ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ನಕಾರಾತ್ಮಕ ಭಾವನೆ ಬದಲಾಯಿಸಿಕೊಳ್ಳುವುದು ಹೇಗೆ?

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಆಗಲೇ ಬಿಸಿಲು ಚುರುಕಾಗಿದೆ. ಬಿಸಿಲಿನಲ್ಲಿ ಓಡಾಡಿಕೊಂಡು, ಹೊರಗಿನ ಕೆಲಸಗಳನ್ನು ಮುಗಿಸಿಕೊಂಡು, ಮನೆಗೆ ಬರುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಬಹಳ ದಣಿವಾಗಿದೆ. ಬಾಯಾರಿಕೆ‌ ಇಂದ ಗಟಗಟನೆ ತಣ್ಣಗಿನ ನೀರು ಕುಡಿಯುತ್ತೀರಿ. ಆದರೂ ಇನ್ನೂ ದಾಹ.

ಎದುರಿಗೆ ನಾಲ್ಕೈದು ನಿಂಬೆ ಹಣ್ಣುಗಳು ಕಾಣುತ್ತದೆ. ನಿಮಗೆ ತಾಜಾ ತಾಜಾ ನಿಂಬೆ ಹಣ್ಣಿನ ಪಾನಕ ಕುಡಿಯುವ ಬಯಕೆಯಾಗುತ್ತದೆ. ಒಂದು ಲೋಟ ನೀರು ತೆಗೆದುಕೊಂಡು, ಅದಕ್ಕೆ ಎರಡು ಚಮಚ ಸಕ್ಕರೆ ಬೆರೆಸಿ, ಒಂದು ನಿಂಬೆ ಹಣ್ಣನ್ನು ಹೆಚ್ಚುತ್ತಿರುವಾಗಲೇ, ನಿಮ್ಮ ಮೊಬೈಲಿಗೊಂದು‌ ಕರೆ ಬರುತ್ತದೆ. ಬಹಳ ದಿನಗಳ ನಂತರ ನಿಮಗೆ ಬೇಕಾದವರೊಬ್ಬರು ಕರೆ ಮಾಡಿರುತ್ತಾರೆ. ಖುಷಿ‌ ಇಂದ ಕರೆ ಸ್ವೀಕರಿಸುತ್ತೀರಿ. ಮಾತಾಡುತ್ತಾ ಮಾತಾಡುತ್ತಾ ಒಂದರ ಬದಲು ನಾಲ್ಕೂ ನಿಂಬೆಹಣ್ಣುಗಳನ್ನು ಹೆಚ್ಚಿ ಅವುಗಳ ರಸವನ್ನು ಆ ಒಂದು ಲೋಟದ ನೀರಿನೊಂದಿಗೆ ಬೆರೆಸುತ್ತೀರಿ. ಮಾತು ಮುಗಿದ ನಂತರ ಮೊಬೈಲ್ ಕೆಳಗಿಟ್ಟು, ಲೋಟವನ್ನು ಕೈಗೆತ್ತಿಕೊಂಡು ಒಂದು ಗುಟುಕು ಪಾನಕವನ್ನು ಕುಡಿಯುತ್ತೀರಿ...

Psychology: ಮಾನಸಿಕ ದೈಹಿಕ ಅಸ್ವಸ್ಥತೆಗಳು ಹಾಗೂ ಪರಿಹಾರPsychology: ಮಾನಸಿಕ ದೈಹಿಕ ಅಸ್ವಸ್ಥತೆಗಳು ಹಾಗೂ ಪರಿಹಾರ

ಪಾನಕ ಹುಳಿಲೋಚು ಅಲ್ಲವೇ?

ಪಾನಕ ಹುಳಿಲೋಚು ಅಲ್ಲವೇ?

ಮೊದಲೇ ದಾಹವಾಗಿತ್ತು, ಬಂದ ಮೊಬೈಲ್ ಕರೆಯಲ್ಲಿ ಬಹಳ ಹೊತ್ತು ಮಾತನಾಡಿ ಬಾಯಿ ಒಣಗಿ ದಾಹ ಇನ್ನೂ ಹೆಚ್ಚಾಯಿತು. ಬಿಸಿಲಿನಲ್ಲಿ ದಣಿದಿದ್ದ ನಿಮಗೆ ಅತೀ ಹುಳಿಯಾದ ಪಾನಕ ಕುಡಿದು ಇರುಸು-ಮುರುಸಾಗುತ್ತದೆ. ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಸಿಟ್ಟು ಬರುತ್ತದೆ. ಆಗ ನಿಮ್ಮಲ್ಲಿ ಬರುವ ಆಲೋಚನೆಗಳು ಏನು?

ಆಲೋಚನೆ ಹೀಗಿರಬಹುದೇ?

ಆಲೋಚನೆ ಹೀಗಿರಬಹುದೇ?

* ಅಯ್ಯೋ ಇದೇನು ಹೀಗಾಯಿತಲ್ಲಾ!! ಎಂಬ ನಿರಾಸೆ.
* ನನಗೆ ಅಷ್ಟೂ ತಿಳಿಯಲಿಲ್ಲವೇ...ಏನಾಗಿತ್ತು ನನ್ನ ಪ್ರಜ್ಞೆಗೆ? ಎಂದು ನಿಮ್ಮ‌ ಮೇಲೆ ನಿಮಗೆ ಕೋಪ ಬರುತ್ತದೆ.
* ಯಾಕಾದರೂ ಕರೆ ಮಾಡಿದರೋ ಎಂದು ಕರೆ ಮಾಡಿದವರನ್ನು ದೂಷಿಸುವಂತಾಗುತ್ತದೆ.
* ಎಂಥ ಮೂರ್ಖತನದಿಂದ ಒಂದು ಲೋಟ ಪಾನಕಕ್ಕೆ ನಾಲ್ಕು ನಿಂಬೆಹಣ್ಣಿನ ರಸ ಬೆರೆಸಿದೆನಲ್ಲಾ ಏನು ಮಾಡುವುದು ಈಗ ಎಂಬ ಯೋಚನೆ ಶುರುವಾಗುತ್ತದೆ.
* ಬೇಸಿಗೆಯಲ್ಲಿ ನಿಂಬೆಹಣ್ಣು ದುಬಾರಿ, ಎಣಿಸಿ ನಿಂಬೆಹಣ್ಣುಗಳನ್ನು ಕೊಂಡಿದ್ದೆ, ಆದರೆ ಎಲ್ಲಾ ತಲೆಕೆಳಗಾಯಿತು.

ಮೇಲಿನ ಆಲೋಚನೆಗಳು ಸಹಜವಾದುದು. ಕ್ಷಣ ಮಾತ್ರ ದಲ್ಲಿ ಕೋಪ ಬರುತ್ತದೆ, ಆದ ಸಮಸ್ಯೆಗಳಿಗೆ ಇತರರನ್ನು ದೂರುವುದು, ಏರ್ಪಟ್ಟ ಅಹಿತಕರ ಸಂದರ್ಭಗಳಿಗೆ ತಮ್ಮನ್ನು ತಾವೇ ದೂರಿಕೊಳ್ಳುವುದು, ನಮ್ಮ ಯೋಚನೆ ತಲೆಕೆಳಗಾಯಿತಲ್ಲಾ ಎಂಬ ನಿರಾಸೆ ಸಹ ಮೂಡುತ್ತದೆ. ಹೀಗಾಯಿತಲ್ಲಾ! ಹೀಗಾಗಬಾರದಿತ್ತು ಎಂಬ ಚಿಂತೆ ಶುರುವಾಗುತ್ತದೆ.

ಎಷ್ಟೇ ಯೋಚನೆ ಮಾಡಿದರೂ ಅಥವಾ ಪ್ರಯತ್ನಿಸಿದರೂ ಸಹ ಉಪಯೋಗಿಸಿದ ನಾಲ್ಕೂ ನಿಂಬೆಹಣ್ಣುಗಳನ್ನು ಮತ್ತು ಸಮಯವನ್ನು ಹಿಂದಕ್ಕೆ ತರಲಾಗುವುದೇ? ಆಗುವುದಿಲ್ಲ ಅಲ್ಲವೇ?

ಕಾರಣಗಳು ಏನೇನು ಇರಬಹುದು

ಕಾರಣಗಳು ಏನೇನು ಇರಬಹುದು

ಈಗ ಕಣ್ಣು ಮುಚ್ಚಿ ಒಮ್ಮೆ ನಿಮ್ಮ ಜೀವನದ ಕೆಲವು ಹುಳಿಲೋಚಿನ, ಇರುಸು ಮುರುಸಾದ ಸಂದರ್ಭ, ಘಟನೆಗಳನ್ನು ನೆನಪಿಸಿಕೊಳ್ಳಿ.

* ತೆಗೆದುಕೊಂಡ ನಿರ್ಧಾರ ಸರಿಬಾರದೇ ಇರಬಹುದು. ದುಡುಕಿಬಿಟ್ಟೆ‌ ಅಥವಾ ವಾಸ್ತವವಲ್ಲದ ನಿರೀಕ್ಷೆ ಇಂದ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿಲ್ಲ ಎನಿಸಿರಬಹುದು.

* ವಿದ್ಯಾಭ್ಯಾಸಕ್ಕೆ ಆಯ್ಕೆ ಮಾಡಿಕೊಂಡ ವಿಷಯ, ಕೆಲಸ, ಕಂಪನಿ, ವ್ಯಾಪಾರ ಇತ್ಯಾದಿ ಆಯ್ಕೆಯಲ್ಲಿ ವ್ಯತ್ಯಾಸ ಆಗಿರಬಹುದು. ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿರಬಹುದು.

* ಕೋಪದಲ್ಲಿ ಹೆಚ್ಚು ಕಮ್ಮಿ ಮಾತಾಗಿ ಸಂಬಂಧಗಳಲ್ಲಿ ಏರುಪೇರುಗಳು ಉಂಟಾಗಿರಬಹುದು.

* ಸಮಯವನ್ನು ಮಹತ್ವ ತಿಳಿಯದೆ ಮಾಡಬೇಕಾದ ಕೆಲಸ ಹಾಗು ಪ್ರಯತ್ನ ವನ್ನು ಮುಂದೂಡುತ್ತಾ ಬಂದೆ.

* ಕುಟುಂಬ, ಸ್ನೇಹಿತರನ್ನು ನಿರ್ಲಕ್ಷ್ಯ ಮಾಡಿಬಿಟ್ಟೆ

ಎಂದು ನೀವು ಇಂದಿನ ತನಕ ಆ ಅಹಿತಕರ ವಿಷಯಗಳ ಬಗ್ಗೆ ಯೋಚಿಸುತ್ತಲೇ ಇರಬಹುದು. ಇಂದಿಗೂ ಸಹ ಹಾಗೆ ಯೋಚಿಸಬಹುದಿತ್ತು, ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದಿತ್ತು, ಸಮಯಕ್ಕೆ ಸರಿಯಾಗಿ ಹೆಚ್ಚು ಓದಬೇಕಿತ್ತು, ಈ ಕೆಲಸಕ್ಕೆ ಸೇರಬಹುದಿತ್ತು, ಕೋಪ ಮಾಡಿಕೊಳ್ಳಬಾರದಿತ್ತು, ಸಲಹೆ ಪಡೆಯಬಹುದಿತ್ತು, ಎಂಬ ಆಗಿಹೋದಂತಹ ಸಂದರ್ಭಗಳ ಬಗ್ಗೆಯೇ ಯೋಚಿಸುತ್ತಿರಬಹುದು.

ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ‌ ಇರುವುದಿಲ್ಲ

ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ‌ ಇರುವುದಿಲ್ಲ

ಇದಕ್ಕೆ ಅಂದಿನ ನಿಮ್ಮ ಭಾವನಾತ್ಮಕ ವಾತಾವರಣ (emotional climate) ಸುತ್ತಮುತ್ತಲಿನ ಜನ ಹಾಗು ಪರಿಸರ, ಒತ್ತಡ, ದುಗುಡಗಳು, ದೈಹಿಕ ಮಾನಸಿಕ ಆರೋಗ್ಯ, ಸಾಮಾಜಿಕ ಹಾಗು ಹಣಕಾಸಿನ ವ್ಯವಸ್ಥೆ, ಜವಾಬ್ದಾರಿಗಳು, ಪೂರ್ವಾಗ್ರಹ ಮಾಹಿತಿ ಇತರ ಅಂಶಗಳು ಕಾರಣವಾಗಿರುತ್ತದೆ. ಕಾರಣ ನಾವು ಜಾಗರೂಕತೆ ಇಂದ ಇದ್ದರೂ ಕೆಲವು ಅಂಶ ಹಾಗು ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ‌ ಇರುವುದಿಲ್ಲ.

ನಿಂಬೆ ಹಣ್ಣಿನ ಪಾನಕದಿಂದ, ಹೆಚ್ಚಾದ ನಿಂಬೆ ರಸವನ್ನು ಹೇಗೆ ಹಿಂಪಡೆಯಲು ಸಾಧ್ಯವಿಲ್ಲವೋ ಹಾಗೆಯೇ ನಮ್ಮ ಹಿಂದಿನ ಭೂತಕಾಲದಲ್ಲಿ ತಿಳಿದೋ, ತಿಳಿಯದೆಯೋ ಸಂಧರ್ಭಕ್ಕೆ ಸಿಕ್ಕು ಆಗಿದ್ದ ಅನೇಕ ಅವಘಡಗಳು ಕೆಲವು ನಿರ್ಧಾರಗಳು, ಆಯ್ಕೆ, ವ್ಯತ್ಯಾಸಗಳು ಸಂದರ್ಭಗಳನ್ನು ಬದಲಿಸಲು ಸಾಧ್ಯವಿಲ್ಲ.

ಹಾಗಾದರೆ ನಿಂಬೆ ಹಣ್ಣಿನ‌ ಪಾನಕ ಉಪಯೋಗಕ್ಕೆ ಬಾರದಂತಾಯಿತೇ?

ಖಂಡಿತವಾಗಿ ಉಪಯೋಗಿಸಬಹುದು.

ಅಂಥ ಸಂದರ್ಭದಲ್ಲಿ ಏನು ಮಾಡಬಹುದು

ಅಂಥ ಸಂದರ್ಭದಲ್ಲಿ ಏನು ಮಾಡಬಹುದು

ನೀವು ಏನು ಮಾಡುತ್ತೀರಿ?

* ಇನ್ನೂ ಎರಡು ಮೂರು ಲೋಟ ನೀರು ಸೇರಿಸಬಹುದು
* ಸ್ವಲ್ಪ ಸಕ್ಕರೆ ಮತ್ತು ಏಲಕ್ಕಿ ಸೇರಿಸಬಹುದು
* ಒಂದೆರಡು ಮಂಜುಗಡ್ಡೆ ಯನ್ನೂ ಸೇರಿಸಬಹುದು

ನೀರಿನಿಂದ- ಹುಳಿ ಅಂಶ ಕಡಿಮೆಯಾಗುತ್ತದೆ. ಒಂದು ಲೋಟ ಪಾನಕವು ನಾಲ್ಕು ಲೋಟವಾಗುತ್ತದೆ. (ಪ್ರಮಾಣ ಹೆಚ್ಚುತ್ತದೆ) ಇದರಿಂದ ನೀವು ಮತ್ತೊಮ್ಮೆ ಪಾನಕ ಕುಡಿಯಬಹುದು. ಅಥವಾ ಕುಟುಂಬದ ಇತರರಿಗೂ ಕೊಟ್ಟು ಪಾನಕ ಸವಿಯುವಂತೆ ಮಾಡಬಹುದು.‌ ಒಬ್ಬರ ಬದಲು ನಾಲ್ಕು ಜನ ಪಾನಕ ಸೇವಿಸುತ್ತೀರಿ.

ಸಕ್ಕರೆ ಮತ್ತು ಏಲಕ್ಕಿ ಇಂದ - ರುಚಿ ಹಾಗು ಸುವಾಸನೆ ಹೆಚ್ಚುತ್ತದೆ

ಮಂಜುಗಡ್ಡೆಯಿಂದ- ಪಾನಕ ಇನ್ನೂ ತಂಪಾಗುತ್ತದೆ.

ಹೆಚ್ಚಿನ ನೀರು, ಸಕ್ಕರೆ, ಏಲಕ್ಕಿ, ಮಂಜುಗಡ್ಡೆಯನ್ನು ಸೇರಿಸಿದ್ದರಿಂದ ಮೊದಲು ಹುಳಿಲೋಚಾಗಿದ್ದ ಒಂದು ಲೋಟದ ಪಾನಕದ ರುಚಿ, ಪ್ರಮಾಣ ಹಾಗು ಗುಣಮಟ್ಟ ಈಗ ಉತ್ತಮವಾಗಿದೆ. ಅಂದರೆ ಸಮಸ್ಯೆಯ ಸ್ವರೂಪ ಹೇಗಿದ್ದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪರ್ಯಾಯ ಮಾರ್ಗಗಳು ಇರುತ್ತದೆ. ತಾಳ್ಮೆ, ಪ್ರಯತ್ನ ಹಾಗು ಪರಿಶ್ರಮ ಮುಖ್ಯವಾಗುತ್ತದೆ.

ಈ ವಿಧಾನಗಳನ್ನು ಒಮ್ಮೆ ಪ್ರಯತ್ನಿಸಿ

ಈ ವಿಧಾನಗಳನ್ನು ಒಮ್ಮೆ ಪ್ರಯತ್ನಿಸಿ

ಹಾಗಿದ್ದರೆ ನಮ್ಮ ಅನೇಕ ತಪ್ಪು ನಿರ್ಧಾರ, ಆಯ್ಕೆ, ಸಂದರ್ಭಗಳ ಬಗ್ಗೆ ನಕಾರಾತ್ಮಕ ಭಾವನೆಗಳು, ನಿರಾಸೆ, ಕೋಪ, ಭಾವನೆಗಳು ನಮ್ಮ ಇಂದಿನ ಜೀವನಕ್ಕೆ ಅಡ್ಡಿ ಆಗದಂತೆ ಪರ್ಯಾಯ ಮಾರ್ಗಗಳನ್ನು ತಿಳಿಯುವ ಪ್ರಜ್ನಾಪೂರ್ವಕ ಪ್ರಯತ್ನ ಮಾಡಬೇಕು. ನಮ್ಮ ಜೀವನದ "ಹುಳಿ ಅಂಶ" ಗಳನ್ನು (ನಕಾರಾತ್ಮಕ ಅಂಶಗಳು) ಗುರುತಿಸಿ,

ಹೆಚ್ಚಿನ ಧನಾತ್ಮಕ ಆಲೋಚನೆಗಳು
ಉತ್ತಮ ವಿಚಾರಧಾರೆಗಳು
ಸಮಯದ ಸದುಪಯೋಗ
ಉತ್ತಮ ಜೀವನ‌ಕ್ರಮ
ಮುನ್ನೆಚ್ಚರಿಕಾ ಕ್ರಮಗಳು
ತಿಳಿ ಹಾಸ್ಯ
ಹೆಚ್ಚಿನ ಅಭ್ಯಾಸ
ಗ್ರಹಿಕೆ
ವಿವಿಧ ದೃಷ್ಟಿಕೋನ ಬೆಳೆಸಿಕೊಳ್ಳುವುದು
ಸ್ವಯಂ ಸುಸಜ್ಜಿತವಾಗಿರುವುದು
ನಿರ್ಧಾರ ತೆಗೆದುಕೊಳ್ಳುವಲ್ಲಿ ಜಾಗರೂಕತೆ
ಜನರ ಸಂಪರ್ಕ/ ಒಡನಾಟ
ಪರ್ಯಾಯ ಮಾರ್ಗಗಳು
ಜೀವನ ಕೌಶಲಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವುದರ ಮೂಲಕ

ಅಡೆತಡೆಗಳು ಮತ್ತು ಸವಾಲುಯುತ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸಬಹುದು.

ಬದುಕಿನಲ್ಲಿ ಹುಳಿ(ನಕಾರಾತ್ಮಕ ಭಾವನೆಗಳು) ಹೆಚ್ಚಾಗಿದೆ ಎನಿಸಿದಾಗ ನಿಮ್ಮ ನಿಮ್ಮ ರುಚಿಗೆ ತಕ್ಕಂತೆ ಪದಾರ್ಥಗಳನ್ನು(ಮೇಲೆ ತಿಳಿಸಿದ ಧನಾತ್ಮಕ ಅಂಶಗಳು) ಸೇರಿಸಿದಾಗ, ಸ್ವಾಭಾವಿಕವಾಗಿ ಬದುಕಿನ ರುಚಿ ಹೆಚ್ಚುತ್ತದೆ. ನಮ್ಮ ನಮ್ಮ ಪಾನಕದ ರುಚಿ ಹೇಗಿರಬೇಕು ಎಂದು ನಾವೇ ನಿರ್ಧರಿಸೋಣ. ಒಮ್ಮೆ ಪ್ರಯತ್ನಿಸಿ.

English summary
Psychology: How to convert negative thoughts into positive in any bad situation writes Art Therapist Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X