ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀರೆ ಹಂಚುತ್ತಾ ಹೋಗುವುದು ಅಭಿವೃದ್ಧಿಯೇ ?

By * ರಾಮಕೃಷ್ಣ ಶೆಟ್ಟಿಗಾರ್, ಗುಲ್ವಾಡಿ
|
Google Oneindia Kannada News

Bhagyalakshmi scheme politically motivated
ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ ಎಂದು ಜಪಮಾಡುತ್ತಿರುವ ರಾಜ್ಯ ಸರಕಾರದ ಜನಪ್ರಿಯ ಯೋಜನೆ. ವೀರಾವೇಷದಿಂದ ಈ ಯೋಜನೆಡಿ ತಾಯಂದಿರಿಗೆ ಸೀರೆ ವಿತರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಕಾರಣಕ್ಕೂ "ಈ ಯೋಜನೆ ನಿಲ್ಲದು, ಪ್ರತಿವರ್ಷವೂ ಸೀರೆ ವಿತರಣೆ ಆಗುವಂತೆ ಶಾಸನ ಮಾಡುತ್ತೇನೆ" ಎಂಬಿತ್ಯಾದಿ ಘೋಷಣೆಗಳನ್ನೂ ಹಾಕಿದ್ದಾರೆ.

ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ಪಡೆಯಲು ರಾಜ್ಯದಲ್ಲಿ 10 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಇನ್ನೂ 2.5 ಲಕ್ಷ ಮಂದಿಗೆ ಬಾಂಡ್ ದೊರಕಿಲ್ಲ. ಇಂಥ ಸಂದರ್ಭದಲ್ಲಿ ಬಾಂಡ್ ನೀಡುವ ಮುನ್ನ ಸೀರೆ ನೀಡಬೇಕಿತ್ತೇ? ಇದು ಅಭಿವೃದ್ಧಿಯೇ? ಸುಮಾರು 10 ಲಕ್ಷ ತಾಯಂದಿರಿಗೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಸೀರೆ ನೀಡಲಾಗಿದೆ.

ಸರಿ, ಯೋಜನೆಯಡಿ ವಿತರಿಸಲು 250-300 ರೂಪಾಯಿ ಮೌಲ್ಯದ ಸೀರೆಗಳನ್ನು ಸೂರತ್‌ನಿಂದ ತರಿಸಲಾಗಿದೆ. ಇಷ್ಟು ಸೀರೆಗಳನ್ನು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಿಂದಕೊಂಡಿದ್ದರೆ ನಮ್ಮ ನೇಕಾರರ ಬದುಕು ಒಂದಷ್ಟು ಹಸನಾಗುತ್ತಿತ್ತು. ಸಾಗಾಣಿಕೆ ವೆಚ್ಚ , ಮಾರಾಟ ತೆರಿಗೆ ರಾಜ್ಯಕ್ಕೆ ಸಲ್ಲುತಿತು. ಬೇರೆ ಯಾವುದೋ ರಾಜ್ಯಕ್ಕೆ, ಯಾರೋ ಉದ್ಯಮಿಗೆ ಲಾಭ ಆಯಿತಷ್ಟೆ. ಇದು ಅಭಿವೃದ್ಧಿಯೇ?

ಸಂಕಷ್ಟದಲ್ಲಿ ಯಾವ ರಾಜ್ಯದ ನೇಕಾರರಿಗೆ ನೆರವಿನ ಹಸ್ತ ಚಾಚಿದ್ದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ(ಕೆಹೆಚ್‌ಡಿಸಿ) ವಿವಿಧೆಡೆ ಎರಡು ಸಾವಿರ ಮನೆಗಳನ್ನು ಹುಡ್ಕೊ ನೆರವಿನಿಂದ ಕಟ್ಟಿಕೊಟ್ಟಿತ್ತು. ಇಂದಿಗೂ ಈ ಮನೆಗಳು ನೇಕಾರರ ಹೆಸರಿಗೆ ಖಾತೆ ಆಗಿಲ್ಲ. ಈ ಯೋಜನೆಯಡಿ ಸಾಲಗಾರರಾದ ನೇಕಾರರ 4.5 ಕೋಟಿ ರೂಪಾಯಿ ಮನ್ನಾ ಮಾಡುವ ಭರವಸೆ ಇನ್ನೂ ಈಡೇರಿಲ್ಲ.

ಸೀರೆ ಹಂಚಲು 26 ಕೋಟಿ ವ್ಯಯ ಮಾಡುವ ಬದಲು ಈ ಸಾಲ ಮನ್ನಾ ಮಾಡಿದ್ದರೆ ನೇಕಾರರ ಬದುಕಿಗೊಂದು ಸ್ವಂತ ಸೂರು ಸಿಗುತ್ತಿತು. ಇದರ ಬದಲು, ಒಂದು ದಿನ ಆಯಾ ಜಿಲ್ಲೆಯ ಸಾರಿಗೆ ವ್ಯವಸ್ಥೆ ಹದಗೆಡಿಸಿ, ಒಂದು ದಿನದ ದುಡಿಮೆಯನ್ನು ಕಿತ್ತುಕೊಂಡು 300 ರೂಪಾಯಿ ಮೌಲ್ಯದ ಸೀರೆ ನೀಡುವುದು ಅಭಿವೃದ್ಧಿ? ತವರುಮನೆ ಲೆಕ್ಕದಲ್ಲಿ ಈ ಸೀರೆಗಳನ್ನು ವಿತರಣೆ ಮಾಡಲಾಗಿದೆಯಂತೆ. ಮುಂದೆ ಭಾಗ್ಯಲಕ್ಷ್ಮೀ ಯೋಜನೆಯ ಅಪ್ಪಂದಿರಿಗೆ ಪಂಚೆ ವಿತರಿಸುವ ಯೋಜನೆ ಹಮ್ಮಿಕೊಳ್ಳಬಹುದು. ಸೀರೆ ಹಂಚುವುದು ಅಭಿವೃದ್ಧಿಯಾದರೆ, ಪಂಚೆ ಹಂಚುವುದೂ ಅದೇ ತಾನೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X