ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ : ಲೇಖನ ಬರೆದು ಕಳಿಸಿ

By Prasad
|
Google Oneindia Kannada News

ಸೆಪ್ಟೆಂಬರ್ 2, 3 ಮತ್ತು 4ರಂದು ನ್ಯೂ ಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ನಡೆಯಲಿರುವ 9ನೇ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಬಗ್ಗೆ ಈಗಾಗಲೇ ನಿಮಗೆಲ್ಲ ತಿಳಿದಿರಬಹುದು. ಈ ಸಂಬಂಧ ನಾವು ಸಾಹಿತ್ಯ ಸಮಿತಿಯಿಂದ ಅನಿವಾಸಿ ಬರಹಗಾರರ ಲೇಖನಗಳ ಸಂಚಿಕೆಯೊಂದನ್ನು ಹೊರತರಬೇಕೆಂದು ಯೋಜಿಸಿದ್ದೇವೆ. ಈ ಪ್ರಕಟಣೆಗೆ 'ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ' ಎಂಬ ವಿಷಯವನ್ನು ಆರಿಸಿಕೊಂಡಿದ್ದೇವೆ. ಈ ವಿಷಯದ ವ್ಯಾಪ್ತಿ ಕನ್ನಡ ಭಾಷೆ, ಭಾವನೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರಬೇಕೆಂಬುದು ನಮ್ಮ ಆಶಯ.

ಭಾರತೀಯ ಸಂಸ್ಕೃತಿಯನ್ನು ನಮ್ಮತನವೆನ್ನುವುದಾದರೆ, ಕನ್ನಡ ಸಂಸ್ಕೃತಿ ಮತ್ತು ಪ್ರಜ್ಞೆ ಭಾರತೀಯ ಸಂಸ್ಕೃತಿ ಎಂಬ ತಾಯಿಯ ಅನನ್ಯ ಶಿಶು. ಕನ್ನಡ ಸಂಸ್ಕೃತಿಯ ಮುಖೇನ ಭಾರತೀಯ ಸಂಸ್ಕೃತಿಯಲ್ಲಿ ಬದುಕುತ್ತಿರುವವರು ನಾವು. ಹೀಗಾಗಿ 'ನಮ್ಮತನ'ವನ್ನು ಉಳಿಸಿಕೊಳ್ಳುವುದೆಂದರೆ, ನಮ್ಮ ಕನ್ನಡತನವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗಳಿಗೆ ಅದನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡುವುದು ಎಂದೆನಿಸುತ್ತದೆ.

ಕನ್ನಡದಲ್ಲಿ ಯೋಚಿಸುವ, ಕನ್ನಡದ ಹಬ್ಬಗಳನ್ನು ಆಚರಿಸುವ, ಕನ್ನಡದ ಹಾಡು ಕೇಳುವ, ಕನ್ನಡದ ಕಾರ್ಯಕ್ರಮಗಳನ್ನು ಬಯಸಿ ನೋಡುವ ನಾವು, ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಾವೆಲ್ಲಾ ನಮ್ಮ ಬದುಕು ಕಂಡುಕೊಂಡಿರುವ ಹೊರ ದೇಶಗಳಲ್ಲಿ ಕನ್ನಡದ ಪ್ರಸ್ತುತೆಯ ಗುಮಾನಿಯನ್ನಿಟ್ಟುಕೊಂಡೇ ಕನ್ನಡತನವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. [9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಸ್ಪರ್ಧೆ]

AKKA Literary publication - Request for article

ಅನಿವಾಸಿ ಜಗತ್ತಿನಲ್ಲಿ ನಮ್ಮತನ ಮತ್ತು ನಮ್ಮ ಸಂಸ್ಕೃತಿಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಕನಸಿನಲ್ಲಿ ನಾವು ದೇವಾಲಯಗಳನ್ನು ಕಟ್ಟಿದ್ದೇವೆ; ನಮ್ಮ ಭಾಷೆಯ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿದ್ದೇವೆ; ಕನ್ನಡ ಟಿವಿ ಚಾನೆಲ್‌ಗಳನ್ನು ನೋಡುತ್ತೇವೆ; ಕನ್ನಡ ಪುಸ್ತಕಗಳನ್ನು ತರಿಸಿ ಓದುತ್ತೇವೆ; ಕನ್ನಡ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಕನ್ನಡ ಕಲಿಸಲು ಪ್ರಯತ್ನಿಸುತ್ತೇವೆ; ನಮ್ಮ ಮಕ್ಕಳು ಕನ್ನಡ ಜನರೊಡನೆ ಸಂಬಂಧ ಬೆಳೆಸಿ ನಮ್ಮ ಸಂಪ್ರದಾಯಕ್ಕೆ ತಕ್ಕಂತೆಯೇ ಮದುವೆಯಾಗಬೇಕೆಂದು ಆಶಿಸುತ್ತೇವೆ.

ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ವಾಹಕ ಕನ್ನಡ ಭಾಷೆ. ಕನ್ನಡ ಜಾನಪದವನ್ನೋ, ದಾಸ ಸಾಹಿತ್ಯವನ್ನೋ, ವಚನಗಳನ್ನೋ ಪರಂಪರೆಯ ದಾಖಲೆಗಳೆಂದು ಪರಿಗಣಿಸಿದಾಗ ಅವನ್ನು ನಮ್ಮದಾಗಿಸಿಕೊಳ್ಳಲು ಭಾಷೆಯ ಅಗತ್ಯವಿದೆ. ಲಿಪಿ ಕಲಿತು ಕನ್ನಡವನ್ನು ಓದಿ ಬರೆಯಲಾಗದಿದ್ದರೂ, ಕನ್ನಡದಲ್ಲಿ ಮಾತನಾಡುವ ಮತ್ತು ಕನ್ನಡವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಕನ್ನಡ ಸಾಂಸ್ಕೃತಿಕ ಪರಂಪರೆಯಾದ 'ನಮ್ಮತನ'ವನ್ನು ಉಳಿಸಿಕೊಳ್ಳಲು ಅವಶ್ಯವಾಗುತ್ತದೆ. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

ದಿನಗಳೆದಂತೆ ನಮ್ಮ ಜಗತ್ತು 'Global Village' ಎನ್ನುವುದು ಹೆಚ್ಚು ವಾಸ್ತವವಾಗುತ್ತಿದೆ. ಸರ್ವಾಂತರ್ಯಾಮಿ ಅಂತರ್ಜಾಲ ನಾವು ಬಿಟ್ಟುಬಂದ ನಾಡನ್ನು ನಮ್ಮ ನೆರೆಮನೆಯನ್ನಾಗಿ ಮಾಡಿದೆ. ಕನ್ನಡ ಟಿವಿ ಚಾನೆಲ್‌ಗಳನ್ನು ಪ್ರಪಂಚದಾದ್ಯಂತ ಎಲ್ಲಿ ಬೇಕಾದರೂ ನಾವು ನೋಡಿ ಆನಂದಿಸಬಹುದು. ಸಂವಹನ ಮಾಧ್ಯಮದಲ್ಲಾಗಿರುವ ಅವಿಷ್ಕಾರಗಳಿಂದ ನಾವು ನಮ್ಮವರ ಜೊತೆ ದಿನದ 24 ಘಂಟೆ ಸಂಪರ್ಕ ಇಟ್ಟುಕೊಳ್ಳಬಹುದು. ಇವೆಲ್ಲ ಆಧುನಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ನಾವಲ್ಲದೆ ನಮ್ಮ ಮುಂದಿನ ಪೀಳಿಗೆಗಳೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಜೊತೆ ಸಂಬಂಧವಿಟ್ಟುಕೊಂಡು 'ನಮ್ಮತನ'ದ ಅನನ್ಯತೆಯಲ್ಲಿ ಬದುಕನ್ನು ಆನಂದಿಸಬಹುದು.

ಈ ಹಿನ್ನೆಲೆಯಲ್ಲಿ ಅನಿವಾಸಿ ಕನ್ನಡಿಗರ ಕನ್ನಡತನ ಮತ್ತು ಕನ್ನಡ ಪ್ರಜ್ಞೆ ಎಂದರೇನು? ಅನಿವಾಸಿಗಳಲ್ಲಿ ಇದು ಹೇಗೆ ಉದ್ದೀಪ್ತವಾಗಿದೆ? ಇದನ್ನು ಪೋಷಿಸಿ ನಮ್ಮ ಮುಂದಿನ ಪೀಳಿಗೆಗಳಲ್ಲಿ ಮುಂದುವರೆಸಿಕೊಂಡು ಹೋಗುವುದು ಹೇಗೆ? ಈ ದಿಸೆಯಲ್ಲಿ ನಿಮ್ಮ ಅನಿಸಿಕೆ, ಅಭಿಪ್ರಾಯ, ಪ್ರಯತ್ನ ಮತ್ತು ಅನುಭವಗಳೇನು? ಎಂಬುದರ ಬಗ್ಗೆ ಲೇಖನವನ್ನು ಬರೆದು ಕಳಿಸಬೇಕೆಂದು ಸಾಹಿತ್ಯ ಸಮಿತಿಯ ಪರವಾಗಿ ನಾವು ನಿಮ್ಮನ್ನು ವಿನಂತಿಸಿಕೊಳ್ಳುತ್ತೇವೆ.

ಕೆಳಗಿನ ನಿಯಮಗಳನ್ನು ಪಾಲಿಸಿ

* ಮಿಂಚಂಚೆಯ (e-mail) ಸಬ್ಜೆಕ್ಟ್ ಫೀಲ್ಡ್‌ನಲ್ಲಿ 'Publication' ಎಂದು ನಮೂದಿಸಿ.
* ನಿಮ್ಮ ಲೇಖನ ಯಾವುದೇ ಸಾಹಿತ್ಯ ಪ್ರಕಾರಗಳಲ್ಲಿ ಇರಬಹುದು.
* ಲೇಖನ ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದ ತಾಣಗಳಲ್ಲಿ ಪ್ರಕಟವಾಗಿರಬಾರದು.
* ಲೇಖನಗಳನ್ನು 'ಬರಹ' ಅಥವಾ 'MS Word' ತಂತ್ರಾಂಶವನ್ನು ಬಳಸಿ ಬರೆದಿರಬೇಕು.
* ಲೇಖನ 2000 ಪದಗಳಿಗೆ ಮೀರದಂತಿರಲು ಪ್ರಯತ್ನಿಸಿ.
* ಸ್ವೀಕೃತವಾದ ಲೇಖನಗಳನ್ನು ಪ್ರಕಟಿಸುವಲ್ಲಿ ಅಕ್ಕ ಸಾಹಿತ್ಯ ಸಮಿತಿಯ ನಿರ್ಧಾರವೇ ಅಂತಿಮ.
* ಲೇಖನದ ಜೊತೆ ನಿಮ್ಮ ಹೆಸರು, ವಿಳಾಸ, ಇ-ಮೇಲ್ ವಿಳಾಸ, ಬಣ್ಣದ ಭಾವಚಿತ್ರ ಮತ್ತು ಸಂಕ್ಷಿಪ್ತ ಪರಿಚಯವನ್ನು ಲಗತ್ತಿಸಿ.
* ಲೇಖನ 30-ಜೂನ್-2016ರ ಒಳಗಾಗಿ ನಮ್ಮನ್ನು ತಲುಪುವಂತಿರಲಿ.
* ಲೇಖನ ಕಳಿಸಬೇಕಾದ ವಿಳಾಸ : [email protected]

ನಮ್ಮ ಈ ಕೋರಿಕೆಯನ್ನು ಪರಿಗಣಿಸಿ, 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಸಾಹಿತ್ಯ ಸಂಚಿಕೆಗೆ ಲೇಖನವನ್ನು ಬರೆದು ಕಳುಹಿಸುವಿರೆಂದು ಆಶಿಸುತ್ತೇವೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ಸಮಿತಿಯ ಪರವಾಗಿ,
ಸತೀಶ್ ಹೊಸನಗರ, ದಾಶರಥಿ ಘಟ್ಟು ಮತ್ತು ಭಾಸ್ಕರ್ ತೈಲಗೇರಿ

English summary
AKKA Literary publication committee is planning to bring out a publication as a part of AKKA Kannada world conference 2016 to be held from September 2-4 in Atlanta City, New Jersey, USA. It has invited writers to send article on 'Kannada consciousness in NRI Kannadigas' in Kannada before 30th June, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X