ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ್ಡಿ, ಬುರ್ಖಾ ಹಾಗೂ ಮುಖ್ಯವಾಹಿನಿ

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

Why muslim women are not changing?
ನನ್ನ ಬ್ಲಾಗ್ ಬರಹವೊಂದರಲ್ಲಿ ಹಿಂದೊಮ್ಮೆ "ಮುಸ್ಲಿಮರು ಈ ದೇಶದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ನೋಡಿಕೊಳ್ಳಬೇಕು" ಎಂದು ಬರೆದಿದ್ದೆ. ಅದನ್ನು ಓದಿದ ಓದುಗರೊಬ್ಬರು "ಈ ದೇಶದ ಮುಖ್ಯವಾಹಿನಿ ಎಂದರೆ ಯಾವುದು?" ಎಂದು ನನ್ನನ್ನು ಪ್ರಶ್ನಿಸಿದ್ದರು. ಅದಕ್ಕೆ ನಾನು,"ಸಾಮಾಜಿಕ ಜೀವನ, ಯೋಚನಾ ಕ್ರಮ, ದೇಶನಿಷ್ಠೆ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಎಲ್ಲರೊಡನೆ ಬೆರೆತು, ಸಮಾಜದೊಡನೆ ಒಂದಾಗಿ ಮತ್ತು ಕಾಲಮಾನಕ್ಕೆ ಅನುಗುಣವಾಗಿ ಸಾಗುವ ಮನೋಧರ್ಮವೇ ಮುಖ್ಯವಾಹಿನಿಯಲ್ಲಿ ಬೆರೆಯುವಿಕೆ" ಎಂದು ಉತ್ತರ ನೀಡಿದ್ದೆ.

ಮತದಾನದ ಗುರುತಿನ ಚೀಟಿಗಾಗಿ ಕೂಡ ತಮ್ಮ ಮಹಿಳೆಯರು ಬುರ್ಖಾ ಸರಿಸಬಾರದೆಂಬ ಕೆಲ ಮುಸ್ಲಿಂ ಕರ್ಮಠರ ವಾದ ಕೇಳಿದಾಗ ಈ ದೇಶದ ಮುಖ್ಯವಾಹಿನಿಯ ಅರ್ಥ ಮತ್ತು ಮಹತ್ತ್ವ ಇವುಗಳ ಅರಿವಿನ ಅಗತ್ಯ ಸ್ಪಷ್ಟವಾಗುತ್ತವೆ. ಮಹಿಳೆಯರು ಮುಖಕ್ಕೆ ಮುಸುಕು ಹಾಕಿಕೊಂಡು ಓಡಾಡುವ ಪದ್ಧತಿ ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ ಮತಧರ್ಮೀಯರಲ್ಲೂ ಹಲವೆಡೆ ಜಾರಿಯಲ್ಲಿತ್ತು. ಜೈನ ಮಾರವಾಡಿ ಹೆಂಗಸರಂತೂ ಇತ್ತೀಚಿನವರೆಗೂ ಅವಗುಂಠನವತಿಯರಾಗಿಯೇ ಓಡಾಡುತ್ತಿದ್ದರು.

ಆದರೆ ಮುಸ್ಲಿಮರನ್ನು ಹೊರತುಪಡಿಸಿ ಇತರರೆಲ್ಲ ಈ ಪದ್ಧತಿಯನ್ನೀಗ ಬಹುತೇಕವಾಗಿ ಕೈಬಿಟ್ಟಿದ್ದಾರೆ. ಈ ದೇಶದ ಮುಸ್ಲಿಮೇತರರು ತಮ್ಮ ಆಚರಣೆಗಳಲ್ಲಿ ಕಾಲಮಾನಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಮಾಡಿಕೊಳ್ಳುತ್ತ ನಡೆದಿದ್ದಾರೆ. ತನ್ಮೂಲಕ ತಮ್ಮ ಸುತ್ತಲಿನ ಸಮಾಜದ ಮತ್ತು ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ಸಾಗುವ ಯತ್ನ ನಡೆಸಿದ್ದಾರೆ.

ಉದಾಹರಣೆಗೆ, ಮದುವೆಯೆಂಬುದು ಜನ್ಮಾಂತರದ ಸಂಬಂಧ ಎಂದು ನಂಬಿರುವ ಹಿಂದೂ ಮತಧರ್ಮೀಯರು 1955ರ "ಹಿಂದೂ ವಿವಾಹ ಕಾಯ್ದೆ"ಗೆ ಬದ್ಧರಾಗುವ ಮೂಲಕ ವಿವಾಹ ವಿಚ್ಛೇದನ ಕ್ರಮವನ್ನು ಒಪ್ಪಿಕೊಂಡಿದ್ದಾರೆ. ಬದಲಾದ ಕಾಲಧರ್ಮ ಮತ್ತು ಸನ್ನಿವೇಶಗಳಲ್ಲಿ ತಾವೂ ಬದಲಾಗಬೇಕಾದುದು ಅನಿವಾರ್ಯವೆಂದು ಇತರರು ಒಪ್ಪಿಕೊಂಡಂತೆ ಮುಸ್ಲಿಮರೂ ಒಪ್ಪಿಕೊಳ್ಳುವುದು ಜಾಗತೀಕರಣದಿಂದಾಗಿ "ವಸುಧೈವ ಕುಟುಂಬಕಂ" ಎಂಬಂತಾಗಿರುವ ಇಂದಿನ ಪ್ರಪಂಚದಲ್ಲಿ ಅವರಿಗೇ ಹಿತಕರ.

ಹಾಗೆ ನೋಡಿದರೆ ಮುಸ್ಲಿಮರು ತಮ್ಮ ಹಣಕ್ಕೆ ಬಂದ ಬಡ್ಡಿಯನ್ನು ಸ್ವಂತಕ್ಕೆ ಬಳಸಬಾರದು. ಆದರೆ ಅವರಿಂದು ತಮ್ಮ ಉಳಿತಾಯದ ಹಣಕ್ಕೆ ಬ್ಯಾಂಕ್ ಮೊದಲಾದೆಡೆಗಳಿಂದ ಬರುವ ಬಡ್ಡಿಯನ್ನು ಸ್ವಂತಕ್ಕೆ ಬಳಸುತ್ತಲೇ ಇದ್ದಾರೆ. ವಸ್ತುಗಳ ಬೆಲೆ ಏರುತ್ತ, ದುಡ್ಡು ಅಪಮೌಲ್ಯಕ್ಕೀಡಾಗುತ್ತ ಸಾಗುವ ಈ ಕಾಲದಲ್ಲಿ ಬಡ್ಡಿ ಹಣ ಬಳಸಬಾರದೆಂಬ ಮಾತೇ ವಿವೇಕಶೂನ್ಯವಾದದ್ದು. ಬಡ್ಡಿಯ ವಿಷಯದಲ್ಲಿ ಬದಲಾದ ಮುಸ್ಲಿಮರು ಬುರ್ಖಾ ವಿಷಯದಲ್ಲಿ ಬದಲಾಗಬಾರದೇಕೆ? ಸ್ತ್ರೀಯರ ಮನೋಭಿಲಾಷೆ ಮತ್ತು ದೇಹಾರೋಗ್ಯಕ್ಕೂ ಬುರ್ಖಾ ಒಂದು ಮಟ್ಟದಲ್ಲಿ ಅಡ್ಡಿಯೇ ತಾನೆ?

ಹಿಂದೂಗಳಲ್ಲಿ ಅಸ್ಪೃಶ್ಯತೆ, ಮುಸ್ಲಿಮರಲ್ಲಿ ಬುರ್ಖಾ ಇಂಥ ಕಟ್ಟುಪಾಡುಗಳು ಇಂದು ಸಡಿಲಾಗಬೇಕಾಗಿವೆ. ಆಗ ಮಾತ್ರ ಈ ದೇಶದಲ್ಲಿ ಜಾತಿ-ಮತ ವೈಷಮ್ಯರಹಿತ ಸಾಮರಸ್ಯದ ಜೀವನ ಸಾಧ್ಯ. ದೇಶದ ಪ್ರಗತಿಗೂ ಇದು ಸಹಾಯಕ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X