ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಪಾ ವ್ಯಂಗ್ಯಕ್ಕೆ ಚಿಮೂ ತಕ್ಕ ಉತ್ತರ

By * ಡಾ. ಎಂ. ಚಿದಾನಂದಮೂರ್ತಿ
|
Google Oneindia Kannada News

M Chidananda Murthy
ಚಂದ್ರಶೇಖರ ಪಾಟೀಲರು ಎಂದಿನಂತೆ ತಮ್ಮ ವ್ಯಂಗ್ಯದ ಭಾಷೆಯಲ್ಲಿ ನನ್ನನ್ನು ಕೋಮುವಾದಿ, ಹಿಂದೂ ಪಕ್ಷಪಾತಿ, ಆರ್‌ಎಸ್‌ಎಸ್ ಸಂಘಟನೆಗೆ ಸೇರಿದವನು ಇತ್ಯಾದಿ ಅಭಿಪ್ರಾಯ ಬರುವಂತೆ ಮಾತನಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ವ್ಯಂಗ್ಯದ ಭಾಷೆಯಿಂದ ನಾನು
ಎಂದೂ ವಿಚಲಿತನಾಗಿಲ್ಲ ಮತ್ತು ಅದನ್ನು ನಾನು ಗಂಭೀರವಾಗಿ ಪರಿಗಣಿಸದಿದ್ದರೂ ನನ್ನ ಸ್ಪಷ್ಟ ನಿಲುವನ್ನು ಹಿಂದಿನಂತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ.

ಕ್ರಿಶ್ಚಿಯನ್ನರಿಂದ ವಿಪರೀತ ಮತಾಂತರ, ಮುಸ್ಲಿಮ್ ಉಗ್ರಗಾಮಿಗಳಿಂದ ದೇಶಕ್ಕೆ ಒದಗಿರುವ ಗಂಡಾಂತರ ಮತ್ತು ಅವರ ಬಹುಪತ್ನಿತ್ವ ವ್ಯವಸ್ಥೆ ಇವುಗಳಿಂದ ಹಿಂದೂ ಧರ್ಮಕ್ಕೆ ತೀವ್ರ ಗಂಡಾಂತರ ಒದಗಿರುವುದನ್ನು ಜನಗಣತಿಯ ಅಂಕಿ ಅಂಶಗಳು ಸ್ಪಷ್ಟವಾಗಿಸಿವೆ. ಭಾರತದಿಂದ
ಹಿಂದೂಧರ್ಮ ಮರೆಯಾದರೆ ಇಡೀ ವಿಶ್ವದಿಂದಲೇ ಅದು ಮರೆಯಾದಂತೆ. ಈ ಕಠೋರ ವಾಸ್ತವ ನನ್ನನ್ನು ಬಹುವಾಗಿ ಕಂಗೆಡಿಸಿದೆ. ಮತ್ತು ಆ ವಿಷಯವಾಗಿ ನಾನು ನನ್ನ ಸ್ಪಷ್ಟ ಧ್ವನಿಯನ್ನು ಎತ್ತಿದ್ದೇನೆ.

ನನ್ನ ಸ್ವಧರ್ಮಾಭಿಮಾನದಲ್ಲಿ ಎಲ್ಲಿಯೂ ಅನ್ಯ ಧರ್ಮ ದ್ವೇಷವಿಲ್ಲ. ಹಿಂದೂ ಧರ್ಮದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗಳ ವಿರುದಟಛಿವೂ ನಾನು ಮಾತನಾಡಿದ್ದೇನೆ; ಮತ್ತು ಅವುಗಳು ಹಿಂದೂಧರ್ಮದ ಅಕ್ಷಮ್ಯ ಕೊರತೆಗಳು ಎಂಬುದನ್ನು ನಾನು ನನ್ನ ಬದುಕಿನಲ್ಲಿ ಸಾಧಿಸಿ ತೋರಿಸಿದ್ದೇನೆ. ನೇರವಾಗಿ ಹೇಳಬೇಕೆಂದರೆ ಅಸ್ಪೃಶ್ಯರ ಜೊತೆ ನಾನು ಹತ್ತಿರದ ರಕ್ತಸಂಬಂಧ ಬೆಳಸಿದ್ದೇನೆ.

ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಎಂದೂ ಅವುಗಳ ನಾಯಕರಾಗಲಿ ಕಾರ್‍ಯಕರ್ತರಾಗಲಿ ಅನ್ಯಧರ್ಮ ದ್ವೇಷವನ್ನು ಪ್ರಸ್ತಾಪಿಸಿಲ್ಲ. ಆತ್ಮೀಯ ಸಂಭಾಷಣೆಗಳಲ್ಲೂ ಆ ಬಗ್ಗೆ ಮಾತನಾಡಿಲ್ಲ. ಆ ಬಗೆಯ ಸಂಘಟನೆಗಳು ಇಂದು ನಮ್ಮ ರಾಷ್ಟ್ರದ ತುರ್ತು ಅಗತ್ಯಗಳು. ಅವುಗಳಲ್ಲಿರುವ ರಾಷ್ಟ್ರ ಪ್ರೇಮ, ಸಂಸ್ಕೃತಿ ಪ್ರೇಮ, ಉದಾತ್ತ ಗುಣಗಳು
ಅನುಕರಣೀಯ ಅಥವಾ ಅನುಸರಣೀಯ.

ಚಂಪಾ ಅವರಾಗಲಿ, ಅವರಂತೆ ವ್ಯಂಗ್ಯದ ಮಾತನಾಡದಿದ್ದರೂ ಅವರ ಸಮಾನ ಮನೋಧರ್ಮದ ಇತರ ಸೆಕ್ಯುಲರಿಸ್ಟ್‌ರಾಗಲಿ ಮತಾಂತರ, ಬಹುಪತ್ನಿತ್ವ ಇಂಥವುಗಳ ವಿರುದ್ಧಛಿ ಏಕೆ ಧ್ವನಿ ಎತ್ತಿಲ್ಲ ? ಅವರಲ್ಲಿ ಕೆಲವರಿಗೆ ವಾಸ್ತವಗಳು ಗೊತ್ತಿಲ್ಲವೆಂದು ನಾನು ವಿಷಾದದಿಂದ ಹೇಳಬೇಕಾಗಿದೆ. ಈಗಾಗಲೇ ನಾನು ಸ್ಪಷ್ಟಪಡಿಸಿರುವಂತೆ, ವ್ಯಂಗ್ಯ, ಕುಚೋದ್ಯಗಳು ವ್ಯಕ್ತಿಯ ವ್ಯಕ್ತಿತ್ವದ ಅಥವಾ ವಾದದ ಕೊರತೆಯ ಸಂಕೇತಗಳು.

ಇದನ್ನು ತಿಳಿಯಬೇಕೆಂದು ಚಂಪಾರವರಿಗೆ ನಾನು ಸಲಹೆ ಕೊಡುತ್ತಿಲ್ಲ. ಕೊಟ್ಟರೂ ಪ್ರಯೋಜನವಿಲ್ಲ. ಆದರೂ ಸಾರ್ವಜನಿಕರು ಅದನ್ನು ಮನಗಾಣಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ. ಗಂಭೀರ ಚಿಂತಕರು ಎಂದೂ ವ್ಯಂಗ್ಯದ ಭಾಷೆಯಲ್ಲಿ ಬರೆಯುವುದಿಲ್ಲ. ಮಾತನಾಡುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X