗೆ ದಲಿತರು, ಹಿಂದುಳಿದವರು ಮತ್ತು ಬಡ ಜನರ ಪರ ಇದ್ದ ಕಾಳಜಿಯಿಂದ ಹೆಗಡೆಯವರು ನಾಡಿನ ಜನತೆಯ ಮನಸ್ಸನ್ನು ಗೆದ್ದುದಕ್ಕೆ ನಾನೂ ಸಹಿತ ಒಂದು ಸಾಕ್ಷಿ.

ಸಾಮಾಜಿಕ ನ್ಯಾಯಕ್ಕಾಗಿ ರಮೇಶ ಜಿಗಜಿಣಗಿಯವರನ್ನು ಮೊದಲ ಬಾರಿಗೆ ಗೃಹ ಖಾತೆ ಸಚಿವರನ್ನಾಗಿ ಮಾಡಿದ ಹೆಗಡೆಯವರ ದಲಿತ ಪರ ಧೋರಣೆ ಇಂದಿಗೂ ಅನುಕರಣೀಯ.

ಜಿಗಜಿಣಗಿಯವರನ್ನಷ್ಟೇ ಅಲ್ಲ ನೂರಾರು ಹೊಸ ಮುಖಗಳನ್ನು ನಾಡಿಗೆ ಪರಿಚಯಿಸಿದ ನವ ಪೀಳಿಗೆಯ ಹರಿಕಾರರು ಹೆಗಡೆ. ಎಲ್ಲಕ್ಕಿಂತ ನನಗೆ ಹೆಗಡೆಯವರ ಬಗೆಗೆ ಅಪಾರ ಅಭಿಮಾನ ಮತ್ತು ಒಲವು ಮೂಡಿಸಿದ ಸಾಧನೆಯೆಂದರೆ ಗ್ರಾಮೀಣ ಅಭಿವೃದ್ಧಿಯ ರಾಜಕೀಯ ಇಚ್ಛಾಶಕ್ತಿ.

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲದ ಸಕ್ರಿಯ ರಾಜಕಾರಣದ ತಪಸ್ಸಿನ ಫಲವಾಗಿ ಹೆಗಡೆಯವರು ಗ್ರಾಮಪಂಚಾಯತ್ ಎನ್ನುವ ತೇರನ್ನು ರಾಜಧಾನಿಯಿಂದ ಗ್ರಾಮದ ಬಾಗಿಲಿಗೆ ಎಳೆದು ತಂದಿದ್ದರು.

ಇಡೀ ದೇಶದಲ್ಲಿಯೇ ಮೊದಲ ಬಾರಿ ಸಮಗ್ರ ಗ್ರಾಮ ಪಂಚಾಯತ್, ಮಂಡಲ ಮತ್ತು ಜಿಲ್ಲಾ ಪಂಚಾಯತ್ ಕಾನೂನನ್ನು ರೂಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲಲು ಹೆಗಡೆಯವರೇ ಮುಖ್ಯ ಕಾರಣರು.

ನಜೀರ ಸಾಹೇಬರನ್ನು 'ನೀರು ಸಾಬ್' ಎಂಬ ಹೊಸ ಅನ್ವರ್ಥ ನಾಮದಿಂದ ಕರೆಯಲು ಹೆಗಡೆಯವರೇ ಕಾರಣ. ಒಂದು ಹನಿ ನೀರು ಕಾಣದಿದ್ದ ನಾಡಿನ ಸಾವಿರಾರು ಗ್ರಾಮಗಳಲ್ಲಿ ಭೂಗರ್ಭದಿಂದ ಜೀವಜಲವನ್ನು ತಂದಿತ್ತ ಆಧುನಿಕ ಭಗೀರಥ ನಜೀರ ಸಾಹೇಬರಿಗೆ ಸರ್ಕಾರದ ಸಕಲ ಸಂಪತ್ತನ್ನು ಹೆಗಡೆ ದಾನವಾಗಿ ನೀಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಈ ಎಲ್ಲಾ ಸಾಧನೆಗಳನ್ನು ಮಾಡಿ ತೋರಿಸಿ, ನಾಡಿಗೆ ಅನುಪಮ ಸೇವೆ ಸಲ್ಲಿಸಿದ ದಿವ್ಯ ಚೇತನ ರಾಮಕೃಷ್ಣ ಹೆಗಡೆಯವರಿಗೆ, ಭಕ್ತಿಪೂರ್ವಕ ನಮನ.

English summary
Today is (Aug 29) Former Karnataka chief minister Ramakrishna Hegde's 85th birth day. Kannada and Culture Minister Govinda Karajola remembers RK Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X