ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮಠಾಧೀಶರಿಗೆ ಒಂದು ಓಲೆ ಗರಿ

By * ಬಾಲರಾಜ್ ತಂತ್ರಿ, ಉಡುಪಿ
|
Google Oneindia Kannada News

BS Yeddyurappa in Kukke Subramanya
ಆಣೆ ಪ್ರಮಾಣ ಪ್ರಹಸನಕ್ಕೆ ಸೋಮವಾರ ಧರ್ಮಸ್ಥಳದಲ್ಲಿ ವಿಧ್ಯುಕ್ತವಾಗಿ ತೆರೆಬಿದ್ದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಆಣೆ ಪ್ರಮಾಣದಿಂದ ದೂರ ಉಳಿದು ಕೇವಲ ಧರ್ಮಸ್ಥಳ ಮಂಜುನಾಥನ ದರುಶನ ಮಾತ್ರ ಮಾಡಿದ್ದಾರೆ. "ನಾಡಿನ ಒಳಿತಿಗಾಗಿ ಮಂಜುನಾಥನ ಬಳಿ ಪ್ರಾರ್ಥಿಸಿದ್ದೇನೆ" ಎಂದು ಹೇಳಿ ಛತ್ರಿ ತುದಿಯಿಂದ ಸುರಿಯುತ್ತಿದ್ದ ಮಳೆ ನೀರಿನಲ್ಲಿ ಕೈತೊಳೆದುಕೊಂಡಿದ್ದಾರೆ.

ಇದೇ ನಾಟಕದ ಇನ್ನೊಬ್ಬ ಪ್ರಮುಖ ಪಾತ್ರಧಾರಿ ಎಚ್. ಡಿ. ಕುಮಾರಸ್ವಾಮಿ ತಮ್ಮ ನಿಲುವಿಗೆ ಅಂಟಿಕೊಂಡು ಮಂಜುನಾಥನ ಮುಂದೆ ನಿಂತು "ನಾನು ಹೇಳುವುದು ಸತ್ಯ ಸತ್ಯ ಸತ್ಯ" ಎಂದು ಪ್ರಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಈ ರಾಜಕೀಯ ನಾಟಕದಲ್ಲಿ ಕೊಟ್ಟ ಮಾತಿನಂತೆ ನಡೆಯದ ಶಿವಶರಣ ಯಡಿಯೂರಪ್ಪ ಸೋತರೆ, ಕುಮಾರಸ್ವಾಮಿ ಜಯಭೇರಿ ಬಾರಿಸಿದ್ದಾರೆ. ಗ್ರಾಫ್ ನಲ್ಲಿ ಅವರ ಪಾಪ್ಯುಲಾರಿಟಿ ಪಾಯಿಂಟುಗಳು ಸೋಮವಾರ ಸಂಜೆ ವೇಳೆಗೆ 20ರಿಂದ 32ಕ್ಕೆ ಎರಿದೆ! ಬಿಎಸ್ ವೈ ಪಾಪ್ಯುಲಾರಿಟಿ ಸೂಚ್ಯಂಕ 42ರಿಂದ 39ಕ್ಕೆ ಇಳಿಮುಖವಾಗಿದೆ.

ನಮ್ಮ ಸಿಎಂಗೆ ಮಠ, ಸ್ವಾಮೀಜಿಗಳ ಮೇಲೆ ಇನ್ನಿಲ್ಲದ ಭಕ್ತಿ. ಲಿಂಗಾಯಿತ ಮಠಕ್ಕೆ ತೋರುತ್ತಿರುವ ಪ್ರೀತಿ ಬೇರೆ ಮಠಕ್ಕೆ ತೋರುತ್ತಿಲ್ಲ ಎನ್ನುವ ಕೂಗು ಕೆಲವು ಕಡೆ ಕೇಳಿ ಬಂದರೂ, ಈ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಹೀಗಿರುವಾಗ, ರಾಜ್ಯದಲ್ಲಿರುವ ಹೆಚ್ಚುಕಮ್ಮಿ 3500 ಮಠಾಧಿಪತಿಗಳಿಗೆ ಕೆಲವೊಂದು ಪ್ರಶ್ನೆಗಳು (ವಿಶೇಷವಾಗಿ ವೀರಶೈವ ಮಠಾಧೀಶರಿಗೆ).

1. ಅಂದಾಜು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಿಂದ ಪ್ರಕಾಶಿತಗೊಳ್ಳುವ ಎಲ್ಲಾ ದಿನಪತ್ರಿಕೆಗಳಲ್ಲಿ ಆಣೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಮೊದಲು ಸಿಎಂ ನಿಮ್ಮ ಅನುಮತಿ ಪಡೆದುಕೊಂಡಿದ್ದರೆ?

2. ಕ್ಷುಲ್ಲಕ ರಾಜಕೀಯ ಜಿದ್ದು ಸಾಧಿಸಲು ಜಾಹೀರಾತಿಗೆ ವಿನಿಯೋಗಿಸಿದ ಹಣವನ್ನು (ಅದು ಪಕ್ಷದ ಹಣವಾಗಲಿ ಅಥವಾ ಸಾರ್ವಜನಿಕರ ಹಣವಾಗಲಿ) ಬಡ ವಿದ್ಯಾರ್ಥಿಗಳಿಗೆ, ಇನ್ನೂ ನೆಲೆ ಕಾಣದ ನೆರೆ ಸಂತ್ರಸ್ತರಿಗೆ ನೀಡಬಹುದಾಗಿತ್ತಲ್ಲವೇ? ಹಾಗಂತ ನೀವು ಸಿಎಂ ಅವರ ಎರಡೂ ಕಿವಿ ಹಿಂಡಬಹುದಾಗಿತ್ತಲ್ಲವೇ?

3. ನಿಮ್ಮ ಆಜ್ಞೆಗೆ ಬೆಲೆಕೊಟ್ಟು ಸಿಎಂ ಆಣೆ ಪ್ರಮಾಣದಿಂದ ಹಿಂದಕ್ಕೆ ಸರಿದರೇ ಅಥವಾ ಮಂಜುನಾಥನ ಮೇಲಿನ ಭಯದಿಂದಲೋ? ಅಥವಾ ಹೈ ಕಮಾಂಡ್ ಆದೇಶದಿಂದಲೋ?

4. ಆಣೆ ಪ್ರಮಾಣ ವಿಚಾರದಲ್ಲಿ ಮುಖ್ಯಮಂತ್ರಿಗಳ ವರ್ತನೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೈವಾಂಶ ಸಂಭೂತರಾದ ತಮಗೆ ಅನಿಸುವುದಿಲ್ಲವೋ?

5. ಧರ್ಮಸ್ಥಳದಲ್ಲಿ ಇಂದು "ಆರ್ಡಿನರಿ" ಭಕ್ತಾದಿಗಳು ಯಡಿಯೂರಪ್ಪ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ನಿಮ್ಮ ಅನಿಸಿಕೆ ಏನು?

6. ದಿನ ಬೆಳಗಾದರೆ ಮುಖ್ಯಮಂತ್ರಿಗಳ ಒಂದೊಂದು ಹಗರಣಗಳು ಹೊರಬರುತ್ತಿರಬೇಕಾದರೆ ಅವರನ್ನು ಸಮರ್ಥಿಸಿಕೊಳ್ಳಲು ನಿಮಗೆ ಇನ್ನೂ ಉಳಿದಿರುವ ದಾರಿ ಯಾವುದು?

7. ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ಮಠದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ತಾವುಗಳೆಲ್ಲ ಸೇರಿ, ಚರ್ಚಿಸಿ, ಆಣೆ ಪ್ರಮಾಣ ಮಾಡುವುದು ಯಾವಾಗ?

8. ಮುಖ್ಯಮಂತ್ರಿಗಳಿಂದ ಅನುದಾನ ಅಥವಾ ಇತರ ಸಹಾಯವನ್ನು ಒಂದು ವೇಳೆ ನೀವು ಅಪೇಕ್ಷಿಸುತ್ತಿದ್ದರೆ ಈ ಮೇಲಿನ ಪ್ರಶ್ನಾವಳಿಯಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂಬ ನನ್ನ ನಿಲವು ಸರಿಯೇ?

English summary
Mixing politics with religion : Eight questions to the revered Seers, swamijis and heads of religious institutions in Karnataka. Letter to the editor by Balaraj Tantri, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X