ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ

By Staff
|
Google Oneindia Kannada News

writer K marulasiddappa
ತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?

ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, ಇಸ್ಲಾಂ, ಕ್ರೈಸ್ತ ಮುಂತಾದ ಹಲವಾರು ಧರ್ಮಗಳೂ ಸೇರಿದ್ದು, ಈ ಧರ್ಮಗಳೆಲ್ಲ ಬೆಳೆದಿರುವುದು ಮತಾಂತರ ಮೂಲಕವೇ ಎಂಬುದನ್ನು ಮರೆಯುವಂತಿಲ್ಲ.

ಅಂತೆಯೇ ಈ ದೇಶದಲ್ಲಿ ಸಾವಿರಾರು ಜಾತಿ, ಪಂಗಡಗಳೆಲ್ಲವನ್ನೂ ಹಿಂದೂ ಧರ್ಮದ ಚೌಕಟ್ಟಿನ ಸಮಾವೇಶಗೊಳಿಸಲು ಯಾವ ಆಧಾರಗಳೂ ಇಲ್ಲ. ಅದನ್ನು ಒಪ್ಪುವುದಾದರೆ ವರ್ಣಾಶ್ರಮ ಪದ್ಧತಿಗನುಸಾರವಾಗಿ ಶ್ರೇಣಿಕೃತ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತಾ ಆಚರಣೆಯನ್ನೂ ಒಪ್ಪಬೇಕಾಗುತ್ತದೆ. ಕೆಳಜಾತಿಯ ಜನರು ಸಾವಿರಾರು ವರ್ಷಗಳಿಂದಲೂ ತಮಗಾಗುವ ಅವಮಾನ, ಅನ್ಯಾಯಗಳನ್ನು ಪ್ರತಿಭಟಿಸಿ ಮತಾಂತರಗೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆತ್ಮಗೌರವ. ಸಮಾನತೆಯ ಆಧಾರದಲ್ಲಿ ಹಿಂದೂ ಧರ್ಮವನ್ನು ಪುನರ್ ರಚಿಸಬೇಕಾಗುತ್ತದೆ. ಈ ಅಂಶಗಳನ್ನು ಗೌಣವಾಗಿಸಿ, ಮತಾಂತರದ ಬಗೆಗೆ ಬೊಬ್ಬೆ ಹಾಕುವುದು ಯಥಾಸ್ಥಿತಿ ವಾದಿಗಳ ತಂತ್ರವಾಗಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿದ್ದರೂ ಆಳದಲ್ಲಿ ಮತಾಂತರ ವಿರೋಧಿಗಳ ಗುರಿ ಬೌದ್ಧರು. ಇತ್ತೀಚೆಗೆ ಲಕ್ಷಾಂತರ ಮಂದಿ ದಲಿತರು ಕರ್ನಾಟಕದಲ್ಲಿ ಬೌದ್ಧ ದೀಕ್ಷೆ ಪಡೆಯುತ್ತಿರುವುದನ್ನು ಗಮನಿಸಿ ಮತಾಂತರವನ್ನೇ ನಿಷೇಧಿಸುವ ಮಾತನಾಡುತ್ತಿದ್ದಾರೆ. ಬೌದ್ಧ ಧರ್ಮವು ಹಿಂದೂ ಧರ್ಮದ ಶಾಖೆ ಎಂದು ಅಪ್ಪಣೆ ಕೊಡಿಸುವ ಪೇಜಾವರ ಮಠಾಧೀಶರು ಅದೇ ಉಸಿರಿನಲ್ಲಿ ದಲಿತರು ಬೌದ್ಧ ಧರ್ಮ ದೀಕ್ಷೆ ಪಡೆಯಬಾರದೆಂದೂ, ಬೇಕಾದರೆ ಆರ್ಯ ಸಮಾಜ ಸೇರಿಕೊಳ್ಳಬಹುದೆಂದು ಪರವಾನಿಗಿ ನೀಡುತ್ತಾರೆ. ಮಧ್ವ ಮತಕ್ಕೆ ಬನ್ನಿ ಎಂದು ಆಹ್ವಾನ ನೀಡುವ ಔದಾರ್ಯವಿಲ್ಲದ ಮತ್ತು ಅಸ್ಪೃಶ್ಯರೊಡನೆ ಸಹಪಂಕ್ತಿ ಭೋಜನಕ್ಕೆ ಒಪ್ಪದ ಪೇಜಾವರರ ಶಿಷ್ಯರೂ ಸಾಹಿತಿ, ಬುದ್ಧಿಜೀವಿಗಳ ಸುಳ್ಳು ಆರೋಪ ಹೊರಿಸುತ್ತಾರೆ.

ಬುದ್ಧಿ ಜೀವಿಗಳ ಬಾಯಲ್ಲಿ ಕಾಮಾಟಿಪುರದ ವಾಸನೆ ಬರುತ್ತಿದೆ ಮುಂತಾಗಿ ಕೀಳು ಮಟ್ಟದ ವ್ಯಕ್ತಿ ನಿಂದೆಗೆ ಹೊರಟಾಗ ಅವರೊಂದಿಗೆ ಸಂವಾದ ಅಸಾಧ್ಯವೆನಿಸುತ್ತದೆ. ನಾನು ಗೌರವಿಸುವ ಹಿರಿಯರೂ, ಗುರುಗಳೂ ಆದ ಡಾ ಚಿದಾನಂದಮೂರ್ತಿ ತಮ್ಮ ಇಳಿ ವಯಸ್ಸಿನಲ್ಲಿ ಯಾವ ಮಟ್ಟದ ಜನರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆಂಬುದನ್ನು ಗಮನಿಸಿದಾಗ ನನ್ನ ಮನಸ್ಸು ಮುದುಡಿ ಹೋಗುತ್ತದೆ.

ಕೆ ಮರುಳಸಿದ್ದಪ್ಪ, ಬೆಂಗಳೂರು

ಪೂರಕ ಓದಿಗೆ:
ಏಸು ಇರುವುದೆ ಖಾತ್ರಿ ಇಲ್ಲ, ಭೈರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X