ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನ್ನೊಂದು ಜನರ ಮನಸ್ಸನ್ನು ಬದಲಾಯಿಸಿದ ಆ ವ್ಯಕ್ತಿ!

By ಡಾ.ಎ.ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

"ಚಲನಚಿತ್ರಗಳು ಇಪ್ಪತ್ತನೇ ಶತಮಾನದ ಕಲೆಯಷ್ಟೇ ಅಲ್ಲ. ಅದು ಶತಮಾನದ ಸಾಂಸ್ಕೃತಿಕತೆಯ ಭಾಗವೂ ಹೌದು" ಎಂದಿದ್ದಾರೆ ಡಾನ್ ಡಿಲಿಲೊ. ಸಿನಿಮಾ ಮತ್ತು ವ್ಯಕ್ತಿಯ ಮನಸ್ಸಿನ ನಡುವೆ ಬಲವಾದ ಸಂಬಂಧಗಳಿವೆ. ಒಂದರಿಂದೊಂದು ಆಕರ್ಷಿತಗೊಳ್ಳುವುದರಿಂದಲೇ ಚಲನಚಿತ್ರಗಳು ಸಾಂಸ್ಕೃತಿಕ ಬಲವಾಗಿ ಮುಂದುವರೆಯುತ್ತಿರುವುದು. ಬಹಳಷ್ಟು ಸಲ ಚಲನಚಿತ್ರಗಳು ವ್ಯಕ್ತಿ ಮನದಾಳವನ್ನು ಬಿಂಬಿಸುವ ಸರಳ ಸಲಕರಣೆಯಾಗಿರುತ್ತದೆ.

ನಮ್ಮ ವರ್ತನೆಗಳಲ್ಲಿ ಪರಿವರ್ತನೆ ಮೂಡಿಸಬಲ್ಲ ಗುಣ ಅದರಲ್ಲಿದೆ. ಒಳ್ಳೆಯದು-ಕೆಟ್ಟದ್ದು, ಅಹಿತ-ಹಿತಗಳ ಆಯ್ಕೆ ವ್ಯಕ್ತಿ ಅಥವಾ ವೀಕ್ಷಕನಿಗೆ ಬಿಟ್ಟಿದ್ದು. ಇತರರ ನಡೆ ನುಡಿಗಳು ನಮ್ಮ ವರ್ತನೆಗಳ ಮೇಲೆ ಪ್ರಭಾವ ಬೀರುವ ಕ್ರಮವನ್ನು ಚಲನಚಿತ್ರಗಳು ಸುಲಭವಾಗಿ ತೋರಿಸಿಬಿಡುತ್ತದೆ. ಸಿನಿಮಾ ವೀಕ್ಷಿಸುವ ಅನುಭವವು ವರ್ತನೆಗಳ ಪರಾಮರ್ಶೆಯೇ ಆಗಿರುತ್ತದೆ. ನಮ್ಮ ದೇಶದಲ್ಲಿಂದು ಮಹಿಳೆಯರ ಮೇಲೆ ಜರುಗುತ್ತಿರುವ ಅತ್ಯಾಚಾರ, ಮಾನಭಂಗಗಳಂತಹ ಅಮಾನವೀಯ ವರ್ತನೆಗಳಿಗೆ ದೃಶ್ಯ ಮಾಧ್ಯಮಗಳೂ ಕಾರಣವೆನ್ನುವ ಮಾತು ಜೋರಾಗಿಯೇ ಕೇಳಿಬರುತ್ತಿದೆ. ವಿಶೇಷವಾಗಿ, ಕೆಲವೊಂದು ವಿಧದ ಸಿನಿಮಾ ಸನ್ನಿವೇಶಗಳು ವಿಕೃತ ವ್ಯಕ್ತಿಗಳ ಕಾಮುಕತನಕ್ಕೆ ಪ್ರೇರಣೆ ನೀಡುತ್ತದೆ ಎನ್ನುವುದನ್ನು ಅತ್ಯಾಚಾರ ಮಾಡಿರುವವರು ಹೇಳಿರುವುದುಂಟು.

ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

ಆದರೆ ಸಿನಿಮಾಗಳೇ ಕ್ರೌರ್ಯದ ಮೂಲವೆನ್ನುವುದನ್ನು ಸುಲಭವಾಗಿ ಒಪ್ಪಲಾಗದು. ಏಕೆಂದರೆ ಕೆಟ್ಟ ಸನ್ನಿವೇಶಗಳು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದಾದರೆ ಒಳ್ಳೆಯ ಸನ್ನಿವೇಶಗಳು ಒಳ್ಳೆಯ ಪ್ರಭಾವಗಳನ್ನು ಉಂಟುಮಾಡುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ನಮೂನೆಯ ವಾದಗಳನ್ನು ಬದಿಗಿರಿಸಿ ವ್ಯಕ್ತಿಯ ವಿಕೃತ (ಕಾಮ)ವರ್ತನೆಗಳನ್ನು ಸಾಮಾಜಿಕ ಸಮಸ್ಯೆ ಎನ್ನುವುದಾಗಿ ನೋಡಲೇಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಸಾಮಾಜಿಕ ಸ್ವಭಾವಗಳ ಬೆಳವಣಿಗೆಯಲ್ಲಿ ಲಿಂಗ ತಾರತಮ್ಯ ಮತ್ತು ಲಿಂಗ ಶೋಷಣೆಗೆ ಕಾರಣ ಕುಟುಂಬವಾಗಿರುವುದರ ಬಗ್ಗೆ ಮಾಹಿತಿಗಳಿವೆ. ತಾಯಿಯ ಮೇಲೆ ಗಂಡು ಮಕ್ಕಳು ನಡೆಸುವ ದೌರ್ಜನ್ಯ; ಹೆಣ್ಣು ಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆಸಿರುವುದರ ಬಗ್ಗೆ ವರದಿಗಳಿವೆ. ಇವುಗಳು ಸಿನಿಮಾದಿಂದ ಕಲಿತ ವರ್ತನೆಗಳಾಗಿರುವುದಿಲ್ಲ ಎನ್ನಬಹುದು. ಆದರೆ, ಅಂತರ್ಜಾಲದ ಮೂಲಕ ಇಂತಹ ಕಾಮಪ್ರಚೋದಕಗಳು ಹೇರಳವಾಗಿ ಸಿಗುತ್ತದೆ. ಬಹುಶಃ ಇದರಿಂದಾಗುತ್ತಿರುವ ಅನಾಹುತಗಳು ಅಂದಾಜಿಗೆ ಸಿಗದಷ್ಟು ಹೆಚ್ಚಿದೆ. ಇಂತಹ ವರ್ತನೆ (ಸ್ವಭಾವ)ಗಳನ್ನು ಬದಲಾಯಿಸುವಲ್ಲಿ ಚಲನಚಿತ್ರಗಳು ಪರಿಣಾಮಕಾರಿಯಾಗಿರಬಲ್ಲದು.

 How Cinemas Project Psychological Issues Dr A Sridhar Explains

ಚಲನಚಿತ್ರದ ಮೂಲಕ ಚಿತ್ತ ಶುದ್ಧಿ ಸಾಧ್ಯವೆನ್ನುವುದಕ್ಕೆ ಸುಮಾರು ಐದು ದಶಕಗಳ ಹಿಂದೆ ತೆರೆಕಂಡ ಇಂಗ್ಲಿಷ್ ಚಿತ್ರ ''12 Angry Men'' ಒಂದು ಉತ್ತಮ ನಿದರ್ಶನ. ಅಮೆರಿಕದಲ್ಲಿ 1957ರಲ್ಲಿ ತೆರೆಕಂಡ ಈ ಚಲನಚಿತ್ರವು ವ್ಯಕ್ತಿಗಳಲ್ಲಿ ಆಳವಾಗಿ ಬೇರೂರಿರುವ ರೂಢಿಗತ (ಕೆಟ್ಟ) ವರ್ತನೆಗಳು ಉತ್ತಮ ವ್ಯಕ್ತಿ/ಸನ್ನಿವೇಶಗಳ ಮೂಲಕ ಬದಲಾಗಬಲ್ಲದೆನ್ನುವುದನ್ನು ಅರ್ಥಪೂರ್ಣವಾಗಿ ತಿಳಿಸುತ್ತದೆ.

ಭಾವುಕತನವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?ಭಾವುಕತನವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ಹನ್ನೆರಡು ಜನರ ಜ್ಯೂರಿ (ತೀರ್ಪುಗಾರ) ತಂಡಕ್ಕೆ ಕೊಲೆಯೊಂದರ ಪ್ರಕರಣದ ವಿಚಾರಣೆ ವಹಿಸಲಾಗಿತ್ತು. ಹದಿನೆಂಟರ ಹರೆಯದವನೊಬ್ಬ ತನ್ನ ತಂದೆಯನ್ನೇ ಇರಿದು ಸಾಯಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವಿದು. ಬಲವಾದ ಸಬೂಬುಗಳು ಇರದ ಕಾರಣ ಪ್ರತಿವಾದಿ ಮೇಲ್ನೋಟಕ್ಕೆ ತಪ್ಪಿತಸ್ಥನೆನ್ನುವ ಸೂಚನೆಗಳೇ ಗೋಚರಿಸುತ್ತಿತ್ತು. ಆರೋಪಿಯು ಬಳಸಿದ್ದನ್ನೆಲಾದ ಚಾಕು ಕೊಲೆಯಾದ ಸ್ಥಳದಲ್ಲಿ ಸಿಕ್ಕಿತ್ತು; ಕೊಲೆಯಾದವನ ಆಸುಪಾಸಿನಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬಳು ಕೊಲೆಯಾದ ವ್ಯಕ್ತಿಯು ಚೀರಾಡಿದ್ದು, ಹುಡುಗ ಕೊಲೆ ಮಾಡಿ ಕಟ್ಟಡದಿಂದ ಓಡಿಹೋದದ್ದನ್ನು ನೋಡಿದ್ದಾಗಿಯೂ ತಿಳಿಸಿದ್ದಳು. ಇಷ್ಟೆಲ್ಲಾ ಸಾಕ್ಷ್ಯಗಳು ಎದುರಿಗಿದ್ದಾಗ ಆರೋಪಿಯ ಬಗ್ಗೆ ಮತ್ತೇನು ವಿಚಾರಣೆ? ಆದುದರಿಂದ ಹನ್ನೆರಡು ತೀರ್ಪುಗಾರರ ಪೈಕಿ ಹನ್ನೊಂದು ಮಂದಿ ತಕ್ಷಣದಲ್ಲಿ ಹುಡುಗನೇ ತಪ್ಪಿತಸ್ಥನೆಂದು ತಮ್ಮ ಅಭಿಮತ ಸೂಚಿಸಿದ್ದರು. ಆದರೆ ಎಂಟನೆ ಸಂಖ್ಯೆಯ ತೀರ್ಪುಗಾರ ಪ್ರಕಾರ ಲಭ್ಯವಿರುವ ಸಾಕ್ಷ್ಯಗಳು ಹುಡುಗ ಕೊಲೆ ಮಾಡಿದ್ದಾನೆನ್ನುವುದಕ್ಕೆ ಸಮಂಜಸವಾದ ಕಾರಣಗಳು ಇರದಿರುವುದರಿಂದ ಆರೋಪಿಯು ತಪ್ಪಿತಸ್ಥನಲ್ಲ ಎನ್ನುವ ಅಭಿಪ್ರಾಯ ಮುಂದಿಟ್ಟಿದ್ದರು.

 How Cinemas Project Psychological Issues Dr A Sridhar Explains

ಅಮೆರಿಕದ ನ್ಯೂಯಾರ್ಕ್ ನಗರದ ಕೊಳೆಗೇರಿಯಲ್ಲಿ ನಡೆದ ಕೊಲೆಯೊಂದಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ನ್ಯಾಯ ನೀಡಲು ಮಾಡಲು ಭಾಗವಹಿಸಿದ್ದವರು, ವಿಭಿನ್ನ ವೃತ್ತಿ, ವ್ಯಕ್ತಿತ್ವಗಳಿದ್ದವರು. ಅವರು ಯಾರೂ ಒಬ್ಬರಿಗೊಬ್ಬರು ಪರಿಚಿತರಲ್ಲ. ಜೊತೆಗೆ ಅವರುಗಳನ್ನು ಹೆಸರಿನ ಮೂಲಕ ಗುರುತಿಸುವುದರ ಬದಲಾಗಿ ಅಂಕಿಗಳ ಮೂಲಕ ಗುರುತಿಸಲಾಗುತ್ತದೆ. ಎಂಟನೆಯ ತೀರ್ಪುಗಾರ ಉಳಿದ ಹನ್ನೊಂದು ತೀರ್ಪುಗಾರರು ತೆಗೆದುಕೊಂಡಿದ್ದ ನಿರ್ಧಾರವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಾನೆ. ಇದು ಕೇವಲ ನಿರ್ಧಾರದ ಬದಲಾವಣೆ ಎನ್ನುವಂತೆ ಹೊರ ನೋಟಕ್ಕೆ ಕಂಡಬಂದರೂ ತೀರ್ಪುಗಾರರ ಮನಸ್ಸಿನಲ್ಲಿದ್ದ ಕ್ಲೇಶ ಮತ್ತು ಪೂರ್ವಗ್ರಹಗಳಲ್ಲಿನ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿರುವ ತಿಳಿವಳಿಕೆಯಂತೆ ವ್ಯಕ್ತಿಗಳ ಸ್ವಭಾವ, ನಿಲುವುಗಳು ಬದಲಾಗುವುದು ಕಷ್ಟ. ಆದರಲ್ಲಿನ ಸಂದರ್ಭದಲ್ಲದು ಬದಲಾವಣೆಯಾಗುತ್ತದೆ. ಇದಕ್ಕೆ ಕಾರಣ ಮುಂದಾಳುವಿನ ಸಾಮರ್ಥ್ಯವೆನ್ನಬಹುದಲ್ಲವೆ?

ಪದೇ ಪದೇ ಅದೇ ಸೋಲು... ಸೋಲು ಕಾಡುವುದೇಕೆ?ಪದೇ ಪದೇ ಅದೇ ಸೋಲು... ಸೋಲು ಕಾಡುವುದೇಕೆ?

ಎಂಟನೆಯ ತೀರ್ಪುಗಾರನ ವ್ಯಕ್ತಿತ್ವದ ಕಡೆ ಗಮನ ಹರಿಸಿದರೆ, ಅವನಲ್ಲಿರುವ ಅನೇಕ ಮಾನಸಿಕ ಸಾಮರ್ಥ್ಯಗಳು ಸಮಯಕ್ಕೆ ಸರಿಯಾಗಿ ನೆರವಿಗೆ ಬರುತ್ತದೆ. ಇತರರ ಮನಸ್ಸನ್ನು ಕುತೂಹಲ ಮತ್ತು ಆದರಿಂದ ಸ್ವೀಕರಿಸುವುದು. ತನ್ನ ಮನೋಭಾವ ಮತ್ತು ಇತರರ ಮನೋಭಾವದ ನಡುವೆ ತಿಕ್ಕಾಟವಾಗದ ರೀತಿಯಲ್ಲಿ ಮಾತು, ಭಾವಗಳನ್ನು ಬಳಸುವುದು ಮತ್ತು ಸಹಚರರ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಒಪ್ಪುವಂತಹ ಗುಣಗಳು ವಶೀಕರಣದ ಶಕ್ತಿಯನ್ನು ಪಡೆದಿರುತ್ತದೆ. ಈ ಪ್ರಕರಣದಲ್ಲಂತೂ ತಾನೇ ಸರಿ, ತನ್ನ ವಾದವೇ ಅರ್ಥಪೂರ್ಣವಾದದ್ದು ಎನ್ನುವಂತಹ ಭಾವನೆಗಳು ಬರದ ರೀತಿಯಲ್ಲಿ ತನ್ನ ಅನಿಸಿಕೆಗಳನ್ನು ಮಿಕ್ಕೆಲ್ಲ ಸದಸ್ಯರೆದುರು ಎಂಟನೆಯ ತೀರ್ಪುಗಾರ ಮಂಡಿಸುತ್ತಾನೆ. ಸರಳ ಮತ್ತು ತರ್ಕಬದ್ಧ ಕ್ರಮದಲ್ಲಿ ಸಾಕ್ಷ್ಯಗಳನ್ನು ಮಂಡಿಸುವುದರ ಮೂಲಕ ಇತರರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾನೆ. ಈ ತೀರ್ಪುಗಾರನ ನಾಯಕತ್ವದ ಮಾದರಿಯಲ್ಲಿ ಸಮೂಹದ ಸದಸ್ಯರ ಬಲವನ್ನು ಹೆಚ್ಚಿಸುವುದರ ಕಡೆ ಆಸಕ್ತಿಯಿದೆ ಎನ್ನುವುದು ಮೇಲಿಂದ ಮೇಲೆ ಕಂಡುಬರುತ್ತದೆ. ಅಹಂ ಭಾವವಿಲ್ಲವೆನ್ನುವ ರೀತಿಯಲ್ಲಿ ಇತರರ ವಿವೇಚನೆಯ ರೀತಿಯನ್ನು ಅವನು ಮಾರ್ಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿರುವುದನ್ನು ಗಮನಿಸಬಹುದು.

 How Cinemas Project Psychological Issues Dr A Sridhar Explains

ವ್ಯಕ್ತಿಗಳ ಮನಸ್ಸಿನ ಹಲವಾರು ಸ್ಥಿತಿಗಳ ರೀತಿಯನ್ನು ಹೊರತರುವುದರಲ್ಲಿ ಈ ಚಲನಚಿತ್ರ ಯಶಸ್ವಿಯಾಗಿದೆ. ನೇತಾರನ ಮಾನಸಿಕತೆಯ ಮೂಲಕ ಅಭಿಪ್ರಾಯ, ಪೂರ್ವಗ್ರಹಗಳನ್ನು ಬದಲಿಸುವುದಕ್ಕೆ ಸಾಧ್ಯವಿದೆ ಎನ್ನುವ ಸಂದೇಶವನ್ನು ಗುರುತಿಸದಿರುವುದು ಅಸಾಧ್ಯ. (ಅಮೆರಿಕದ ಅಪರಾಧಿ ಕಾನೂನು ಪದ್ಧತಿಯಲ್ಲಿ ಸಾಮಾನ್ಯವಾಗಿ ಸಮಂಜಸವಾದ ನಿಲುವು ಎನ್ನುವಾಗ ತೀರ್ಪುಗಾರರೆಲ್ಲರ ಒಮ್ಮತದ ಅಭಿಪ್ರಾಯ ಬೇಕಾಗುತ್ತದೆ). ಈ ಚಲನಚಿತ್ರವು ಒಮ್ಮತ ಮೂಡಿಸುವ ಕೌಶಲ್ಯದ ವಿಧಗಳನ್ನು ಶೋಧಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಜೊತೆಗೆ ಅದೇನು ಸುಲಭವಾಗಿ ಮೂಡುವಂತಹ ಕ್ರಿಯೆ ಅಲ್ಲವೆನ್ನುವುದನ್ನು ತಂಡದಲ್ಲಿ ಜರುಗುವ ಚರ್ಚೆ, ಅನಿಸಿಕೆ, ತೀರ್ಪುಗಾರರ ಹಾವಭಾವಗಳು ಸೂಚಿಸುತ್ತವೆ. ವಿಭಿನ್ನ ಹಿನ್ನೆಲೆಯಿಂದ ಬಂದಂತಹ ವ್ಯಕ್ತಿಗಳ ಮನಸ್ಸನ್ನು ಗಹನವಾದ ವಿಷಯವೊಂದರ ಕಡೆ ಸೆಳೆಯುವ ಕೆಲಸ (ಕಲೆ) ಸಾಮಾನ್ಯದಲ್ಲವೆನ್ನುವುದಂತೂ ಸ್ಪಷ್ಟ. ನಮ್ಮ ರಾಜಕೀಯ ನಾಯಕತ್ವದ ಆಯ್ಕೆಯ ಕ್ರಮದಲ್ಲಿರುವಂತಹ ವಶೀಲಿಬಾಜಿ, ದರ್ಪ, ದಬ್ಬಾಳಿಕೆ, ಸೋಗಲಾಡಿತನಗಳು ಅಲ್ಲಿಯೂ ಕಂಡುಬಂದರೂ ಚರ್ಚೆ, ವಿವರಣೆಗಳ ಮೂಲಕ ಮನದ ಪರಿವರ್ತನೆ ಸಾಧ್ಯವಾಗುತ್ತದೆ ಎನ್ನುವ ಆಶಾದಾಯಕ ಅಂಶ.

ತೀರ್ಪು ತೆಗೆದುಕೊಳ್ಳುವ ಕ್ರಮ ಕ್ಲಿಷ್ಟವಾಗುವುದಕ್ಕೆ ವೈಯಕ್ತಿಕ ಸಮಸ್ಯೆಗಳು, ಕೊರತೆ, ಪೂರ್ವಗ್ರಹಗಳು ತಪ್ಪಿತಸ್ಥ ಎನ್ನುವಂತಹ ನಿರ್ಧಾರಕ್ಕೆ ಬರುವಂತೆ ಪ್ರತಿಯೊಬ್ಬರನ್ನು ಪ್ರೇರೇಪಿಸಿರುತ್ತದೆ. ಇನ್ನೇನು ಒಮ್ಮತ ಸಾಧ್ಯ ಎಲ್ಲರ ಅಭಿಪ್ರಾಯವೂ ಹುಡುಗ ಅಪರಾಧಿಯಂದೇ ತೀರ್ಮಾನಿಸಿ ಬಿಡುವ ಕೊನೆಯ ಹಂತದಲ್ಲಿ ಎಂಟನೆ ಸಂಖ್ಯೆಯ ತೀರ್ಪುಗಾರರ ಹುಡುಗ 'ನಿರಪರಾಧಿ' ಎಂದು ಬಿಡುತ್ತಾನೆ.

 How Cinemas Project Psychological Issues Dr A Sridhar Explains

ಅಪರಾಧ ಸಾಬೀತಾದರೆ ಹದಿಹರೆಯದವನಿಗೆ ಮರಣದಂಡನೆ ಎನ್ನುವುದನ್ನು ನ್ಯಾಯಾಧೀಶ ತೀರ್ಪುಗಾರರಿಗೆ ತಿಳಿಸಿ ತಮ್ಮ ಕೋಣೆಗೆ ನಿರ್ಗಮಿಸುತ್ತಾರೆ. ಜ್ಯೂರಿಗಳ ಕೈಲಿ ಅವನ ಬದುಕು ಇದೆ- ಸಾವು ಅವರುಗಳ ಮನಸ್ಸಿನಲ್ಲಿದೆ! ಎನ್ನುವಂತಹ ಪರಿಸ್ಥಿತಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರಂಭದಲ್ಲಿ ಹನ್ನೊಂದು ಜನರು ಮಬ್ಬು ಛಾಯೆಯಿರುವ ಉಡುಗೆಯಲ್ಲಿರುತ್ತಾರೆ. ಎಂಟನೆಯವನು ಮಾತ್ರ ಬಿಳಿಯ ಬಣ್ಣದ ಅಂಗಿಯನ್ನು ತೊಟ್ಟಿರುವುದನ್ನು ತೋರಿಸಲಾಗುತ್ತದೆ. ಚಿತ್ರ ಮುಂದುವರೆದಂತೆಲ್ಲ ಎಂಟನೆಯವನ ವಾದದ ರೀತಿಯನ್ನು ಒಪ್ಪುತ್ತಿರುವುದನ್ನು ಸೂಚಿಸುವುಂತೆ ಮಬ್ಬು ಛಾಯೆಯ ಕೋಟನ್ನು ಕಳಚಿ ಬಿಳಿಯ ಛಾಯೆಯಿರುವ ಅಂಗಿಯಲ್ಲಿರುವುದನ್ನು ತೋರಿಸಲಾಗುತ್ತದೆ. ಎಲ್ಲರೂ ಎಂಟನೆಯವನ ಹೇಳಿಕೆಯನ್ನು ಒಪ್ಪುತ್ತಿರುವಂತೆಯೇ ಹೊರಗಡೆ ಗುಡುಗು ಸಿಡಲಿನೊಂದಿಗೆ ಮೋಡ ಕವಿದು ಕೋಣೆ ಮಬ್ಬಾಗುತ್ತದೆ. ಆಗ ಕೋಣೆ ಪ್ರಕಾಶಮಾನವಾಗುವಂತೆ ಮಾಡಲು ದೀಪ ಹಚ್ಚಲಾಗುತ್ತದೆ. ತೀರ್ಪು ಕೊಟ್ಟು ಹೊರಬರುವಾಗ ಅವರೆಲ್ಲರು ಕೋಟನ್ನು ಧರಿಸಿರದೆ ಕೈಲಿ ಹಿಡಿದಿರುತ್ತಾರೆ. ಇವುಗಳೆಲ್ಲವು ಅಜ್ಞಾನದಿಂದ ತಿಳಿವಳಿಕೆಯತ್ತ ಹೋಗಿರುವುದನ್ನು ಸಂಕೇತಿಸುತ್ತದೆ.

ವೀಕ್ಷಕನಿಗೆ ಸನ್ನಿವೇಶಗಳು ತರುವ ಒತ್ತಡದ ಅನುಭವಗಳು ಸ್ಪಷ್ಟವಾಗಿ ಆಗುತ್ತಿರುತ್ತವೆ. ಸೌಲಭ್ಯಗಳಿಂದ ವಂಚಿತನಾದ ಹದಿಹರೆಯದವನೊಬ್ಬನ ಅಳಿವು-ಉಳಿವಿನ ಪ್ರಶ್ನೆಯನ್ನು ಹನ್ನೆರಡು ಮಂದಿ ಜಾಣರ ತೀರ್ಪು ನಿರ್ಧರಿಸಿ ಬಿಡುವಂತಹ ಸಮಸ್ಯೆ ಅದು. ಈಗಾಗಲೇ ತಪ್ಪಿತಸ್ಥನೆನ್ನುವ ಭಾವನೆ ಇರಿಸಿಕೊಂಡಿರುವವರು ಅದನ್ನು ಬದಲಾಯಿಸಿಕೊಂಡು ಅವನು ತಪ್ಪು ಮಾಡಿರಲಾರವೆನ್ನುವಂತಹ ಹೊಸ ತೀರ್ಮಾನಕ್ಕೆ ಬರುವುದು ಸುಲಭದ ಮಾತು ಅಲ್ಲವೇ ಅಲ್ಲ. ಅದೂ ಇನ್ನೊಬ್ಬನ ಮಾತನ್ನು ನಂಬಿ ತಮ್ಮ ಒಳಭಾವನೆಯನ್ನು ವಿರೋಧಿಸುವುದು ಸರಾಗವೇ? ಅಲ್ಲೇನು ಮಾಯ-ಮಂತ್ರ ಅಥವಾ 'ನಾಲ್ಕನೆ ಆಯಾಮ'ದ ಚಳಕಕ್ಕೂ ಅವಕಾಶವಿರುವುದಿಲ್ಲ. ಇವೆಲ್ಲವುಗಳೊಂದಿಗೆ ಚಿತ್ರದ ಇನ್ನೂ ಹಲವಾರು ಸನ್ನಿವೇಶಗಳು ವೀಕ್ಷಕನ ಗ್ರಹಿಕೆಗೆ ಸಿಗುತ್ತದೆ.

 How Cinemas Project Psychological Issues Dr A Sridhar Explains

ಹೆಚ್ಚು ಬೆಳಕು ಇರದ ನ್ಯಾಯಾಲಯದಲ್ಲಿ ತೀರ್ಪಿನ ಪ್ರಕ್ರಿಯೆ ಆರಂಭವಾಗಿ ನಂತರದಲ್ಲಿ ವಾತಾವರಣ ಬದಲಾಗುವುದು ಹನ್ನೊಂದು ಜನರ ಅಭಿಪ್ರಾಯದಲ್ಲಿ ಸಹಮತ ಉಂಟಾಗುತ್ತಿರುವುದನ್ನು ಬೆಳಕು-ಕಪ್ಪಿನ ವ್ಯತ್ಯಾಸಗಳು ಬಿಂಬಿಸುತ್ತದೆ. ಭಿನ್ನಮತ ವ್ಯಕ್ತಪಡಿಸಿದ ವ್ಯಕ್ತಿಯ ವಿವರಣೆ, ವ್ಯಾಖ್ಯಾನಗಳು ಮುಂದುವರೆದಂತೆಲ್ಲಾ ಬದಲಾವಣೆಗಳಾಗುತ್ತಿರುವ ಸೂಚನೆ ಹೊರಬರುತ್ತದೆ.

ಚಿತ್ರದ ಕೊನೆಯ ಭಾಗದಲ್ಲಿ ತೀರ್ಪುಗಾರರ ಮನಸ್ಸು ಬದಲಾಗುತ್ತದೆ, ಬದಲಾಗುತ್ತಿರುವ ಕ್ರಮದತ್ತ ಗಮನಿಸಿದಾಗ ಶರೀರ ಮತ್ತು ಮನಸ್ಸಿನ ಕ್ರಿಯೆಗಳ ಏರಿಳಿತ ಹೆಚ್ಚಾಗಿರುತ್ತದೆ. ಇದು ಸಂಕೇತಿಸುವುದೇನೆಂದರೆ ನಮ್ಮಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವ ನಕಾರಾತ್ಮಕ ಆಲೋಚನೆ, ಅನಿಸಿಕೆ, ಸ್ವಭಾವಗಳು ಸುಲಭವಾಗಿ, ಸಲೀಸಾಗಿ ಮಾರ್ಪಾಡಾಗುವುದಂತಹದಲ್ಲ. ಅವು ಬದಲಾಗಬೇಕಾದರೆ ಪರಿಶ್ರಮವಿರಲೇ ಬೇಕು. ಎಂಟನೆಯ ಜ್ಯೂರಿ ಬಗ್ಗೆ ಒಂದೆರಡು ಮಾತು. ಅವನೂ ಇನ್ನಿತರರಂತೆ ಯಾವುದೋ ವೃತ್ತಿಯನ್ನು ಹಿಡಿದಿದ್ದಂತಹ ವ್ಯಕ್ತಿ. ಅಂದರೆ ಅವನಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಶೇಷ ಜ್ಞಾನವೇನು ಇದ್ದಿರಲಿಲ್ಲ. ಅವನು ವೃತ್ತಿಯಲ್ಲಿ ಕಟ್ಟಡ ವಿನ್ಯಾಸಗಾರ ಅಥವಾ ಶಿಲ್ಪಶಾಸ್ತ್ರದ ಪರಿಣತ. ಆದರೆ ತೀರ್ಪು ಕೊಡುವುದಕ್ಕೆ ಮುಂಚಿತವಾಗಿ ಸಮಸ್ಯೆಯ ಬಗ್ಗೆ ಸಂಯಮ ಮತ್ತು ತರ್ಕಬದ್ಧವಾಗಿ ಆಲೋಚಿಸುತ್ತಾನೆ. ಮನಸ್ಸಿಗೆ ಬಂದಂತಹ ಆಲೋಚನೆಗಳನ್ನು ಏಕಾಏಕಿ ಅನುಮೋದಿಸದೇ ಪರ್ಯಾಯ ವಿವರಣೆಗಳತ್ತ ಗಮನ ಹರಿಸುತ್ತಾನೆ. ಅಂದರೆ ಸಮಸ್ಯೆಯ ಪರಿಹಾರಕ್ಕೆ ಅಗತ್ಯವಿರುವ ಮೂಲ ಚೌಕಟ್ಟನ್ನು ಸೃಷ್ಟಿಸಿಕೊಳ್ಳುವುದನ್ನು ತಪ್ಪುವುದಿಲ್ಲ.

 How Cinemas Project Psychological Issues Dr A Sridhar Explains

ಲಭ್ಯವಿರುವ ಸಾಕ್ಷಿಗಳನ್ನು ಎಲ್ಲಾ ದೃಷ್ಟಿಕೋನಗಳಿಂದಲೂ ನೋಡುತ್ತಾನೆ. ಕೊನೆಗೆ ಇರಿತ ನಡೆದ ರೀತಿ, ಚಾಕು ಶರೀರಕ್ಕೆ ತಗುಲಿದಾಗ ಇದ್ದಂತಹ ಕೋನ ಮತ್ತು ಅಂತಹದೊಂದು ಕ್ರಿಯೆ/ಬಲದಿಂದ ಉಂಟಾದ ಗಾಯ ಮತ್ತು ಅದರ ತೀವ್ರತೆಗಳತ್ತ ಅವನ ಮನಸ್ಸು ಮತ್ತು ಪ್ರಶ್ನೆಗಳು ಇರುತ್ತವೆ. ಇತರರಿಗೆ ಪ್ರಶ್ನೆ ಕೇಳುವುದು ಅದಕ್ಕೆ ಸಿಗುವ ಉತ್ತರದ ಮೂಲಕವೇ. ಸಮಸ್ಯೆಯ ಕೇಂದ್ರದತ್ತ ಹೋಗುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತಿರುವುದು ತಿಳಿಯುತ್ತದೆ. ಕೊನೆಯ ಹಂತದಲ್ಲಿ ಪ್ರತಿಯೊಬ್ಬ ತೀರ್ಪುಗಾರನ ಆಲೋಚನೆಯ ವಿಧಾನವು ಸಮಸ್ಯೆಯನ್ನು ಸುರ್ದೀಘವಾಗಿ ಮರುಚಿಂತನೆ ಮಾಡಿ ಸಮಂಜಸ ತೀರ್ಪಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲಿ ಹೊಂದಾಣಿಕೆ ಸಾಧ್ಯ ಎನ್ನುವುದನ್ನಿಲ್ಲಿ ಕಾಣಬಹುದು.

English summary
How Cinema projects psychological issues, Psychologist Dr A Sridhar explains here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X