ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾಮಾನ್ಯ ಕ್ರೀಡಾಪಟುಗಳನ್ನೂ ಬಿಟ್ಟಿಲ್ಲಾ ಕೋವಿಡ್‌ ದುರಾಕ್ರಮ!

By ಡಾ. ಎ. ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ಈಗ ಅಂದರೆ ಈಗ, ಕೊವಿಡ್‌ ಅಲೆಯ ರಭಸ ಕಡಿಮೆ ಆಗಿರುವುದರ ಬಗ್ಗೆ ಸುದ್ದಿ. ಇದು ಎಷ್ಟರ ಮಟ್ಟಿಗೆ ಸಿಹಿ ಎಂದು ಹಿಗ್ಗುವಂತಹದ್ದು ಎನ್ನುವುದನ್ನು ಮುಂದಿನ ದಿನಗಳಷ್ಟೇ ತೋರಿಸಬಲ್ಲದು. ಮನುಷ್ಯ ಚಟುವಟಿಕೆಗಳೆಲ್ಲವನ್ನು ಮೊಟಕುಗೊಳಿಸಿದ ಪಾಂಡೆಮಿಕ್‌ ಇದು. ಸಾಮಾನ್ಯರು, ಅಸಾಮಾನ್ಯರು ಎನ್ನುವ ಭೇದವಿಲ್ಲದೆ ಎಲ್ಲರ ಮನಸು ಮತ್ತು ಶರೀರದ ಕ್ರಿಯೆಗಳನ್ನು ಅಲ್ಲಾಡಿಸಿದ ಸಾಂಕ್ರಾಮಿಕ ರೋಗ ಕೋವಿಡ್.‌ ಆರ್ಥಿಕ, ಸಾಮಾಜಿಕ ಚಟುವಟಿಕೆಗಳನ್ನು ಹತ್ತಿಕ್ಕಿ ಮನೋಬಲವನ್ನೇ ಕುಗ್ಗಿಸಿದಂತಹದ್ದನ್ನು ಕಳೆದ ಒಂದೂವರೆ ವರ್ಷಗಳಲ್ಲಿ ಜಗತ್ತು ಅಸಹಾಯಕತೆಯಿಂದ ಅನುಭವಿಸಿದೆ, ವೀಕ್ಷಿಸಿದೆ.

ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮಿಜೋರಾಂ ಪೊಲೀಸರು

ಅದರಲ್ಲಿಯೂ ಕ್ರೀಡಾ ವಲಯ ಮತ್ತು ಮನರಂಜನೆಯ ಜಗತ್ತು ದೊಡ್ಡ ಆಘಾತಕ್ಕೆ ಸಿಕ್ಕಿಕೊಂಡಿತ್ತು ಎನ್ನುವುದರ ಸುಳಿವು ನಿಧಾನವಾಗಿ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಇಂಗ್ಲೆಂಡಿನ ಖ್ಯಾತ ಕ್ರಿಕೆಟ್‌ ಆಟಗಾರ ಮೂವತ್ತರ ಹರೆಯದ ಬೆನ್‌ ಸ್ಟೋಕ್ಸ್‌ ಕ್ರಿಕೆಟ್‌ ಆಟದಿಂದ ತಾತ್ಕಾಲಿಕವಾಗಿ ನಿವೃತ್ತಿ ಪಡೆಯುವುದಾಗಿ ಘೋಷಿಸಿರುವುದು. ಬೆನ್‌ ಮಹಾ ಸಮರ್ಥ ಕ್ರೀಡಾಪಟು ಎನ್ನುವುದು ಕ್ರಿಕೆಟ್‌ ಅಭಿಮಾನಿಗಳಿಗೆ ತಿಳಿದ ಸಂಗತಿ. ಕಳೆದ ಹದಿನೈದು ತಿಂಗಳುಗಳ ಅವಧಿಯಲ್ಲಿ ಕೊವಿಡ್‌ ರೋಗದ ಪರಿಣಾಮ ಆತನ ಮಾನಸಿಕ ಸಾಮರ್ಥ್ಯ ಅತಿಯಾಗಿಯೇ ಕುಗ್ಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಮರ್ಥರ ಮನಸಿಗೂ ಲಗ್ಗೆ

ಸಮರ್ಥರ ಮನಸಿಗೂ ಲಗ್ಗೆ

ಮನಸು ಪುನಶ್ಚೇತನಗೊಳ್ಳುವುದರತ್ತ ಎಲ್ಲಾ ಗಮನ ಹರಿಸುವುದಕ್ಕಾಗಿ ಆಟದಿಂದ ದೂರ ಉಳಿಯುವುದಾಗಿ ತಿಳಿಸಿರುವುದು ಕೊವಿಡ್‌ ಹೇಗೆಲ್ಲಾ ಸಮರ್ಥರ ಮಾನಸಿಕ ಸಾಮರ್ಥ್ಯಗಳಿಗೂ ಲಗ್ಗೆ ಇಟ್ಟಿದೆ ಎನ್ನುವುದು ತಿಳಿದುಬರುತ್ತದೆ. ಬಹುಶಃ ಇಷ್ಟೊಂದು ನೇರವಾಗಿ ಅವರು ಹೇಳಿರುವುದು ವ್ಯಕ್ತಿಯ ಮಾನಸಿಕ ಆರೋಗ್ಯ ಎಲ್ಲಕ್ಕಿಂತಲೂ ಬಹುಮುಖ್ಯ ಎನ್ನುವುದನ್ನು ಒತ್ತಿ ತಿಳಿಸುತ್ತದೆ. ಸಾಮಾನ್ಯವಾಗಿ ಮನಸಿಗೆ ಬೇಸರವಾದಾಗ -ಅಯ್ಯೋ ಪರವಾಗಿಲ್ಲ ಬಿಡಿ, ಕೊಂಚ ಅದುಇದು ಮಾಡಿದ್ರೆ ಮನಸು ಹಗುರವಾಗತ್ತೆ ಎಲ್ಲಾ ಸರಿ ಹೋಗತ್ತೆ, ಕೇವಲ ಮನಸು ಅಲ್ವ? ತನ್ನಷ್ಟಕ್ಕೆ ತಾನೇ ಸರಿ ಹೋಗತ್ತೆ ಬಿಡಿ- ಎನ್ನುವ ಮಾತುಗಳು ನಮ್ಮಲ್ಲಿ ತೀರಾ ಸಾಮಾನ್ಯ. ಆದರೆ, ಅಷ್ಟೊಂದು ಲಘುವಾಗಿ ನಿವಾರಣೆಯಾಗಿ ಬಿಡುವುದು ಮನಸಿನ ತೊಂದರೆಗಳು ಎನ್ನುವುದನ್ನು ನಾವಿನ್ನೂ ಒಪ್ಪಿಕೊಂಡಂತಿಲ್ಲ.
ಇಲ್ಲಿ ಮುಖ್ಯವಾಗಿ ಗಮನಿಸಿದ ಬೇಕಾದ ಅಂಶವೆಂದರೆ, ಹೆಸರಾಂತ ಕಲಾವಿದರು, ಚಿತ್ರತಾರೆಯರು, ಕ್ರೀಡಾಪಟುಗಳು, ತಮ್ಮ ದೇಹ ಮತ್ತು ಮನಸಿನ ಕೌಶಲ್ಯಗಳಿಗೆ ಸರಿಸಾಟಿಯೇ ಇಲ್ಲಾ ಎನ್ನುವಂತಹವವರೂ ಕೂಡ, ಮನಸಿನ ಎಲ್ಲಾ ಕ್ರಿಯೆ, ಕ್ಲೇಶಗಳನ್ನು ಸದಾಕಾಲ ಪ್ರಖ್ಯಾತಿ, ಸಾಮಾಜಿಕ ಪ್ರತಿಷ್ಠೆಗಳ ಮೂಲಕ ಎದುರಿಸಬಹುದು, ನಿವಾರಿಸಿಕೊಳ್ಳಬಹುದು ಎನ್ನುವುದೊಂದು ಹುಸಿಗನಸಷ್ಟೇ ಎಂದು ತೋರಿಸಿದೆ ಕೊವಿಡ್‌ ವೈರಾಣುಗಳ ಆಟ. ದೇಹದ ಕೋಶಗಳ ಮೇಲೆ ಲಗ್ಗೆ ಇಡುವ ಈ ರೋಗವು ಮನಸಿನ ಮೇಲೇಕೆ ಪರಿಣಾಮ ಬೀರಬೇಕು, ಬೀರಬಲ್ಲದು ಎನ್ನುವುದು ಅನೇಕರ ಮನಸಿನಲ್ಲಿರುವ ಪ್ರಶ್ನೆ. ಅಂದರೆ, ಮಾನಸಿಕ ಸ್ಥಿಮಿತವನ್ನು ಕದಲಿಸುವ ಶಕ್ತಿ ಯಾವುದು? ಅದು ರೋಗದಿಂದ ಬಂದಿರುವಂತಹದ್ದೇ ಎನ್ನುವುದನ್ನು ವಿವರಿಸುವುದು ಕಷ್ಟವೇನಲ್ಲಾ. ಏಕೆಂದರೆ ಸಾಂಕ್ರಾಮಿಕ ರೋಗವು ಸಾಮಾಜಿಕ ಮನಸಿನ ಮೇಲೆ ಪರಿಣಾಮ ಬೀರುತ್ತದೆ.

ತಿಂಗಳುಗಟ್ಟಲೆ ಸಂಕಟ, ಸಂತಾಪ

ತಿಂಗಳುಗಟ್ಟಲೆ ಸಂಕಟ, ಸಂತಾಪ

ನಮ್ಮ ಸುತ್ತಮುತ್ತಲ ಜನರು ಸಂಕಟದಿಂದ ನರಳುವುದನ್ನು ತಿಂಗಳಾನುಗಟ್ಟಲೆ ಸಹಿಸಿಕೊಂಡು, ಸಂಕಟ, ಸಂತಾಪ, ಸಹಾನೂಭೂತಿಗಳ ಮೂಲಕವಷ್ಟೇ ಹೊಂದಾಣಿಕೆಯನ್ನು ಸಾಧಿಸುವಂತಹ ಮನಸು ಮನುಕುಲದ ಮಿದುಳಿಗೆ ಸಾಮಾನ್ಯವಾಗಿ ಅಂಟಿಬಂದಿರುವುದಿಲ್ಲ. ಹೀಗಾಗಿ, ಇತರರ ನೋವು, ನಲಿವಿನೊಂದಿಗೆ ಮನಸು ಚಲಿಸುತ್ತಲೇ ಇರುವುದು. ಮನರಂಜನೆ ಎನ್ನುವಂತಹದ್ದು ಮನಸಿಗೆ ಕೇವಲ, ಹಿತ, ತೃಪ್ತಿ ಕೊಡುವುದಷ್ಟೇ ಅಲ್ಲ ಅದು ಸತತವಾಗಿ ಮಾನಸಿಕ ಸಾಮರ್ಥ್ಯ, ಆರೋಗ್ಯವನ್ನೂ ಹೆಚ್ಚಿಸುವ ಗುಣ ಹೊಂದಿರುತ್ತದೆ. ಈ ಕಾರಣದಿಂದ ಕೇವಲ ಹತ್ತಾರು ಆಟಗಾರರಾಡುವ ಕ್ರೀಡೆಗಳನ್ನು ಕೋಟ್ಯಾನುಕೋಟಿ ಹಣಕೊಟ್ಟು ವೀಕ್ಷಿಸಲು ಅಪೇಕ್ಷಿಸುತ್ತಾರೆ. ಇಂತಹ ವೀಕ್ಷಕರ ಹರ್ಷೋದ್ಗಾರಗಳು, ಟೀಕೆ, ಆರಾಧನೆಗಳು ಕ್ರಿಡಾಪಟುಗಳ ಸಾಮರ್ಥ್ಯ, ಕೌಶಲ್ಯಗಳನ್ನು ಅಸಾಮಾನ್ಯವೆನ್ನುವಂತಹ ಮಟ್ಟಕ್ಕೆ ಏರಿಸುತ್ತದೆ. ಇವುಗಳನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳುವ ವಿಧಾನಗಳಲ್ಲಿ ಮೈಮನಗಳನ್ನು ತೊಡಗಿಸಿಕೊಳ್ಳುವ ಪ್ರಯತ್ನ ಎಡಬಿಡದೇ ಮಾಡುತ್ತಾರೆ ಕ್ರೀಡಾಪಟುಗಳು. ಕೋವಿಡ್‌ ಇಂತಹದೊಂದು ಅವಕಾಶವನ್ನೇ ಕಸಿದುಕೊಂಡಿದೆ. ಅದೂ ಕೂಡ ಹತ್ತಾರು ತಿಂಗಳುಗಳಷ್ಟು. ಜನಸಮೂಹಕ್ಕೆ ತಮ್ಮ ಸಾಮರ್ಥ್ಯದ ಪ್ರದರ್ಶನವಿಲ್ಲ, ಮೆಚ್ಚುಗೆ, ಮೂದಲಿಕೆಗಳಲ್ಲಿದ್ದಾಗ ಮನಸು ಬಳಲುತ್ತದೆ. ಇದು ಕೇವಲ ಸಾಮಾನ್ಯ ರೀತಿಯದ್ದಾಗಿರದೆ ಆಲೋಚನೆ, ಅನಿಸಿಕೆ, ಹೊಂದಾಣಿಕೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

ಉಲ್ಲಾಸ, ಉತ್ಸಾಹಗಳೇ ಟಾನಿಕ್

ಉಲ್ಲಾಸ, ಉತ್ಸಾಹಗಳೇ ಟಾನಿಕ್

ಉಲ್ಲಾಸ, ಉತ್ಸಾಹಗಳೇ ಅಭ್ಯಾಸವಾಗಿದ್ದ ಮನಸಿಗೆ ಪ್ರತಿಯೊಂದು ಕ್ರಿಯೆ, ಅದು ದಿನನಿತ್ಯದ ಅಭ್ಯಾಸವೇ ಆಗಿರಲಿ, ವಿಶೇಷವಾದ ಅಭ್ಯಾಸವೇ ಆಗಿರಲಿ ಸರಾಗವಾಗಿ ಸಾಗುವುದಿಲ್ಲ. ಹೀಗೆ ಸರಾಗವಾಗದಿದ್ದಾಗ, ದಿಗಿಲು, ಭಯದ ಮಟ್ಟ ವಿಪರೀತವಾಗಿ ಏರುತ್ತದೆ. ಎಲ್ಲಿಯತನಕ ಎಂದರೇ ದಿಕ್ಕೇ ತೋಚದ ರೀತಿಯಲ್ಲಿ. ಇಂತಹ ಸಮಯದಲ್ಲಿ ಇಲ್ಲಸಲ್ಲದ ಕೋಪ,ತಾಪ, ಅಸಹಾಯಕತೆ, ಆತಂಕಗಳು ಕಾಡುವುದು ಅಷ್ಟಿಷ್ಟಲ್ಲ. ಈ ಸ್ಥಿತಿಯಲ್ಲಿ ಇದ್ದೀವಿ ಎನ್ನುವುದೂ ಸಹ ತಿಳಿಯುವುದಿಲ್ಲ. ಮದ್ಯ, ಮಾದಕ ವಸ್ತುಗಳು, ನಿದ್ರೆ ತರುವಂತಹ ಮಾತ್ರೆಗಳ ಮೂಲಕ ಆರಾಮ ಪಡೆಯುವ ಪ್ರಯತ್ನವು ನಡೆಯತ್ತದೆ, ಆದರೆ ಯಶಸ್ವಿಯಾಗಿಲ್ಲವೆನ್ನುವ ಅರಿವು ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಎಷ್ಟೋಸಲ ಭ್ರಮೆ, ಭೀತಿಗಳಿಗೂ ತುತ್ತಾಗುವ ಸಾಧ್ಯತೆಗಳು ಇರುತ್ತದೆ. ಹೀಗಾಗಿ, ಮನಸಿನ ಹತೋಟಿ ತಪ್ಪಿ, ಹಿತಚಿಂತಕರು, ಆತಿಆಪ್ತರು ಸಹ ಅರ್ಥಮಾಡಿಕೊಳ್ಳದಂತಹ ಮನದ ರೀತಿ,ವರ್ತನೆಗಳು ಪ್ರಬಲವಾಗಿರುತ್ತವೆ.

ಅಭ್ಯಾಸ ಮಾಡಿಕೊಳ್ಳುವ ಅಗತ್ಯ ಇದೆ

ಅಭ್ಯಾಸ ಮಾಡಿಕೊಳ್ಳುವ ಅಗತ್ಯ ಇದೆ

ಒಟ್ಟಿನಲ್ಲಿ ನಿಜ, ಸಹಜ ಜಗತ್ತಿನೊಂದಿಗೆ ಸರಾಗವಾಗಿ ಹೊಂದಿಕೊಳ್ಳುವುದು ಕಷ್ಟವಾಗಿದೆ ಎನ್ನುವದು ಇತರರಿಗೂ ತಿಳಿಯುವಷ್ಟು ತೀವ್ರವಾಗಿರುತ್ತದೆ. ಇವೆಲ್ಲವೂ ಕೊವಿಡ್‌ ಸಾಂಕ್ರಾಮಿಕತೆಯಿಂದ ಹುಟ್ಟಿದಂತಹ ಸಾಮಾಜಿಕ ಪರಿಸ್ಥಿತಿಯ ಪರಿಣಾಮ ಎಂದು ಒಂದು ರೀತಿಯಲ್ಲಿ ಹೇಳಬಹುದು. ಆದರೂ ಇಂತಹದೊಂದು ಕಠಿಣ ಪರಿಸ್ಥಿತಿ ಎದುರಾಗಬಹುದು ಎನ್ನುವುದರ ಮುನ್ಸೂಚನೆ ಮತ್ತು ಅದನ್ನು ಎದುರಿಸಬಲ್ಲ ಮನೋಬಲಗಳನ್ನು ಮೊದಲಿನಿಂದಲೇ ಅಭ್ಯಾಸ ಮಾಡಿಕೊಳ್ಳುವ ಅಗತ್ಯ ಇದೆ ಎನ್ನುವುದನ್ನಿಲ್ಲಿ ಗಮನಿಸಬೇಕು. ಕ್ರೀಡಾ ಪಟುಗಳು, ನಟನಟಿಯರೂ ಸಹ ಮಾನಸಿಕ ಶಕ್ತಿಗಳ ಉಳಿಕೆ ಮತ್ತು ಉನ್ನತ್ತಿಯತ್ತ ಹೆಚ್ಚು ಗಮನ ಹರಿಸುವದನ್ನು ಮರೆಯಬಾರದು. ವ್ಯಕ್ತಿತ್ವದ ಲಕ್ಷಣಗಳು, ವಿಲಕ್ಷಣಗಳು, ಕೊಪತಾಪಗಳು,ಆಸೆ, ದುರಾಸೆಗಳತ್ತ ತಕ್ಷಣದಲ್ಲಿ ಅಥವಾ ಸದಾಕಾಲ ಗಮನ ಹರಿಸುವುದು ಸುಲಭವಲ್ಲ. ಹೀಗಾಗಿ ಮನೋತಜ್ಞರ ನೆರವು, ಸಲಹೆ, ಅಗತ್ಯವಿದ್ದಲ್ಲಿ ಚಿಕಿತ್ಸೆಗಳು ಖಂಡಿತವಾಗಿಯೂ ಬೇಕು. ತೀರಾ ಕಷ್ಟದ ಸೂಕ್ಷ್ಮ ಮನಸಿನ ಸ್ಥಿತಿಗಳನ್ನು ಎದುರಿಸುವುದಕ್ಕೆ ಇವೇ ನೆರವಿಗೆ ಬರುವುದು. ಮನದಾಳದ ಭಾವಗಳ ಹರಿವನ್ನು ಕೇವಲ ಕುಂಡಲಿ, ಜಾತಕ, ಮಾಯಮಂತ್ರಗಳು ತೋರಿಸುವುದಿಲ್ಲ. ಇದನ್ನು ತಿಳಿಯಲು ಮನೋತಜ್ಞರೊಂದಿಗೆ ಸದಾ ಸಂಪರ್ಕ ಬೇಕು. ಇದನ್ನೇ ಕೊವಿಡ್‌ ವೈರಾಣುಗಳು ಅತಿ ಸ್ಪಷ್ಟವಾಗಿ, ಖ್ಯಾತ ಕ್ರಿಡಾಪಟುಗಳು, ಚಲನಚಿತ್ರ ಕಲಾವಿದರು, ಪ್ರತಿಭಾನ್ವಿತರಲ್ಲಿಯೂ ಅಸಾಹಯಕತೆಯನ್ನು ಉಂಟುಮಾಡುವುದರ ಮೂಲಕ ತೋರಿಸಿಕೊಟ್ಟಿದೆ.

ಡಾ. ಎ. ಶ್ರೀಧರ, ಮನೋವಿಜ್ಞಾನಿ

English summary
Covid 19 Abduction not left even the strongest athletes, says psychologist Dr A Shreedhar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X