ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣ ದೇವಸ್ಥಾನ ಹಸ್ತಾಂತರದ ಸತ್ಯಾಸತ್ಯತೆ

By ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

Raghaveshwara swamijiಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಸ್ಥಿರಾಸ್ತಿಯನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಸ್ವಾಮಿಯವರು ಗೋಕರ್ಣ ಗ್ರಾಮದ ಎಂ.ಆರ್.ನಂಬರ್ 69/2008-09, ತಾ.2/9/08ರಂತೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ವರದಿಯಾಗಿದೆ. ನಾನಿಲ್ಲಿ ಯಾರ ಪಕ್ಷಪಾತಿಯೂ ಅಲ್ಲ. ಧರ್ಮಕ್ಷೇತ್ರಗಳು ಮನುಷ್ಯನ ಜೀವನದಲ್ಲಿ ನಂಬಿಕೆಯ ಒಂದು ಆಧಾರ.

ಆದ್ದರಿಂದ, ನಮ್ಮೆಲ್ಲ ಧರ್ಮಕ್ಷೇತ್ರಗಳೂ ಸಕಲ ಜನಕೋಟಿಯ ಬಾಳಿನ ನಂಬಿಕೆಯನ್ನು ಸದಾಕಾಲ ಕಾಪಾಡುತ್ತಲಿರಬೇಕೆಂಬ ಸದುದ್ದೇಶದಿಂದ ಕೆಲ ಪ್ರಶ್ನೆಗಳನ್ನು ಇಲ್ಲಿ ಮಂಡಿಸಿ ಆರೋಗ್ಯಕರ ಚರ್ಚೆಯನ್ನು ಬಯಸುತ್ತೇನೆ. ಈ ವಿಷಯದಲ್ಲಿ ನಾನು ಯಾವುದೇ ಪೂರ್ವಗ್ರಹವನ್ನಾಗಲೀ, ಸ್ವಾರ್ಥವನ್ನಾಗಲೀ ಹೊಂದಿಲ್ಲ. ವಾಸ್ತವದ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ಚಿಂತನೆ ಮಾತ್ರ ನನ್ನ ಉದ್ದೇಶ. ನನಗೂ ಎಲ್ಲರಂತೆ ಈ ಪ್ರಕರಣದ ಹಿನ್ನೆಲೆಯಲ್ಲಿ ತಿಳಿವಿನ ಅವಶ್ಯಕತೆ ಇದೆ. ಆದ್ದರಿಂದ ಈ ಚರ್ಚೆಯಲ್ಲಿ ನಾನು ಓದುಗನಾಗಿ ಎಲ್ಲರಂತೆ ನನ್ನ ತಿಳಿವನ್ನು ಹೆಚ್ಚಿಸಿಕೊಳ್ಳಲಿಚ್ಛಿಸುತ್ತೇನೆ. ಬಲ್ಲವರು ದಯೆಯಿಟ್ಟು ಸ್ಪಂದಿಸಿ.

ರಾಮಚಂದ್ರಾಪುರ ಮಠದ ಸಮೀಪವೇ ನನ್ನ ತಾಯಿಯ ಮತ್ತು ನನ್ನ ಹೆಂಡತಿಯ ಊರು-ಮನೆಗಳನ್ನು ಹೊಂದಿರುವ ನನಗೆ ಆ ಮಠದ ಬಗ್ಗೆ ತಕ್ಕಮಟ್ಟಿಗೆ ಗೊತ್ತು; ಅದೇವೇಳೆ ಗೋಕರ್ಣ ಕ್ಷೇತ್ರದ ಬಗ್ಗೆಯು ಒಂದಷ್ಟು ಗೊತ್ತು ಮತ್ತು ನಮ್ಮ ರಾಜಕಾರಣಿಗಳ ಬಗ್ಗೆ ಸಾಕಷ್ಟು ಗೊತ್ತು. ಇಷ್ಟು ಮಾತ್ರ ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಮಹಾಬಲೇಶ್ವರ ಮಂದಿರದ ಸ್ಥಿರಾಸ್ತಿ ವರ್ಗಾವಣೆ ನಿಜವೆ? ಸುಳ್ಳಾದರೆ ನೋಂದಣಿ ಕ್ರಮಸಂಖ್ಯೆ ವಿವರ ಸಹಿತ ಸುದ್ದಿಯೇಕೆ ಹೊರಟಿತು?

ದೇವಸ್ಥಾನ ಹಸ್ತಾಂತರವಂತೂ ನಿಜವಷ್ಟೆ. ಈ ರೀತಿಯ ಹಸ್ತಾಂತರ ಮತ್ತು ವರ್ಗಾವಣೆ ಕಾಲಕ್ರಮದಲ್ಲಿ ಇತರ ಧರ್ಮಕ್ಷೇತ್ರಗಳಿಗೂ ವಿಸ್ತರಿಸಲ್ಪಡುವುದು ನಿರೀಕ್ಷಿತ ತಾನೆ? ಇಲ್ಲದಿದ್ದಲ್ಲಿ ಇತರರು ಹಕ್ಕೊತ್ತಾಯ ಮಾಡುವುದಿಲ್ಲವೆ? ಈಗಾಗಲೇ ಅಂಥ ಹಕ್ಕೊತ್ತಾಯಗಳು ನಡೆಯುತ್ತಿವೆಯಷ್ಟೆ. ಪರಿಣಾಮ, ಧಾರ್ಮಿಕ ಅಶಾಂತಿಯ ವಾತಾವರಣ ಸೃಷ್ಟಿಯಾಗುವುದಿಲ್ಲವೆ?

ಒಂದೊಂದಾಗಿ ದೇವಸ್ಥಾನ, ಕ್ಷೇತ್ರಗಳನ್ನು ಮಠಗಳಿಗೆ ಧಾರೆಯೆರೆದು ಕೊಡತೊಡಗಿದರೆ ಆಗ ಧಾರ್ಮಿಕ ವಲಯದಲ್ಲಿ ಗುಂಪುಗಾರಿಕೆ, ಪಂಗಡಗಳು, ಸ್ವಾರ್ಥ, ಮೇಲಾಟ ಮೊದಲಾದ ಅನಾರೋಗ್ಯಕರ ಸನ್ನಿವೇಶಗಳು ಉದ್ಭವಿಸುವುದಿಲ್ಲವೆ? ಧರ್ಮದ ಒಟ್ಟು ಬಲಕ್ಕೆ ಇದರಿಂದ ಧಕ್ಕೆಯಲ್ಲವೆ?

ಹಾಗೆಂದು, ತನ್ನ ಅಧೀನದ ದೇವಾಲಯಗಳನ್ನೆಲ್ಲ ಸರ್ಕಾರವೇ, ಅಂದರೆ, ಮುಜರಾಯಿ ಇಲಾಖೆಯೇ ನೋಡಿಕೊಳ್ಳುವುದೆಂದರೆ ಅದಕ್ಕಿಂತ ಅಧ್ವಾನ ಇನ್ನೊಂದುಂಟೆ? ಗೋಕರ್ಣದ ಇದುವರೆಗಿನ ಸರ್ಕಾರಿ ಅನಾಡಳಿತವೇ ಇದಕ್ಕೆ ಸಾಕ್ಷಿಯಲ್ಲವೆ?

ಜೊತೆಗೆ, ಹಿಂದು ಭಕ್ತರು ತಮ್ಮ ದೇವರಿಗೆಂದು ನೀಡಿದ ಕಾಣಿಕೆ ಹಣವನ್ನು (ಭಾಗಶಃವಾದರೂ ಮತ್ತು ಪರೋಕ್ಷವಾಗಿಯದರೂ) ಹಜ್ ಯಾತ್ರೆಗೆ ಸರ್ಕಾರ ನೀಡಲಿಕ್ಕಾಗಿ ಹಿಂದು ದೇವಾಲಯಗಳು ಸರ್ಕಾರದ ವಶದಲ್ಲಿರಬೇಕೆ?

ಹಾಗಾದರೆ ಜಾತ್ಯತೀತ ರಾಷ್ಟ್ರವಾದ ಈ ದೇಶದಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಮೊದಲಾದವರ ಧರ್ಮಕ್ಷೇತ್ರಗಳ ಧಾರ್ಮಿಕ ಆಡಳಿತವನ್ನೂ ಸರ್ಕಾರ ಏಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬಾರದು?

ಇಷ್ಟಕ್ಕೂ ದೇವಮಂದಿರಗಳನ್ನು ತಾನು ವಶಪಡಿಸಿಕೊಳ್ಳಲು ಸರ್ಕಾರ ಯಾರು? ಅದಕ್ಕೇನು ಹಕ್ಕು? ಯಾವ ಧರ್ಮಗ್ರಂಥ ಅಂಥ ಹಕ್ಕು ನೀಡಿದೆ? ಅಂಥ ಯೋಗ್ಯತೆಯಾದರೂ ನಮ್ಮ ಸರ್ಕಾರಗಳಿಗಿದೆಯೆ?

ಸರ್ಕಾರಕ್ಕೂ ಬೇಡ, ಮಠಗಳಿಗೂ ಬೇಡ ಅಂತಾದರೆ ಮತ್ತೆ ಯಾರು ನೋಡಿಕೊಳ್ಳುವುದುಚಿತ?

ಟ್ರಸ್ಟ್? ಸಾರ್ವಜನಿಕ ಸಮಿತಿ? ಸದ್ಯದ ಪದ್ಧತಿ? ಅಥವಾ ಯಥಾಸ್ಥಿತಿ? ಅಥವಾ......?

ಆರೋಗ್ಯಪೂರ್ಣ ಚರ್ಚೆ ನಡೆಯಲಿ.---

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X