ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

By ಡಾ. ಎ. ಶ್ರೀಧರ್, ಮನೋವಿಜ್ಞಾನಿ
|
Google Oneindia Kannada News

ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಮತ್ತು ಅಷ್ಟೇ ಚುರುಕು ಕೂಡ. ಕುತೂಹಲ, ತುಂಟತನಗಳು ಆಯಾ ವಯಸ್ಸಿಗನುಗುಣವಾದ ರೀತಿ ವ್ಯಕ್ತಗೊಳ್ಳುವುದು. ಇವೆಲ್ಲದರೊಂದಿಗೆ ಭಯ, ಹಿಂಜರಿತ, ಅಸಹಾಯಕತೆಯೂ ಸರ್ವೇಸಾಮಾನ್ಯ. ಬೆಳೆಯುವ ಮನಸುಗಳ ರೀತಿಯೇ ಹಾಗೆ. ಕತ್ತಲಿನ ಭಯ, ಗುಡುಗು ಸಿಡಲುಗಳ ಶಬ್ದದ ಭಯ, ಅಪರಿಚಿತರ ಭಯ, ಏರಿದ ಧ್ವನಿಯೂ ಭಯ, ರೋಗದ ಭಯ, ಸಾವಿನ ಭಯ ಅರ್ಥಹೀನ ಎನ್ನುವ ವರ್ತನೆಗಳ ಮೂಲಕ ವ್ಯಕ್ತಗೊಳ್ಳಬಲ್ಲದು.

ಕೆಲ ಮಕ್ಕಳಲ್ಲಿ ಇಂತಹ ಪರಿಸ್ಥಿತಿಗಳು ಎದುರಾದಾಗ ಅಳು, ಮೈನಡುಕ, ಅಸಹಾಯಕತೆ, ಕೋಪ ತಾಪ, ಸಂಪೂರ್ಣವಾಗಿ ಒಳಮುಖಿಯಾಗುವುದು ಗಮನಕ್ಕೆ ಬರುವಂತಹ ವರ್ತನೆಗಳು. ಇದಲ್ಲದೆಯೇ ಇನ್ನೂ ಬೇರೆ ಬೇರೆಯ ರೀತಿಯಲ್ಲಿ ಭಯವೆಂಬ ಮಾನಸಿಕತೆಯ ಪ್ರಕಟಣೆ ಸಾಧ್ಯ. ಹೀಗಾಗಿ ಭಯದ ಮಾನಸಿಕ ಸ್ಥಿತಿಯಿಂದ ಹುಟ್ಟುವ ವರ್ತನೆಗಳ ಪಟ್ಟಿ ಮಾಡಿದಷ್ಟು ಉದ್ದವಾಗಿರುತ್ತದೆ. ಭಯಗ್ರಸ್ತ ಮಕ್ಕಳ ವರ್ತನೆಯನ್ನು ಬಹಳ ಹತ್ತಿರದಿಂದ ನೋಡಿರುವುದರಿಂದ ನನಗನಿಸುವುದೇನೆಂದರೆ, ಈ ವರ್ತನೆ ಮೂಡುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದೆಂದರೆ, ಮನೆಯ ವಾತಾವರಣ. ಅಂದರೆ, ಪಾಲಕ ಪೋಷಕರ, ಮನೆಮಂದಿಯ ನಡೆನುಡಿಗಳು ಮಕ್ಕಳಲ್ಲಿ ಭಯವೆಂಬುದನ್ನು ಗಟ್ಟಿಪಡಿಸುತ್ತದೆ.

ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿ ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿ

ಬಹಳಷ್ಟು ಪೋಷಕರಿಗೆ, ಇವೆಲ್ಲವೂ ಮಕ್ಕಳಲ್ಲಿ ಇರುವಂತಹದ್ದೇ ಆಗಿದ್ದು ವಯಸ್ಸು ಏರುತ್ತಿದ್ದಂತೆ ಬದಲಾವಣೆಗಳಾಗುತ್ತವೆ ಎನ್ನುವ ನಂಬಿಕೆ. ಇದು ನಿಜ ಇರಬಹುದಾದರೂ ಎಲ್ಲ ಮಕ್ಕಳಿಗೂ ಅನ್ವಯವಾಗದು. ನನ್ನ ಅನುಭವದಲ್ಲಿ, ಅನೇಕ ಮಕ್ಕಳಲ್ಲಿ ಕಂಡುಬರುವ ಅಂಜಿಕೆ, ಹಿಂಜರಿತ, ಅಪನಂಬಿಕೆಯ ವರ್ತನೆಗಳಿಗೆ ಮನೆಯ ವಾತಾವರಣ ಮತ್ತು ಪೋಷಕರ, ಹಿರಿಯರ ಸ್ವಭಾವಗಳೂ ಕಾರಣವಾಗಿರುವುದು. ಮುಂದೆ ಓದಿ...

 ಎಳೆ ಮನಸ್ಸಿನಲ್ಲಿ ಭಯ ಸುಳಿದಾಗ...

ಎಳೆ ಮನಸ್ಸಿನಲ್ಲಿ ಭಯ ಸುಳಿದಾಗ...

ಅನೇಕ ಪೋಷಕರು ತಮ್ಮ ಮಕ್ಕಳಲ್ಲಿ ಕಂಡುಬರುವ ಬಾಲ್ಯಸಹಜ ಲಕ್ಷಣಗಳಾದ ತುಂಟತನ, ಹಟಮಾರಿತನ, ಪ್ರಶ್ನೆ ಕೇಳುವ ಗುಣವನ್ನು ಒಂದು ಕೆಟ್ಟ ಬೆಳವಣಿಗೆಯೆನ್ನುವ ರೀತಿಯಲ್ಲಿ ಗ್ರಹಿಸುತ್ತಾರೆ. ಇಂತಹ ಗ್ರಹಿಕೆಯಿಂದ ತಮ್ಮ ಮಕ್ಕಳಲ್ಲಿ ಅದೇನೋ ಕೆಟ್ಟ ಗುಣ ಹುಟ್ಟಿಕೊಂಡಿದೆ ಎಂದುಕೊಂಡು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಶಿಕ್ಷೆಯೋ ಅಥವಾ ಕೇಳಿದ್ದೆಲ್ಲವನ್ನು ಕೊಡಿಸುವುದರ ಮೂಲಕ ಮಕ್ಕಳ ಮನಸನ್ನು ಸರಿಪಡಿಸುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಇಂತಹ ಶಿಕ್ಷೆ ಅಥವಾ ಕೊಡುಗೆಗಳು ಕೆಟ್ಟ ಪರಿಣಾಮಗಳಿಗೂ ಕಾರಣ. ಆದರಿದು ಪ್ರಕಟಗೊಳ್ಳುವುದು ವಯಸ್ಕತನದಲ್ಲಿ, ಅದು ಕೂಡ ಹೊಂದಾಣಿಕೆಯ ಸಮಸ್ಯೆಗಳ ಮೂಲಕ.

 ಮಕ್ಕಳ ವರ್ತನೆ ಮೇಲೆ ಪರಿಣಾಮ

ಮಕ್ಕಳ ವರ್ತನೆ ಮೇಲೆ ಪರಿಣಾಮ

ಹೀಗಿದ್ದಾಗ್ಯೂ ಹಿರಿಯರ ನಡೆನುಡಿಗಳಲ್ಲಿ ಕಂಡುಬರುವ ದರ್ಪ, ಭಯ ಮೂಡಿಸುವ ಮಾತು, ಚಟುವಟಿಕೆಗಳೇ ಎಳೆಯರ ಮನಸನಲ್ಲಿ ಭಯ ಸುಳಿಯುವಂತೆ ಮಾಡುತ್ತವೆ. ಉದಾಹರಣೆಗೆ, ಕತ್ತಲು, ಗುಡುಗು-ಸಿಡಲಿನ ಶಬ್ದಕ್ಕೆ ಮನೆಮಂದಿ, ಪೋಷಕರು ಹೇಗೆ ತಾನೇ ಕಾರಣ ಎನಿಸಬಹುದಲ್ಲವೆ? ಖಂಡಿತ ಪೋಷಕರು ಇಂತಹ ಪ್ರಕೃತಿ ಸಹಜ ಕ್ರಿಯೆಗಳಿಗೆ ಕಾರಣವಲ್ಲ ಎನ್ನಬಹುದಾದರೂ ಅಂತಹದೊಂದು ಕ್ರಿಯೆ ಇದ್ದಾಗ ಮಕ್ಕಳಿಗೆ ಹಿತ ನಿಡುವ ಪ್ರಯತ್ನಗಳನ್ನು ಮಾಡದೇ, ಸಿಟ್ಟು, ಅಸಮಾಧಾನ, ಉದಾಸೀನದ ವರ್ತನೆಗಳನ್ನು ತೋರಿಸಿದಾಗ ಮಕ್ಕಳ ಮನಸ್ಸು ಮತ್ತಷ್ಟು ಮುದುಡಿ ಹೋಗುತ್ತದೆ. ಇದರ ಪರಿಣಾಮವಾಗಿ ಅವಲಂಬನೆ, ಅಸಹಾಯಕತೆಯ ವರ್ತನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಸಾಮಾಜಿಕ ಸಂಪರ್ಕದಲ್ಲಿ ಈ ವರ್ತನೆಗಳಿಗೆ ಮನ್ನಣೆ ಕಡಿಮೆ ಇರುವುದರಿಂದ ತನ್ನ ಬಗ್ಗೆಯೇ ಆತಂಕ, ನಕಾರತ್ಮಕ ಅನಿಸಿಕೆಗಳು ಪ್ರತಿಯೊಂದು ಸನ್ನಿವೇಶದಲ್ಲಿಯೂ ಮುಂದೆ ಬಂದು ನಿಲ್ಲುವುದು.

ಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆ

 ಬಾಲ್ಯದಲ್ಲಿ ಬೆಳೆಸಿದ್ದೇ ದೊಡ್ಡವರಾದ ಮೇಲೂ ಮುಂದುವರೆದರೆ...

ಬಾಲ್ಯದಲ್ಲಿ ಬೆಳೆಸಿದ್ದೇ ದೊಡ್ಡವರಾದ ಮೇಲೂ ಮುಂದುವರೆದರೆ...

ಆದರೆ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಈ ವರ್ತನೆಗಳು ಬೆಳೆದು ದೊಡ್ಡವರಾದ ಮೇಲೆಯೂ ಬದಲಾಗದೇ ಮುಂದುವರೆಯುವ ಸಾಧ್ಯತೆಗಳು ಹೆಚ್ಚು. ಬಾಲ್ಯದ ಬೆಳವಣಿಗೆಯ ದಿನಗಳಲ್ಲಿ ಕಾಣಿಸಿಕೊಳ್ಳುವ ಭಯದ ಕಾರಣಗಳಿಗೂ ನಂತರದ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಭಯದ ಕಾರಣಗಳಿಗೂ ಸಂಬಂಧ ಇರದಿದ್ದರೂ ವರ್ತನೆಯ ರೀತಿಯು ಬಾಲ್ಯದ ರೀತಿಯನ್ನೇ ಹೋಲುವುದು ಹೆಚ್ಚು. ಉದಾಹರಣೆಗೆ, ಬಾಲ್ಯದಲ್ಲಿ ಅಪರಿಚಿತರ ಬಗ್ಗೆ ತೋರಿಸುವ ಎಚ್ಚರಿಕೆ, ಹಿಂಜರಿತದ ವರ್ತನೆಗಳು ವಯಸ್ಕತನದಲ್ಲಿಯೂ ಮುಂದುವರೆದಾಗ ವೃತ್ತಿ ಸಂಪರ್ಕ, ಪರಸ್ಪರ ನಂಬಿಕೆಯಂತಹ ಅಗತ್ಯ ವ್ಯಕ್ತಿತ್ವದ ಲಕ್ಷಣಗಳು ಹೀನವಾಗಿರುತ್ತದೆ. ಇದರಿಂದಾಗಿ ವೃತ್ತಿಯಲ್ಲಿ ಯಶಸ್ಸು, ಹೊಂದಾಣಿಕೆ, ನಾಯಕತ್ವದ ಗುಣಗಳಲ್ಲಿ ಪಕ್ವತೆ ಇರದಂತಾಗಿ ವೃತ್ತಿ ಹೊಂದಾಣಿಕೆಯ ಮೇಲೂ ದುಷ್ಪರಿಣಾಮ ಬೀರಿ ಅವಲಂಬನೆ, ಹತಾಶೆ, ಅಪನಂಬಿಕೆಯ ಮನಸ್ಸೇ ಪ್ರಬಲವಾಗಿ ವ್ಯಕ್ತಗೊಳ್ಳುವುದು. ಇವು ವ್ಯಕ್ತಿಯಲ್ಲಿ ಕೌಶಲ್ಯ, ಸಾಮರ್ಥ್ಯಗಳು ಇದ್ದರೂ ಪ್ರಯೋಜನಕ್ಕೆ ಬಾರದಾಗುವಂತೆ ಮಾಡಿಬಿಡುತ್ತದೆ. ಅಷ್ಟೇ ಅಲ್ಲದೆ, ದಾಂಪತ್ಯ, ಕುಟುಂಬ ನಿರ್ವಹಣೆ, ಆರೋಗ್ಯದ ಬಗ್ಗೆ ಅನಗತ್ಯ ಕಳವಳದ ವರ್ತನೆ, ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆಗಳನ್ನೂ ದೊಡ್ಡದಾಗಿ ಮಾಡುವಂತಹ ಸ್ವಭಾವ ಬಲಗೊಳ್ಳುವ ಸಾಧ್ಯತೆಗಳು ಹೆಚ್ಚು.
ಆದ್ದರಿಂದ ಮಕ್ಕಳ ಮನಸಿನಲ್ಲಿ ಭಯದ ವಾತಾವಾರಣ ಮೂಡದಂತಹ ತಿಳಿವಳಿಕೆ ಪೋಷಕರು, ಪಾಲಕರಲ್ಲಿ ಇದ್ದಷ್ಟು ಒಳ್ಳೆಯದು.

 ಮಕ್ಕಳನ್ನು ಹೋಲಿಕೆ ಮಾಡಬೇಡಿ

ಮಕ್ಕಳನ್ನು ಹೋಲಿಕೆ ಮಾಡಬೇಡಿ

ಹೀಗಾಗಿ ಮಕ್ಕಳಲ್ಲಿ ಭಯದ ಸ್ವಭಾವಗಳು ಗಟ್ಟಿಯಾಗದಂತೆ ಮಾಡಲು ಈ ಅಂಶಗಳತ್ತ ಗಮನಹರಿಸಿ;
* ಅತಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಹೊರ ಜಗತ್ತಿನ ಪ್ರತಿಯೊಂದು ವಸ್ತು, ವಿಷಯವೂ ಹೊಸದಾಗಿ ಗೋಚರಿಸುತ್ತದೆ. ಹೊಸತು ಹಿತವಾಗಿರದಿದ್ದಾಗ ಸಮಾಧಾನ ಕೆಟ್ಟಿರುತ್ತದೆ.
* ಕೋಪ, ಹಟಮಾರಿತನ, ರಂಪಾಟಗಳ ಮೂಲಕ ಅಸಹಾಯಕತೆ ತೋರಿಸಬಹುದು.
* ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷೆ ಕೊಡುವುದು ಸಾಮಾನ್ಯ. ಆದರೆ ಇದೇ ಭಯದ ಮೂಲವಾಗಿಬಿಡುತ್ತದೆ ಎನ್ನುವುದನ್ನು ಮರೆಯದಿರಿ.
* ಕತ್ತಲಿನ ಭಯ, ಗುಡುಗು ಸಿಡಿಲಿಗೆ ಭಯದ ಪ್ರತಿಕ್ರಿಯೆ ವ್ಯಕ್ತಪಡಿಸುವ ಮಕ್ಕಳನ್ನು ನಿಂದಿಸುವುದು, ಹೀಯಾಳಿಸುವುದು, ಇತರ ಮಕ್ಕಳೊಂದಿಗೆ ಹೋಲಿಸುವುದು ಸರಿಯಲ್ಲ.

 ಅವರಲ್ಲಿ ಪ್ರೋತ್ಸಾಹ ತುಂಬಲು ಪ್ರಯತ್ನಿಸಿ

ಅವರಲ್ಲಿ ಪ್ರೋತ್ಸಾಹ ತುಂಬಲು ಪ್ರಯತ್ನಿಸಿ

* ಮಕ್ಕಳಿಗೆ ವಿಶ್ವಾಸ ಮೂಡಿಸುವಂತಹ ಮಾತು ಕತೆಗಳ ಮೂಲಕ ಮನಸನ್ನು ತಿಳಿಗೊಳಿಸುವ ಪ್ರಯತ್ನವಾಗಬೇಕು.
* ಕಾಡುವ ಭಯವನ್ನು ನಿವಾರಿಸುವ ಪ್ರಯತ್ನಗಳಲ್ಲಿ ಲವಲವಿಕೆ ಚಟುವಟಿಕೆಗಳತ್ತ ಮನಸು ಹರಿಯುವಂತೆ ಮಾಡುವುದು ಸೂಕ್ತ.
* ಒಂದು ಭಯವನ್ನು ನಿವಾರಿಸಲು ಇನ್ನೊಂದು ಭಯದ ಸಂಗತಿಯನ್ನು ಬಳಸುವ ಪ್ರಯತ್ನ ಅನುಪಯುಕ್ತ.
* ಸಣ್ಣವಯಸ್ಸಿನ ಮಕ್ಕಳಿಗೆ ಪೋಷಕರ, ಪಾಲಕರಿಂದ ಬರುವ ಹೆಮ್ಮೆಯ, ಅಭಿಮಾನದ ಮಾತುಗಳು, ಸದಾ ಪ್ರೋತ್ಸಾಹದಾಯಕ
* ಹಾಗೆಯೇ, ಹೆದರಿಕೆಯ ಸ್ಥಿತಿಯಲ್ಲಿರುವ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವುದು ಪೋಷಕರ ಸ್ಪರ್ಶ ಮತ್ತು ಗೆಲುವಿನ ಮುಖಭಾವ. ಇದನ್ನು ಗಮನದಲ್ಲಿಟ್ಟುಕೊಳ್ಳಿ.

English summary
Psychologist Dr A Sridhar shared tips to parents on how to deal with fear in children,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X