ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ?

By * ರಾಕೇಶ್ ಶೆಟ್ಟಿ
|
Google Oneindia Kannada News

Should BJP hoist national flag in Sringar or not
ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ, "ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು 'ಋಷಿ ಕಶ್ಯಪ"ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ "ಕಾಶ್ಮೀರ" ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ "ಕಲ್ಲು ಬಂಡೆ"ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು "ಕಶ್ಯಪ"ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ "ಬಟ್ಟೆ"ಯನ್ನು 'ಪಾಕಿಸ್ತಾನಿ"ಯೊಬ್ಬ ಕದ್ದೊಯ್ದಿದ್ದ!"

ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ "ಪಾಕಿಸ್ತಾನಿ ರಾಯಭಾರಿ" ಕುಳಿತಲ್ಲಿಂದ ಚಂಗನೆ ಜಿಗಿದೆದ್ದು,"ನೀವ್ ಏನ್ ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ "ಪಾಕಿಸ್ತಾನಿ"ಗಳು "ಕಾಶ್ಮೀರ"ದಲ್ಲಿ ಇರಲೇ ಇಲ್ಲ!!ನಸು ನಕ್ಕ ಭಾರತೀಯ ರಾಯಭಾರಿ, "ಕಾಶ್ಮೀರ ಯಾರಿಗೆ ಸೇರಿದ್ದು ಅನ್ನೋ ವಿಷಯವನ್ನ ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ" ("ಕಾಶ್ಮೀರ"ಕ್ಕೆ ಸಂಬಂಧಿಸಿದಂತೆ "ವಿಶ್ವ ಸಂಸ್ಥೆ"ಯಲ್ಲಿ ನಡೆದ ಘಟನೆಯಿದು ಅನ್ನೋ ಮಿಂಚೆಯಲ್ಲಿ ಬಂದ ಜೋಕ್ ಇದು)

Jokes Apart…

ಕಾಶ್ಮೀರ!

ಕಾಶ್ಮೀರ ಅಂದಾಕ್ಷಣ ಕಣ್ಣೆದುರು ಬರುವುದು ಅದೇ ಪಾಕೀಸ್ತಾನ-ಭಾರತ,ಉಗ್ರಗಾಮಿಗಳು, ನೆಲೆ ಕಳೆದುಕೊಂಡ ಪಂಡಿತರು ಮತ್ತು ಕಲ್ಲು ತೂರಾಟ ಅಲ್ವಾ? ಒಮ್ಮೊಮ್ಮೆ ಕಲ್ಲು ತೂರುವ ಕಾಶ್ಮೀರಿ ಹುಡುಗರ ಮೇಲೆ ಕೋಪ ಬಂದರೆ, ಮರುಕ್ಷಣ ಆ ಹುಡುಗರ ಕಲ್ಲೇಟಿಗೆ ತುತ್ತಾಗೋ ನಮ್ಮ ಯೋಧರೆಡೆಗೆ ಮನ ಮಿಡಿಯುತ್ತದೆ, ಮತ್ತದೆ ಯೋಧರ ಪಾಡು ನೆನೆಸಿಕೊಂಡು, ಇಷ್ಟೆಲ್ಲಾ ಕಷ್ಟಪಟ್ಟು ಮಾತಿಗೊಮ್ಮೆ "ಹೋಗ್ತೀವಿ,ಹೋಗ್ತೀವಿ ನಮ್ಮನ್ನ ಬಿಟ್ಬಿಡಿ" ಅನ್ನೋ ಕಾಶ್ಮೀರಿಗಳನ್ನ ನಾವ್ಯಾಕೆ ಹಿಡಿದು ಕೂರ್ಬೇಕು ಅಂತ ಒಂದು ಪ್ರಶ್ನೆಯು ಸದ್ದಿಲ್ಲದೆ ಮನದಲ್ಲಿ ಸುಳಿದು ಹೋಗುತ್ತದೆ. ಮರುಕ್ಷಣವೆ ಇಷ್ಟು ದಿನ ಹರಿದ ಭಾರತೀಯ ಯೋಧರ ರಕ್ತಕ್ಕೆ ಬೆಲೆ ಇಲ್ಲವೇ ಹಾಗೆ ಸುಮ್ಮನೆ ಬಿಟ್ಟು ಬಿಡಲು ಅನ್ನಿಸುತ್ತದೆ!

ಈ ಕಾಶ್ಮೀರ ಅನ್ನುವ ಕಣಿವೆಯ ರೋದನೆಯೆ ಹಾಗೆ,ಯೋಚಿಸುತ್ತ ಕುಳಿತರೆ ತಲೆ ಗಿರ್ರ್ ಅನ್ನುವಂತದ್ದು.ಅದೀಗ ಸುಲಭ ಸಾಧ್ಯವಾಗಿ ಪರಿಹಾರವಾಗಬಲ್ಲ ಸಮಸ್ಯೆಯಾಗಿ ಉಳಿದಿಲ್ಲ.ಇಂತ ಒಂದು ಶಾಶ್ವತ ಸಮಸ್ಯೆಯ ಸುಳಿಗೆ ಭಾರತವನ್ನೂ-ಕಾಶ್ಮೀರವನ್ನೂ ನೂಕಿ ಹೋದ ಬಿಳಿ ಪಾರಿವಾಳದ-ಕೆಂಪು ಗುಲಾಬಿಯ ನೆಹರೂ ಮಹಾಶಯ!

ಒಂದು ಕಡೆ ಕಾಶ್ಮೀರದೊಳಗೆ ನುಗ್ಗಿ ಬಂದ ಪಾಕಿಗಳನ್ನ ಅಟ್ಟಾಡಿಸಿ ಹೊಡೆಯೋದರಲ್ಲಿ ಭಾರತದ ಯೋಧರು ತಲ್ಲೀನರಾಗಿದ್ದರೆ, ಅತ್ತ ನೆಹರೂ ಅನ್ನೋ ಯಾರ ಮಾತು ಕೇಳದೆ, ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಖುದ್ದು ದೂರದೃಷ್ಟಿಯಿಂದ ಯೋಚಿಸದೆ, ಕಡೆ ಪಕ್ಷ ತಜ್ಞರ ಮಾತನ್ನು ಕೇಳದೆ ತಮ್ಮಿಷ್ಟ ಬಂದಂತೆ ಕುಣಿದಾಡಿ ಕಾಶ್ಮೀರ ಸಮಸ್ಯೆಯನ್ನ ವಿಶ್ವಸಂಸ್ಥೆಯ ಬಾಗಿಲಿಗೆ ತಂದು ನಿಲ್ಲಿಸಿದರು. ಅಲ್ಲಿ ಬ್ರಿಟನ್,ಅಮೇರಿಕಾದಂತ ರಾಷ್ಟ್ರಗಳು ನಿಂತಿದ್ದು ಪಾಕಿಗಳ ಬೆಂಬಲಕ್ಕೆ!. ಇದು ಹೇಗಾಯಿತೆಂದರೆ ನೆಹರೂ "ಕಾಶ್ಮೀರಿ ಶಾಲಿನಲ್ಲಿ ಕೊಲ್ಹಾಪುರಿ ಚಪ್ಪಲಿಯನ್ನ ಇಟ್ಟು ವಿಶ್ವಸಂಸ್ಥೆಯ ಕೈಗೆ ಕೊಟ್ರು", ಆದರೆ ಒದೆ ತಿಂದಿದ್ದು ಭಾರತ!

ಒಂದೆಡೆ ನೆಹರೂವಿನ ವಂಶವೃಕ್ಷದ ಕೈಗೆ ಸಿಕ್ಕ ಭಾರತ ಮತ್ತೊಂದೆಡೆ ಶೇಖ್ ಅಬ್ದುಲಾ – ಸಯೀದ್ ವಂಶವೃಕ್ಷದ ಕೈಗೆ ಸಿಕ್ಕ ಕಾಶ್ಮೀರ.ವಂಶವೃಕ್ಷ ಹಾಗೂ ವ್ಯಕ್ತಿ ಪೂಜೆಯ ಫಲ ಏನೆಂದು ಅರ್ಥವಾಗಬೇಕಾದರೆ ಕಣ್ಣ ಮುಂದೆಯೆ ಇರುವ ಉದಾಹರಣೆ ಕಾಶ್ಮೀರ,ಭಾರತ ಮತ್ತು ಕಾಂಗ್ರೆಸ್ಸ್ ಅನ್ನೋ ನೆಹರೂ (ನಕಲಿ ಗಾಂಧಿಗಳ?) ಪಕ್ಷ!

ಅಬ್ದುಲ್ಲಾ ವಂಶವೃಕ್ಷದ ಕುಡಿ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಶ್ರೀ ನಗರದ ಲಾಲ್ ಚೌಕ್ನಲ್ಲಿ ಜನವರಿ 26ರಂದು ರಾಷ್ಟ್ರಧ್ವಜ ಹಾರಿಸುತ್ತೆವೆಂಬ ಬಿ.ಜೆ.ಪಿ ಹೇಳಿಕೆಗೆ ಕಿಡಿಕಾರಿದ್ದಾರೆ.ಈಗಾಗಲೆ ಜುಲೈನಲ್ಲಿ ಶುರುವಾಗಿ ಸತತ ಮೂರು ತಿಂಗಳು ಉರಿದು ಜೀವಗಳನ್ನು ಬಲಿ ತೆಗೆದುಕೊಂಡು ಕಡೆಗೆ ಮತ್ತದೆ ಎಂದಿನ ಬೂದಿ ಮುಚ್ಚಿದ ಕೆಂಡದಂತೆ ಕುಳಿತಿರುವ ಕಾಶ್ಮೀರವೆಂಬ ಒಲೆಗೆ ಈ ಗಣರಾಜ್ಯದಂದು ಮತ್ತೆ ಕೊಳವೆ ಊದಿ ಬೆಂಕಿ ಹಚ್ಚಬೇಡಿ ಅನ್ನುವ ಧಾಟಿಯಲ್ಲಿ ಮಾತಾಡಿದ್ದಾರೆ.

ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದರೆ ಏನಾಗಬಹುದು ಅನ್ನುವುದಕ್ಕೆ ಕಾಶ್ಮೀರ ಹೊತ್ತಿ ಉರಿದ ಆ ಮೂರು ತಿಂಗಳು ಈ ಅನನುಭವಿ ಹುಡುಗ ತಿಣುಕಾಡಿದ ಪರಿ ನೋಡಿಯಾದರು ನಮ್ಮ ಜನ ಈ ವಂಶವೃಕ್ಷದ ಬೀಜವನ್ನ ಇನ್ಮೇಲೆ ಮೊಳಕೆಯಲ್ಲೇ ಚಿವುಟಿ ಹಾಕಲಿ.fine, ಈ ವಂಶವೃಕ್ಷದ ಬಗ್ಗೆ ಮಾತಾಡುವುದು ಸದ್ಯ ನನ್ನ ಉದ್ದೇಶವಲ್ಲ.

ಬಿ.ಜೆ.ಪಿ ರಾಜಕೀಯ ಹಿತಾಸಕ್ತಿಯೆಲ್ಲವನ್ನು ಬದಿಗಿಟ್ಟು ಒಮ್ಮೆ ನೋಡಿದಾಗ ಅಸಲಿಗೆ ಈ ಒಮರ್ ಅಬ್ದುಲ್ಲಾ ರಾಷ್ಟ್ರಧ್ವಜವನ್ನ ಹಾರಿಸಬೇಡಿ ಅನ್ನುವುದು ಪ್ರತ್ಯೇಕತಾವಾದಿಗಳಿಗೆ, ದೇಶ ದ್ರೋಹಿ ಹುರಿಯತ್ ಗೆ, ಉಗ್ರಗಾಮಿಗಳಿಗೆ ತಲೆಬಾಗಿದಂತಲ್ಲವೆ? ಹಾಗೆ ಈ ವಿಷ್ಯದಲ್ಲಿ ಇನ್ನ ಕೇಂದ್ರದ ನಿರ್ಧಾರವು ಒಮರ್ ಮಾತಿಗೆ ಬೆಂಬಲ ಸೂಚಿಸುವಂತೆಯೆ ಇದೆ.ಇನ್ನ ಚಿದಂಬರಂ ಜೈ ಅನ್ನುವರೋ ಇಲ್ವೊ ಕಾದು ನೋಡಬೇಕಿದೆ.

ತಮ್ಮ ಬುಡಕ್ಕೆ ಬತ್ತಿ ಇಡಲು ಬಂದಿದ್ದ ಅಫ್ಜಲ್ ನನ್ನೆ ಪುಡಿ ವೋಟಿನ ಆಸೆಗೆ ಬಿದ್ದು ಫಾರಂ ಹಂದಿ ಮರಿ ಸಾಕಿದಂತೆ ಸಾಕಿಕೊಂಡಿರೋ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಹೇಗಿರಬಹುದು ಎಂದು ಸುಲಭವಾಗೆ ಊಹಿಸಬಹುದು.ಈ ಅಫಜಲ್ ಸಲ್ಲಿಸಿದ ಕ್ಷಮಾಪಣ ಅರ್ಜಿಯು ತಮ್ಮ ಬಳಿ ಬಂದಿಲ್ಲ ಅಂತ ರಾಷ್ಟ್ರಪತಿಗಳ ಕಾರ್ಯಲಯ ಮೊನ್ನೆ ಮಾಹಿತಿ ಹಕ್ಕುದಾರನ ಅರ್ಜಿಯಲ್ಲಿ ಹೇಳಿದೆ, ಹಾಗಿದ್ದರೆ ಆ ಅರ್ಜಿ ಎಲ್ಲಿ ಹೋಯಿತು? ಮತ್ತು ಈ ಗಡವನನ್ನ ಸಾಕಲು ಇನ್ನ ಎಷ್ಟು ದಿನ ನಾವು ನಮ್ಮ ತೆರಿಗೆ ಹಣ ಪೋಲು ಮಾಡಬೇಕು ಅನ್ನುವುದು ಸದ್ಯ ಚಿದಂಬರ ರಹಸ್ಯ! ಕಾನೂನು ಸುವ್ಯವಸ್ಥೆ ಹದಗೆಡಬಹುದು ಅನ್ನೋ ದಿಗಿಲನ್ನು ವ್ಯಕ್ತಪಡಿಸೋ ಕೇಂದ್ರ ಹಾಗೂ ಕಾಶ್ಮೀರ ಸರ್ಕಾರಗಳಿಗೆ ತಮ್ಮ ಮಾತು ದೌರ್ಬಲ್ಯದ ಸಂಕೇತ ಅನ್ನಿಸುವುದಿಲ್ವಾ?

ಹೌದು! ರಾಷ್ಟ್ರಧ್ವಜವನ್ನೇ ಹಾರಿಸಲಾಗದ ರಾಜ್ಯವೇಕೆ ಬೇಕು? ಅನ್ನುವ ಪ್ರಶ್ನೆ ಮೂಡೂತ್ತದಾದರೂ ತೀರ ಆ ಉಗ್ರಗಾಮಿಗಳಿಗಿಂತ ಅತಿ ಉಗ್ರವಾಗಿ ಭಾರತದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು ಗದ್ದಿಗೆಯ ಮೇಲೆ ಕುಳಿತ ಫಾರೂಕ್ ಅಬ್ದುಲ್ಲರ ಮುದ್ದು ಕಂದನಿಗೆ ಹೆಚ್ಚು ಸಿಟ್ಟು ಬಂದಿರುವಂತೆ ಕಾಣುತ್ತಿದೆ.ಅಷ್ಟಕ್ಕೂ ಇದೆ ಮೊದಲ ಬಾರಿಯೇನು ಅಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋಗುತ್ತಿದ್ದಾರ ಅಂತ ನೋಡ ಹೋದರೆ ಹಿಂದೆಲ್ಲ ಭಾರತೀಯ ಸೇನೆಯು ಮಾರ್ಚಿಂಗ್ ಮಾಡಿ ಅಲ್ಲಿ ಧ್ವಜ ಹಾರಿಸುತ್ತಿತ್ತು.ಲಾಲ್ಚೌಕ್ನಲ್ಲಿ ಭಾರತದ ಧ್ವಜ ಹಾರಲು ಆರಂಭವಾದದ್ದು 1991ರಲ್ಲಿ.

ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 'ಏಕತಾ ಯಾತ್ರೆ" ಹೆಸರಿನಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಯಾತ್ರೆ ಮಾಡಿ ಸಾಂಕೇತಿಕವಾಗಿ ಧ್ವಜ ಹಾರಿಸಿದ್ದರು. ಅಂದಿನಿಂದ ನಿರಂತರ 19 ವರ್ಷಗಳ ಕಾಲ ಹಾರುತ್ತಿದ್ದ ಧ್ವಜವನ್ನ ಕಳೆದ ವರ್ಷ ಅಮರನಾಥ ಯಾತ್ರೆಯ ಬಿಸಿಯಿಂದಾಗಿ ಹಾರಿಸಲು ಬಿಟ್ಟಿರಲಿಲ್ಲ.

ಕೇಂದ್ರ ಸರಕಾರ ಉಳಿದೆಲ್ಲಾ ರಾಜ್ಯಗಳಿಗೆ ನೀಡುತ್ತಿರುವ ತಲಾವಾರು ನೆರವಿನ ಮೊತ್ತಕ್ಕಿಂತ ರೂ.8,000 ದಷ್ಟು ಹೆಚ್ಚು ಕಾಶ್ಮೀರಕ್ಕೆ ಕೊಡುತ್ತಿದೆ. ರೈಲು, ರಸ್ತೆ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸುಮಾರು 25,000 ಕೋಟಿ ರೂ. ಕೇಂದ್ರ ನೆರವಿನ ಯೋಜನೆಗಳು ಅಲ್ಲಿ ಅನುಷ್ಟಾನದಲ್ಲಿವೆ. ಅಲ್ಲಿ ಜಾರಿಯಲ್ಲಿರುವ ಪಂಚವಾರ್ಷಿಕ ಯೋಜನೆಯ 11 ಸಾವಿರ ಕೋಟಿ ರೂಗಳನ್ನು ನೀಡಿರುವುದು ಕೇಂದ್ರವೇ. ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯ ನೀಡುತ್ತಿರುವ ಕೊಡುಗೆ ಇದು.ಇಂತ ರಾಷ್ಟ್ರದ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ? [ಶ್ರೀನಗರ]

ಕೃಪೆ:ನಿಲುಮೆ

English summary
The hue and cry over hoisting Indian National Flag in Lal Chawk Srinagar on India Republic day 26th Jan 2011 Should BJP shoist or not hoist? and snub Omar abdullah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X