• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತದ ನೆಪದಲ್ಲಿ ಜಿದ್ದಿಗೆ ಬಿದ್ದ ಟಿವಿ ಮಾಧ್ಯಮ

|

ಆ ಸಣ್ಣ ಹುಡುಗಿಯ ಕಣ್ಣಲ್ಲಿ ದುಃಖ ಉಮ್ಮಳಿಸಿ ಬಂದಿತ್ತು. ಸಂಗೀತ ಸ್ಪರ್ಧೆಯಿಂದ ಹೊರಬಿದ್ದೆನಲ್ಲಾ ಎಂಬ ವೇದನೆಯಿಂದ ಗಂಟಲು ಉಬ್ಬಿ ಬಂದಿತ್ತು. ಮೈಕ್ ಹಿಡಿದ ಕೈ ಗಡಗಡ ನಡುಗುತ್ತಿತ್ತು. ಕೊನೆಗೆ "ನೀನು ತಪ್ಪು ಮಾಡಿದ್ದೇಲ್ಲಿ?" ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಕಣ್ಣೀರು ಕಟ್ಟೆಯೊಡೆದಿತ್ತು. ಪಕ್ಕದಲ್ಲಿ ನಿಂತ ಮತ್ತೊಬ್ಬ ಹುಡುಗಿಯ ಕಣ್ಣಲ್ಲೂ ಅಶ್ರುಧಾರೆ. ಸಂಗೀತದ ತೊದಲು ನುಡಿಗಳನ್ನು ಹೇಳಿಕೊಟ್ಟ ಆ ಹುಡುಗಿಯ ತಾಯಿ ಹಲ್ಲು ಗಟ್ಟಿಯಾಗಿ ಹಿಡಿದುಕೊಂಡು ಅಳುವನ್ನು ತಡೆಹಿಡಿದಿದ್ದರು. ಆದರೆ, ತಾಯಿಯ ಪಕ್ಕದಲ್ಲಿ ಕುಳಿತ ತಾಯಿ ಹೃದಯದ ತಂದೆಯ ಮಾತನ್ನು ಆ ಕಣ್ಣೀರು ಕೇಳಬೇಕಲ್ಲ. ಕುಳಿತಲ್ಲಿಯೇ ತಲೆ ಬಗ್ಗಿಸಿ ಬಂದ ದುಃಖ ತಡೆಯಲಾರದೆ ಬಿಕ್ಕುತ್ತಿದ್ದರು.

ನಿರ್ಣಾಯಕರ ಸ್ಥಾನದಲ್ಲಿ ಕುಳಿತಿದ್ದ ಜಡ್ಜ್ ಮ್ಲಾನವದನರಾಗಿ ಇದನ್ನೆಲ್ಲ ನೋಡುತ್ತಿದ್ದರು. ಈ ಎಪಿಸೋಡನ್ನು ನೋಡುತ್ತ ಕುಳಿತಿದ್ದ ನಿಮ್ಮ ಕಣ್ಣಲ್ಲೂ ನೀರು ಜಿನುಗಿರದಿದ್ದರೆ ಹೇಳಿ? ಇದು ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಲಿಟ್ಲ್ ಚಾಂಪ್ಸ್' ಸಂಗೀತ ಕಾರ್ಯಕ್ರಮದಲ್ಲಿ ಕಂಡ ಒಂದು ದೃಶ್ಯ. ನಾನೇನು ಸಂಗೀತ ಕಲಿತಿಲ್ಲ. ಸಂಗೀತದ ಪಟ್ಟುಗಳು ನನಗೆ ಅರ್ಥವಾಗುವುದೂ ಇಲ್ಲ. ಆದರೆ ಒಬ್ಬ ಸಾಮಾನ್ಯ ವೀಕ್ಷಕನಾಗಿ, ಇಂದು ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಅನೇಕ ಸಂಗೀತ ಕಾರ್ಯಕ್ರಮಗಳ ಬಗ್ಗೆ, ಸತ್ವರಹಿತ ನಿರೂಪಣೆಯ ಬಗ್ಗೆ ವೇದನೆಯಿಂದ ಈ ಪತ್ರವನ್ನು ಬರೆಯಬೇಕಾಗಿದೆ.

ಈ ಟಿವಿಯಲ್ಲಿ ಬರುತ್ತಿರುವ ಎಸ್ಪಿ ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿರುವ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದೊಂದಿಗೆ ಜಿದ್ದಿಗೆ ಬಿದ್ದವರಂತೆ ಅಥವ ಆ ಚಾನಲ್‌ನಲ್ಲಿ ಅಂಥ ಕಾರ್ಯಕ್ರಮ ಬರುತ್ತಿದೆ ನಮ್ಮ ಚಾನಲ್‌ನಲ್ಲಿ ಅಂಥ ಕಾರ್ಯಕ್ರಮ ಯಾಕೆ ಬರಬಾರದು ಎಂಬ ಧೋರಣೆಯೊಂದಿಗೆ ಬರುತ್ತಿರುವ ಮಕ್ಕಳ ಸಂಗೀತ ಸ್ಪರ್ಧೆ ಕಾರ್ಯಕ್ರಮ. ಇಂಥ ಕಾರ್ಯಕ್ರಮಗಳು ಸಂಗೀತ ಕಲಿಯುತ್ತಿರುವ ಮಕ್ಕಳಿಗೆ ಸಂಗೀತ ಕ್ಷೇತ್ರದ ಮೊದಲ ಮೆಟ್ಟಿಲೇರಿದ ಹಂತದಲ್ಲೇ ಲೈಮ್‌ಲೈಟಿಗೆ ಬರಲು ಅಸಾಧ್ಯ ದಾರಿಗಳನ್ನು ಹಾಕಿಕೊಟ್ಟಿವೆ. ತಮ್ಮ ಮಗು ಟಿವಿಯಲ್ಲಿ ಹಾಡುತ್ತಿದೆಯೆಂದರೆ ಯಾವ ತಂದೆ ತಾಯಿಗೆ ಸಂತಸವಾಗಲಿಕ್ಕಿಲ್ಲ. ಸಾವಿರಾರು ಮಕ್ಕಳು ತಾವು ಕಲಿತ ನಮೂನೆಯನ್ನು ಪ್ರದರ್ಶಿಸಲು ಸಾಲುಗಟ್ಟಲೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಆದರೆ, ಈ ಸ್ಪರ್ಧೆಗಳು ಮಕ್ಕಳ ಅಂತರ್ಗತ ಪ್ರತಿಭೆಯನ್ನು ಹೊರಗೆಡವುವಲ್ಲಿ ಯಶಸ್ವಿಯಾಗಿವೆಯಾ? ಇನ್ನೊಂದು ಚಾನಲ್ಲಿನೊಂದಿಗೆ ಜಿದ್ದಾಜಿದ್ದಿನ ಸ್ಪರ್ಧೆಗೆ ಬಿದ್ದಿರುವಾಗ ವೃತ್ತಿಪರತೆಯನ್ನು ಬಿಂಬಿಸುತ್ತಿವೆಯಾ? ಲಿಟ್ಲ್ ಚಾಂಪ್ ಕಾರ್ಯಕ್ರಮದಲ್ಲಿ ಮಕ್ಕಳನ್ನು ಆರಂಭದ ಸುತ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಸರಿಯಾಗಿದೆಯಾ? ಮಕ್ಕಳು ಅಳುವುದಾದರೂ ಏತಕ್ಕೆ? ಸೋತದ್ದು ಮಕ್ಕಳೋ ಅಥವ ನಿರೂಪಕರೋ?

ಸಾಲೋಸಾಲಾಗಿ ತಂದೆ ತಾಯಿಯೊಡನೆ ಬಂದು ನಿರ್ಣಾಯಕರೆದುರಿಗೆ ಎರಡು ಸಾಲನ್ನು ಹಾಡಿ ಹೊರಬಂದಾಗ ಬಹುತೇಕ ಅನೇಕ ಮಕ್ಕಳ ಕಣ್ಣುಗಳು ಕೊಳಗಳಾಗಿರುತ್ತವೆ. ಸ್ಪರ್ಧೆಯಲ್ಲಿ ಸೋಲು-ಗೆಲುವು, ಸಂತೋಷ-ವಿಷಾದ ಇದ್ದದ್ದೇ. ಆದರೆ, ಅಳುತ್ತಿರುವ ಆ ಮಗುವನ್ನು ನೋಡಿದ ಇನ್ನೊಂದು ಮಗುವಿನ ಮನದಲ್ಲಿ ತಾನೆಲ್ಲಿ ರಿಜೆಕ್ಟ್ ಆಗಿಬಿಡುತ್ತೇನೋ ಎಂಬ ದುಗುಡ ಮನೆಮಾಡಿದ್ದರೂ ಆಶ್ಚರ್ಯವಿಲ್ಲ.

ಎಸ್ಪಿ ನಡೆಸಿಕೊಡುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲೂ ಮಕ್ಕಳಿದ್ದಾರೆ. ಅಲ್ಲೂ ಕೆಲವರು ಸೋಲುತ್ತಾರೆ, ಕೆಲವರು ಗೆಲ್ಲುತ್ತಾರೆ. ಎದೆ ತುಂಬಿ ಹಾಡಿದ ಮಗು ಕೊನೆ ಕ್ಷಣದಲ್ಲಿ ಕೆಲವೇ ಅಂಕದಿಂದ ಸ್ಪರ್ಧೆಯಿಂದ ಹೊರಬಿದ್ದಾಗ ಎರಡು ಹನಿ ನೀರು ಜಿನುಗಿದ್ದೂ ಉಂಟು. ಆದರೆ ಆ ಮಕ್ಕಳನ್ನು ಪ್ರೋತ್ಸಾಹಿಸುವ, ಸಂಗೀತದ ಅಆಇಈ ಕಲಿಯಲು ಪ್ರೇರೇಪಿಸುವ ರೀತಿ, ಮಕ್ಕಳೊಂದಿ ಎಸ್ಪಿ ಕೂಡ ಮಕ್ಕಳಾಗಿ ನಲಿದಾಡುವ ರೀತಿ ಅನನ್ಯವಾಗಿದೆ. ಅಲ್ಲಿ ತನ್ನ ಮಿತಿಯನ್ನು ಮೀರಿ ಹಾಡಲು ಆಸ್ಪದವೇ ಇಲ್ಲ. ಸ್ಪರ್ಧೆಯಲ್ಲಿ ಇನ್ನಿತರ ಸ್ಪರ್ಧಿಯೊಂದಿಗೆ ಮನಃಸ್ಫೂರ್ತಿ ಹಾಡಿ ಸೋತಾಗಲೂ ಮಗುವಿನ ಮನದಲ್ಲಿ ಗೆದ್ದ ಭಾವನೆಯಿರುತ್ತದೆ.

ಆದರೆ ಅದೇ ಸನ್ನಿವೇಶ ಜೀ ಕನ್ನಡದಲ್ಲಿರದಿರುವುದು ವಿಪರ್ಯಾಸ. ಎಸ್ಪಿಗೂ, ಜೀ ಟಿವಿಯಲ್ಲಿ ಕಾರ್ಯಕ್ರಮ ನಿರೂಪಿಸುವ ಎಂ.ಡಿ.ಪಲ್ಲವಿಗೂ ಹೋಲಿಸಬಾರದಾದರೂ ಪಲ್ಲವಿಯಂಥವರು ನಿರೂಪಣೆಯಲ್ಲಿ, ಹಾವಭಾವದಲ್ಲಿ, ಮಾತುಗಳಲ್ಲಿ, ಉಡುಗೆತೊಡುಗೆಗಳಲ್ಲಿ ಎಸ್ಪಿಯಂಥವರನ್ನು ಅನುಸರಿಸಿದರೆ ತಪ್ಪೇನೂ ಇಲ್ಲವಲ್ಲ? ಕನ್ನಡದವರಲ್ಲದಿದ್ದರೂ ಕನ್ನಡದವರಾಗಿರುವ, ಕನ್ನಡಿಗರ ಆರಾಧ್ಯ ಗಾಯಕರಾದ ಎಸ್ಪಿ ಬಾಲಸುಬ್ರಮಣ್ಯಂ ತಮ್ಮದಲ್ಲದ ಕನ್ನಡ ಭಾಷೆಯಲ್ಲಿ ಸಾಧ್ಯವಾದ ಮಟ್ಟಿಗೆ ಮಾತನಾಡಲು ಪ್ರಯತ್ನಿಸಿದರೆ, ಪಲ್ಲವಿ ಸುಮಧುರ ಕಂಠದಿಂದ ಉಲಿಯುತ್ತಿರುವುದು ಹೆಚ್ಚಾನುಹೆಚ್ಚು ಆಂಗ್ಲ ಭಾಷೆ!

ಎಸ್ಪಿ ಕಾರ್ಯಕ್ರಮದಲ್ಲಿ ನಿರೂಪಕರು ಮಾತ್ರವಲ್ಲ ಸ್ಪರ್ಧಿಗಳಿಗೂ ಸಾಂಪ್ರದಾಯಿಕ ಉಡುಗೆ ತೊಡಲು ಪ್ರೇರೇಪಿಸಿದರೆ, ಪಲ್ಲವಿ ಕಾರ್ಯಕ್ರಮದಲ್ಲಿ ಥಳಕುಬಳುಕಿನದ್ದೇ ಆರ್ಭಟ. ಹಾಡುಹಾಡುವಾಗ ಹಾಡಿಗೆ ತಕ್ಕಂತೆ ಮುಖದ ಭಾವನೆಗಳಿಗೆ ಎದೆ ತುಂಬಿ ಕಾರ್ಯಕ್ರಮದಲ್ಲಿ ಪ್ರಾಮುಖ್ಯತೆ ನೀಡಿದ್ದರೆ, ಲಿಟ್ಲ್ ಚಾಂಪ್ಸ್‌ಗಳು ಹಾಡಿನ ಮಿತಿಯನ್ನು ಮೀರಿ ಸ್ಪರ್ಧೆಗೆ ಬಿದ್ದಂತೆ ವಿಪರೀತ ಹಾವಭಾವಗಳ ಮುಖಾಂತರ ನಿರ್ಣಾಯಕರನ್ನು ಮೆಚ್ಚಿಸಲು ಯತ್ನಿಸುತ್ತಿರುವುದು ಕಂಡುಬರುತ್ತಿದೆ. ಎದೆ ತುಂಬಿ ಹಾಡಲು ಅವಕಾಶ ಸಿಗದಿದ್ದರೇನಾಯಿತು ಲಿಟ್ಲ್ ಚಾಂಪಾದರೂ ಆಗಬಹುದಲ್ಲ ಎಂಬ ಕನಸು ಅನೇಕ ಮಕ್ಕಳಲ್ಲಿ ಮನೆಮಾಡಿದ್ದರಲ್ಲಿ ಆಶ್ಚರ್ಯವಿಲ್ಲ.

ಇದು ಸರಿಯಾ? ಸಂಗೀತದ ಅಂ ಅಃ ದಾಟದ ಹುಡುಗರು ಸಂಗೀತದ ಬೇಸಿಕ್‌ಅನ್ನು ಬದಿಗಿಟ್ಟು ಸಿನೆಮಾ ಹಾಡುಗಳ ಮುಖಾಂತರ ಮುಂದೊಂದು ದಿನ ಹಿನ್ನೆಲೆ ಸಂಗೀತಗಾರರಾಗುವ ಕನಸು ಮನದಲ್ಲಿ ಬಿತ್ತಿಕೊಳ್ಳುವುದು ಸಮಂಜಸವೇ? ಎದೆ ತುಂಬಿ ಹಾಡುವೆನು ಕಾರ್ಯಕ್ರಮವೇ ಮಾನದಂಡವಲ್ಲದಿದ್ದರೂ ಅದನ್ನು ಮೀರಿ ಸ್ಪರ್ಧಿಸಲು ಪ್ರಯತ್ನಿಸಬಹುದಲ್ಲ? ಒಂದು ಕಾರ್ಯಕ್ರಮ ನಡೆಸಬೇಕೆಂದರೆ ಅನೇಕ ಕೈಗಳ ಕೈವಾಡವಿರುತ್ತದೆ. ನಿರ್ದೇಶಕ, ನಿರೂಪಕ, ಸೆಟ್ಟಿಂಗು, ಕೊನೆಗೆ ನಿರ್ಣಾಯಕರು. ಆ ನಿರೂಪಕರನ್ನು, ನಿರ್ಣಾಯಕರನ್ನು ಆಯ್ಕೆ ಮಾಡುವಾಗಲಾದರೂ ಎಚ್ಚರಿಕೆವಹಿಸಬೇಡವೇ?

ಸಿಕ್ಸರ್ : ಲಿಟ್ಲ್ ಚಾಂಪ್ ಕಾರ್ಯಕ್ರಮದಲ್ಲಿ ನಾಯಕ ನಟ 'ಸಿಕ್ಸರ್' ಖ್ಯಾತಿಯ ಪ್ರಜ್ವಲ್ ಒಂದು ಎಪಿಸೋಡಿನಲ್ಲಿ ನಿರ್ಣಾಯಕರಾಗಿ ಆಗಮಿಸಿದ್ದರು. ಒಂದು ಹುಡುಗಿ ಹಾಡಿದ ನಂತರ ಅತೀ ಸಂತುಷ್ಟರಾದ ಪ್ರಜ್ವಲ್ ಆ ಹುಡುಗಿಗೆ ತಮಾಷೆಯಿಂದ ಕೇಳಿದ್ದೇನು ಗೊತ್ತೆ? "ನನ್ನ ಮದುವೆಯಾಗ್ತೀಯಾ?" ಆ ಹುಡುಗಿಯ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ನಿಜ ಹೇಳಬೇಕೆಂದರೆ, ಆ ಹುಡುಗಿಗೆ ಆ ಪ್ರಶ್ನೆಯೇ ಅರ್ಥವಾಗಿರಲಿಲ್ಲ!

ನಿವೇದಿತಾ ಪ್ರಭಾಕರ್, ಬೆಂಗಳೂರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more