ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವುಕತನವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

By ಡಾ. ಎ. ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

ಕೆಲವು ದಿನಗಳ ಹಿಂದೆ ಜರುಗಿದ ಘಟನೆ ಇದು. ನನ್ನ ಗೆಳೆಯರೊಬ್ಬರ ಸೋದರ ಸಂಬಂಧಿ ಮದುವೆಯಾದ ಕೆಲವು ತಿಂಗಳಲ್ಲೇ ದುರಂತ ಮರಣಕ್ಕೀಡಾಗಿದ್ದ. ವಿದ್ಯಾವಂತ, ಉತ್ತಮ ಉದ್ಯೋಗದಲ್ಲಿದ್ದವ. ಇದಲ್ಲದೆ ತಂದೆ ತಾಯಿಗಿದ್ದ ಒಬ್ಬನೇ ಮಗ. ಅವನ ಹೆಂಡತಿಯೂ ವಿದ್ಯಾವಂತ ಯುವತಿ. ತಡವಾಗಿ ವಿಷಯ ತಿಳಿದಿದ್ದರಿಂದ ಸಂತಾಪ ಸೂಚಿಸುವುದು ತಡವಾಗಿಯೇ ಆಯಿತು. ಇನ್ನೂ ದುಃಖತಪತ್ತರಾಗಿದ್ದ ಪೋಷಕರನ್ನು ಮಾತಾಡಿಸಲು ಹೋದಾಗ ಅವರಿಗೆ ಮತ್ತಷ್ಟು ದುಃಖ ಉಮ್ಮಳಿಸಿಬಂತು.

ಇದರೊಂದಿಗೆ ದೈವಾಧೀನನಾಗಿದ್ದ ಗೆಳೆಯನ ಹೆಂಡತಿಗೆ ಕೆಲವೊಂದು ಸಾಂತ್ವನದ ಮಾತುಗಳನ್ನು ಹೇಳುವುದಷ್ಟೇ ಅಲ್ಲದೆ ಬೇರೊಂದು ಸಂಬಂಧ ಹುಡುಕಿಕೊಳ್ಳಬಹುದು ಎನ್ನುವ ಮಾತನ್ನು ಹೇಳುವಂತೆ ಸೂಚಿಸಿದ್ದರು. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಈ ಗೆಳೆಯನ ಹೃದಯಕ್ಕೆ ಸಿಡಿಲು ಬಡಿದಂತೆ ಆಗಿತ್ತು. ಕಾರಣವಿಷ್ಟೇ, ಇಂತಹ ದುರಂತದ ಸಮಯದಲ್ಲಿ ಈ ವಿಷಯಗಳನ್ನು ಪ್ರಸ್ತಾಪ ಮಾಡುವುದು ಹೇಗೆ ಮತ್ತು ಅದು ಸೌಜನ್ಯವೇ? ಏನೋ ಹೇಳಿ ಆ ಗಳಿಗೆಯಲ್ಲಿ ತಪ್ಪಿಸಿಕೊಂಡನಾದರೂ ಅವರ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ತುಂಬಾ ನೊಂದುಕೊಂಡ. ಅಷ್ಟೇ ಇದರ ಪರಿಣಾಣಮದಿಂದಾಗಿ ಹಲವಾರು ದಿನ ಅವನ ಆರೋಗ್ಯವೇ ಕೆಟ್ಟುಹೋಗಿತ್ತು. ಮುಂದೆ ಓದಿ...

 ಎದುರಾಗುವ ಮಾನಸಿಕ ಸವಾಲುಗಳು

ಎದುರಾಗುವ ಮಾನಸಿಕ ಸವಾಲುಗಳು

ಇಂತಹ ನೂರಾರು ವಿಧದ ಸಮಸ್ಯೆಗಳನ್ನು ಒಂದಲ್ಲಾ ಒಂದು ವಿಧದಲ್ಲಿ ನಾವೆಲ್ಲರೂ ಎದುರಿಸಿರುತ್ತೇವೆ. ಕೆಲವರಿಗಂತೂ ಇವುಗಳನ್ನು ಅರ್ಥ ಮಾಡಿಕೊಂಡು ನಿಭಾಯಿಸುವುದು ಕಷ್ಟವೆನಿಸುವುದಿಲ್ಲ. ಆದರೆ, ಅನೇಕರಿಗೆ ಇಂತಹ ವಿಷಯಗಳು ಮಾನಸಿಕ ಸವಾಲುಗಳಾಗಿ ಬಿಡುವುದಲ್ಲದೆ ವೈಯಕ್ತಿಕ ಗೊಂದಲ, ಹಿಂಸೆ ಮತ್ತು ಅಸಹಾಯಕತೆ ಹುಟ್ಟಿಸಿಬಿಡುತ್ತವೆ. ಇವುಗಳ ಪರಿಣಾಮವು ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸುವುದಷ್ಟೇ ಅಲ್ಲದೆ ದೈಹಿಕ ಬಾಧೆಗಳಿಗೆ ಜನ್ಮಕೊಡುತ್ತದೆ. ಸಾವು, ನೋವು, ಗುಣಮುಖವಾಗದ ರೋಗಗಳು, ದುರಂತಗಳು ಇರದ ಬದುಕು ಸಾಧ್ಯವೇ ಇಲ್ಲ. ಆದರೂ ಇವುಗಳನ್ನು ಎದುರಿಸುವುದಕ್ಕೆ ಅಗತ್ಯವಾದ ಮಾನಸಿಕ ಶಕ್ತಿ ಮತ್ತು ತಂತ್ರಗಳನ್ನು ಕಂಡುಕೊಳ್ಳುದಿರುವುದು ಸಹ ತೀರ ಸಾಮಾನ್ಯವೇ.

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತುಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

ಸಮಸ್ಯೆಗಳನ್ನು ಎದುರಿಸುವುದಕ್ಕೆ ಬೇಕಾಗಿರುವ ಮುಖ್ಯ ಲಕ್ಷಣವೆಂದರೆ ಆತ್ಮಸ್ಥೈರ್ಯ ಅಥವಾ ಎದೆಗುಂದದೇ ಇರುವುದು. ನಾವುಗಳು ಇತರರ ಸಂಕಷ್ಟಗಳನ್ನು ಕೇಳಿಸಿಕೊಂಡು ಅವರಿರುವ ಸ್ಥಿತಿಯಲ್ಲಿಯೇ ನಾವು ತೂರಿಕೊಂಡು ಬಿಡುವುದರಿಂದ ಸಮಸ್ಯೆಗಳಿಗೆ ಸುಲಭವಾಗಿ ಸಿಗುವ ಪರಿಹಾರ ಮಾರ್ಗವನ್ನು ಗಮನಿಸುವುದಿಲ್ಲ. ಇದಲ್ಲದೆ, ಸಹಾನುಭೂತಿ, ಅನುಕಂಪ ಕೂಡ ನಮ್ಮಲ್ಲಿರುವ ಸಮಸ್ಯಾ ಪರಿಹಾರದ ಸಾಮರ್ಥ್ಯವನ್ನು ಕ್ಷೀಣಿಸಿಬಿಡುತ್ತವೆ. ಸ್ವಾನುಕಂಪದಿಂದ ತಕ್ಷಣದಲ್ಲಿ ಹೊರಬರುವುದನ್ನು ಸಹ ಕಲಿಯದೇ ಇರುವುದು ಸಮಸ್ಯೆಗಳನ್ನು ಮತ್ತಷ್ಟು ಜಟಿಲವೆನ್ನುವಂತೆ ಮಾಡಿಸಿಬಿಡುತ್ತದೆ. ಆದುದರಿಂದ ಸಮಸ್ಯಾತ್ಮಕ ಸನ್ನಿವೇಶಗಳನ್ನು ಎದುರಿಸುವಾಗ ತಕ್ಕಮಟ್ಟಿಗೆಯಾದರೂ ಮಾನಸಿಕ ಸ್ಥೈರ್ಯವನ್ನು ರಕ್ಷಿಸಿಕೊಳ್ಳುವುದು ಅತಿ ಮುಖ್ಯ.

 ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳುವುದು ಹೇಗೆ?

ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳುವುದು ಹೇಗೆ?

ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವ ಒಂದು ವಿಧಾನವೆಂದರೆ, ಆತ್ಮಾವಲೋಕನ ಮತ್ತು ಸಮಯಪ್ರಜ್ಞೆ. ಅಂದರೆ, ಸನ್ನಿವೇಶದ ಪೂರ್ಣವಲೋಕನಕ್ಕೆ ಹೆಚ್ಚು ಮಹತ್ವ ಕೊಡುವುದನ್ನು ಕಲಿಯಬೇಕಾಗುತ್ತದೆ. ಇತರರ ಭಾವುಕತನಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕಾಗುತ್ತದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ನಿಮ್ಮ ಸಂವೇಗದ ಇತಿಮಿತಿಗಳನ್ನು ಕಂಡುಕೊಂಡಿದ್ದರಂತೂ ಜಟಿಲ ಸನ್ನಿವೇಶಗಳ ಪರಿಣಾಮವು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕಬಳಿಸಲಾರದು. ಈ ವಿಷಯದ ಬಗ್ಗೆ ಮನೋವಿಜ್ಞಾನದ ಸಂಶೋಧನೆಗಳು ಗಟ್ಟಿಯಾದ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತದೆ. ಸ್ವಂತ ಭಾವ, ಭಾವನೆಗಳ ಮೇಲೆ ಹತೋಟಿ ಇರಿಸಿಕೊಳ್ಳಲಾಗದವರು ಇತರರ ಸಣ್ಣಪುಟ್ಟ ಸಮಸ್ಯೆಗಳನ್ನು ಸಹ ನಿರ್ವಹಿಸುವ ಸಾಮರ್ಥ್ಯ ಪಡೆದಿರುವುದಿಲ್ಲ. ಇದಲ್ಲದೆ, ಮಕ್ಕಳು ಬೆಳೆಯುವ ವಾತಾವರಣವು ಸಹ ಅವರ ಭಾವುಕತನದ ಇತಿಮಿತಿಗಳಿಗೆ ಕಾರಣವಾಗಬಲ್ಲದು.

ಮನೆಯ ವಾತಾವರಣದಲ್ಲಿ, ನಗುವುದು, ಅಳುವುದು, ನೋವು, ನಲಿವುಗಳನ್ನು ಯಥಾರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಂತಹ ಪರಿಸರದಲ್ಲಿ ಬೆಳೆಯುವ ಮಕ್ಕಳ ಸಂವೇಗ ಸಾಮರ್ಥ್ಯ ಪರಿಪಕ್ವವಾಗಿರುವುದಿಲ್ಲ.

 ಮಾನಸಿಕ ಸಮಸ್ಯೆಯ ಹಲವು ಮುಖಗಳು

ಮಾನಸಿಕ ಸಮಸ್ಯೆಯ ಹಲವು ಮುಖಗಳು

ಇದಕ್ಕೊಂದು ನಿಜ ಸನ್ನಿವೇಶದ ಉದಾಹರಣೆ ಕೊಡುತ್ತೇನೆ. ನಾನು ನಿದರ್ಶನಕ್ಕೆ ಆಯ್ದುಕೊಂಡಿರುವ ಈ ವ್ಯಕ್ತಿ ಈಗ 50 ವರ್ಷಗಳಾಗಿರಬಹುದು. ಎಳೆತನದ ದಿನಗಳಿಂದಲೂ ಈತನನ್ನು ಬಲ್ಲೆ. ಸಣ್ಣ ವಯಸ್ಸಿನವನಿದ್ದಾಗ ಪ್ರತಿಯೊಂದರ ಬಗ್ಗೆಯೂ ತಕರಾರು. ಊಟ, ತಿಂಡಿ, ಆಟ, ಓದು ಯಾವುದೇ ವಿಷಯವಿರಲಿ ಗೊಂದಲಗಳು ಇದ್ದೇಇರುತ್ತಿದ್ದವು. ಬರೆಯುವಾಗ ಮೈಕೈ ಎಲ್ಲಾ ಶಾಯಿ ಮಾಡಿಕೊಳ್ಳುವುದು, ಪುಸ್ತಕದ ಹಾಳೆಗಳನ್ನು ಮಡಚಿಡುವುದು, ಗೆಳೆಯರೊಂದಿಗೆ ಒರಟಾಗಿ ವರ್ತಿಸುವುದು ಇವರ ಸ್ವಭಾವವಾಗಿತ್ತು. ಅಣ್ಣ ತಮ್ಮಂದಿರೊಂದಿಗೂ ಅಷ್ಟೇ, ಸದಾ ಜಗಳ. ಹಾಗೆಂದ ಮಾತ್ರಕ್ಕೆ ಒಳ್ಳೆಯ ಗುಣಗಳು ಇಲ್ಲವೆಂದೆಲ್ಲ. ಕೆಲವರ ಬಗ್ಗೆ ಕರುಣೆ, ಅಜ್ಜ, ಅಮ್ಮನ ಬಗ್ಗೆ ಅಪಾರ ಅಭಿಮಾನ ಇದ್ದವು. ಇವೆಲ್ಲ ಇದ್ದರೂ ಸಿಟ್ಟು, ದುರಭಿಮಾನದ ಬಗ್ಗೆ ಯಾವ ಹತೋಟಿಯೂ ಇದ್ದಿರಲಿಲ್ಲ.

ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...ಮಾನಸಿಕ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ; ಕಾರುಗಳ ಈ ಉದಾಹರಣೆ ನೋಡಿ...

ಹೀಗೆ ಬೆಳೆದು ಯುವಕನಾದಗಲೂ ಅನಗತ್ಯವೆನ್ನುವಷ್ಟರ ಮಟ್ಟಿಗೆ ಕೆಲವರನ್ನು ನಂಬಿಬಿಡುವುದು, ವಿನಾಕಾರಣ ಆತ್ಮೀಯರನ್ನು ನಿಂದಿಸುವುದು ಅಥವಾ ಅವರಿಂದ ಕಾರಣವಿಲ್ಲದೇ ದೂರ ಸರಿಯುವುದು. ಈಗಂತೂ ದೊಡ್ಡ ಉದ್ದಿಮೆಯೊಂದರ ಮುಖ್ಯಸ್ಥನಾಗಿದ್ದರೂ ಹೆಸರುವಾಸಿಯಾಗಿಲ್ಲ. ಜನರನ್ನು ಕಂಡರೆ ಸಂಶಯ, ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದಿಸುವುದು ಅಸಾಧ್ಯ. ಸಿಬ್ಬಂದಿ ಮುಖ್ಯಸ್ಥರು ಏನಾದರೂ ಸಲಹೆ ನೀಡಿದರೆ ಅದರ ಬಗ್ಗೆ ಸಂದೇಹ, ಇಲ್ಲಸಲ್ಲದ ಊಹೆಗಳು. ಇನ್ನು ಆತನ ಆರೋಗ್ಯದ ಬಗ್ಗೆ ಹೇಳುವುದಾದರೆ ಸದಾ ಶ್ವಾಸಕೋಶದ ಸಮಸ್ಯೆ, ಉಬ್ಬುಸ ಮತ್ತು ಚರ್ಮದ ಅಲರ್ಜಿಗಳು.

 ಬಾಲ್ಯದಲ್ಲೇ ಕಂಡುಬರುತ್ತವೆ ಅಸಹಜ ವರ್ತನೆಗಳು

ಬಾಲ್ಯದಲ್ಲೇ ಕಂಡುಬರುತ್ತವೆ ಅಸಹಜ ವರ್ತನೆಗಳು

ಹೀಗೆ ಈ ವ್ಯಕ್ತಿಯಲ್ಲಿ ಅಸಹಜ ವರ್ತನೆಗಳು ಬಾಲ್ಯದಿಂದಲೇ ಕಾಣಿಸಿಕೊಂಡಿದ್ದವು. ದುರಂತವೆಂದರೆ ಈತನ ಬಗ್ಗೆ ಅವನಾಗಲೀ, ಅವನ ಪೋಷಕರಾಗಲೀ ಅಥವಾ ಶಿಕ್ಷಕರಾಗಲಿ ಗಮನ ಕೊಡಲಿಲ್ಲ. ತತ್ಪರಿಣಾಮ ಅವನ ಸ್ವಭಾವವು ಹಾಗೆಯೇ ಬೆಳೆದು ಹೆಮ್ಮರವಾಗಿ ನಿಂತುಬಿಟ್ಟಿತು. ನಾಲ್ಕು ದಶಕಗಳ ವರ್ತನಾ ಪರಿಯಲ್ಲಿ ಪ್ರಮುಖವಾಗಿ ಇದ್ದೇಇರುವ ಗುಣವೆಂದರೆ ಅತಿಭಾವುಕತನ. ಈ ಅತಿಭಾವುಕತನವೇ ವ್ಯಕ್ತಿಯ ವ್ಯಕ್ತಿತ್ವವನ್ನು ಉತ್ತಮವಾಗಿ ಗೋಚರಿಸದಂತೆ ಮಾಡುತ್ತದಲ್ಲದೆ, ಜೀವನದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಕುಂದಿಸಿತ್ತು.

ಇಂತಹದ್ದೇ ಮತ್ತೊಂದು ಉದಾಹರಣೆಯಲ್ಲಿ, ವ್ಯಕ್ತಿಯ ವಯಸ್ಸು 60. ಬಾಲ್ಯದ ದಿನಗಳಲ್ಲಿ ಮನೆಮಂದಿಯವರಿಂದ ನಿತ್ಯವೂ ಸಣ್ಣಪುಟ್ಟ ಶಿಕ್ಷೆ. ನಿತ್ಯವೂ ದುಃಖ. ಶಾಲೆಯಲ್ಲೂ ಅಷ್ಟೇ ಶಿಕ್ಷಕರಿಂದ ಶಿಕ್ಷೆ ಮತ್ತು ನಿಂದನೆ. ಇವುಗಳಿಗೆ ಕಾರಣವಿತ್ತು ಎನ್ನುವುದು ಬೇರೊಂದು ವಿಷಯ. ಆದರೆ, ಈ ವ್ಯಕ್ತಿಯ ಬಾಲ್ಯದ ದಿನಗಳಂತೂ ಹಿಂಸೆಯಿಂದಲೇ ಕೂಡಿದಂತಹವುಗಳು. ಈಗ, ಈ ವ್ಯಕ್ತಿ ಸುಶಿಕ್ಷತನಾಗಿದ್ದು, ಶ್ರೀಮಂತಿಕೆ ಪಡೆದಿದ್ದಾನೆ. ಆದರೆ, ಅವನು ತೆಗೆದುಕೊಳ್ಳುವ ನಿರ್ಧಾರಗಳು, ಅವನು ಎದುರಿಸುವ ಸಾಮಾನ್ಯ ಸನ್ನಿವೇಶಗಳು ಸಹ ಅವನ ಆತಂಕ, ಕೋಪವನ್ನು ಹೊರತರದೇ ಇರುವುದಿಲ್ಲ. ಪ್ರತಿಯೊಂದರ ಬಗ್ಗೆಯೂ ಸಂಶಯ, ಅಸಡ್ಡೆ. ಅತಿಯಾದ ನೆವಗಳು, ಸುಳ್ಳು. ಹೀಗೆ ಈ ವ್ಯಕ್ತಿಯ ಹೊಂದಾಣಿಕೆಯ ಕ್ರಿಯೆ ಸರಾಗವಾಗಿ ಸಾಗಿದ್ದೇ ಇಲ್ಲ.

English summary
How to handle emotions? Here is some tips given by Psychologist Dr A Sridhar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X