ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಟ್ಟೆ ಹಕ್ಕಿಯನ್ನು 'ಮಣ್ಣು' ಮಾಡಿದ ಭಟ್ಟರು

By * ಗುರು ಕುಲಕರ್ಣಿ, ಬೆಂಗಳೂರು
|
Google Oneindia Kannada News

Baladande hakki
ವಿಶ್ವೇಶ್ವರ ಭಟ್ಟರು ದಾಸ-ಮಂಗಟ್ಟೆಯೆಂಬ ಹಕ್ಕಿಯನ್ನು ನೋಡಿ ಅದರ ಸೌಂದರ್ಯಕ್ಕೆ ಮನಸೋತು, ಅದರ ದಾಸಾನುದಾಸರಾಗಿ ಬರೆದ ಲೇಖನಗಳನ್ನು ನೀವು ನೋಡಿಯೇ ಇರುತ್ತೀರಿ. ಮೊದಲು ಆನ್‌ಲೈನ್ ಲೋಕದಲ್ಲಿ ಹಕ್ಕಿಗೆ ಲೈನು ಹೊಡೆದ ಭಟ್ಟರಿಗೆ ನಂತರ ಅದು ಕನ್ನಡನಾಡಿನಲ್ಲಿಯೇ ಶತಶತಮಾನಗಳಿಂದ ವಾಸಿಸುತ್ತಿರುವುದು ತಿಳಿಯಿತಂತೆ. ಒಟ್ಟಿನಲ್ಲಿ ಕೈಯಲ್ಲಿ ಬೆಣ್ಣೆ ಇಟ್ಟುಗೊಂಡು ಊರೆಲ್ಲಾ ಹುಡುಕಿದ ಕತೆ. ಆದರೆ ಕೈಯಲ್ಲಿದ್ದ ಬೆಣ್ಣೆಗೆ ಬೆಣ್ಣೆ ಎನ್ನದೇ ಬಟರ್ ಎನ್ನಬೇಕೆಂಬ ಬುದ್ಧಿ ಭಟ್ಟರಿಗೆ ಯಾಕೆ ಬಂತೋ? ಕನ್ನಡನಾಡಿನಲ್ಲಿ ಈ ಹಕ್ಕಿ ಇಂಗ್ಲಿಷರು ಬರುವುದಕ್ಕೆ ಮೊದಲೇ ಇದೆ ಎಂದರೆ ಇದಕ್ಕೆ ಕನ್ನಡದ್ದೇ ಪದ ಇರಬಹುದು ಎಂಬ ತರ್ಕ ಭಟ್ಟರಿಗೆ ಯಾಕೆ ಹೊಳೆಯಲಿಲ್ಲವೋ?

ಮೊದಲ ಲೇಖನ ಪ್ರಕಟವಾದ ನಂತರ ನಮ್ಮೊಳಗಿನ ಕೆಲ ಓದುಗದೊರೆಗಳಾದರೂ ಕನ್ನಡದಲ್ಲಿ ಈ ಹಕ್ಕಿಗೆ ಏನೆನ್ನುತ್ತಾರೆ ಎಂಬುದನ್ನು ಭಟ್ಟರ ಗಮನಕ್ಕೆ ತಂದಿರಬಹುದು. ಆದರೂ ಭಟ್ಟರು ಲೇಖನದ ಮೊದಲಲ್ಲಿ ಮಾತ್ರ ಕಂಸಿನಲ್ಲಿ "ಮಂಗಟ್ಟಿ ಹಕ್ಕಿ"ಯನ್ನು ಕೂಡಿಸಿ, ಲೇಖನದ್ದುದ್ದಕ್ಕೂ ಹಾರ್ನ್‌ಬಿಲ್ ಹಕ್ಕಿಯನ್ನು ಮೆರೆಸಿ, "ಮಂಗಟ್ಟೆ ಹಕ್ಕಿ"ಯನ್ನು ಮಣ್ಣು ಮಾಡಿರುವುದು ನ್ಯಾಯವೇ? ಹಕ್ಕಿಯನ್ನು ಉಳಿಸುವ ಕೆಲಸಮಾಡುವ ಲೇಖನದಲ್ಲಿಯೇ, ಶಬ್ದವನ್ನು ಕೊಲ್ಲುವ ಕೆಲಸಮಾಡುವುದು ತಪ್ಪಲ್ಲವೇ?

ಹೊಸ ವಸ್ತು/ತತ್ವ/ತಥ್ಯ ಚಾಲ್ತಿಗೆ ಬಂದಾಗ ಅದಕ್ಕೆ ಸಂಬಂಧ ಪಟ್ಟ ಪದಗಳು ಕನ್ನಡದಲ್ಲಿ ಇಲ್ಲದಿರುವುದರಿಂದ ಅದಕ್ಕೆ ಮೂಲ ಇಂಗ್ಲಿಷು/ಇತರ ಭಾಷೆಯ ಶಬ್ದಕ್ಕೆ ಕನ್ನಡದ ಸಂಸ್ಕಾರ ಕೊಟ್ಟು ನಮ್ಮದಾಗಿಸಿಕೊಂಡು ಉಪಯೋಗಿಸುತ್ತೇವೆ, ತಪ್ಪೇನಿಲ್ಲ. ಉದಾ: ಮೋಬೈಲ್ ಫೋನ್, ಇಂಟರ್‌ನೆಟ್ ಇತ್ಯಾದಿ. ಈಗಾಗಲೇ ಕೆಲ ಬೇರೆ ಭಾಷೆಯ ಪದಗಳು ಬಂದು ಕನ್ನಡದಲ್ಲಿ ಒಂದಾಗಿ ಹೋಗಿವೆ - ಉದಾ ಕಾರು, ಬಸ್ಸು, ರಿಕ್ಷಾ ಇತ್ಯಾದಿ. ಅವುಗಳ ಉಪಯೋಗ ತಡೆಯಲಾಗದು, ಹೋಗಲಿ ಬಿಡಿ.

ಶ್ಲೇಷೆಗಾಗಿಯೋ- ತಮಾಷೆಗಾಗಲೋ ಕನ್ನಡದ ನಡುವೆ ಪರಭಾಷೆಯ ಪದ ಬಂದರೆ ನಂಜಿಕೊಂಡು ಹೊಟ್ಟೆಗೆ ಹಾಕಿಕೊಳ್ಳಬಹುದು. ಆದರೆ ನೂರಾರು ವರುಷಗಳಿಂದ ಉಪಯೋಗದಲ್ಲಿರುವ ಪ್ರಾಣಿ-ಪಕ್ಷಿ-ಮರ-ಬಳ್ಳಿ-ಜಾಗಗಳನ್ನು ಸೂಚಿಸುವ ಪದಗಳನ್ನು ಮೂಲೆಗೆ ತಳ್ಳಿ ಇಂಗ್ಲಿಷು ಪದಗಳಿಗೆ ಶರಣು ಹೋಗುವುದು ಸರಿಯಾ? ಈ ಪ್ರಾಣಿ-ಪಕ್ಷಿ-ಮರ-ಬಳ್ಳಿ-ಜಾಗಗಳನ್ನು ಸೂಚಿಸುವ ಪದಗಳು ಬಹಳಷ್ಟು ಸಲ ರೂಢನಾಮಗಳಷ್ಟೇ ಆಗಿರದೇ ಒಂದರ್ಥದಲ್ಲಿ ಅನ್ವರ್ಥಕನಾಮಗಳೂ ಆಗಿರುತ್ತವೆ. ಉದಾಹರಣೆಗೆ "ಬಾಲದಂಡೆ ಹಕ್ಕಿ" ಎಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಹೂವಿನ ದಂಡೆಯಂತಹ ಬಾಲವುಳ್ಳ ಹಕ್ಕಿಯ ಚಿತ್ರ ಬರುವುದಿಲ್ಲವೇ? (ಚಿತ್ರ ನೋಡಿ) ಹಾಗೆಯೇ "ನಾಮದ ಕೋಳಿ" ಎಂದರೆ ಹಣೆಯ ಮೇಲೆ ಪಟ್ಟಿ ಇರುವ ಹಕ್ಕಿ ಎಂದು ಊಹಿಸಿಯೇ ಬಿಡುತ್ತಿರಲ್ಲವೇ? ಹೀಗಾಗಿ ರೂಢಿಗತ ಪದಗಳ ಉಪಯೋಗ ಸಂಶಯಾತೀತವಾಗಿ ಆಮದು ಪದಗಳ ಉಪಯೋಗಕ್ಕಿಂತ ಲಾಭಕರ. ಅಲ್ಲ ಅಂತೀರಾ?

ಇದರಲ್ಲಿ ಭಟ್ಟರಿಗೆ ಗೊತ್ತಿಲ್ಲದ್ದು ಏನೂ ಇಲ್ಲ. ಆದರೂ ಹೀಗೇಕೆ? ತಮ್ಮ ಪತ್ರಿಕೆಯಲ್ಲಿ "ಪದೋನ್ನತಿ" ತರಹದ ಅಂಕಣಗಳ ಮೂಲಕ, "ಅಂಡೆಪಿರ್ಕಿ" ತರಹದ ಕನ್ನಡ ಪದಗಳನ್ನು ಪುನರಜ್ಜೀವನಗೊಳಿಸುವ ಮೂಲಕ ಕನ್ನಡ ಪದಗಳನ್ನು ಚಾಲ್ತಿಯಲ್ಲಿಡುವ ಕಾಯಕದಲ್ಲಿ ತೊಡಗಿರುವ ಭಟ್ಟರು ಹೀಗೆ ಕನ್ನಡ ಪದದ ತಿಥಿ ಮಾಡುವ ತಪ್ಪು ಮಾಡಿದ್ದಾರೆ ಎಂದರೆ ನಂಬುವುದೇ ಕಷ್ಟ. ನನ್ನ ಈ ಬರಹ ಮತ್ತು ಹತ್ತು ಹಲವು ಓದುಗರ ಕಾಮೆಂಟುಗಳನ್ನು ಓದಿ, ಅಂಡೆಪಿರ್ಕಿಗಳು ಎಂದು ತಳ್ಳಿಹಾಕದೇ, ಮುಂದಿನ ಬರಹಗಳಲ್ಲಾದರೂ "ಮಂಗಟ್ಟೆ ಹಕ್ಕಿ"ಗೆ ಆದ ಅನ್ಯಾಯವನ್ನು ಸರಿಪಡಿಸುತ್ತಾರೆ ಎಂದು ಆಶಿಸೋಣ.

ಭಟ್ಟರ ಜೊತೆಗೆ ನನ್ನದು ಇನ್ನೊಂದು ಭಿನ್ನಾಭಿಪ್ರಾಯವಿದೆ. ಮಂಗಟ್ಟೆ ಹಕ್ಕಿಯನ್ನು ಭಟ್ಟರು ಹಕ್ಕಿಗಳ ಲೋಕದ ಐಶ್ವರ್ಯ ರೈ ಎಂಬ ಲೇವಲ್ಲಿಗೆ ವರ್ಣಿಸಿದ್ದಾರೆ. ಮಂಗಟ್ಟೆ ಸುಂದರ ಹಕ್ಕಿಯಾದರೂ, ನಾನೇನಾದರೂ ಹಕ್ಕಿಗಳ ಸೌಂದರ್ಯ ಸ್ಪರ್ಧೆಗೆ ನಿರ್ಣಾಯಕನಾಗಿ ಹೋದರೆ ಕಿರೀಟತೊಡಿಸುವುದು ಬಣ್ಣ-ಬಣ್ಣದ ಬಾಲಹೊಂದಿರುವ ಬಾಲದಂಡೆ ಹಕ್ಕಿಗೆ ಹೊರತು ಮಂಗಟ್ಟಿಗೆ ಅಲ್ಲ! ಅಂದಹಾಗೆ ಬಾಲದಂಡೆಹಕ್ಕಿಯನ್ನು ಕಾಣಬೇಕೆಂದರೆ ನೀವು ದೂರ ಹೋಗಬೇಕಾಗಿಲ್ಲ, ಬೆಂಗಳೂರಿನ ಲಾಲ್‌ಬಾಗಿನಲ್ಲೂ ಅದು ನಿಮಗೆ ಕಾಣಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X