ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಾರಣಹೋಮಕ್ಕೆ ಕೊನೆ ಎಂದು?

By * ಭರಣ್ಯ ಬಾಲಕೃಷ್ಣ ಭಟ್ಟ ,ಪಾಣಾಜೆ
|
Google Oneindia Kannada News

Jammu and Kashmir, indian freedom
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ದೇಶದ ಹಲವೆಡೆ ರಾಜರುಗಳ ಸಾರ್ವಭೌಮತ್ವಗಳಿದ್ದು ಅವರ ಆಡಳಿತಗಳಿದ್ದುವು. ಆಗ ದೇಶದ ಗೃಹ ಸಚಿವರಾಗಿದ್ದ ಸರ್ದಾರ್ ಪಠೇಲರು ಸ್ವತಂತ್ರ ಭಾರತದೊಂದಿಗೆ ವಿಲೀನವಾಗುವಂತೆ ಎಲ್ಲರಿಗೂ ಸಮಯ ನಿಗದಿಪಡಿಸಿ ಆಜ್ಞೆಯಿತ್ತದ್ದು ಇತಿಹಾಸ.

ಹಲವು ರಾಜರು ಸ್ವ ಇಚ್ಛೆಯಿಂದ ಭಾರತದ ಗಣರಾಜ್ಯದೊಂದಿಗೆ ತಮ್ಮ ರಾಜ್ಯಗಳನ್ನು ಲೀನಗೊಳಿಸಿದರೂ ಹೈದರಾಬಾದ್ ನಿಜಾಂ ಮತ್ತು ಗೋವೆಯಲ್ಲಿದ್ದ ಪೋರ್ಚುಗೀಸರು ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದಾಗ ಪಠೇಲರ ಧೈರ್ಯ, ಸಮಯಪ್ರಜ್ಞೆ ಹಾಗೂ ಅವರ ಧೀರೋದಾತ್ತ ಬುದ್ಧಿವಂತಿಕೆಯಿಂದ ಅವರೆಲ್ಲರನ್ನೂ ಮಣಿಸಿ ಅಖಂಡ ಭಾರತ ದೇಶಕ್ಕೆ ನಾಂದಿ ಹಾಡಿದರು.

ಆದರೆ ಅಂದಿನ ಪ್ರಧಾನಿಗಳು ಕೈಗೊಂಡ ತಪ್ಪು ನಿರ್ಣಯದ ಪರಿಣಾಮವಾಗಿ ಕಾಶ್ಮೀರದ ಪರಿಸ್ಥಿತಿ ಇಂದಿಗೂ ಮಗ್ಗುಲಮುಳ್ಳಾಗಿ ನಿತ್ಯವೂ ಹಸಿರಾಗಿಯೇ ಉಳಿದಿದೆ. ದಿನನಿತ್ಯವೆಂಬಂತೆ ನಮ್ಮ ದೇಶದ ಸಾವಿರಾರು ವೀರಯೋಧರು, ಸಜ್ಜನ ನಾಗರಿಕರು ಸಣ್ಣ ಮಕ್ಕಳಿಂದ ಹಿಡಿದು ತಾಯಂದಿರವರೆಗಿನವರು ಕೊಲೆಗೀಡಾಗುತ್ತಿದ್ದಾರೆ.

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುತ್ತವೆ. ಆದರೂ ಅಲ್ಲಿನ ಸರಕಾರವಾದರೋ ಭಯೋತ್ಪಾದಕ ಸಂಘಟನೆಗಳ ಬಗ್ಗೆ ದಿನಕ್ಕೊಂದು ವೈರುಧ್ಯ ಹೇಳಿಕೆಗಳನ್ನೀಯುತ್ತಾ ಅವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ ಅವರನ್ನು ಸಂತೈಸುವತ್ತ ಒಲವು ತೋರುತ್ತಿದ್ದು ನಿರಪರಾಧಿ ಜನತೆಯ ಬಗ್ಗೆ ಕಿಂಚಿತ್ತೂ ಚಿಂತಿಸದಿರುವುದು ಖಂಡನೀಯ.

ಹಲವು ವರ್ಷಗಳ ಹಿಂದೆಯೇ ಭಯಭೀತರಾಗಿ ತಮ್ಮ ಆಸ್ತಿ ಪಾಸ್ತಿ ಬಂಧುಗಳನ್ನು ತೊರೆದು ಬಂದಿರುವರ ಪುನರ್ವಸತಿ ಬಗ್ಗೆ ಈವರೆಗೂ ಶ್ರಮಿಸದಿರುವುದು ಹಾಗೂ ಅಲ್ಲಿನ ದಂಗೆಕೋರರು ಅಟ್ಟಹಾಸ ಮೆರೆದು ಇಂದಿಗೂ ಕಾಶ್ಮೀರವನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗಲು ಈಗಿನ ಕೇಂದ್ರ-ರಾಜ್ಯ ಸರಕಾರಗಳು ಕಾರಣ.

ಇತ್ತೀಚೆಗಿನ ವರದಿಗಳ ಪ್ರಕಾರ ಕೇರಳ ರಾಜ್ಯದಲ್ಲೂ ಅಲ್ಲಲ್ಲಿ ಕ್ರೌರ್ಯ, ಭಯೋತ್ಪಾದನೆ ಅಟ್ಟಹಾಸ ಮೆರೆಯುತ್ತಿದ್ದು ಜನತೆಯಲ್ಲಿ ಭಯ ಹುಟ್ಟಿಸುವ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಗುಪ್ತಚರ ವರದಿಗಳಲ್ಲಿ ಉಲ್ಲೇಖವಾಗಿವೆ.

ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಕ್ಕೆ ಪಾಕಿಸ್ಥಾನಿಗಳ ಬೆಂಬಲವೂ ಇರುವುದು ಸತ್ಯ. ಈ ರೀತಿಯ ಬೆಳವಣಿಗೆಗಳನ್ನು ಚಿಗುರಲ್ಲೆ ಕಿತ್ತು ಹಾಕದಿದ್ದಲ್ಲಿ ಮುಂದೊಂದು ದಿನ ದೇಶ ಘೋರವಾದ ಬೆಲೆ ತೆರಬೇಕಾಗಬಹುದು. ಕೂಡಲೇ ಕಾರ್ಯಪ್ರವರ್ತರಾಗಬೇಕಾದ್ದು ಕೇಂದ್ರ-ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ.

ದೇಶದ ಬುದ್ಧಿಜೀವಿಗಳೆಂದು ಕರೆಯಲ್ಪಡುವ ಢೋಂಗೀ ಜಾತ್ಯತೀತವಾದಿಗಳು, ಮಾನವ ಹಿತರಕ್ಷಣಾವಾದಿಗಳು ಈ ವಿಚಾರಗಳಲ್ಲಿ ಸುಮ್ಮನಿರುವುದು ಅವರ ಷಂಡತನವನ್ನು ಸಾಬೀತುಪಡಿಸುತ್ತದೆ. ಕೇಂದ್ರ-ರಾಜ್ಯ ಸರಕಾರಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯಬಾರದು. ಸಾಮಾನ್ಯ ಜನರ ಜೀವದೊಡನೆ ಚೆಲ್ಲಾಟವಾಡದೆ ದೇಶದ ಸಮಗ್ರತೆಯ ಉಳಿವಿಗಾಗಿ ಶ್ರಮಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X