ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಝೇರಿಯನ್‌ ಮಾಡಲು ವೈದ್ಯರಿಗೇನು ಖುಷಿಯೇ?

By Staff
|
Google Oneindia Kannada News

Pregnant woman
ಕರ್ನಾಟಕದಲ್ಲಿ ಸಿಝೇರಿಯನ್‌ ಕೇಸುಗಳು ಹೆಚ್ಚಾಗುತ್ತಿವೆ ನಿಜ. ಅದಕ್ಕೆ ಕಾರಣಗಳು ಹಲವಾರಿವೆ.. ಆದರೆ ಪರಿಸ್ಥಿತಿ ದಟ್ಸ್‌ಕನ್ನಡದಲ್ಲಿ ಬಿಂಬಿತವಾಗಿರುವಷ್ಟು ಭಯಾನಕವಾಗಿಲ್ಲ. ತಪ್ಪುಗ್ರಹಿಕೆ ನೀಡುವ ಲೇಖನಗಳು ನನಗೆ ಸರ್ವಥಾ ಒಪ್ಪಿಗೆಯಿಲ್ಲ. ಹೀಗಾಗಿ ಈ ಪ್ರತಿಕ್ರಿಯೆ.

* ಅಂಜಲಿ ರಾಮಣ್ಣ, ಬೆಂಗಳೂರು

ಮಾನ್ಯ ಸಂಪಾದಕರೇ,

ಬೆಂಗಳೂರಿನ ಖ್ಯಾತ ಪ್ರಸೂತಿತಜ್ಞರೊಬ್ಬರು ಬರೆದಿರುವ ದೇವರ ಮಕ್ಕಳು ಬಲು ದುಬಾರಿ ಓದಿದೆ. ಲೇಖನದ ವಸ್ತು ಸಮಯೋಚಿತವಾಗಿದೆ, ಆದರೆ ವಿನಮ್ರಪೂರ್ವಕವಾಗಿ ಹೇಳುತ್ತಿದ್ದೇನೆ ಲೇಖನವನ್ನು ಬರಹಗಾರರು ವಾಸ್ತವಿಕತೆಗೆ ಹತ್ತಿರವಾಗಿ ಬರೆದಿದ್ದಾರೆ ಅನ್ನಿಸುವುದಿಲ್ಲ. ಈ ವಿಷಯಗಳಿಗೆ ಸಂಬಂಧಪಟ್ಟ ಸಂಸ್ಥೆಯಾಂದಿಗೆ ಒಡನಾಟವಿರುವುದರಿಂದ ಈ ಮಾತು.

ಸಹಜ ಹೆರಿಗೆಗಿಂತ ಸಿಝೇರಿಯನ್‌ ಹೆರಿಗೆಗಳು ಈಗ ಹೆಚ್ಚಿವೆ ಅನ್ನುವುದಂತೂ ಖಂಡಿತ. ಇದಕ್ಕೆ ಆಸ್ಪತ್ರೆಗಳು ಎಷ್ಟು ಕಾರಣವೋ ನಾವು ಕೂಡ ಅಷ್ಟೇ ಕಾರಣರಾಗಿದ್ದೇವೆ. ಆರೋಗ್ಯ ದೃಷ್ಟಿಯಿಂದಾಗುವ ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿದರೆ;

* ನಮ್ಮ ಈಗಿನ ಬಹುಪಾಲು ಮಹಿಳೆಯರು ಮತ್ತು ಅವರ ಮನೆಯವರು ಖುದ್ದಾಗಿ ಆಪರೇಷನ್‌ನ್ನೇ ಬಯಸುತ್ತಿದ್ದಾರೆ. ಇದಕ್ಕೆ ಹೆರಿಗೆ ನೋವು ಅಸಾಧ್ಯವೆನ್ನುವ ಒಂದು ಕಲ್ಪನೆ ಮಾತ್ರವಲ್ಲ, ಚಿಕ್ಕಂದಿನಿಂದ ನ್ಯೂಕ್ಲಿಯರ್‌ ಕುಟುಂಬಗಳಲ್ಲಿ ಮಕ್ಕಳಿಗೆ ಯಾವ ನೋವನ್ನೂ ಅಗಾಧ ಎನ್ನುವ ಭಾವನೆ ಬರಿಸುವಂತೆ ಬೆಳೆಸಲಾಗುತ್ತದೆ..
* ಉದ್ಯೋಗಪರ ಮತ್ತು ಆಕಾಂಕ್ಷಿ ಮಹಿಳೆಯರು ಮೂವತ್ತರ ನಂತರ ಗರ್ಭ ಧರಿಸುತ್ತಿರುವುದು ಸಾಮಾನ್ಯವಾಗುತ್ತಿರುವುದರಿಂದ ಸಹಜ ಹೆರಿಗೆಗೇ ಒತ್ತುಕೊಡುವುದು ಆತಂಕ ಸೃಷ್ಟಿಸುತ್ತದೆ. ಹಾಗಾಗಿ ಸಿಝೇರಿಯನ್‌ ಹೆಚ್ಚಾಗಿದೆ.
* ಈಗಿನ ಸಮಾಜ ಒಂದು ಅಥವಾ ಅರ್ಧ ಮಕ್ಕಳಿಗೆ ಮಾತ್ರ ಮಿತಿಯಿಟ್ಟುಕೊಂಡಿರುವುದರಿಂದ ಹೆರಿಗೆಗೆ ಮಿತಿಮೀರಿದ ಕಾಳಜಿ ವಹಿಸಲಾಗುತ್ತಿದೆ. ಇದೂ ಕೂಡ ಸಹಜ ಹೆರಿಗೆಯನ್ನು ದೂರ ಮಾಡುತ್ತಿದೆ.
* ಈಗಿನ ವೈದ್ಯರಿಗೆ ಮೊದಲಿಗಿಂತ ಕಾನೂನಿನ ಬಗ್ಗೆ ಅರಿವು ಮತ್ತು ಭಯ ಹೆಚ್ಚಾಗಿ ಇರುವುದರಿಂದ ಮೂಲಭೂತ, ಆರೋಗ್ಯಕರ ರಿಸ್ಕ್‌ ಕೂಡ ತೆಗೆದುಕೊಳ್ಳಲು ಅವರು ಹಿಂದೆಮುಂದೆ ನೋಡುವಂತಾಗಿದೆ. ಇದು ಅವರನ್ನು ಶಸ್ತ್ರಚಿಕಿತ್ಸಾ ಹೆರಿಗೆಗೆ ಒತ್ತುಕೊಡುವಂತೆ ಮಾಡಿದೆ.

ಹಿಂದೆಗಿಂತಲೂ ಈಗ ಹೆರಿಗೆ ವೆಚ್ಚ ದುಬಾರಿಯಾಗಿದೆ ನಿಜ, ಆದರೆ ನನ್ನ ಬಳಿ ಇರುವ ಅಂಕಿಅಂಶಗಳಿಂದ ಹೇಳಬಲ್ಲೆ, ಲೇಖನದಲ್ಲಿ ಬಿಂಬಿತವಾಗಿರುವಷ್ಟು ಭಯಾನಕವಾಗಿಲ್ಲ. ಪ್ರೀ-ಕನ್ಸೆಪ್ಷನ್‌ ಚೆಕಪ್‌ ಮತ್ತು ಕೇರ್‌ ನಮ್ಮ ದೇಶದಲ್ಲೂ ಇದೆ. ಬೆಂಗಳೂರಿನಲ್ಲೆ ಇದೆ. ಮಧ್ಯಮ ದರ್ಜೆಯ ಜನರ ಕೈಗೆ ಎಟುಕುವಂತೆಯೇ ಇದೆ.

ನನ್ನಂತಹ ಸಾಮಾನ್ಯರಿಗೂ ತಿಳಿದಿರುವಂತೆ ಭಾರತದಲ್ಲಿ ಯಾವ ವಿಮಾ ಕಂಪನಿಯೂ ಸಿಜೇರಿಯನ್‌ಗೆ ತಗಲುವ ವೆಚ್ಚ ಭರಿಸುತ್ತಿಲ್ಲ. ಹಾಗೆಯೇ ಗರ್ಭಿಣಿಯರು ಒಂಭತ್ತು ಅಂಶಗಳನ್ನು ಗಮನಿಸಬೇಕು ಎಂದಿರುವ ಲೇಖಕರ ಮಾತು ಗಂಭೀರವಾಗಿ ಪರಿಗಣಿಸಬೇಕಾದ್ದೇ.

ಆದರೆ ಅದಕ್ಕೆ ತಗಲುವ ವೆಚ್ಚ ಲೇಖನದಲ್ಲಿ ನಮೂದಾಗಿರುವಷ್ಟು ಗಾಬರಿಯಾಗಿಲ್ಲ. ಆ ಅಂಶಗಳನ್ನು ಲೇಖಕರು ವಿದೇಶೀ ಪ್ರಾಕ್ಟೀಸ್‌ ಅನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದಾರೆ ಅನ್ನಿಸುತ್ತೆ. ನಮ್ಮಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಆಹಾರ ಪಟ್ಟಿ ಮತ್ತು ವ್ಯಾಯಾಮಗಳ ವಿವರ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಪ್ರೀ ಡೆಲಿವರಿ ಕೌನ್ಸೆಲಿಂಗ್‌ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲೂ ಲಭ್ಯ ಮತ್ತು ಅದಕ್ಕಾಗಿ ಸರ್ಕಾರ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳು ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡು ಕಾರ್ಯಗತಗೊಳಿಸಿವೆ. ಗರ್ಭಿಣಿಯರು ಮನೆಗೆಲಸ ಮಾಡಬೇಡಿ, ಹಣತೆತ್ತು ಮಾಡುವ ವ್ಯಾಯಾಮ ಮಾಡಿ ಎನ್ನುವ ಸಲಹೆ ಯಾವುದಾದರೂ ಜಾಹೀರಾತು ಕಂಪನಿಯ ಸ್ಲೋಗನ್‌ ಮಾತ್ರ ಇದ್ದೀತು!

ಉಚಿತವಾಗಿ ಬಂದ ಯಾವುದಕ್ಕೂ ಮರ್ಯಾದೆ ಇಲ್ಲ. ನಾವು ಬೆಲೆ ಕೊಡುವುದಿಲ್ಲ, ಹಾಗೆಯೇ ದೇವರ ಮಕ್ಕಳೂ ಸಹ! ಉಚಿತವೆಂದು ತಿಳಿದೇ ನಮ್ಮಲ್ಲಿ ವರವಾಗಬೇಕಿದ್ದ ಜನಸಂಖ್ಯೆ ಶಾಪವಾಗಿರುವುದು. ಆದ್ದರಿಂದ ದೇವರ ಮಕ್ಕಳೇ ಆದರೂ ಉಚಿತವಾಗಿರಬಾರದು, ಆದರೆ ಲೇಖನದಲ್ಲಿ ತೋರಿಸಿರುವಷ್ಟು ದುಬಾರಿಯೂ ಆಗಿರಕೂಡದು.

ದಟ್ಸ್‌ ಕನ್ನಡದಲ್ಲಿ ಬರುವ ಪ್ರತೀ ಲೇಖನಗಳೂ ನಮ್ಮ ನಾಡಿನ ಪರಿಸ್ಥಿತಿಯನ್ನು ಬಿಂಬಿಸುತ್ತವೆ. ದೇಶದಾಚೆಯ ದೇಶಿಗರನ್ನೂ ತಲುಪಿ ಅವರಲ್ಲಿ ನಮ್ಮ ಸ್ಥಿತಿಯ ಬಗ್ಗೆ ಒಂದು ಅಭಿಪ್ರಾಯ ರೂಪಣೆಗೆ ಒತ್ತುಕೊಡುತ್ತದೆ. ಹೀಗಿರುವಲ್ಲಿ, ಒಂದು ಪವರ್‌ಫುಲ್‌ ಮಾಧ್ಯಮದ ಮೂಲಕ ನಮ್ಮ ದೇಶದ ಬಗ್ಗೆ ತಪ್ಪು ಗ್ರಹಿಕೆ ಬರುವಂತೆ ಮಾಡುವುದು ಸರ್ವಥಾ ನನಗೆ ಒಪ್ಪಿಗೆಯಿಲ್ಲ . ಹಾಗಾಗಿ ಈ ಪ್ರತಿಕ್ರಿಯೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X