ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋರೋಗಕ್ಕೂ ಮದ್ದಿದೆಯಲ್ಲ... ತಪ್ಪು ಕಲ್ಪನೆ ಬಿಡಿ, ಜಗತ್ತು ನೋಡಿ...

By ಡಾ.ಎ.ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

ಕೆಲವು ತಿಂಗಳುಗಳ ಹಿಂದೆ ನನ್ನ ಸ್ನೇಹಿತರೊಬ್ಬರ ವಿದ್ಯಾವಂತ ಮಗಳಿಗೆ ಮದುವೆ ಗೊತ್ತಾಯಿತು. ನಿಶ್ಚಿತಾರ್ಥ ಸಮಾರಂಭ ಮುಗಿದ ಮೂರೇ ದಿನಗಳಲ್ಲಿ ಹುಡುಗಿಯ ಸೋದರತ್ತೆಗೆ 'ಹುಚ್ಚು' ಎನ್ನುವ ಮಾತಿನಿಂದಾಗಿ ಸಂಬಂಧ ಕಡಿದುಬಿತ್ತು. ಗಂಡಿನ ಕಡೆಯವರು ಮನಸ್ಸು ಬದಲಾಯಿಸಿದ್ದರು.

'ಹುಚ್ಚು' ಅನ್ನುವ ಪದ ಯಾವುದೋ ಘೋರ ವ್ಯಾಧಿ ಅಥವಾ ಶಾಪ ಎನ್ನುವ ಅರ್ಥದಲ್ಲಿಯೇ ಬಳಕೆಯಲ್ಲಿದೆ ಎನ್ನುವುದಕ್ಕೆ ಇಂತಹದೆಷ್ಟೋ ಉದಾಹರಣೆಗಳಿವೆ. 21ನೇ ಶತಮಾನದಲ್ಲಿದ್ದರೂ ಯಾವುದೋ ಶತಮಾನದಲ್ಲಿ ಇದ್ದಂತಹ ನಂಬಿಕೆಗಳಿಗೇ ಜೋತು ಬಿದ್ದು ತಿಳಿವಳಿಕೆ ಕಳೆದುಕೊಳ್ಳುತ್ತಲೇ ಇದ್ದೇವೆ.

ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

ಇಂದಂತೂ ಮಾನಸಿಕ ಬಲ ಮತ್ತು ದೌರ್ಬಲ್ಯಗಳ ಬಗ್ಗೆ ಖಚಿತವಾಗಿ ಮಾತಾಡಬಹುದಾದಷ್ಟು ಮಾಹಿತಿಗಳು ಎಲ್ಲರಿಗೂ ಲಭ್ಯ. ಮಾನಸಿಕ ಅಸ್ವಸ್ಥತೆಗಳನ್ನು ತಡೆಗಟ್ಟುವುದು ಕಷ್ಟದ ಕೆಲಸವೇನಲ್ಲ.

ಭಾವುಕತನವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?ಭಾವುಕತನವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ದೇಹದ ಆರೋಗ್ಯ ಕೆಡುವಂತೆಯೇ ಮನಸ್ಸಿನ ಆರೋಗ್ಯವು ಕೆಡಬಲ್ಲದು. ಹಾಗೆಯೇ ದೇಹಾರೋಗ್ಯವನ್ನು ವ್ಯಾಯಾಮ, ಪೌಷ್ಟಿಕ ಆಹಾರ, ಶಿಕ್ಷಣ ಮತ್ತಿತರ ಕ್ರಮಗಳ ಮೂಲಕ ಕಾಪಾಡಿಕೊಳ್ಳಲು ಸಾಧ್ಯವಿರುವಂತೆಯೇ ಮನಸ್ಸಿನ ಆರೋಗ್ಯವನ್ನು ಸಹ ಕೆಲವು ರೀತಿನೀತಿಗಳ ಮೂಲಕ ಸಾಧಿಸಬಹುದು. ಇಷ್ಟೆಲ್ಲ ಗೊತ್ತಿದ್ದರೂ ಮಾನಸಿಕ ದುಸ್ಥಿತಿಗಳ ಬಗ್ಗೆ ಇರುವ ಅಭಿಪ್ರಾಯ ಮತ್ತು ಮೂಢನಂಬಿಕೆಗಳು ಲಕ್ಷಾಂತರ ಮಂದಿಯನ್ನು ಇಲ್ಲದ ರೋಗಕ್ಕೆ ಸೇರಿಸಿ ಕಳಂಕಿತರು ಎಂದು ಪಟ್ಟ ಕಟ್ಟುವ ಕೀಳು ಸಂಪ್ರದಾಯ ಮುಂದುವರೆಯುತ್ತಲೇ ಇದೆ. ಮುಂದೆ ಓದಿ...

 ಮಾನಸಿಕ ರೋಗದೆಡೆಗಿರುವ ತಪ್ಪು ಕಲ್ಪನೆ ತೊಡೆದುಹಾಕಬೇಕು

ಮಾನಸಿಕ ರೋಗದೆಡೆಗಿರುವ ತಪ್ಪು ಕಲ್ಪನೆ ತೊಡೆದುಹಾಕಬೇಕು

ಮಾನಸಿಕ ರೋಗಕ್ಕೆ ಅಂಟಿಕೊಂಡಿರುವುದು ಸಮಾಜ ಹಿಂದೆಂದೋ ಹುಟ್ಟು ಹಾಕಿದ ಕಳಂಕವೇ ಹೊರತು ರೋಗಾಣುಗಳ ಹಾವಳಿಯಲ್ಲ. ಆದುದರಿಂದ ಜನರಲ್ಲಿ ಮಾನಸಿಕ ಅನಾರೋಗ್ಯದ ಬಗ್ಗೆ ಇರುವಂತಹ ತಪ್ಪು ತಿಳಿವಳಿಕೆಗಳನ್ನು ಸರಿಪಡಿಸುವುದು ಎಲ್ಲರ ಹೊಣೆ. ಮಾನಸಿಕ ಆರೋಗ್ಯವು ಎಲ್ಲೆಡೆ ಹೆಚ್ಚಾಗುವಂತೆ ಮಾಡಬೇಕಾದರೆ ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮೊದಲು ತೊಡೆದು ಹಾಕಬೇಕು. ಮನಸ್ಸಿಗೂ ಸಮಾಜಕ್ಕೂ ಹತ್ತಿರದ ನಂಟು. ಜನಸಮುದಾಯದ ಅಭಿಪ್ರಾಯಗಳು ಮನಸ್ಸನ್ನು ಕೆಡಿಸಬಲ್ಲದು.

 ಮಾನಸಿಕ ಅನಾರೋಗ್ಯದ ಕುರಿತು ತಪ್ಪು ಗ್ರಹಿಕೆಗಳಿವು...

ಮಾನಸಿಕ ಅನಾರೋಗ್ಯದ ಕುರಿತು ತಪ್ಪು ಗ್ರಹಿಕೆಗಳಿವು...

ಮನೋರೋಗ ದೈವದ ಅವಕೃಪೆಯಿಂದಾದದ್ದು ಎನ್ನುವುದು ಮೊದಲ ತಪ್ಪು ಕಲ್ಪನೆ. ಮನೋರೋಗ ಯಾರಿಗಾದರೂ ತಟ್ಟಬಲ್ಲದು. ಮನೋರೋಗ ಒಂದು ಶಾಪ, ಪೂರ್ವಾಜಿತ ಕರ್ಮ ಇತ್ಯಾದಿ ಹೇಳಿಕೆಗಳಿಗೆ ಅರ್ಥವಿಲ್ಲ. ಇಂತಹ ತಪ್ಪು ನಂಬಿಕೆಗಳಿಂದಾಗಿ ಮಾನಸಿಕ ಅಸ್ವಸ್ಥರು ಹೊರೆ, ತಪ್ಪಿತಸ್ಥರು ಎಂಬಂತೆ ನೋಡುವುದು ಮತ್ತು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸದೇ ಇರುವುದು ಬಲಗೊಳ್ಳುತ್ತದೆ. ಅವರಿಗೆ ತಗುಲಿರುವ ವ್ಯಾಧಿಯ ಕಾರಣದಿಂದ ಅವರನ್ನು ತಪ್ಪಿತಸ್ಥರು ಎಂದು ಭಾವಿಸುವುದು ಕೂಡ ದೌರ್ಜನ್ಯವೇ ಆಗುತ್ತದೆ. ಆದುದರಿಂದ ಇಂತಹ ತಪ್ಪು ಗ್ರಹಿಕೆಗಳನ್ನು ಪ್ರಚಾರ ಮಾಡುವುದು, ಅನುಸರಿಸುವುದನ್ನು ತಡೆಗಟ್ಟಬೇಕು.

ಹನ್ನೊಂದು ಜನರ ಮನಸ್ಸನ್ನು ಬದಲಾಯಿಸಿದ ಆ ವ್ಯಕ್ತಿ!ಹನ್ನೊಂದು ಜನರ ಮನಸ್ಸನ್ನು ಬದಲಾಯಿಸಿದ ಆ ವ್ಯಕ್ತಿ!

 ಮನೋರೋಗಕ್ಕೂ ಮದ್ದಿದೆಯಲ್ಲ...

ಮನೋರೋಗಕ್ಕೂ ಮದ್ದಿದೆಯಲ್ಲ...

ಮನೋರೋಗಕ್ಕೆ ಮದ್ದಿಲ್ಲ, ಮಾರ್ಗವಿಲ್ಲ ಎಂಬುದು ಈಗ ಸುಳ್ಳು. ಎಲ್ಲ ರೋಗರುಜಿನಗಳಿಗೆ ಸಿಗುವಂತಹ ಚಿಕಿತ್ಸೆ, ಔಷಧೋಪಚಾರ ಮತ್ತು ಸಹಾನುಭೂತಿ ಸರಿಯಾಗಿ ದೊರಕಿದ ಪಕ್ಷದಲ್ಲಿ ಎಲ್ಲರಂತೆ ಅವರೂ ಬದುಕಿ ಉಪಯುಕ್ತ ಬಾಳ್ವೆ ನಡೆಸಬಲ್ಲರು. ಮುಖ್ಯವಾಗಿ: 'ಹುಚ್ಚ' 'ಐಲು', ಸಿ/2, 'ತಿಕ್ಲು' ಮುಂತಾದ ಪದಗಳ ಬಗ್ಗೆ ಎಚ್ಚರಿಕೆ ಇರಲಿ. ಅವನೊಬ್ಬ ಮನೋರೋಗಿ ಅನ್ನುವ ಬದಲು ಆತನಿಗೆ ತಗುಲಿರುವ ರೋಗದ ಹೆಸರನ್ನು ಹೇಳುವುದು ಉತ್ತಮ. ಏಕೆಂದರೆ, ರೋಗ ಸ್ಥಿತಿ ತಾತ್ಕಾಲಿಕ .ರೋಗ ನಿವಾರಣೆಯಾದಾಗ ರೋಗದ ಹೆಸರಿನ ಮೂಲಕ ಆರೋಗ್ಯವಂತನನ್ನು ಗುರುತಿಸುವುದು ಸರಿಯಲ್ಲ. ಮಾನಸಿಕ ರೋಗಗಳ ಬಗ್ಗೆ ನಿಮಗೆ ತಿಳಿದಿರುವ ವೈಜ್ಞಾನಿಕ ಅಂಶಗಳನ್ನು ಪ್ರಚಾರ ಮಾಡಿ. ಮಾನಸಿಕ ದುಸ್ಥಿತಿಗಳನ್ನು ಸಂಪ್ರದಾಯ, ಕಟ್ಟುಪಾಡುಗಳು ಗುರುತಿಸುವ ರೀತಿಗೆ ಶರಣಾಗದಿರಿ.

 ಮನೋರೋಗ ಬುದ್ಧಿಮಾಂದ್ಯತೆ.....

ಮನೋರೋಗ ಬುದ್ಧಿಮಾಂದ್ಯತೆ.....

ಸುಳ್ಳು. ಮನಸ್ಸಿನ ಸ್ಥಿತಿಗಳಲ್ಲಿ ಅವ್ಯವಸ್ಥೆ ಹೆಚ್ಚಾದಾಗ ಮಾನಸಿಕ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಬುದ್ಧಿಮಾಂದ್ಯತೆ ಇರುವವರಲ್ಲಿ ವಯೋಮಾನಕ್ಕೆ ತಕ್ಕಂತಹ ಬುದ್ಧಿಯ ಬೆಳವಣಿಗೆಯಾಗಿರದೇ ಕಡಿಮೆ ಮಟ್ಟದ ಬುದ್ಧಿಮಟ್ಟದಲ್ಲೇ ಇರುತ್ತದೆ. ಇದರಿಂದಾಗಿ ನಿತ್ಯ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟಕರ. ಆದರೆ, ಮನೋರೋಗದಿಂದ ಬಳಲಿರುವವರಲ್ಲಿ ಬುದ್ಧಿಶಕ್ತಿಯ ಕೊರತೆಯಿಂದ ಉಂಟಾದ ವರ್ತನೆಗಳು ಇರಲಾರವು. ಆಲೋಚನೆ, ಭಾವನೆ ಮತ್ತು ಸಾಮಾಜಿಕ ಸಂಬಂಧಗಳಿಗೆ ಅನ್ವಯಿಸುವ ವರ್ತನೆಗಳು ಹಿಡಿತ ತಪ್ಪಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇವುಗಳೊಂದಿಗೆ ದೈಹಿಕ ಮತ್ತು ಜೈವಿಕ ಕಾರಣಗಳು ಸೇರಿಕೊಂಡಿರುತ್ತದೆ.

ಮನೋರೋಗಗಳಿಗೂ ದೇಹದ ಅನೇಕ ಕ್ರಿಯೆಗಳಿಗೂ ಹತ್ತಿರದ ಸಂಬಂಧವಿರುತ್ತದೆ. ಕೆಲವರಿಗೆ ಸಾವು ಎನ್ನುವ ಪದವೇ ಭಯವನ್ನು ಹುಟ್ಟಿಹಾಕಿ ಇಲ್ಲಸಲ್ಲದ ಅನರ್ಥಗಳನ್ನು ನಡೆನುಡಿಗಳ ಮೂಲಕ ಉಂಟುಮಾಡಬಲ್ಲದು. ಅಲ್ಲದೆ, ಎಷ್ಟೋ ವೇಳೆ, ಅನುವಂಶಿಕ ಮತ್ತು ಗ್ರಂಥಿಗಳ ಕಾರ್ಯಕ್ಷಮತೆಗಳಲ್ಲಿ ಏರುಪೇರಾದಾಗ ಅವು ವರ್ತನೆಗಳ ಮೂಲಕ ಎದ್ದು ಕಾಣಿಸಿಕೊಳ್ಳಬಹುದು. ಕುಡಿತದ ಚಟ, ಇಚ್ಚಿತ ಮತ್ತು ಖಿನ್ನತೆಗಳಲ್ಲಿ ಈ ಅಂಶಗಳು ಬಲವಾಗಿರುವುದು ಕಂಡುಬರುತ್ತದೆ. ಇದಲ್ಲದೆ, ಆತ್ಮೀಯರ ಅಗಲಿಕೆ, ಸಾಮಾಜಿಕ ಮಾನ್ಯತೆ, ನಗಣ್ಯತೆಯು ಹುಟ್ಟಿಸುವ ತೀವ್ರ ಭಾವಗಳು ಸಹ ಅವಾಸ್ತವಿಕ ಮಾನಸಿಕ ವರ್ತನೆಗಳ ರೂಪದಲ್ಲಿ ಕಂಡುಬರಬಲ್ಲದು.

 ಮನೋರೋಗಿ ನಿಷ್ಪ್ರಯೋಜಕನಲ್ಲ ಎಂಬುದು ನೆನಪಿಟ್ಟುಕೊಳ್ಳಿ

ಮನೋರೋಗಿ ನಿಷ್ಪ್ರಯೋಜಕನಲ್ಲ ಎಂಬುದು ನೆನಪಿಟ್ಟುಕೊಳ್ಳಿ

ಮನೋರೋಗಿ ನಿಷ್ಪ್ರಯೋಜಕ ಎಂಬ ಭಾವ ಸರಿಯಲ್ಲ. ಒತ್ತಡ ಎಂತಹವರ ಸಾಮರ್ಥ್ಯವನ್ನಾದರೂ ಕಳೆಗುಂದಿಸುತ್ತದೆ. ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಸಮರ್ಪಕವಾಗಿ ಕೆಲಸ ಮಾಡಬಲ್ಲರು. ವೃತ್ತಿಯಲ್ಲಿ ಒಮ್ಮೆ ಯಶಸ್ವಿಯಾಗಿದ್ದರೂ ಮಾನಸಿಕ ಅಸ್ವಸ್ಥರೆಂಬ ಕಾರಣದಿಂದ, ಗುಣಮುಖರಾದ ಮೇಲೂ ಕೆಲಸಕ್ಕೆ ಸೂಕ್ತರಲ್ಲ ಎಂದು ತಿರಸ್ಕರಿಸುವ ಪರಿಪಾಠ ಬದಲಾಗಬೇಕು. ಗುಣಮುಖರಾದವರಲ್ಲಿ ಕೆಲಸಕ್ಕೆ ತಪ್ಪದೆ ಹಾಜರಾಗುವುದು, ದಕ್ಷತೆ, ವಿಧೇಯತೆ ಮತ್ತು ಹೊಸದನ್ನು ಎಚ್ಚರದಿಂದ ಕಲಿಯುವ ಆಸಕ್ತಿ ಇರುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ.

 ಮನೋರೋಗ ಮರೆಮಾಚಿದಷ್ಟು ಅಪಾಯಕಾರಿ

ಮನೋರೋಗ ಮರೆಮಾಚಿದಷ್ಟು ಅಪಾಯಕಾರಿ

ಮನೋರೋಗಿಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸುವುದು, ಸರಪಳಿಗಳಿಂದ ಕಟ್ಟಿಹಾಕುವುದು, ಊಟ, ತಿಂಡಿ, ಇರಲು ಜಾಗ ಕೊಡದೆ ಇರುವುದೂ ರೋಗ ಹೆಚ್ಚಾಗುವಂತೆ ಮಾಡುತ್ತದೆ. ಇತರ ರೋಗಿಗಳಿಗೆ ಇರುವ ಹಕ್ಕು ಮನೋರೋಗಿಗಳಿಗೂ ಇದೆ. ಮನೋರೋಗಿಗಳನ್ನು ಕನಿಷ್ಠವಾಗಿ ನೋಡಬೇಡಿ. ಅವರಿಗೆ ಸಲ್ಲಬೇಕಾಗಿರುವ ಸವಲತ್ತು, ಸೌಲಭ್ಯ ಮತ್ತು ಚೇತರಿಕೆಯ ವಿಧಾನಗಳನ್ನು ತಡೆಗಟ್ಟುವುದು ಅಮಾನವೀಯ ಮತ್ತು ಅಪರಾಧ ಕೂಡ.

ಸೂಕ್ತ ಔಷಧೋಪಚರಗಳು ಮತ್ತು ಹಿತೋಪದೇಶಗಳ ಮೂಲಕ ರೋಗ ಮರುಕಳಿಸಲಾರದು. ದುರಂತವೆಂದರೆ, ರೋಗಿಯ ಕುಟುಂಬದವರ ಬಗ್ಗೆ ಸಮಾಜ ವ್ಯಕ್ತಪಡಿಸುವ ಅಭಿಪ್ರಾಯಗಳು ರೋಗಿ ಮತ್ತು ಕುಟುಂಬದವರ ಮನಸ್ಸಿಗೂ ಘಾಸಿ ಉಂಟುಮಾಡುತ್ತವೆ. ಇದು ಶುಶ್ರೂಷೆ ಮತ್ತು ನೆರವು ನೀಡುವವರಲ್ಲೂ ಕಳಂಕಿತ ಭಾವ ಹುಟ್ಟಿಸುತ್ತದೆ. ನೆರವು ನೀಡುವವರೂ ಸಹ ನಿಶ್ಯಕ್ತರಾಗುವಂತೆ ಮಾಡಿ ರೋಗ ಮತ್ತು ರೋಗಿಯ ಬಗ್ಗೆ ಮೂಢನಂಬಿಕೆಗಳು ಹೆಚ್ಚುವುದಕ್ಕೆ ಆಸ್ಪದ ನೀಡುತ್ತದೆ. ಮನೋರೋಗ ಇರುವವರ ಮನೆಮಂದಿಯನ್ನು ಕೆಟ್ಟದಾಗಿ ನೋಡುವುದು ಬೇಡ.

ಮನೋರೋಗಿಗಳ ನಡೆನುಡಿಗಳ ಏರುಪೇರಾಗಿರುವುದರಿಂದ ಅವರಿಂದ ದೂರವಿರಬೇಕು ಎನ್ನುವ ಭಾವನೆ ಅನೇಕರಲ್ಲಿ ಇದೆ. ಹಾಗೆ ನೋಡಿದರೆ ಏಷ್ಟೋ ಮನೋರೋಗಿಗಳ ವರ್ತನೆಗಳನೇಕವು ಸಾಮಾನ್ಯರ ನಡೆನುಡಿಗಳಿಗಿಂತ ಭಿನ್ನವಾಗಿರುವುದಿಲ್ಲ. ಒಟ್ಟಿನಲ್ಲಿ ಮನೋರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಜನರ ಗಮನಕ್ಕೆ ಬರಬೇಕು. ಅವುಗಳನ್ನು ಸಮುದಾಯವು ಸರಿಪಡಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇರಬೇಕು.

English summary
There is some misconceptions about mental illness in society. Dr A Sridhar explains how it can be done
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X