keyboard_backspace

ಗೃಹ ಸಚಿವರ ಗಮನಕ್ಕೆ: ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಡವರಿಗೆ ನ್ಯಾಯ ಕೊಡಿಸುವುದು ನಿಮ್ಮದೇ ಹೊಣೆಗಾರಿಕೆ!

Google Oneindia Kannada News

ಬೆಂಗಳೂರು, ಆ. 21 : ಶ್ರೀಮಂತಿಕೆಯ ಆಸೆ ತೋರಿಸಿ ಕರ್ನಾಟಕದಲ್ಲಿ ಬಡವರ ರಕ್ತ ಹೀರಿ ಬೀದಿಗೆ ಹಾಕಿರುವ "ಹಲಾಲ್' ಪ್ರಕರಣಗಳು ಒಂದೆರಡಲ್ಲ. ಹಾಕಿರುವ ಹಣ ಬರಬಹುದೆಂದು ಆಕಾಶ ಎದರು ನೋಡುತ್ತಿದ್ದಾರೆ.

ಹಣ ದ್ವಿಗುಣ ಗೊಳಿಸುವ ಆಸೆ ಹುಟ್ಟಿಸಿ ಜನರಿಂದ ವಂಚನೆ ಮಾಡಿದ ದೋಖಾ ಪ್ರಕರಣಗಳನ್ನು ಕರ್ನಾಟಕ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ನ್ಯಾಯದಾನ ಮಾಡಿದ್ದಾರಾ ? ಈ ಪ್ರಶ್ನೆಗೆ ಸಿಗುವ ಉತ್ತರ ಖಂಡಿತವಾಗಿಯೂ ಇಲ್ಲ.

ಹೂಡಿಕೆ ಮಾಡಿರುವ ಹಣ ಇವತ್ತು ಬರಬಹುದು, ನಾಳೆ ಬರಬಹುದು ಎಂದು ಆಸೆ ಗಣ್ಣಿನಿಂದ ಲಕ್ಷಾಂತರ ಮಂದಿ ಎದರು ನೋಡುತ್ತಿದ್ದಾರೆ. ಕಳೆದ ಹದಿನೈದು ವರ್ಷದಿಂದ ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಸಾವಿರಾರು ಕೋಟಿ ರೂ. ಮೌಲ್ಯದ 45 ದೋಖಾ ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವ ಲಕ್ಷಾಂತರ ಹೂಡಿಕೆದಾರರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

36 ಕೋಟಿ ರೂ. ಮೌಲ್ಯದ ಚಿನ್ನಾಭರಣ ರೀಕವರಿ ಮಾಲು ನೋಡಿ ಪೊಲೀಸ್ ಇಲಾಖೆ ಬಗ್ಗೆ ಫಿದಾ ಅಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನಿಜವಾಗಿಯೂ ನೊಂದ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಮಾಣಿಕ ಹೆಜ್ಜೆ ಇಡುತ್ತಾರಾ ?

ರಿಕವರಿ ಪೆರೇಡ್ ಸಾಕು: ಅಸಲಿ ನ್ಯಾಯ ಬೇಕು

ರಿಕವರಿ ಪೆರೇಡ್ ಸಾಕು: ಅಸಲಿ ನ್ಯಾಯ ಬೇಕು

ಇತ್ತೀಚೆಗೆ ಬೆಂಗಳೂರು ಪೊಲೀಸರು ಏರ್ಪಡಿಸಿದ್ದ ಪ್ರಾಪರ್ಟಿ ಪೆರೇಡ್ ನೋಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪರಮಾನಂದ ಪಟ್ಟಿದ್ದರು. ಅವರ ಭಾಷೆಯಲ್ಲಿ ಹೇಳುವುದಾದರೆ, ಪೊಲೀಸರ ತನಿಖೆ ಬಗ್ಗೆ ನಾನು ಸಿನಿಮಾದಲ್ಲಿ ನೋಡುತ್ತಿದ್ದೆ. ಇಷ್ಟೊಂದು ಚಿನ್ನಾಭರಣ ಪತ್ತೆ ಮಾಡಿದ್ದಾರೆ. ಅದ್ಯಾವುದೋ ಅಂಬರ್ ಗ್ರೀಸ್ ಜಾಲ. ಈವರೆಗೂ ನನಗೆ ಗೊತ್ತೇ ಇರಲಿಲ್ಲ. ಆ ಜಾಲವನ್ನು ಪತ್ತೆ ಮಾಡಿದ್ದಾರೆ. ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಶಹಬ್ಬಾಸ್ ಗಿರಿ ಕೊಟ್ಟರು. ಸುಮಾರು ನಾನೂರಕ್ಕೂ ಹೆಚ್ಚು ಪೊಲೀಸರಿಗೆ ಬಹುಮಾನ ನೀಡಿದ ಗೃಹ ಸಚಿವರು ಪುಳಕಿತರಾಗಿದ್ದರು. ತೀರಾ ಪ್ರಾಮಾಣಿಕತೆ ಹಿನ್ನೆಲೆ ಹೊಂದಿರುವ, ಭ್ರಷ್ಟಾಚಾರ ಸಹಿಸಲ್ಲ ಎಂದು ಸಂದೇಶ ರವಾನಿಸಿದ್ದ ಗೃಹ ಸಚಿವರಿಗೆ "ಪೊಲೀಸರ ಕಾರ್ಯಶೈಲಿ" ತೋರಿಸಬೇಕಿತ್ತು. ಅದೆಲ್ಲವೂ ಆಯಿತು.

ವಾಸ್ತವ ಚಿತ್ರಣ ಅರಿವು ಯಾವಾಗ ?

ವಾಸ್ತವ ಚಿತ್ರಣ ಅರಿವು ಯಾವಾಗ ?

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಡವರಿಗೆ ಹಣದಾಸೆ ತೋರಿಸಿ ಹೂಡಿಕೆ ಮಾಡಿಸಿಕೊಂಡು ನಾಮ ಹಾಕಿರುವ ಪ್ರಕರಣಗಳ ಹಿನ್ನೆಲೆ ಅರ್ಥ ಮಾಡಿಕೊಂಡರೇ ಪೊಲೀಸ್ ವ್ಯವಸ್ಥೆ ಬಗ್ಗೆ ಬೇಸರ ಮೂಡುತ್ತದೆ. ಒಬ್ಬ ಆರೋಪಿಯನ್ನು ಹಿಡಿಯಲು ತಂಡಗಳನ್ನೇ ರಚಿಸುವ ಪೊಲೀಸರು ಈ ವಂಚಕ ಜಾಲಗಳಿಗೆ ಬಲಿಯಾದ ಲಕ್ಷ ಲಕ್ಷ ಮಂದಿ ಚಾತಕ ಪಕ್ಷಿಗಳಂತೆ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಹೂಡಿಕೆ ಮಾಡಿರುವ ಹಣದಲ್ಲಿ ಕನಿಷ್ಠ ಅರ್ಧವಾದರೂ ಕೈಗೆ ಸಿಗಲಿ ಎಂದು ವರ್ಷಗಳಿಂದಲೂ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಹದಿನೈದು ವರ್ಷದಿಂದಲೂ ದಾಖಲಾಗಿರುವ ವಂಚಕ ಪ್ರಕರಣಗಳಲ್ಲಿ ವಂಚನೆಗೆ ಒಳಗಾದವರಿಗೆ ಪ್ರಾಮಾಣಿಕವಾಗಿ ನ್ಯಾಯ ಸಿಕ್ಕಿಲ್ಲ. ಎಷ್ಟೋ ವರ್ಷಗಳಿಂದಲೂ ಜನರು ಪೊಲೀಸರ ಮೇಲೆ ಭರವಸೆ ಇಟ್ಟು ಕಾಯುತ್ತಿದ್ದಾರೆ. ಹಣ ಕಳೆದುಕೊಂಡವರು ಮರಳಿ ಪಡೆದಿದ್ದೇ ಅಪರೂಪ. ಸುಮಾರು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಅನೇಕ ಪ್ರಕರಣಗಳನ್ನು ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ಪ್ರಕರಣಗಳ ತನಿಖೆ ಮುಗಿದು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇವೆ. ಈಗಲಾದರೂ ಗೃಹ ಸಚಿವರು ಹಲಾಲ್ ಸ್ಕೀಮ್ ನಲ್ಲಿ ಹಣ ಕಳೆದುಕೊಂಡ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡಿ ನ್ಯಾಯ ಕೊಡಿಸಬಲ್ಲರೇ ಎಂಬ ಪ್ರಶ್ನೆ ಎದ್ದಿದೆ.

ವಂಚಕ ಪ್ರಕರಣಗಳ ಇತಿಹಾಸ

ವಂಚಕ ಪ್ರಕರಣಗಳ ಇತಿಹಾಸ

ರಾಜ್ಯದಲ್ಲಿ 2004 ರಿಂದ ಈಚೆಗೆ ಸುಮಾರು 45 ಕ್ಕೂ ಹೆಚ್ಚು ಗಂಭೀರ ಸ್ವರೂಪದ ಹಣ ದ್ವಿಗುಣಗೊಳಿಸುವ ಆಸೆ ಮೂಡಿಸಿ ವಂಚನೆ ಮಾಡಿರುವ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಲಕ್ಷಾಂತರ ಮಂದಿಗೆ ವಂಚನೆ ಮಾಡಿದ ಪ್ರಕರಣಗಳು. ಇನ್ನು ನೂರಾರು ಮಂದಿಗೆ ವಂಚನೆ ಮಾಡಿದ ಪ್ರಕರಣಗಳು ಲೆಕ್ಕವೇ ಇಲ್ಲ. ಬಹುತೇಕ ಪ್ರಕರಣಗಳು ಬೆಳಕಿಗೆ ಬಂದಿರುವುದು ಬೆಂಗಳೂರಿನಲ್ಲಿಯೇ. ಸುಮಾರು ಪ್ರಕರಣಗಳನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಳಿದ ಪ್ರಕರಣಗಳನ್ನು ಬೆಂಗಳೂರು ಪೊಲೀಸರು, ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲವು ಪ್ರಕರಣಗಳ ತನಿಖೆ ಪೂರ್ಣಗೊಂಡು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ಇಡಿ ದಾಳಿ ಆಗಿದೆ. ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮೋಸ ಹೋದ ಹೂಡಿಕೆದಾರರಿಗೆ ಕನಿಷ್ಠ ಅರ್ಧದಷ್ಟು ಹಣ ಕೊಡುವ ಅವಕಾಶ ವಿದ್ದರೂ ಒಬ್ಬ ಹೂಡಿಕೆದಾರನೂ ಪರಿಹಾರ ಪಡೆದ ನಿದರ್ಶನಗಳೇ ಇಲ್ಲ. ಜನರು ಪೊಲೀಸರನ್ನು ಗಟ್ಟಿಯಾಗಿ ಕೇಳುವ ಧ್ವನಿಯಿಲ್ಲ. ಕೇಳಿದರೆ , ನಮಗೆ ಹೇಳಿ ಹೂಡಿಕೆ ಮಾಡಿದ್ದರೇ ? ಜಾಸ್ತಿ

ವಿನಿವಿಂಕ್ ಶಾಸ್ತ್ರಿಯಿಂದ ಆರಂಭ

ವಿನಿವಿಂಕ್ ಶಾಸ್ತ್ರಿಯಿಂದ ಆರಂಭ

ಐಎಂಎ ತನಕ : ರಾಜ್ಯದ ಬಡ ಜನರಿಗೆ ಹಣದಾಸೆ ಹುಟ್ಟಿಸಿ ವಂಚನೆ ಮಾಡಿದ ವಂಚಕರ ಪಟ್ಟಿ ದೊಡ್ಡದಿದೆ. ಹಣ ಡಬಲ್ ಮಾಡುವುದಾಗಿ ಆಸೆ ಹುಟ್ಟಿಸಿ ವಿನಿವಿಂಕ್ ಕಂಪನಿ ಟೋಪಿ ಹಾಕಿದ್ದು ಬರೋಬ್ಬರಿ 20 ಸಾವಿರ ಜಜನರಿಗೆ ಸುಮಾರು 203 ಕೋಟಿ ರೂ. ಈ ಕುರಿತು ನಾಲ್ಕು ವರ್ಷ ತನಿಖೆ ಮಾಡಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸುಮಾರು 85 ಕೋಟಿ ಮೊತ್ತದ ವಿನಿವಿಂಕ್ ಶಾಸ್ತ್ರಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಆದರೆ ಹೂಡಿಕೆ ಮಾಡಿದವರ ಪೈಕಿ ಒಬ್ಬರಿಗೂ ಇನ್ನೂ ನಯಾಪೈಸೆ ಕಾಸು ಸಿಕ್ಕಿಲ್ಲ. ಇನ್ನೂ 2013 ರಿಂದ 2016 ರ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 18 ಲಕ್ಷ ಮಂದಿ 5200 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಇನ್ನೂ ಇತ್ತೀಚೆಗೆ ಬೆಳಕಿಗೆ ಬಂದ ಐಎಂಎ, ಕಣ್ವ ಮಾರ್ಕೆಂಟಿಂಗ್, ಗುರು ರಾಘವೇಂದ್ರ ಹೌಸಿಂಗ್ ಸೊಸೈಟಿ ವಂಚನೆ ಪ್ರಕರಣ, ಗ್ರೀನ್ ಬಡ್ಸ್ ,ಅಂಬಿಡೆಂಟ್, ರಾಯಲ್ ಹಾಲಿಡೇಸ್, ಅಜ್ಮೀರಾ ಗ್ರೂಫ್, ವಿಕ್ರಂ ಇನ್ವೆಸ್ಟ್ ಮೆಂಡ್ ಪ್ರಕರಣಗಳ ಮೊತ್ತ ಸೇರಿಸಿದರೆ 20 ಸಾವಿರ ಕೋಟಿ ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ.

ಬಡವರಿಗೆ ನ್ಯಾಯ ಒದಗಿಸುವ ಪರಿಹಾರ ಮಾರ್ಗ

ಬಡವರಿಗೆ ನ್ಯಾಯ ಒದಗಿಸುವ ಪರಿಹಾರ ಮಾರ್ಗ

ಗೃಹ ಸಚಿವರು ಈಗಲೂ ಮನಸು ಮಾಡಿದರೆ ಮೋಸಹೋದವರ ಅದಾಲತ್ ನಡೆಸುವಷ್ಟು ಪ್ರಕರಣಗಳಲ್ಲಿ ಜನರಿಗೆ ನ್ಯಾಯ ಕೊಡಲು ಅವಕಾಶವಿದೆ. ಹಲಾಲ್ ಸ್ಕೀಮ್ ತನಿಖಾ ಪಟ್ಟಿಯನ್ನು ಗೃಹ ಸಚಿವರು ತರಿಸಿಕೊಂಡು ಮೊದಲು ಅವುಗಳ ತನಿಖಾ ಹಂತವನ್ನು ತಳಿದುಕೊಳ್ಳಬೇಕು. ಒಂದು ಅಪರಾಧ ಪ್ರಕರಣ ಬೆನ್ನಟ್ಟಲು ನೂರು ಪೊಲೀಸರ ಶ್ರಮ ಹಾಕುವ ಬದಲಿಗೆ ಜನ ಸಾಮಾನ್ಯರ ರಕ್ತ ಬಸಿದು ದುಡಿದಿರುವ ಹಣವನ್ನು ವಾಪಸು ಕೊಡಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲೇಬೇಕಿದೆ. ರಾಜ್ಯದಲ್ಲಿ ಹಣ ದ್ವಿಗುಣಗೊಳಿಸುವ ಆಸೆ ಮೂಡಿಸಿ ವಂಚಿಸಿರುವ ವಂಚನೆ ಪ್ರಕರಣಗಳ ಪಟ್ಟಿ ತರಿಸಿಕೊಂಡು ಮೊದಲು ಅಧ್ಯಯನ ಮಾಡಿಸಲಿ. ಈ ವಂಚಕ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ಹಣವನ್ನು ಹೂಡಿಕೆದಾರರಿಗೆ ಪಾವತಿ ಮಾಡಲು ಇರುವ ತೊಡಕಗಳನ್ನು , ಕಾನೂನು ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲದಕ್ಕೂ ಕಾಲಮಿತಿಯನ್ನು ಈ ಕೂಡಲೇ ನಿಗದಿ ಮಾಡಿ ದಿನಾಂಕ ಈ ದಿನದೊಳಗೆ ಬಡವರ ಹಣ ಅವರ ಖಾತೆಗಳಿಗೆ ಹಾಕಿಸಲು ಮೊದಲ ಆದ್ಯತೆ ನೀಡಬೇಕು. ಐಎಂಎ, ರಾಯಲ್ ಹಾಲಿಡೇಸ್, ಕಣ್ವಾ ಮಾರ್ಕೆಂಟಿಂಗ್, ಅಜ್ಮೀರಾ ಗ್ರೂಫ್ ವಿಕ್ರಮ್ ಇನ್ವೆಸ್ಟ್ ಮೆಂಟ್, ವಿನಿವಿಂಕ್ ವಂಚನೆ, ಅಗ್ರಿಗೋಲ್ಡ್ ಮತ್ತಿತರ ಪ್ರಕರಣಗಳಲ್ಲಿ ವಂಚಕರಿಂದ ಜಪ್ತಿ ಮಾಡಿಕೊಂಡಿರುವ ಹಣವನ್ನು ತುರ್ತು ಜನರಿಗೆ ಪಾವತಿ ಮಾಡುವ ನಿಟ್ಟಿನಲ್ಲಿ ಗೃಹ ಸಚಿವರು ಕ್ರಮ ಜರುಗಿಸಬೇಕಿದೆ.

ಪೋಂಜಿ ಸ್ಕೀಮ್ ಗಳ ಬಗ್ಗೆ ಆಸಕ್ತಿ ಕಡಿಮೆ ಯಾಕೆ?

ಪೋಂಜಿ ಸ್ಕೀಮ್ ಗಳ ಬಗ್ಗೆ ಆಸಕ್ತಿ ಕಡಿಮೆ ಯಾಕೆ?

ಸಾವಿರಾರು ಜನರು ಮೋಸ ಹೋಗಿರುವ ಕಾರಣ ತನಿಖೆ ತಡವಾಗಬಹುದು ನಿಜ. ಅದಕ್ಕೆ ಕಾರಣ ಕೂಡ ಪೊಲೀಸರೇ ? ಒಂದು ಅಪರಾಧ ಕೃತ್ಯವಾದರೆ ( ಬೊಮ್ಮನಹಳ್ಳಿ ಸತೀಶ್ ರೆಡ್ಡಿಗೆ ಬೆಂಕಿ ಇಟ್ಟ ಪ್ರಕರಣ) ಸಮಾರು ಐವತ್ತು ಪೊಲೀಸ್ ಸಿಬ್ಬಂದಿ ಇರುವ ಐದು ತಂಡಗಳನ್ನು ರಚನೆ ಮಾಡಿ ತನಿಖೆ ಮಾಡಿಸಲಾಗುತ್ತದೆ. ಆದರೆ, ಐಎಂಎ, ಕಣ್ವ, ಅಜ್ಮೀರಾ, ರಾಘವೇಂದ್ರ ಕೋ ಆಪರೇಟೀವ್ ಪ್ರಕರಣಗಳ ತನಿಖಾಧಿಕಾರಿಗಳ ಪಟ್ಟಿ ನೋಡಿದರೆ, ಒಬ್ಬ ಅಥವಾ ಇಬ್ಬರು ಪೊಲೀಸ್ ಅಧಿಕಾರಿಗಳ ಕೊರಳಿಗೆ ಕಟ್ಟಿ ತನಿಖೆ ವಹಿಸಲಾಗುತ್ತದೆ.

ಸಹಾಯಕ ಸಿಬ್ಬಂದಿಯನ್ನೂ ಸಹ ಕೊಡುವುದಿಲ್ಲ. ಹೀಗಾಗಿ ಆಮೆ ವೇಗಕ್ಕಿಂತಲೂ ಮಂದ ಗತಿಯಲ್ಲಿ ತನಿಖೆ ಸಾಗುತ್ತದೆ. ಲಕ್ಷಾಂತರ ಮಂದಿ ಮೋಸ ಹೋಗಿರುವ ಪ್ರಕರಣಗಳಲ್ಲಿ ಯಾಕೆ ಸಮರ್ಥ ಪೊಲೀಸ್ ಅಧಿಕಾರಿಗಳನ್ನು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ತನಿಖೆ ಮಾಡಿಸುವುದಿಲ್ಲ ಎಂಬುದಕ್ಕೆ ಪೊಲೀಸ್ ಮಹಾ ನಿರ್ದೇಶಕರೇ ಉತ್ತರ ಕೊಡಬೇಕು. ಇನ್ನು ತನಿಖಾ ಹಂತದಲ್ಲಿ ಈ ಪ್ರಕರಣಗಳ ಸಹವಾಸವೇ ಬೇಡ ಎಂದು ಎಕ್ಸಿಕ್ಯೂಟೀವ್ ಗೆ ತನಿಖಾಧಿಕಾರಿಗಳು ವರ್ಗಾವಣೆಯಾದರೆ ಮುಗಿಯತು. ಒಂದು ಪ್ರಕರಣ ತನಿಖೆ ಮುಗಿಯುವುದರಲ್ಲಿ ಹತ್ತು ತನಿಖಾಧಿಕಾರಿಗಳು ಬದಲಾಗಿರುತ್ತಾರೆ ವಿನಃ ತನಿಖೆ ಮಾತ್ರ ಪೂರ್ಣ ಗೊಳ್ಳುವುದಿಲ್ಲ.

ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳು ಕಡಿಮೆ ಇದ್ದಾರೆಯೇ ? ನೂರಾರು ಜನರು ಮೋಸಕ್ಕೆ ಒಳಗಾಗುವ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ಪೊಲೀಸರೇ ಮುಂದಾಗುತ್ತಿಲ್ಲ. ಕೇಳಿದರೆ ನ್ಯಾಯಾಲಯಗಳಲ್ಲಿ ಪ್ರಕರಣ ಬಾಕಿ ಇವೆ ಎಂಬ ಸಬೂಬು ಕೊಟ್ಟುಕೊಂಡೇ ಕಾಲ ಕಳೆಯುತ್ತಾರೆ ! ಯಾವ ನ್ಯಾಯಾಧೀಶರು ಬಡವರಿಗೆ ಕಾಲಮಿತಿಯಲ್ಲಿ ನ್ಯಾಯ ಕೊಡಬೇಡಿ ಎಂದು ಆದೇಶ ಮಾಡುತ್ತಾರೆ ? ಯಾಕೆ ಪೊಲೀಸ್ ಇಲಾಖೆಗೆ ಈ ಪೋಂಜಿ ಸ್ಕೀಮ್ ಗಳ ಬಗ್ಗೆ ನಿರಾಸಕ್ತಿ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ನೂತನ ಗೃಹ ಸಚಿವರೇ ನಿಮ್ಮದೇ ಹೊಣೆಗಾರಿಕೆ

ನೂತನ ಗೃಹ ಸಚಿವರೇ ನಿಮ್ಮದೇ ಹೊಣೆಗಾರಿಕೆ

ರಾಜ್ಯದಲ್ಲಿ ಅನೇಕ ಆರ್ಥಿಕ ಅಪರಾಧ ಪ್ರಕರಣಗಳು ಸಂಭವಿಸಿದರು ಯಾವೊಬ್ಬ ಗೃಹ ಸಚಿವರೂ ಸಹ ಇವುಗಳ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಪೊಲೀಸರ ಅಂಕಿ ಅಂಶ , ರಿಕವರಿ ಡಿಟೇಲ್ಸ್ ಗೆ ತೃಪ್ತರಾಗಿ ಬೆನ್ನು ತಟ್ಟಿ ಹೋದವರೇ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದಕ್ಕೆ ಹೊರತಾಗಲಿಲ್ಲ. ಆದರೆ, ಆಕಸ್ಮಿಕವಾಗಿ ಗೃಹ ಸಚಿವ ಸ್ಥಾನ ಅಲಂಕರಿಸಿರುವ ಅರಗ ಜ್ಞಾನೇಂದ್ರ ಪ್ರಾಮಾಣಿಕ ಹಿನ್ನೆಲೆ ಹೊಂದಿರುವರು. ರಾಜ್ಯದಲ್ಲಿ ದಶಕಗಳಿಂದ ನ್ಯಾಯಕ್ಕಾಗಿ ಕೊರುತ್ತಿರುವ ಮುಗ್ಧ ಜನರ ಕಣ್ಣೀರ ಹನಿಗಳಿಗೆ ಸ್ಪಂದಿಸುವ ಹೊಣೆಗಾರಿಕೆ ನಿಮ್ಮದು. ರಾಜ್ಯದಲ್ಲಿ ಕಳೆದ ಹದಿನೈದು ವರ್ಷದಿಂದ ವರದಿಯಾಗಿರುವ ಆರ್ಥಿಕ ಅಪರಾಧ ವಂಚನೆ ಪ್ರಕರಣಗಳ ವಸ್ತುಸ್ಥಿತಿ ವರದಿಯನ್ನು ಇಲಾಖೆಯಿಂದ ಪಡೆದುಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಹೊಣೆಗಾರಿಕೆ ಹೊತ್ತುಕೊಳ್ಳಿ. ಎಷ್ಟೋ ಬಡವರು ನಿಮಗೆ ಋಣಿಯಾಗಿರುತ್ತಾರೆ.

English summary
Around 25 lakh people got cheated over 20,000 Cr by 45 Ponzi scams in Karnataka: Hope New Home minister Araga Jnanendra to look into this. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X