ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಕೋಮಲ ಭಾವನೆ ಕೆಣಕದಿರಿ ಎಸ್ಪಿಬಿ

By Staff
|
Google Oneindia Kannada News

ಅಂದೇಕೆ ಹಾರುವ ಬದಲು ಹಾಡುವ, ಏನನು ಬದಲು ಹೇನನು, ಏತಕೆ ಬದಲು ಹೇತಕೆ ಅಂತ ಹಾಡಿದ ಆಂಧ್ರದಿಂದ ಬಂದ ಆ ಗಾಯಕಿಯನ್ನು ಎಸ್ಪಿ ತಿದ್ದಲಿಲ್ಲ? ಅಲ್ಲಿ ಕುಳಿತಿದ್ದ ಅಚ್ಚ ಕನ್ನಡಿಗರಾದ ತೀರ್ಪುಗಾರರಿಗೇನಾಗಿತ್ತು?

ಯಶ್‌

Wrong Judgement by S.P.Balasubramanyam!ಅತ್ಯದ್ಭುತ ಗೀತೆಗಳಿಂದ ಮಾಗಿಯ ಚಳಿಯಲ್ಲೂ ಕನ್ನಡ ಚಿತ್ರರಸಿಕರಿಗೆ ಮೈಮನ ಬೆಚ್ಚಗಾಗಿಸಿದ್ದ ಚಿತ್ರ 'ಹೊಂಬಿಸಿಲು". ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗಬಹುದು ಆದರೆ ಜನಮಾನಸದಿಂದ ಈ ಚಿತ್ರದ ಹಾಡುಗಳು ಅಳಿಸಿ ಹೋಗಲು ಸಾಧ್ಯವೇ ಇಲ್ಲ.

ಎಸ್‌.ಜಾನಕಿಯ ಕಂಠದಿಂದ ಹೊರಹೊಮ್ಮಿದ್ದ 'ಹೂವಿಂದ ಹೂವಿಗೆ ಹಾರುವ ದುಂಬಿ" ಹಾಡು ಕೇಳಿದರೆ ಈಗಲೂ ಕಣ್ಣಂಚಿನಿಂದ ಸಂತಸದ ನೀರು ಜಿನುಗದಿದ್ದರೆ ಕೇಳಿ.

ಆ ಹಾಡಿನ ಪಲ್ಲವಿ ಹೀಗಿದೆ -

ಹೂವಿಂದ ಹೂವಿಗೆ ಹಾರುವ ದುಂಬಿ ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಏತಕೆ ಕಾಡುತಿಹೆ

ಇದೇ ಹಾಡನ್ನು ಹೀಗೆ ಹಾಡಿದರೆ ಹೇಗಿರತ್ತೆ -

ಹೂವಿಂದ ಹೂವಿಗೆ ಹಾಡುವ ದುಂಬಿ ಹೇನನು ಹಾಡುತಿಹೆ ನೀ ಹೇನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಹೇತಕೆ ಕಾಡುತಿಹೆ

ಕೇಳುಗರ ಭಾವನೆಗಳನ್ನು ಕಲಕಬೇಕಾಗಿದ್ದ ಈ ಹಾಡನ್ನು ಹಾಡಿ ಭಾವನೆಗಳನ್ನು ಕೆಣಕಿದ ಗಾಯಕಿ, ಸಂಗೀತ ಸ್ಪರ್ಧೆಯಲ್ಲಿ ವಿಜೇತೆ. ಕಾರ್ಯಕ್ರಮ - ಕನ್ನಡದ ಪುಟ್ಟ ಕಂದಮ್ಮಗಳು ಎದೆ ತುಂಬಿ ಹಾಡುವ 'ಎದೆ ತುಂಬಿ ಹಾಡುವೆನು". ಹಾಡಿದ್ದು ತೆಲುಗು ನಾಡಿನಿಂದ ಬಂದ ಪುಟ್ಟ ಬಾಲೆ. ಕಾರ್ಯಕ್ರಮದ ರೂವಾರಿ ಒನ್ಸ್‌ ಅಗೇನ್‌ ತಮ್ಮ ಕಂಠಮಾಧುರ್ಯದಿಂದ, ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡಿಗರ ಹೃದಯಕ್ಕೆ ಲಗ್ಗೆ ಹಾಕಿರುವ ಎಸ್ಪಿ ಬಾಲಸುಬ್ರಮಣ್ಯಂ!

ಕರ್ನಾಟಕದ ಮೂಲೆ ಮೂಲೆಯಿಂದ ಬರುವ ಪುಟ್ಟ ಬಾಲ ಬಾಲೆಯರು ಹೃದಯತುಂಬಿ ಹಾಡುವ ಈ ಕಾರ್ಯಕ್ರಮವನ್ನು ಕೇಳುವುದೇ ಚೆಂದ.

ಅಚ್ಚ ಕನ್ನಡ ಬರುತ್ತಿದ್ದರೂ ಪುಟಾಣಿಗಳು ಪದಗಳನ್ನು ಬಳಸುವಾಗ ಉಚ್ಛಾರದಲ್ಲಿ ಎಡುವುವುದು ಸಹಜ. ಎಸ್ಪಿ ಸಾಹೇಬರು ಅದನ್ನು ಅಷ್ಟೇ ಆಸ್ಥೆಯಿಂದ ತಿದ್ದಿ ಹೇಳುತ್ತಾರೆ. ಅವರ ಮಾರ್ಗದರ್ಶನದಲ್ಲಿ, ಅವರು ನೀಡುವ ಶಭಾಸ್‌ನಿಂದಾಗಿ ಈ ಮಕ್ಕಳು ಮುಂದೆ ಉತ್ತಮ ಗಾಯಕರಾಗುವುದರಲ್ಲಿ ಸಂದೇಹವೇ ಇಲ್ಲ. ಅವರನ್ನು ಪ್ರೋತ್ಸಾಹಿಸುತ್ತ, ಕಿಚಾಯಿಸುತ್ತ, ಮಕ್ಕಳೊಂದಿಗೆ ಮಕ್ಕಳಾಗುತ್ತ, ನಗುತ್ತ, ಅಳುತ್ತ ಎಲ್ಲರೊಂದಿಗೆ ಒಂದಾಗುವ ಎಸ್ಪಿಯನ್ನು ನೋಡುವುದೇ ಆನಂದ.

ಆದರೆ, ಅಂದೇಕೆ ಹಾರುವ ಬದಲು ಹಾಡುವ, ಏನನು ಬದಲು ಹೇನನು, ಏತಕೆ ಬದಲು ಹೇತಕೆ ಅಂತ ಹಾಡಿದ ಆಂಧ್ರದಿಂದ ಬಂದ ಆ ಗಾಯಕಿಯನ್ನು ಎಸ್ಪಿ ತಿದ್ದಲಿಲ್ಲ? ಆ ಮಗುವಿನ ಬಗ್ಗೆ ಯಾವುದೇ ಮತ್ಸರವಿಲ್ಲ. ಕನ್ನಡೇತರರು ಕನ್ನಡದಲ್ಲಿ ಹಾಡುವುದಕ್ಕೆ ನೀಡಿದ ಪ್ರೋತ್ಸಾಹ ಶ್ಲಾಘನೀಯ. ಆ ಗಾಯಕಿಗೆ ಕನ್ನಡ ಬರುವುದಿಲ್ಲವೆಂಬುದು ವೇದ್ಯವಾಗಿತ್ತು. ಆದರೆ, ಅಲ್ಲಿ ಕುಳಿತಿದ್ದ ಅಚ್ಚ ಕನ್ನಡಿಗರಾದ ತೀರ್ಪುಗಾರರಿಗೇನಾಗಿತ್ತು? ಕನ್ನಡವನ್ನು ಅಷ್ಟೊಂದು ಪ್ರೀತಿಸುವ ಎಸ್ಪಿಗೇನಾಗಿತ್ತು? ಅಥವ ತೀರ್ಪುಗಾರರು ತಮ್ಮ ತೀರ್ಪು ನೀಡಿದರೂ ಅಂತಿಮ ತೀರ್ಪು ಎಸ್ಪಿಯವರದೇನಾ?

ಆ ಗಾಯಕಿಗಿಂತ ಸುಶ್ರಾವ್ಯವಾಗಿ, ಅಚ್ಚ ಕನ್ನಡದಲ್ಲಿ, ಯಾವುದೇ ತಪ್ಪಿಲ್ಲದೇ ಹಾಡಿದ ಬಳ್ಳಾರಿಯಿಂದ ಬಂದ ಮತ್ತೋರ್ವ ಗಾಯಕಿಯ ಕಣ್ಣಂಚಿನಲ್ಲಿ ಜಿನುಗಿದ ನೀರು ಯಾರಿಗೂ ಕಾಣಲಿಲ್ಲ.

ಕನ್ನಡದ ಕಾರ್ಯಕ್ರಮದಲ್ಲಿ ಕನ್ನಡಿಗರನ್ನೇ, ಅದರಲ್ಲೂ ಅರ್ಹರನ್ನೇ ಪ್ರೋತ್ಸಾಹಿಸದಿದ್ದರೆ ಮುಂದೆ ಅವರು ಮತ್ತೊರ್ವ ಎಸ್ಪಿಯೋ, ಜಾನಕಿಯೋ ಆಗುವುದೆಂದು? ಅಥವ ಇಂಥ ಅನುಭವಗಳು, ಅವಮಾನಗಳು ಅವರನ್ನು ಆ ಎತ್ತರಕ್ಕೆ ಕೊಂಡೊಯ್ಯುತ್ತವೆಯೋ?

ಯಾರೂ ಪ್ರಶ್ನಾತೀತರಲ್ಲ. ಅಸಲಿಗೆ ಪ್ರಶ್ನಿಸುವವರೇ ಇಲ್ಲ. ಪ್ರಶ್ನಿಸಿದರೂ 'ಸ್ಟಾಪ್‌ ಧಿಸ್‌ ನಾನ್‌ಸೆನ್ಸ್‌" ಅನ್ನುವ ಮಂದಿಯೇ ಜಾಸ್ತಿ. ಇಂಥ ಪ್ರಶ್ನೆಗಳು ನಮ್ಮ ನಮ್ಮಲ್ಲಿ ಚರ್ಚಿತವಾದರೆ ಪ್ರಯೋಜನವಿಲ್ಲ. ಸಂಬಂಧಿಸಿದವರ ಕಿವಿಗೂ ಬೀಳಬೇಕು. ಅವರ ಶ್ರವಣಶಕ್ತಿ ಕಡಿಮೆಯಾಗಿದ್ದರೆ, ಕೂಗಿ ಕೂಗಿ ಹೇಳಬೇಕು. ನಮ್ಮ ಧ್ವನಿ ಎತ್ತರಿಸದಿದ್ದರೆ ಬೆಳಗಾವಿ ಮಹಾರಾಷ್ಟ್ರದ ಪಾಲಾಗಿರುತ್ತದೆ, ಪ್ರಶಸ್ತಿ ಆಂಧ್ರದ ಪಾಲಾಗಿರುತ್ತದೆ.

ಹೂವಿಂದ ಹೂವಿಗೆ ಹಾಡುವ ದುಂಬಿ ಹೇನನು ಹಾಡುತಿಹೆ ಎನ್ನುವುದೇ ಸರಿ ಎನ್ನುವ ಕನ್ನಡದ ಭಕ್ತರಿದ್ದರೆ ಅವರಲ್ಲಿ ನನ್ನ ಕ್ಷಮೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X