ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಾಲಜಿ ವಿಶ್ಲೇಷಣೆ: ದುರ್ಯೋಧನ ಕೆಟ್ಟವನಾದದ್ದು ಹೇಗೆ? ಏಕೆ?

By ಡಾ. ಎ.ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ದುರ್ಯೋಧನ ಕೆಟ್ಟವನಾದದ್ದು ಹೇಗೆ? ಏಕೆ? (ಒಂದು ಕಾಮನ್‌ಸೆನ್ಸ್‌ ಸೈಕಾಲಜಿ ವಿಶ್ಲೇಷಣೆ)--ಸಾವಿರಾರು ವರ್ಷಗಳ ಹಿಂದೆ ಎರಡು ಪ್ರಾಚೀನ ಕುಟುಂಬಗಳ ನಡುವೆ ಹುಟ್ಟಿದ ವೈಮನಸ್ಕತೆ, ಬಿರುಕು, ದೊಡ್ಡ ಮಟ್ಟದ ಕಾಳಗವಾಗಿ ಅಪಾರ ಸಾವುನೋವುಗಳುಂಟಾಯಿತಂತೆ.

ಜಯಶಾಲಿಗಳಾಗಿ ಉಳಿದವರು ಮತ್ತೆ ಸ್ಥಾನ, ಮಾನಗಳನ್ನು ಗಳಿಸಿ ರಾಜ್ಯವಾಳಿದರು. ಹೀಗೆ ಗೆದ್ದವರ ಕತೆಯನ್ನು ತಲೆಮಾರಿನಿಂದ ತಲೆಮಾರಿಗೆ ಹೇಳುತ್ತಾ, ಕೇಳುತ್ತಾ, ಹಾಡುತ್ತಾ, ಬದಲಾಗುತ್ತಾ ಬರೆಯಲ್ಪಟ್ಟ ಪ್ರಸಂಗಗಳು, ನೀತಿ, ನಿಯತ್ತು, ಅನೀತಿ, ಅನ್ಯಾಯಗಳ ಬಗ್ಗೆ ಹೊಸ ಹೊಸ ಕತೆ, ವಿವರಣೆಗಳನ್ನು ಮಂಡಿಸುತ್ತಾ ವ್ಯಕ್ತಿ ಮತ್ತು ಸಮಾಜದ ಸ್ವಭಾವಗಳನ್ನು ಸೃಷ್ಟಿಸಿ, ಬದಲಾಯಿಸುತ್ತಲೇ ಮುಂದುವರೆದಿದೆ.

ತಾಯಿಬೇರಿನಿಂದ ಬೇರ್ಪಟ್ಟು, ಸಸಿಗಳು ಕಸಿಯಾಗಿ ಹೊಸ ಅರಿವು, ವಿನೂತನ ಭಕ್ತಿ, ಶ್ರದ್ಧೆಗಳ ಮೂಲಕ ಆಧುನಿಕ ಸಮಾಜದ ಬಹುಪ್ರಭಾವಶಾಲಿ ಮನೋಧರ್ಮದ ಗಟ್ಟಿ ಬೇರುಗಳಾಗಿ ಸಮಾಜ, ಸಂಸ್ಕೃತಿ,ಮತ್ತು ಮಾನಸಿಕತೆಯ ಮೇಲೆ ಬಲವಾದ ಹಿಡಿತ ಸಾಧಿಸಿದೆ.

ಜಯದ ಕತೆಯು ಮಹಾಭಾರತವಾಗುವಂತೆ ಮಾಡಿದ್ದು ಅದರಲ್ಲಿ ಕಂಡುಬರುವ ಅಚ್ಚರಿ ಮೂಡಿಸುವ ಪಾತ್ರಗಳು. ಅವುಗಳು ಸುರಾಸುರರು, ಪಶುಪಕ್ಷಿಗಳು, ಧರೆಗಳಿದು ಬರುವ ದೇವತೆ, ಪಾತಾಳದಲ್ಲಿರುವ ಅಸುರರದ್ದು. ಹೀಗೆ ಅದೆಷ್ಟೋ ಜೀವ ತುಂಬಿದ ಪಾತ್ರಗಳು, ಕೇಳುಗನ, ಓದುಗನ, ನೋಡುಗನ ಮನಸನ್ನು ನೈಜವಾಗಿ ಸೆಳೆಯುತ್ತದೆ.

ಕೌರವರ ಗುಂಪಿಗೆ ಸೇರಿದ ದುರ್ಯೋಧನ ಇಂದಿಗೂ ಕೆಟ್ಟವನೆಂದೇ ಅಪಪ್ರಚಾರದಲ್ಲಿರುವುದು. ಮಹಾಭಾರತದ ಯುದ್ಧವಾಗುವುದಕ್ಕೂ ಅವನೇ ಕಾರಣ. ಅವನೇ ಅಂದರೆ, ಅವನ ಆಸೆ, ಆಕಾಂಕ್ಷೆಗಳು. ರಾಜನಾಗಬೇಕೆಂಬ ಹೆಬ್ಬಯಕೆ. ಹಾಗೇ ನೋಡಿದರೇ ರಾಜಧಿರಾಜನಾಗುವುದಕ್ಕಿಂತಲೂ ಬಲವಾಗಿದ್ದದ್ದು ಬಾಲ್ಯದಲ್ಲನುಭವಿಸಿದ ಅಪಮಾನ, ಹೀಯಾಳಿಕೆ ಮತ್ತು ಸೋದರಸಂಬಂಧಿಗಳಿಂದ ವಿಪರೀತದ ಹುಡುಗಾಟಿಕೆಯ ರೀತಿಗಳು. ಇವೇನು ಸಾಮಾನ್ಯದ ವರ್ತನೆಗಳಲ್ಲಾ. ಇಂತಹ ವರ್ತನೆಗಳಿಂದು "ಪೀಡನೆ" ಇಂಗ್ಲಿಷಿನಲ್ಲಿ "bullying" ಎನ್ನುತ್ತಾರೆ. ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣ.

ಮನುಷ್ಯ ದುರ್ವತನೆಗಳಿಗೆ ಕಾರಣ ಯಾರು?

ಮನುಷ್ಯ ದುರ್ವತನೆಗಳಿಗೆ ಕಾರಣ ಯಾರು?

ಹೀಗಾಗಿ ಮನುಷ್ಯ ದುರ್ವತನೆಗಳಿಗೆ ವ್ಯಕ್ತಿಯಷ್ಟೇ ಸಾಮಾಜಿಕ ಪರಿಸರವೂ ಕಾರಣ. ಇದನ್ನೇ ಮನೋವೈಜ್ಞಾನಿಕ ತತ್ವಗಳು ಒತ್ತಿ ಹೇಳುವುದು. ಅದರಲ್ಲಿಯೂ ಬಾಲ್ಯದ ದಿನಗಳಲ್ಲಿ ಮನೋವಿಕಾಸ ಸರಾಗವಾಗಿ ಸಾಗುವಂತೆ ಮಾಡಲು ಸಾಧ್ಯವಾಗುವುದು ಪಾಲಕರು, ಪೋಷಕರು ಮತ್ತು ಹಿರಿಯರಿಂದ ಕೂಡಿದ ಉತ್ತಮ ಸಾಮಾಜಿಕ ಪರಿಸರ.

ದುರ್ಯೋಧನನ ಅಸಹಾಯಕ ಬಾಲ್ಯದ ಬಗ್ಗೆ ಬೆಳಕು ಚೆಲ್ಲುವ ಪ್ರಸಂಗಗಳನೇಕವು ಶಿಶುವಿಕಾಸದ ಬದಲಿಗೆ ವಿಕಾರವನ್ನು ಉತ್ತೇಜಿಸುವಂತಹದ್ದು. ಅವನು ಹುಟ್ಟಿದಾಗ ಅಶುಭ ಸೂಚನೆಗಳೇ ಹೆಚ್ಚಿದ್ದ ಕಾರಣ ಅವನು ವಂಶಕ್ಕೆ ಕಂಟಕವಾಗಬಲ್ಲನಾದುದರಿಂದ ಆ ಕ್ಷಣದಲ್ಲಿಯೇ ಅವನನ್ನು ಸಾಯಿಸಬೇಕೆಂದು ಸಲಹೆ ನೀಡುತ್ತಾನೆ, ಎಲ್ಲ ವಿಧದಲ್ಲಿಯೂ ಪಾರಂಗತನೆಂದು ಕರೆಯಲ್ಪಡುತ್ತಿದ್ದ ಸ್ವಂತ ಚಿಕ್ಕಪ್ಪ, ವಿಧುರ. ಅಂದ ಮೇಲೆ ಶಿಶುಹತ್ಯೆಯನ್ನು ಮಾಡುವಂತಹ ಮನದಸ್ಥಿತಿ ಇದ್ದಂತಹವರೇ ಅವನ ಸುತ್ತಮುತ್ತಾ ಇದ್ದವರು. ಇಷ್ಟಾಗಿ, ಶಿಶುಹತ್ಯೆ ಮಹಾಪಾತಕಗಳಲ್ಲಿ ಒಂದೆನ್ನುವುದು ತಿಳಿದೂ ಸಹ.

ಆದರೆ, ಅವನ ಸಲಹೆಗೆ ಒಪ್ಪದಿದ್ದ ತಾಯಿ ಗಾಂಧಾರಿ, ತನ್ನ ಚೊಚ್ಚಲ ಶಿಶುವಿನ ಜೀವರಕ್ಷಣೆಗೆ ಮುಂದಾಗುತ್ತಾಳೆ. ಆಕೆ ವ್ಯಕ್ತಪಡಿಸಿದ ಪ್ರೀತಿ ವಾತ್ಯಲ್ಯಗಳು ಅವನಲ್ಲಿದ್ದಂತಹ ತೋಳ್ಬಲವು ಹೆಚ್ಚುವುದಕ್ಕಂತೂ ಕಾರಣವಾಗಿತ್ತು. ಆಕೆಯು ಕುರುಡುತನವನ್ನು ಆಚರಿಸುತ್ತಿದ್ದದ್ದರಿಂದ ಅವನ ಸ್ವಭಾವ, ಕೀಳರಮೆಯತ್ತ ಗಮನಹರಿಸಿದ್ದು ಕಡಿಮೆ ಇದ್ದಿರಬಹುದು. ಹುಟ್ಟಿನಿಂದಲೇ ಅವನ ಬಗ್ಗೆ ನಕಾರಾತ್ಮಕವಾದಂತಹ ಅಭಿಪ್ರಾಯಗಳನ್ನು ಅವನೊಂದಿಗೆಯೇ ಬೆಳೆದ ಪಂಚಪಾಂಡವರು ಪ್ರತಿ ಅವಕಾಶದಲ್ಲಿಯೂ ಬಳಸಿಕೊಂಡಿದದ್ದರು.

ಆಗಲೇ ಅವನೊಬ್ಬ ಕೆಟ್ಟ ಮನುಷ್ಯನಾಗಿಬಿಟ್ಟಿದ್ದ! ಗುರುಕುಲದ ವಿದ್ಯಾಭ್ಯಾಸದ ಸಮಯದಲ್ಲಿಯೂ ಸಹ ಭೀಮ, ಅರ್ಜುನನರಿಂದ ನಿರಂತರವಾಗಿ ಹಿಂಸೆ, ಹೀಯಾಳಿಕೆಗಳಿಗೆ ಸಿಕ್ಕಿಕೊಳ್ಳುತ್ತಿದ್ದವೆನ್ನುವುದರ ಬಗ್ಗೆ ಹಲವಾರು ಕತೆಗಳಿವೆ. ನೀರಿನಲ್ಲಿ ಮುಳುಗಿಸುವುದು, ಬೀಳಿಸುವುದು ಮುಂತಾದ ಕುಚೇಷ್ಟೆಗಳಿಗೆ ದುರ್ಯೋಧನ ಸದಾ ಗುರಿಯಾಗಿರುತ್ತಿದ್ದ.

ಸಮಾಧಾನಪಡಿಸುವವರಲ್ಲಿ ಕಪಟತನ, ಕುತಂತ್ರಗಳಿರಬಲ್ಲದು, ಎಚ್ಚರ!!!

ಸಮಾಧಾನಪಡಿಸುವವರಲ್ಲಿ ಕಪಟತನ, ಕುತಂತ್ರಗಳಿರಬಲ್ಲದು, ಎಚ್ಚರ!!!

ತನ್ನಲ್ಲಿ ವಿಶ್ವಾಸ, ಇತರರಲ್ಲಿ ನಂಬಿಕೆ ಗೌರವಗಳನ್ನು ಕಲಿಯದಂತಹ ವಾತಾವರಣದಲ್ಲಿ ಅವನು ಬೆಳೆಯಬೇಕಾಯಿತು. ಹೀಗಾಗಿ ಒಡನಾಡಿತನ ಬಯಸುತ್ತಿದ್ದ ಅವನಿಗೆ ಹಿತವೆನಿಸಿದ ಹಿರಿಯನೆಂದರೇ ಶಕುನಿ. ಕಹುಕ, ಕುತಂತ್ರಗಳಿಗೆ ನಿಸ್ಸೀಮ, ಜೊತೆಯಲ್ಲಿ ಸೋದರಮಾವ. ಮಕ್ಕಳ ಮನಸ್ಸನ್ನು ತಮ್ಮ ಸ್ವಾರ್ಥಕ್ಕಾಗಿ ಬದಲಿಸಿಕೊಳ್ಳುತ್ತಿದ್ದಂತಹ ಸನ್ನಿವೇಶವದು. ಪಾಂಡವರೊಂದಿಗೆ ವೈಷಮ್ಯವನ್ನು ಗಟ್ಟಿಮಾಡಿಸುವಂತಹ ಪರಿಸರವದು. ಇದೇ ಸಮಯದಲ್ಲಿ ಕರ್ಣನ ಗೆಳೆತನ.

ಅಸಾಮಾನ್ಯ ಶೋರನಾದ ಅವನೊಂದಿಗಿನ ಸಹವಾಸ ದುರ್ಯೋಧನನ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದುದಲ್ಲದೇ ಪಾಂಡವರ ವಿರುದ್ಧದ ಹಗೆತನದ ಭಾವಗಳು ಸಹಜವಾಗಿಯೇ ಬಲಗೊಳ್ಳುವುದಕ್ಕೂ ಪ್ರೇರಣೆಯಾಗಿತ್ತು. ಪಾಂಡವರ ವಿರುದ್ಧ ಮೂಡಿದ್ದ ಹಗೆತನವನ್ನು ಬದಲಾಯಿಸುವ ಪ್ರಯತ್ನಗಳು ಯಶಸ್ವಿಯಾಗದಿರುವುದಕ್ಕೆ ಕಾರಣಗಳು ಹಲವಾರು. ಪಂಚಪಾಂಡವರಲ್ಲಿದ್ದಂತಹ ಸಹೋದರರ ನಡುವೆ ವಾತ್ಯಲ್ಯ, ಆದರ, ಕಾಳಜಿ, ಗೌರವ,ಅಭಿಮಾನ, ಮತ್ತು ಕುಂತಿಯ ಮಾತೃವಾತ್ಸಲ್ಯದ ಗುಣಗಳು. ಇವೆಲ್ಲ ದುರ್ಯೋಧನನಿಗೆ ದುರ್ಲಭ. ಇಂತಹ ಸಕಾರಾತ್ಮಕ ಮತ್ತು ಪ್ರೇರಕ ಬಲಗಳಿಂದ ವಂಚಿತನಾಗಿದ್ದ ಎನ್ನುವುದು ಬಲ್ಲ ಸಂಗತಿ. ಇದಲ್ಲದೆಯೇ ಅವನ ಪರವಾಗಿ ಇದ್ದವರೆಲ್ಲರೂ ಒಡಹುಟ್ಟಿದವರಲ್ಲ, ಹೊರಗಿನವರು, ಅವಕಾಶವಾದಿಗಳು.

ಒಡನಾಡಿತನದಿಂದ ಸಿಗುತ್ತಿದ್ದಂತಹ ಹಿತದ ಘಳಿಗೆಗಳು ಅವನಿಗೆ ಸದಾ ಅಪರೂಪ. ಪರಾಕ್ರಮಿ ಆಗಿದ್ದರೂ ಕೂಡ ಗುರುಗಳಿಂದ ಸಿಕ್ಕಂತಹ ಪ್ರೋತ್ಸಾಹ ಕಡಿಮೆ. ದ್ರೋಣಾಚಾರ್ಯನು ಅರ್ಜುನ, ಭೀಮರನ್ನು ಮೆಚ್ಚಿಕೊಂಡ ರೀತಿಯಲ್ಲಿ ದುರ್ಯೋದನನ್ನು ಮೆಚ್ಚಿಕೊಂಡಂತೆ ಕಂಡುಬರುವುದಿಲ್ಲ. ಕೀಳರಿಮೆ, ಹತಾಶೆಗಳಿಗೆ ಸದಾ ಸಿಕ್ಕಿಕೊಳ್ಳುತ್ತಿದ್ದ ದುರ್ಯೋಧನನ್ನು ಸಮಾಧಾನಪಡಿಸುವಂತಹ ಪ್ರಯತ್ನಗಳು ಕಪಟತನ, ಕುತಂತ್ರವನ್ನು ಪ್ರೇರೇಪಿಸುವುದರ ಮೂಲಕವೇ ಆಗಿರುತ್ತಿತ್ತು.

ಇದನ್ನು ವಿವರಿಸುವ ಒಂದು ನಿದರ್ಶನ

ಇದನ್ನು ವಿವರಿಸುವ ಒಂದು ನಿದರ್ಶನ

ಇದನ್ನು ವಿವರಿಸುವ ಒಂದು ನಿದರ್ಶನವೆಂದರೇ: ಅರಣ್ಯಪರ್ವದಲ್ಲಿ ಕಂಡು ಬರುವ ಈ ಕತೆಯಲ್ಲಿ ಪಾಂಡವರು ವನವಾಸದಲ್ಲಿ ಕಷ್ಟಪಡುತ್ತಿದ್ದಾರೆ ಎನ್ನುವುದು ಅವನ ಕಿವಿಗೆ ಬೀಳುತ್ತದೆ. ಆ ಸಮಯದಲ್ಲಿ ಅವನೊಂದಿಗಿದ್ದ ಹಿತಚಿಂತಕರು ಪಾಂಡವರಲ್ಲಿ ಹೊಟ್ಟೆಯುರಿ ಬರುವಂತೆ ಮಾಡುವ ಉತ್ತಮ ಅವಕಾಶ ಇದು, ಅವರುಗಳು ಸಂಕಟ ಪಡುವ ದೃಶ್ಯ ನೋಡುವುದು ಹರ್ಷ ತರುವಂತಹದ್ದು ಎಂದು ಹೇಳುತ್ತಾ ''ನೀನು ಈಗ ಸಾರ್ವಭೌಮ ಅವರುಗಳು ನಿನಗೆ ಮಾಡಿದ ಅವಮಾನಗಳಿಗೆ ತಕ್ಕಶಾಸ್ತಿ ಎಂದರೇ ಅವರೆದುರಿಗೆ ಮೆರೆಯುವುದು''ಎಂದು ಹುರಿದುಂಬಿಸುತ್ತಾರೆ.

ಆದರೆ ಧೃತರಾಷ್ಟ್ರ ಇದನ್ನು ಮೊದಲಿಗೆ ವಿರೋಧಿಸುತ್ತಾನೆ, ನಂತರದಲ್ಲಿ ಅಸಮಾಧಾನದಿಂದಲೇ ಒಪ್ಪಿಕೊಳ್ಳುತ್ತಾನೆ. ದ್ವೈತವನದ ಗೊಲ್ಲರ ಹಳ್ಳಿಯಲ್ಲಿ ದನಕರುಗಳನ್ನು ನೋಡುವ ಸಲುವಾಗಿ ಹೋಗಿಬರುವುದಾಗಿ ಅವನಿಗೆ ತಿಳಿಸಿ ಪಾಂಡವರ ಕಷ್ಟವನ್ನು ನೋಡಿ ಆನಂದಿಸಬಹುದೆನ್ನುವ ವಿಚಾರ ಅವನ ಮನಸ್ಸಿಗೆ ಬರುವಂತೆ ಮಾಡಿದ್ದೇ ಅವನ ಸಮೀಪವರ್ತಿಗಳ ಮಾತುಗಳ. ಹೀಗಾಗಿ ತನ್ನ ಬಳಿಯಿದ್ದ ದೊಡ್ಡ ಪರಿವಾರದೊಂದಿಗೆ ತೆರಳುತ್ತಾನೆ.

ದುರ್ಯೋಧನನನ್ನು ಖಳನಾಯಕನಾಗಿ ರಚಿಸಿದ ಮೇಲೆ

ದುರ್ಯೋಧನನನ್ನು ಖಳನಾಯಕನಾಗಿ ರಚಿಸಿದ ಮೇಲೆ

ಆದರೆ, ಗಂಧರ್ವರಿದ್ದ ಆ ಕಾಡಿನಲ್ಲಿ ಅವರೊಂದಿಗೆ ವ್ಯಾಜ್ಯಕ್ಕೆ ಇಳಿದು ಸಂಪೂರ್ಣವಾಗಿ ದುರ್ಯೋಧನ ಪಡೆ ಸೋತು ಅವನೂ ಸೆರೆಯಾಳಾಗುತ್ತಾನೆ. ಈ ವಿಷಯ ಪಾಂಡವರಿಗೆ ತಿಳಿದು ಅವನನ್ನು ಗಂಧರ್ವರ ವಶದಿಂದ ಬಿಡುಗಡೆ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಅವನಿಗಾದ ಅವಮಾನ ಅಷ್ಟಿಷ್ಟಲ್ಲಾ. ತನ್ನ ದ್ವೇಷ, ರೋಷಕ್ಕೆ ಬೆಲೆ ಇಲ್ಲವೆಂದು ಚೆನ್ನಾಗಿ ತಿಳಿದುಬಿಡುತ್ತದೆ. ಜೀವದಿಂದ ಉಳಿದು ಬಾಳುವುದು ಅಸಾಧ್ಯವೆನ್ನುವಂತಹ ಮಾತುಗಳನ್ನು ಆಡುತ್ತಾನೆ. ಆದರೆ, ಅವನ ಮನಸನ್ನು ಹುಸಿ ಹೊಗಳಿಕೆ, ಆಶ್ವಾಸನೆಗಳ ಮೂಲಕ ಕರ್ಣ, ಶಕುನಿ ಬದಲಾಯಿಸುತ್ತಾರೆ.

ಈ ಮಹಾಕಾವ್ಯದಲ್ಲಿ ದುರ್ಯೋಧನನನ್ನು ಖಳನಾಯಕನಾಗಿ ರಚಿಸಿದ ಮೇಲೆ ಕೆಟ್ಟಗುಣಗಳನ್ನಲ್ಲದೆ ಮತ್ತೇನನ್ನು ತಾನೇ ಸೇರಿಸಲು ಸಾಧ್ಯ? ಹೀಗಾಗಿ ದುರ್ಯೋಧನನ ಮನೋಸ್ಥಿತಿಯಲ್ಲಿರುವ ಯಾವುದೇ ವ್ಯಕ್ತಿಯಾದರೂ ಸರಿಯೇ, ಯಾವ ಕಾಲದಲ್ಲಾದರೂ ಸರಿಯೆ ಇಂತಹ ನಕಾರಾತ್ಮಕ ವರ್ತನೆಗಳಿಗೆ ಬಲಿಯಾಗುವುದು ಸಹಜ. ದುರ್ಯೋಧನ ನಮ್ಮ ದಿನನಿತ್ಯದ ಒಂದು ಸ್ವಭಾವ ಎನ್ನುವಂತೆ ವಿವರಿಸುವುದೇ ಈ ಪಾತ್ರ ಪ್ರಸಂಗಗಳ ಉದ್ದೇಶ. ಇದನ್ನು ಅದಷ್ಟು ಮಿತಿಗೊಳಿಸಿ ಮನುಷ್ಯರ ಮನದಲ್ಲಿ ಮೂಡುವಂತಹ ಕೆಟ್ಟಗುಣಗಳನ್ನು ಕೇವಲ ವ್ಯಕ್ತಿಯ ಸಮಸ್ಯೆ ಎನ್ನುವುದರ ಬದಲಿಗೆ ಪರಿಸರದ ಒತ್ತಡಗಳಿಂದ ಹುಟ್ಟಿದ ವ್ಯಕ್ತಿತ್ವದ ಹೊಂದಾಣಿಕೆಯ ಸಮಸ್ಯೆ ಎಂದು ಗ್ರಹಿಸಬೇಕಾಗುತ್ತದೆ ಎನ್ನುವುದೇ ಇದರ ಸಂದೇಶ. ಪೂರ್ವಗ್ರಹಗಳನ್ನು ವಿರೋಧಿಸುವ "ಜಯ"ದ ಕತೆಯನ್ನು ಕಡೆಗಾಣಿಸುವ ಪ್ರಯತ್ನಗಳು ಬದಲಾಗಬೇಕು.

English summary
How Did Duryodhana Become Bad and why? Here is the detailed analysis by Dr.Sridhara A Psychologist .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X