ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾವಿಕ' ಸಮ್ಮೇಳನ ಹೈಲೈಟ್ಸ್ ಮತ್ತು ಸೈಡ್ ಲೈಟ್ಸ್

By ಶ್ರೀವತ್ಸ ಜೋಶಿ
|
Google Oneindia Kannada News

* ಉತ್ತರ ಅಮೇರಿಕದ 'ನಾವಿಕ' ("ನಾವು ವಿಶ್ವ ಕನ್ನಡಿಗರು") ಸಂಘಟನೆಯ 3ನೆಯ ದ್ವೈವಾರ್ಷಿಕ ಸಮ್ಮೇಳನ ನಾರ್ತ್ ಕೆರೊಲೈನ ರಾಜ್ಯದ ರಾಜಧಾನಿ 'ರಾಲಿ'ಯಲ್ಲಿ ಸೆ.4, 5, 6ರಂದು "ವೈಭವ ವೈವಿಧ್ಯ ವಿನೂತನ" ಎಂಬ ಆಶಯ ಇಟ್ಟುಕೊಂಡು ಹಾಗೆಯೇ ಜರುಗಿತು.

* ಸುಮಾರು 1500ರಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದ ಈ ಸಮ್ಮೇಳನವು ನಿರೀಕ್ಷೆಗಿಂತ ಹೆಚ್ಚು ಅಂದವಾಗಿ, ಅರ್ಥಪೂರ್ಣವಾಗಿ, ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನದ ದ್ಯೋತಕವಾಗಿ ನಡೆಯಿತು ಎಂದು ಭಾಗವಹಿಸಿದವರೆಲ್ಲರ ಅಭಿಪ್ರಾಯ.

* ಮೂರು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಭವ್ಯವಾದ 'ರಾಲಿ ಕನ್ವೆನ್ಷನ್ ಸೆಂಟರ್'ನಲ್ಲಿ ನಡೆದರೆ ಊಟೋಪಚಾರ ವ್ಯವಸ್ಥೆ ಪಕ್ಕದ ಷೆರಟಾನ್ ಹೊಟೆಲ್ ಬಾಂಕ್ವೆಟ್ ಹಾಲ್‌ನಲ್ಲಿತ್ತು. ಅಮೆರಿಕದ ಆಗ್ನೇಯ ಭಾಗದ ರಾಜ್ಯಗಳ ವಿವಿಧ ನಗರಗಳಿಂದ ಡ್ರೈವ್ ಮಾಡಿಕೊಂಡು ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

* ಕರ್ನಾಟಕ ಸರಕಾರವು ಕೆಲವು ಉತ್ತಮ ಕಲಾವಿದರನ್ನು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಎಲ್. ಹನುಮಂತಪ್ಪ ಅವರನ್ನು ಮಾತ್ರ ಕಳಿಸಿ (ಸಮಾಜ ಕಲ್ಯಾಣ ಸಚಿವ ಆಂಜನೇಯ ಮತ್ತು ಆತನ ಹೆಸರಿಗೆ ತಕ್ಕಂತೆ ವರ್ತಿಸುವ ಎಮ್ಮೆಲ್ಲೆಗಳ ದಂಡನ್ನು ಕಳಿಸದೆ) ಸಮ್ಮೇಳನದ ಅಂದಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿತು. [ಸಮ್ಮೇಳನದ ಫೋಟೋ ಗ್ಯಾಲರಿ]

Highlights and sidelights of Navika Kannada Sammelana

* ಕರ್ನಾಟಕದಿಂದ ಬಂದಿದ್ದ ಜನಪದ ಕಲಾವಿದರು, ಡೊಳ್ಳು-ತಮಟೆ ಚಿಟ್ಟೆನಾಗಸ್ವರ ವಾದ್ಯಗಾರರು, ಲಂಬಾಣಿ ನರ್ತನದವರು 'ನಮ್ಮೂರಿನ ಜಾತ್ರೆ/ಮೇಳ' ವಾತಾವರಣವನ್ನು ರಾಲಿ ಸಭಾ ಕನ್ವೆನ್ಶನ್ ಸೆಂಟರ್ ಪ್ರಾಂಗಣದಲ್ಲಿ ನಿರ್ಮಿಸುವುದರಲ್ಲಿ ಯಶಸ್ವಿಯಾದರು.

* ಶನಿವಾರ ಬೆಳಿಗ್ಗೆ "ಭುವನೇಶ್ವರಿಯ ತೇರು" ಎಂಬ ಮೆರವಣಿಗೆಯನ್ನು, ಡೋಲು-ತಮಟೆಯ ತಾಳಕ್ಕೆ ಮೈಮರೆತು ಕುಣಿಯುತ್ತ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದರು. ಎಡಗೈಯಲ್ಲಿ ಸೆಲ್‌‍ಫೋನ್ ಹಿಡ್ಕೊಂಡು ಸೆಲ್ಫೀ ತೆಗೆಯುವ ಕಸರತ್ತು ಬಲಗೈಯಲ್ಲಿ ಕನ್ನಡ ಧ್ವಜ ಹಳದಿ-ಕೆಂಪು ರುಮಾಲು ಸುತ್ತಿಕೊಂಡು ಅಮೆರಿಕನ್ನಡಿಗರ ನಾಡು-ನುಡಿ ಅಭಿಮಾನ ನೋಡುವಂತಿತ್ತು. ಏನಿವರ ಸಡಗರ ಎಂದು ಅಲ್ಲಿ ಹಾದುಹೋಗುತ್ತಿದ್ದ ಕಾರ್ ಡ್ರೈವರುಗಳು ಟ್ಯಾಕ್ಸಿ ಚಾಲಕರು ಕುತೂಹಲದಿಂದ ನೋಡುತ್ತಿದ್ದರು, ಫೊಟೊ ಕ್ಲಿಕ್ಕಿಸುತ್ತಿದ್ದರು.

* "ಪರ್ಮನೆಂಟ್ ಮುಖ್ಯಮಂತ್ರಿ" ಚಂದ್ರು ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಅವರಿಂದ 'ಜೀವನದಲ್ಲಿ ಹಾಸ್ಯ' ಅಂತೊಂದು ಭಾಷಣವೂ ಇತ್ತು, ತಾನೀಗ ರಾಜಕಾರಣಿ ಅಲ್ಲ ನಿಜವಾದ ಹಾಸ್ಯಗಾರ ಎಂದು ಪ್ರಾಮಾಣಿಕ ಮಾತು ಅವರದು.


* ಶನಿವಾರ ಬೆಳಿಗ್ಗೆ ಮೆರವಣಿಗೆಯ ವೇಳೆ ಮೈಸೂರು ಪೇಟ ಧರಿಸಿ ತಮಟೆ-ಡೋಲುಗಳ ಪಟ್ಟುಗಳಿಗೆ ಹೆಜ್ಜೆ ಹಾಕುವುದರಿಂದ ಹಿಡಿದು ಅವತ್ತೇ ಸಂಜೆ 'ಸ್ನೇಹದ ಕಡಲಲ್ಲಿ ಪ್ರಣಯರಾಜ ಶ್ರೀನಾಥ್' ಕಾರ್ಯಕ್ರಮದಲ್ಲಿ ಹಳೆಯ ಇಪ್ಪತ್ತು ಸುಮಧುರ ಕನ್ನಡ ಚಿತ್ರಗೀತಗುಚ್ಛದ ಮೂಲಕ ಅಭಿನಂದನೆ ಸ್ವೀಕರಿಸಿ, ಭಾನುವಾರ ಸಂಜೆಯ ಪ್ರಧಾನ ಆಕರ್ಷಣೆ 'Sandalwood Unplugged'ದಲ್ಲಿ ಯಶ್, ರಾಧಿಕಾ ಪಂಡಿತ್ ಜತೆ ವೇದಿಕೆಯಲ್ಲಿ ಅನುರಾಧಾ ಭಟ್ ಮತ್ತು ಹೇಮಂತ್ ರಸಮಂಜರಿಯಲ್ಲಿ ಡ್ಯಾನ್ಸ್ ಮಾಡುವವರೆಗೆ- ಪ್ರಣಯರಾಜ ಶ್ರೀನಾಥ್ ಈ ಸಮ್ಮೇಳನದ ತಾರೆಯಾಗಿ ಮಿಂಚಿದರು!

* ಶ್ರೀನಾಥ್ ಹೇಗೆ ಸಮ್ಮೇಳನಾರ್ಥಿಗಳಿಗೆ ಇಷ್ಟವಾದರು ಅನ್ನೋದಕ್ಕೆ ಎರಡು ಕಾರಣಗಳಿವೆ: 1) ಅವರು ಈಗಿನ ಪೋಗರು ಪರಾಕ್ರಮಿ ಹೀರೋಗಳಂತೆ ಹೋಟೆಲ್ ರೂಮಿನಲ್ಲೇ ತೇಲಾಡುತ್ತ ಇದ್ದು ತನ್ನ ಶೋ ವೇಳೆ ಮಾತ್ರ ಠೀವಿಯಿಂದ ಬಂದು ದೊಡ್ಡಸ್ತಿಕೆ ಮೆರೆಯುವವರಲ್ಲ. ಮೂರೂ ದಿನ ಜನಸಾಮಾನ್ಯರೊಡನೆ ಬೆರೆತುಕೊಂಡಿದ್ದರು. 2) ಸಮ್ಮೇಳನಾರ್ಥಿಗಳು ಬಹುತೇಕವಾಗಿ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಕರ್ನಾಟಕ ಬಿಟ್ಟು ಬಂದವರು. ಅವರ ಮನಃ ಪಟಲದಲ್ಲಿ ಈಗಲೂ ಶ್ರೀನಾಥ್ ಪ್ರಣಯರಾಜ!

* ಮೇಲಿನ ಪಾಯಿಂಟ್ನಲ್ಲಿ ಎರಡನೇ ಅಂಶ ನಿಜಕ್ಕೂ ಚಿಂತನೀಯ. ಈ 'ನಾವಿಕ', 'ಅಕ್ಕ' ಮುಂತಾದ ಸಮ್ಮೇಳನಗಳಲ್ಲಿ ಭಾಗವಹಿಸುವವರ ಎವರೇಜ್ ಏಜ್ 45+ ಎಂಬುದು ಗಮನಾರ್ಹ ವಿಚಾರ. ಹದಿಹರೆಯದವರನ್ನು, ಎರಡನೆ ತಲೆಮಾರಿನ ವಲಸಿಗರನ್ನು ಸೆಳೆಯಲು ಈ ಸಂಘಟನೆಗಳು ಏನಾದರೂ ಹೊಸ ಉಪಾಯ ಹುಡುಕಬೇಕಿದೆ.

* ಬೊಂಬಾಟ್ ಭೋಜನದ ಮೂಲಕ ಅಮೆರಿಕನ್ನಡಿಗರಲ್ಲೂ ಮನೆಮಾತಾಗಿರುವ ಸಿಹಿಕಹಿ ಚಂದ್ರು ಇನ್ನೋರ್ವ ಆಕರ್ಷಣೆ. ಶನಿವಾರ ಸಂಜೆಯ ಪ್ರೈಮ್ ಟೈಮ್ ಶೋ 'ಹೃದಯಗೀತೆ ಅಂದಿಗೂ ಹಿಟ್ ಎಂದೆಂದಿಗೂ ಹಿಟ್' - ಡಾ.ರಾಜಕುಮಾರ್ ಚಿತ್ರಗಳಿಂದಾಯ್ದ ಗೀತೆಗಳ ಗಾಯನ (ಚಿನ್ಮಯ್ ಆತ್ರೆಯಾಸ್ ಮತ್ತು ಆಕಾಂಕ್ಷಾ ಬಾದಾಮಿ) ಕಾರ್ಯಕ್ರಮವನ್ನು ಸಿಹಿಕಹಿ ಚಂದ್ರು ನಡೆಸಿಕೊಟ್ಟರು. ಜನ ಹುಚ್ಚೆದ್ದು ಕುಣಿಯುವಷ್ಟು ಖುಷಿಪಟ್ಟರು.

Highlights and sidelights of Navika Kannada Sammelana

* ಮೈಸೂರು ಆನಂದ್ ಮತ್ತು ಡಾ. ಕೆ.ಪಿ. ಪುತ್ತೂರಾಯರ ಸ್ಟಾಂಡ್ ಅಪ್ ಕಾಮಿಡಿಗೆ ಕಿಕ್ಕಿರಿದ ಜನಸಂದಣಿ. ಬಿದ್ದೂಬಿದ್ದೂ ನಕ್ಕವರಿಗೆ ಇವರು ಹಳೇ ಸ್ಟಾಕನ್ನೇ ಮತ್ತೆಮತ್ತೆ ನಮ್ಮುಂದೆ ಸುರಿದು ಸವಕಲಾಗಿದ್ದಾರೆ ಎಂಬ ಅರಿವೂ ಆಗಲಿಲ್ಲವೇನೋ. ಈ ಎಲ್ಲ ಹಾಸ್ಯಕಲಾವಿದರು 'fresh stock update' ಮಾಡಿಕೊಳ್ಳದೆ ಮುಂದಿನ ಸರ್ತಿ ಅಮೇರಿಕಾ ವಿಮಾನ ಹತ್ತದಿದ್ದರೆ ಒಳ್ಳೆದು. ಪುತ್ತೂರಾಯರು 'ಸೊಂಟದ ಕೆಳಗಿನ' ಜೋಕುಗಳ ಸಂಖ್ಯೆ ಕಡಿಮೆ ಮಾಡುವುದು ಒಳ್ಳೆಯದು - ಎಂದು ಫ್ಲೋರಿಡಾದಿಂದ ಬಂದಿದ್ದ ವೈದ್ಯ ದಂಪತಿ ಊಟದ ವೇಳೆ ಮಾತಾಡ್ಕೊಳ್ತಿದ್ರು.

* ಶನಿವಾರ ಸಂಜೆ ಮುಖ್ಯ ವೇದಿಕೆಯಲ್ಲಿ 'ಕರ್ನಾಟಕ ಕ್ಷೇತ್ರ ವೈಭವ' ಎಂಬ ನೃತ್ಯರೂಪಕ (ಸ್ಥಳೀಯ ಕಲಾವಿದೆ ಸುಪ್ರಿಯಾ ದೇಸಾಯಿ ತಂಡದ ಪ್ರಸ್ತುತಿ') ಅಪಾರ ಮೆಚ್ಚುಗೆ ಗಳಿಸಿದ ಕಾರ್ಯಕ್ರಮಗಳಲ್ಲೊಂದು. ಅಂತೆಯೇ ಭಾನುವಾರ ಸಂಜೆ ವೈಜಯಂತಿ ಕಾಶಿ ಮತ್ತು ಸಹಕಲಾವಿದೆಯರ ಕೂಚಿಪುಡಿ ನೃತ್ಯವೈಭವ ತುಂಬಾ ಚೆನ್ನಾಗಿ ಮೂಡಿಬಂತು. 'ಮಹಾ ಗಣಪತಿಂ', 'ಕವಿ ನಮನ', ಮತ್ತು 'ಕುಬ್ಜೆ- ಕೃಷ್ಣ ಕಥೆ'ಯ ಅದ್ಭುತ ಅಭಿನಯ ಮುಗಿದಾಗ ಪ್ರೇಕ್ಷಕರಿಂದ ಎದ್ದುನಿಂತು ಕರತಾಡನ.

* ಆದರೆ ನೃತ್ಯ ಕಾರ್ಯಕ್ರಮಗಳದೇ ಬಾಹುಳ್ಯ ಒಂಚೂರು ಏಕತಾನತೆಯನ್ನೂ ತಂದಿತು. ಹಾಸ್ಯನಾಟಕಗಳು, ಹೊಸತನದ ಕಾರ್ಯಕ್ರಮಗಳು ಇದ್ದಿದ್ದರೆ ಚೆನ್ನಾಗಿರೋದು. ಅಷ್ಟೇ ಅಲ್ಲ, ಬೆಂಗಳೂರಿನ 'ಸಮರ್ಥನಂ' ಸಂಸ್ಥೆಯ ಅಂಧ ಪ್ರತಿಭೆಗಳ ನೃತ್ಯ ಸಂಗೀತ ಕಾರ್ಯಕ್ರಮಗಳಿಗೆ ಯಾವುದೋ ಒಂದು ಅವೇಳೆಯ ಸ್ಲಾಟ್ ಬದಲಿಗೆ ಅವರಿಗೂ ಪ್ರೈಮ್ ಟೈಮ್ನಲ್ಲಿ ತುಂಬಿದ ಸಭಾಗೃಹದಲ್ಲಿ ಪ್ರದರ್ಶನದ ಅವಲಾಶ ಕಲ್ಪಿಸಿದರೆ ಹೆಚ್ಚು ಅರ್ಥಪೂರ್ಣ. ಪ್ರೈಮ್ ಟೈಮ್ ಲೈಮ್‌ಲೈಟಲ್ಲಿ ಸಿನೆ ಕಲಾವಿದರು ಮಾತ್ರ ಮಿಂಚಬೇಕಂತಿದೆಯಾ?

* ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ (emceeing)ಗೆಂದೇ ಶಾರ್ಜಾದಿಂದ ಅನಿವಾಸಿ ಕನ್ನಡತಿ ರೋಹಿಣಿ ಅನಂತ್ ಬಂದಿದ್ದರು. ಅವರದೊಂದು ಭರತನಾಟ್ಯ ಕಾರ್ಯಕ್ರಮವೂ ಇತ್ತು. ಅವರ ಜತೆಗಿನ ಸಹ ನಿರೂಪಕ ನಿರೂಪಕಿಯರೂ ಬಹುಮಟ್ಟಿಗೆ ಸ್ವಚ್ಛ ಕನ್ನಡವನ್ನೇ ಚೊಕ್ಕವಾಗಿ ಮಾತನಾಡಿದರು, ಅಲ್ಪಸ್ವಲ್ಪ ಅಹ ಆಹಾ ಗಳೂ ಇದ್ದುವೆನ್ನಿ.

Highlights and sidelights of Navika Kannada Sammelana

* ಖ್ಯಾತ ಚಿತ್ರಕಲಾವಿದ ಡಾ. ಬಿ.ಕೆ.ಎಸ್ ವರ್ಮಾ ಅವರಿಂದ 'ಗೀತ ಕುಂಚ' ಕಾರ್ಯಕ್ರಮ ಕಲಾರಸಿಕರಿಗೆ ರಸದೌತಣ ಕೊಟ್ಟಿತು. ಶನಿವಾರ ಕೃಷ್ಣಾಷ್ಟಮಿಯೂ ಆದ್ದರಿಂದ ಕಲಾವಿದರ ಕುಂಚದಲ್ಲಿ ಬೆಣ್ಣೆಕಳ್ಳ ಕೃಷ್ಣ ಮುದ್ದಾಗಿ ಮೂಡಿಬಂದ; ರಾಧೆಯ ಮನಸೆಳೆದ; ಅರ್ಜುನನಿಗೆ ವಿಶ್ವರೂಪ ದರ್ಶನವನ್ನು ಕೊಟ್ಟ! ಲೇಖಕಚಿಂತಕಜೋಡಿ ಮಹಾಬಲಮೂರ್ತಿ ಕೊಡ್ಲೆಕೆರೆ ಮತ್ತು ಶೂದ್ರ ಶ್ರೀನಿವಾಸ್ ಅವರ ಕೃಷ್ಣ ಚಿಂತನ; ಕೊಳಲ ಮಾಂತ್ರಿಕ ವಿ.ಕೆ.ರಾಮನ್ ಅವರ ವೇಣುಗಾನ; ಕ್ಯಾನ್ವಾಸ್ ಮೇಲೆ ಸೂತ್ರಕುಂಚದ ನರ್ತನ. ಅದೊಂದು ಅದ್ಭುತ ಕಲಾಸಂಗಮ. ರಯಾಜ ಬಾಳೇ ಖಾನ್ ಮತ್ತು ಹಫೀಜ್ ಬಾಳೇ ಖಾನ್ ಸೋದರರು ಭಾವಪೂರ್ಣವಾಗಿ 'ತೊರೆದು ಜೀವಿಸಬಹುದೇ...' ಹಾಡಿದಾಗ ವರ್ಮರು ಬಿಡಿಸಿದ ಕನಕದಾಸರ ಚಿತ್ರ ಅತ್ಯಂತ ಹೃದಯಸ್ಪರ್ಶಿ. ಈ ಕಾರ್ಯಕ್ರಮದ ನಿರೂಪಣೆ ಶ್ರೀವತ್ಸ ಜೋಶಿಯದು.

* ಶುಕ್ರವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆಯೇರಿಸಿದ್ದು ಬೆಂಗಳೂರಿನ ಡಾ.ಸಂಜಯ್ ಶಾಂತಾರಾಂ ತಂಡದ 'ಶಿವತಾಂಡವ' ನೃತ್ಯಪ್ರದರ್ಶನ, ವಿ.ಕೆ.ರಾಮನ್ ಮತ್ತು ಅವರ ಮಗಳಿಂದ 'Magic Bamboo' ವೇಣುಗಾನ ವೈಭವ. ದಾಸರ ಪದಗಳು, ಕನ್ನಡ ಭಜನೆಗಳು, ಮತ್ತು 'ನಾವಿಕ'ಕ್ಕೆಂದೇ ರೂಪಿಸಿದ ಒಂದು ಪ್ರಸ್ತುತಿ. ಬಳಿಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ. ಸಿ.ಅಶ್ವತ್ಥ್ ಸ್ಮರಣೆ. ಅಶ್ವತ್ಥ್ ಅವರ ಕನ್ನಡ ಕನಸನ್ನು ಅಮೆರಿಕನ್ನಡಿಗರ ಮನೆಮನಗಳಿಗೆ ಪಸರಿಸಲು ಬಂದಿದ್ದೇನೆ ಎಂದ ಕಿಕ್ಕೇರಿ ತನ್ನ ಎಂದಿನ ಭಾವಾವೇಶದಲ್ಲಿಯೇ ಸೊಗಸಾಗಿ ಹಾಡಿದರು.

* ಸಮ್ಮೇಳನ ಪ್ರಾಂಗಣದಲ್ಲೇ ಒಂದಿಷ್ಟು ಸೀರೆ-ಚೂಡಿದಾರ್ ಅಂಗಡಿಗಳು, ಆಭರಣಗಳ ಅಂಗಡಿಗಳು ಇದ್ದವು. ಅಷ್ಟಿಷ್ಟು ವ್ಯಾಪಾರವೂ ಆಯ್ತೋ ಏನೋ. ಮತ್ತೆ ಕೆಲವು ಕನ್ನಡ ಪುಸ್ತಕಗಳ, ಸಿ.ಡಿಗಳ ಮಾರಾಟ. ಬಿರುಸಿನದೇನೂ ಅಲ್ಲ.

* ಕನ್ನಡತಿಯರ ಅಂದಚಂದದ ರೇಷ್ಮೆಸೀರೆಗಳನ್ನು ನೋಡಿದ ಮೆಕ್ಸಿಕನ್ ಮಹಿಳೆಯೊಬ್ಬಳಿಗೆ ತಾನೂ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬ ಆಸಕ್ತಿ. ತನಗೆ ಸೀರೆ ಉಡೋದಕ್ಕೆ ಯಾರಾದ್ರೂ ಕಲಿಸಬಹುದಾ ಎಂದು ಮುಗ್ಧವಾಗಿ ಮೆಚ್ಚುಗೆಯಿಂದ ಆಕೆ ಕೇಳುತ್ತಿದ್ದಳು.

* ಊಟ ತಿಂಡಿ ಎಲ್ಲ ರುಚಿಕರವಾಗೇ ಇತ್ತೇನೋ ಹೌದು. ಜೋಳದ ರೊಟ್ಟಿ, ಖಾರ ಚಟ್ನಿ ಪುಡಿ, ಹುಗ್ಗಿ, ಹೋಳಿಗೆ ಮುಂತಾಗಿ ಕರ್ನಾಟಕ ಸ್ಪೆಷಲ್ ಖಾದ್ಯಗಳು ಇದ್ದುವು ಹೌದಾದರೂ ಊಟದ ವ್ಯವಸ್ಥೆ ಇಕ್ಕಟ್ಟಾದ ಸ್ಥಳದಲ್ಲಿ ಮಾಡಬೇಕಾಗಿ ಬಂದು ತೊಂದರೆ ಎನಿಸಿತು. ಊಟದ ಸರದಿಗಾಗಿ ಮೈಲುದ್ದ ಸಾಲು ಅನಿವಾರ್ಯವಾಯ್ತು.

* ಮಹಿಳಾಗೋಷ್ಠಿ, ಸಾಹಿತ್ಯ ಚಟುವಟಿಕೆ, ಪುಸ್ತಕ/ಸಿ.ಡಿ ಬಿಡುಗಡೆ, ವೈದ್ಯಕೀಯ, ವಾಣಿಜ್ಯ ಕ್ಷೇತ್ರದವರಿಗೆ ಉಪನ್ಯಾಸಗಳು, ಕಾರ್ಯಾಗಾರಗಳು ಮುಂತಾದ ಕಾರ್ಯಕ್ರಮಗಳು ಇದ್ದುವಾದರೂ ಅಲ್ಲೆಲ್ಲ ಸಭಿಕರ ಸಂಖ್ಯೆಗಿಂತ ವೇದಿಕೆಯ ಮೇಲಿರುವವರ ಸಂಖ್ಯೆಯೇ ಹೆಚ್ಚಿರುವ ಮುಜುಗರದ ದೃಶ್ಯಗಳು ಈ ಸಮ್ಮೇಳನದಲ್ಲೂ ಇಲ್ಲದಿರಲಿಲ್ಲ. ನಾರ್ತ್‌ ಕೆರೊಲಿನಾದ ಡಾ.ಎಲ್.ಗಣಪತಿ ಅವರು ಬರೆದ "ಕಬ್ಬಿನ ಜಲ್ಲೆಯ ಕನಸುಗಳು" ಕಾದಂಬರಿ, ಬಾಸ್ಟನ್‌ನ ಬೆಂಕಿ ಬಸಣ್ಣ ಬರೆದ "ಕಾಮಿಡಿ ಕ್ಷಿಪಣಿಗಳು" ನಗೆಹನಿಗಳ ಪುಸ್ತಕ, ಸವಿತಾ ರವಿಶಂಕರ್ ಅವರ "ಚಿಲಿಪಿಲಿ ಕನ್ನಡಕಲಿ" ಸಿ.ಡಿ. ಇವೆಲ್ಲ ಬಿಡುಗಡೆಗೊಂಡವು.

* ಒಂಥರದಲ್ಲಿ ಕ್ಲೀಷೆಯೇ ಆಗಿಹೋಗಿರುವ "ಎಲ್ಲಾದರೂ ಇರು ಎಂತಾದರೂ ಇರು" ಕವಿವಾಣಿ, "ಎಂಟು ಜ್ಞಾನಪೀಠ ಪಡೆದ ಭಾಷೆ", "ಅಲ್ಲಿ ನಮ್ಮ ಜನ್ಮಭೂಮಿ ಇಲ್ಲಿ ನಮ್ಮ ಕರ್ಮಭೂಮಿ..." ಮುಂತಾದ ಪದಪುಂಜಗಳು ಈ ಸಮ್ಮೇಳನದಲ್ಲೂ ಅಲ್ಲಲ್ಲಿ ತಕ್ಕಮಟ್ಟಿಗೆ ಮೊಳಗಿದವು.

* ಒಟ್ಟಿನಲ್ಲಿ, 'ರಾಲಿ'ಯಂಥ ಚಿಕ್ಕ ಪಟ್ಟಣದಲ್ಲಿ, ಕನ್ನಡಿಗ ಕುಟುಂಬಗಳು ಎರಡಂಕಿಯ ಸಂಖ್ಯೆಯಲ್ಲಷ್ಟೇ ಇರುವ ಊರಿನಲ್ಲಿ ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಹರ್ಷ ಗೋಪಾಲ್ ನೇತೃತ್ವದ ರಾಲಿ ಕನ್ನಡಿಗರು, ಅವರ ಜೊತೆ ಕೈಜೋಡಿಸಿದ ಅಕ್ಕಪಕ್ಕದ ಊರುಗಳ ಕನ್ನಡಕೂಟಗಳು/ಕನ್ನಡಿಗರು, ಮತ್ತೆ 'ನಾವಿಕ'ದ ಪದಾಧಿಕಾರಿಗಳೂ ಅಭಿನಂದನಾರ್ಹರು! ಈ ಸಮ್ಮೇಳನದಲ್ಲಿ ಭಾಗವಹಿಸಿದ ಅಮೆರಿಕನ್ನಡಿಗರು ಸಿಹಿಘಳಿಗೆಗಳನ್ನು ಬಹುಕಾಲ ಮೆಲುಕು ಹಾಕಲಿದ್ದಾರೆ. [ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್ ಪುಟ]

English summary
Highlights and sidelights of Navika Sammelana (2nd World Kannada Conference) by Srivathsa Joshi, North Carolina, USA. Pranayaraja Srinath, Kikkeri Krishnamurthy, Sihi Kahi Chandru, Yash, Radhika etc from Karnataka enthralled the Americannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X