ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಪದ್ಮನಾಭ ದೇಗುಲ ನಿಧಿ ಮ್ಯೂಸಿಯಂ ಸೇರಲಿ

By * ಕೋಟೇಶ್ವರ ಸೂರ್ಯನಾರಾಯಣ ರಾವ್ , ಬೆಂಗಳೂರು
|
Google Oneindia Kannada News

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲೊಂದು ಅದ್ಭುತ ಸಂಗ್ರಹವನ್ನೊಳಗೊಂಡ ವಿಶ್ವಮಟ್ಟದ ವಿಶ್ವದಲ್ಲಿಯೇ ಒಂದನೇ ಸಾಲಿನಲ್ಲಿ ಬರಬಹುದಾದ ಸರ್ವ ವಸ್ತುಗಳ ಪ್ರದರ್ಶನಾಗಾರವೊಂದನ್ನು ದರ್ಶಿಸಿದ್ದೆ. ವಿಶಾಲವಾದ ಬಯಲೊಂದರ ನಡುವೆ ದೊಡ್ಡದೆನಿಸಬಹುದಾದ ಪ್ರಾಚೀನ ಕಟ್ಟಡದಲ್ಲಿರುವ ಸ್ಮಿತ್ ಸೋನಿಯನ್ ಮ್ಯೂಸಿಯಮ್‌ನಲ್ಲಿರುವ ಅಪೂರ್ವ ವಸ್ತುಗಳ ಸಂಗ್ರಹವನ್ನು ಸಂಪೂರ್ಣ ನೋಡಲು ಕನಿಷ್ಠ ಎರಡು ದಿವಸಗಳ ಕಾಲ ಬೇಕಾದೀತು.

ಜಗತ್ತಿನಲ್ಲಿರುವ ಅತ್ಯಂತ ಬೆಲೆ ಬಾಳುವ ವಜ್ರಗಳ ಸಂಗ್ರಹವನ್ನು ಅಲ್ಲಿ ನೋಡಬಹುದು. ಭಾರತದಲ್ಲಿ ಸಿಕ್ಕಿದ ಐತಿಹಾಸಿಕ 29 ವಜ್ರಗಳ ಪೈಕಿ ಹೆಚ್ಚಿನವುಗಳು ಅಲ್ಲಿ ಸಂಗ್ರಹಗೊಂಡಿವೆ. ಪ್ರತಿಯೊಂದು ವಜ್ರವೂ ಹಲವಾರು ಕೋಟಿ ಡಾಲರುಗಳ ಬೆಲೆಯುಳ್ಳದ್ದಾಗಿದ್ದು ಸ್ಮಿತ್ ಸೋನಿಯನಲ್ಲಿ ಪ್ರದರ್ಶಿತಗೊಂಡ ವಸ್ತುಗಳ ಮೌಲ್ಯ ಮಾಪನ ಮಾಡಿದರೆ, ಹಲವಾರು ನೂರು ಬಿಲಿಯನ್ ಗಳದ್ದಾಗಬಹುದು.

ಸ್ಮಿತ್ ಸೋನಿಯನ್ ಮ್ಯೂಸಿಯಮ್‌ಗೆ ರಕ್ಷಣಾ ವ್ಯವಸ್ಥೆ : ಅಂತಹ ಅತ್ಯದ್ಭುತ ಮ್ಯೂಸಿಯಮ್‌ನಲ್ಲಿರುವ ಬೆಲೆ ಬಾಳುವ ವಜ್ರಗಳು ಹಾಗೂ ಇತರ ಪ್ರಾಚೀನ ವಸ್ತುಗಳು ಅತ್ಯಂತ ಪರಮಾವಧಿ ಭದ್ರತೆಯಲ್ಲಿ ಪ್ರದರ್ಶಿಸಲ್ಪಡುತ್ತಿವೆ. ಅದಕ್ಕಾಗಿ ಬಳಸಿದ ತಾಂತ್ರಿಕ ವ್ಯವಸ್ಥೆ ಅತ್ಯಮೋಘ. ಪ್ರಸ್ತುತ ಕೇರಳ ರಾಜ್ಯದ ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ದೇವಾಲಯದಲ್ಲಿ ಈಗಾಗಲೇ ಕಂಡು ಹಿಡಿಯಲ್ಪಟ್ಟ ಸಂಪತ್ತಿನ ಮೌಲ್ಯದ ಊಹಾಪೋಹ ನಡೆದರೂ ಇಂದಿನ ಬೆಲೆಯಲ್ಲಿ ಹಲವಾರು ಸಾವಿರ ಕೋಟಿ ಬೆಲೆ ಬಾಳುವುದಂತೂ ಖಚಿತ.

ಸಾಧಾರಣ ಒಂದು ನೂರು ವರ್ಷಗಳ ಹಿಂದೆ ಚಿನ್ನದ ಬೆಲೆ ಒಂದು ಪವನ್ ಅರ್ಥಾತ್ 8 ಗ್ರಾಂನ ಬೆಲೆ ಆಂಗ್ಲರು ನಮ್ಮ ದೇಶದಲ್ಲಿ ಚಲಾವಣೆಗೆ ತಂದ ರೂಪಾಯಿಯಂತೆ ಎಂಟು ರೂಪಾಯಿಗಳಾಗಿತ್ತು. ಆನಂತರ ಮುಂದಿನ 20 ವರ್ಷಗಳ ನಂತರ ಅದರ ಬೆಲೆ ಹದಿಮೂರು ರೂಪಾಯಿಯಾಗಿತ್ತು. ಅಂದು ಪದ್ಮನಾಭನ ಭಕ್ತರು ನೀಡಿದ ಮತ್ತು ರಾಜರು ನೀಡಿದ ಚಿನ್ನದ ಬೆಲೆ ಪ್ರಸ್ತುತ ಎರಡು ಸಾವಿರ ಪಟ್ಟು ಹೆಚ್ಚಾಗಿರುವುದು ಸಹಜ.

ಇಂತಹ ಅಮೋಘ ಬಂಗಾರದ ಸಂಪತ್ತನ್ನು ಕೇವಲ ನೆಲ ಮಾಳಿಗೆಯಲ್ಲಿ ಬಚ್ಚಿಡದೆ ಅಮೇರಿಕದ ಸ್ಮಿತ್ ಸೋನಿಯನ್ ಮ್ಯೂಸಿಯಂನಲ್ಲಿರಿಸಿದಂತೆ ಅಭೇದ್ಯ ರಕ್ಷಣಾ ಗೋಡೆಯ ಒಳಗೆ ಪ್ರದರ್ಶಿಸುವಂತಾಗಬೇಕು. ಭಾರತದ ಶ್ರೀಮಂತಿಕೆ ಜಗಜ್ಜಾಹೀರಾಗಬೇಕು.

ಭಾರತವನ್ನು ಬಡರಾಷ್ಟ್ರವೆಂದು ಹಂಗಿಸುವ ಪಾಶ್ಚಾತ್ಯ ರಾಷ್ಟ್ರಗಳು ಬೆಚ್ಚಿ ಬೀಳಬೇಕು. ಪ್ರಸ್ತುತ ಕೇರಳದಲ್ಲಿರುವ ಸರ್ಕಾರವೂ ಇಂತಹ ಚಿಂತನೆಯನ್ನು ಮಾಡುತ್ತಿರುವುದು ಶುಭದಾಯಕ. ಆದರೆ ಈ ಸಂಪತ್ತು ಎಂದೂ ರಾಷ್ಟ್ರೀಕರಣಗೊಳ್ಳಲೇ ಬಾರದು. ಪದ್ಮನಾಭನ ಸಂಪತ್ತು ಆತನದೇ ಆಗಬೇಕು.

English summary
Sri Anantha Padmanabha Swamy Temple Kerala Treasure is now expected to cross Rs. 5 lakh crore according to CP Nair, former secretary of Kerala. It is better to keep these treasure in a museum like Smithsonian museum in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X