• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನದ ಸಾರಥಿ ಚಂದ್ರು ಮನದಾಳದ ಮಾತುಗಳು

By ಸಂದರ್ಶನ: ಸತೀಶ್ ಹೊಸನಗರ
|

9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ದಿನ ಹತ್ತಿರವಾಗುತ್ತಿದ್ದಂತೆ ಕೊನೆಕ್ಷಣಗಳ ಸಿದ್ಧತೆಗಳು ಸಮರೋಪಾದಿಯಾಗಿ ಸಾಗುತ್ತಿದ್ದರೂ ಅಷ್ಟೇ ವ್ಯವಸ್ಥಿತವಾಗಿ ನಡೆಯುತ್ತಿವೆ. ಎಲ್ಲ ಕಾರ್ಯಕರ್ತರು ಇದು ತಮ್ಮ ಮನೆಯ ಸಂಭ್ರಮವೇನೋ ಎಂಬಂತೆ ದುಡಿಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಹಣಕಾಸಿನ ವಹಿವಾಟುಗಳ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಅವಿರತವಾಗಿ ಶ್ರಮಿಸುತ್ತಿರುವ ಖಜಾಂಚಿ ಚಂದ್ರಶೇಖರ ಆರಾಧ್ಯ ಅವರು ಮಾತಿಗೆ ಸಿಕ್ಕಿದ್ದರು. ಅವರು ಬರುವ ಸಮ್ಮೇಳನದ ತಯಾರಿಯ ಜೊತೆಗೆ ತಮ್ಮ ತಂಡದ ಕಾರ್ಯವೈಖರಿಯನ್ನು ಹಂಚಿಕೊಂಡಿದ್ದಾರೆ. ಕುತೂಹಲಕರವಾದ ಅಂಕಿಅಂಶಗಳೊಂದಿಗೆ ಅವರ ಮನದಾಳದ ಮಾತಿನ ಸಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಸತೀಶ್ ಹೊಸನಗರ : ನಮಸ್ಕಾರ ಚಂದ್ರು. ಈ ಬಾರಿಯ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆ ಹೇಗೆ ನಡೀತಾ ಇದೆ? ನೀವು ಈ ಸಮ್ಮೇಳನದ ಚಟುವಟಿಕೆಗಳಲ್ಲಿ ಮೊದಲಿನಿಂದ ಕಾರ್ಯತತ್ಪರಾಗಿರುವವರು, ಸಮ್ಮೇಳನದ ಒಬ್ಬ ಹಿರಿಯ ಪದಾಧಿಕಾರಿಯಾಗಿ ಮತ್ತು ಆರ್ಥಿಕ ದೃಷ್ಟಿಕೋನದಿಂದ ಸಮ್ಮೇಳನದ ಬಗ್ಗೆ ನಮಗೆಲ್ಲ ದಯವಿಟ್ಟು ತಿಳಿಸಿಕೊಡಬೇಕು. [ಅಕ್ಕ ಸಮ್ಮೇಳನದ ಕಾರ್ಯದರ್ಶಿ ಧನಂಜಯ ಕೆಂಗಯ್ಯ ಸಂದರ್ಶನ]

AKKA conference : Treasurer Chandru Aradhya interview

ಚಂದ್ರು ಆರಾಧ್ಯ : ನಮಸ್ಕಾರ ಸತೀಶ್. ಸಮ್ಮೇಳನಕ್ಕೆ ಸಮರೋಪಾದಿಯಲ್ಲಿ ಎಲ್ಲ ರೀತಿಯ ತಯಾರಿಯೂ ನಡೀತಾ ಇದೆ. ನೂರಾರು ಜನ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿರುವ ಫಲವೇ ಈ ಸಮ್ಮೇಳನದ ಯಶಸ್ಸು ಎಂದು ಹೇಳಿದರೆ ತಪ್ಪಾಗಲಾರದು. ಸುಮಾರು ನೂರಕ್ಕೆ ಎಂಭತ್ತು ಭಾಗ ತಯಾರಿ ಈಗಾಗಲೇ ಮುಗಿದಿದ್ದು, ಇನ್ನು ಕೆಲವು ಮುಖ್ಯವಾದ ಕೆಲಸಗಳು ಬಾಕಿ ಇವೆ.

ಅವುಗಳಲ್ಲಿ ಡೆಕೋರೇಷನ್, ಆಡಿಯೋ-ವಿಷುವಲ್, ಬ್ಯಾನರುಗಳನ್ನು ಕಟ್ಟುವುದು ಮುಂತಾದ ಕಾರ್ಯಗಳು ಸಮ್ಮೇಳನದ ದಿನಗಳು ಹತ್ತಿರ ಬಂದಾಗ ಮುಗಿಯುವಂತಹವು ಬಾಕಿ ಇವೆ ಅಷ್ಟೇ. ನೀವು ಶುಕ್ರವಾರ ಸಮ್ಮೇಳನಕ್ಕೆ ಬರುವ ಹೊತ್ತಿಗೆ ಎಲ್ಲ ತಯಾರಿಯೂ ಸುಸೂತ್ರವಾಗಿ ಮುಗಿದಿರುತ್ತದೆ, ಕಾದು ನೋಡಿ!

ಈ ಸಮ್ಮೇಳನಕ್ಕೆ ನಾವು ಒಟ್ಟು 1.2 ಮಿಲಿಯನ್ ಡಾಲರುಗಳ ಬಜೆಟ್ ಇಟ್ಟುಕೊಂಡಿದ್ದೇವೆ (ಸುಮಾರು ಎಂಟು ಕೋಟಿ ರೂಪಾಯಿಗಳು). ಈ ಹಣವನ್ನು ಮುಖ್ಯವಾಗಿ ರಿಜಿಸ್ಟ್ರೇಷನ್, ಡೊನೇಷನ್, ವೆಂಡರ್ ಬೂತ್‌ಗಳ ಮಾರಾಟ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಹೊಂದಿಸಿದ್ದಾಗಿದೆ.

ರಿಜಿಸ್ಟ್ರೇಷನ್‌ನಿಂದ ಸುಮಾರು $375K ಬರುತ್ತಿದೆ, ಡೊನೇಷನ್ ಪ್ಯಾಕೇಜುಗಳು ಮತ್ತು ದಾನಿಗಳ ಕಡೆಯಿಂದ ಸುಮಾರು $300K ಬರುತ್ತಿದೆ. ಇನ್ನು ನಾವು ವೆಂಡರ್ ಬೂತ್‌ಗಳನ್ನು ಮಾರಾಟ ಮಾಡುವುದರ ಮೂಲಕ $75K ಸಂಗ್ರಹಿಸಿದ್ದೇವೆ, ಹಾಗೂ ಈ ವರ್ಷ ಮೊಟ್ಟ ಮೊದಲ ಬಾರಿಗೆ ಅಕ್ಕ ಗಿಫ್ಟ್ ಶಾಪ್‌ವತಿಯಿಂದ $10K ಸಂಗ್ರಹಿಸುವ ನಿರೀಕ್ಷೆ ಇದೆ. ಈ ಅಕ್ಕ ಗಿಫ್ಟ್ ಶಾಪ್ ಎನ್ನುವುದು ಒಂದು ಹೊಸ ವಿಚಾರ, ನಮ್ಮ ವೆಂಡರ್ ಬೂತ್‌ಗಳ ನಡುವೆ ಅಕ್ಕ ಸಮ್ಮೇಳನಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. [ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ]

ಹಣಕಾಸಿನ ವಿಚಾರಕ್ಕೆ ಬಂದಾಗ, ನಮಗೆ ಕರ್ನಾಟಕ ಸರ್ಕಾರದ ವತಿಯಿಂದ ಅತ್ಯುತ್ತಮ ಸಹಾಯ ಹಾಗೂ ಸಹಕಾರ ದೊರೆತಿದೆ ಎನ್ನುವುದನ್ನು ಒತ್ತಿ ಹೇಳಬಯಸುತ್ತೇನೆ. ಕರ್ನಾಟಕ ಸರ್ಕಾರದಿಂದ ಏಳೆಂಟು ಇಲಾಖೆಗಳನ್ನು ನಾವು ವೈಯಕ್ತಿಕವಾಗಿ ಸಂಪರ್ಕಿಸಿದಾಗ ನಮಗೆ ಒಳ್ಳೆಯ ಭರವಸೆ ಸಿಕ್ಕಿತು. ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಉಮಾಶ್ರೀ ಅವರು ನಮಗೆ ಹೆಚ್ಚಿನ ಸಹಾಯ ಮತ್ತು ಸಹಕಾರವನ್ನು ನೀಡಿರುವುದನ್ನು ನಾನು ಇಲ್ಲಿ ಸ್ಮರಿಸುತ್ತೇನೆ.

ಜೊತೆಗೆ ಹಟ್ಟಿ ಗೋಲ್ಡ್ ಮೈನ್, BDA, Department of Forest, Department of Tourism, Department of Industries, IT/BT, ಮೊದಲಾದವರು ನಮಗೆ ನೇರವಾಗಿ ಧನ ಸಹಾಯ ಮಾಡಿದ್ದಾರೆ. ರಾಣಿ ಸತೀಶ್, ವಿನಯ್ ಕುಲಕರ್ಣಿ ಅವರ ಸಹಾಯಕ್ಕೆ ನಾನು ಚಿರಋಣಿ. ಈ ಮುಖೇನ ನಾವು $90K ಈಗಾಗಲೇ ಸಂಗ್ರಹಿಸಿದ್ದೇವೆ, ಇನ್ನೂ ಹೆಚ್ಚಿನ ಹಣ ಬರುವ ನಿರೀಕ್ಷೆ ಇದೆ. ಇದರ ಜೊತೆಗೆ ನಮ್ಮ ಸ್ಮರಣ ಸಂಚಿಕೆ ಸಮಿತಿಯ ವತಿಯಿಂದ ನಾವು ಸುಮಾರು $15K ಅಷ್ಟು ಹಣವನ್ನು ಅಡ್ವರ್ಟೈಸ್‌ಮೆಂಟ್ ಮಾರುವ ಮುಖೇನ ಸಂಗ್ರಹಿಸಿದ್ದೇವೆ. [ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]

ಇನ್ನು ನಮಗಾಗುವ ಖರ್ಚಿನ ವಿವರಗಳ ಬಗ್ಗೆ ಹೇಳುವುದಾದರೆ, ಅಟ್ಲಾಂಟಿಕ್ ಸಿಟಿಯ ಕನ್‌ವೆನ್ಷನ್ ಸೆಂಟರ್ ಸುಮಾರು 14 ಎಕರೆಯಲ್ಲಿರುವ ದೊಡ್ಡ ಫೆಸಿಲಿಟಿ. ಈ ಕನ್‌ವೆನ್ಷನ್ ಸೆಂಟರಿನ ಬಾಡಿಗೆಯೇ (ಕಿಚನ್, ಹಾಲ್, ಯುಟಿಲಿಟಿ, ಇತ್ಯಾದಿ ಎಲ್ಲ ಸೇರಿ) ಸುಮಾರು $300K ಆಗುತ್ತದೆ. ಇದರ ಜೊತೆಗೆ ನಮ್ಮ ಭಾರತೀಯ ಮೂಲದವರೇ ಆದ ಎಕ್ಸಿಕ್ಯೂಟಿವ್ ಶೆಫ್ ಸತೀಶ್ ರಾವ್ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನದುದ್ದಕ್ಕೂ ರಸದೌತಣವನ್ನು ಏರ್ಪಡಿಸಿದ್ದೇವೆ, ಅದರ ಖರ್ಚು-ವೆಚ್ಚಗಳು ಸುಮಾರು $200K.

ಇನ್ನುಳಿದಂತೆ ಪ್ರೈಮ್ ಟೈಮ್ ಇವೆಂಟುಗಳಿಗೆ, ಅತಿಥಿ-ಅಭ್ಯಾಗತರುಗಳ ಯೋಗಕ್ಷೇಮಕ್ಕೆ, ಹೋಟೆಲುಗಳಿಗೆ, ಎಲ್ಲಾ ವಿಮಾನ ನಿಲ್ದಾಣಗಳಿಂದ ಅತಿಥಿಗಳನ್ನು ಕರೆತರಲು ಆಯೋಜಿಸಿದ ಶಟಲ್ ಬಸ್ಸುಗಳಿಗೆ, ಡೆಕೋರೇಷನ್‌ಗೆ, ಹಾಗೂ ಕೊನೆಯ ದಿನದ ಸ್ಟಾರ್ ನೈಟ್ ವಿಶೇಷ ಕಾರ್ಯಕ್ರಮಕ್ಕೆ ಒಟ್ಟು $500Kಗೂ ಹೆಚ್ಚು ಖರ್ಚಾಗುವ ನಿರೀಕ್ಷೆ ಇದೆ.

AKKA conference : Treasurer Chandru Aradhya interview

ಸತೀಶ್ ಹೊಸನಗರ : ನಿಮ್ಮನ್ನು ವೈಯಕ್ತಿಕವಾಗಿ ಬಲ್ಲೆ ಆದ್ದರಿಂದ ಈ ಪ್ರಶ್ನೆ, ನಿಮಗೆ ಸಾಹಿತ್ಯ, ಪುಸ್ತಕ, ಓದು ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿ. ಹಣಕಾಸಿನ ಚಟುವಟಿಕೆಯೊಂದಿಗೆ ಬೇರೆ ಯಾವ ಯಾವ ರಂಗಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಾ? ನಿಮ್ಮ ಪ್ರಕಾರ ಈ ಸಮ್ಮೇಳನದ ವಿಶೇಷತೆಗಳೇನು?

ಚಂದ್ರು ಆರಾಧ್ಯ : ಈ ಬಾರಿ ನಾವು ಎಲ್ಲ ರೀತಿಯ ಕಲಾವಿದರಿಗೂ ಹಾಗೂ ಎಲ್ಲ ಬಗೆಯ ಕಾರ್ಯಕ್ರಮಗಳಿಗೂ ಸಮಾನ ಆದ್ಯತೆಯನ್ನು ಕೊಟ್ಟಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಜನಪದ, ಸಂಗೀತ, ಸಾಹಿತ್ಯ, ಸಿನಿಮಾ, ರಂಗಭೂಮಿ, ಬಿಸಿನೆಸ್ ಫೋರಮ್ ಮುಖ್ಯವಾದವುಗಳು. ಈ ಎಲ್ಲ ರಂಗಗಳಲ್ಲಿಯೂ ಪ್ರಬುದ್ಧ ಕಲಾವಿದರು, ಪರಿಣಿತರನ್ನು ಕರೆತರುತ್ತಿದ್ದೇವೆ. ಸಾಮಾಜಿಕ, ರಾಜಕೀಯ, ವ್ಯಾವಹಾರಿಕ ಹಾಗೂ ಧಾರ್ಮಿಕ ರಂಗಗಳ ಎಲ್ಲ ಕಾರ್ಯಕ್ರಮಗಳೂ ಸಹ ಒಂದೇ ಸೂರಿನ ಕೆಳಗೆ ಒಟ್ಟೊಟ್ಟಿಗೇ ನಡೆಯುವ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ.

ಧಾರ್ಮಿಕ ಕಾರ್ಯಕ್ರಮಗಳು ಎಂದಾಗ ನೆನಪಾಯಿತು. ಈ ಬಾರಿ ಕರ್ನಾಟಕದ ಅಷ್ಟ ಮಠದ ಪೀಠಾಧಿಪತಿಗಳೆಲ್ಲ ಬರುವ ನಿರೀಕ್ಷೆ ಇದ್ದು, ತನ್ಮೂಲಕ ನಮ್ಮ ಕರ್ನಾಟಕದ ಎಲ್ಲ ಜನಸಮುದಾಯವನ್ನು ಸಹ ಪ್ರತಿನಿಧಿಸುವುದು ನಮ್ಮ ಉದ್ದೇಶ. ಈ ಸಮ್ಮೇಳನಕ್ಕೆ ಶ್ರೀ ಸದ್ಗುರು ಮತ್ತು ಶ್ರೀ ರವಿಶಂಕರ್ ಅವರುಗಳು ಅನಿವಾರ್ಯ ಕಾರಣಗಳಿಂದ ಬರಲಾಗುತ್ತಿಲ್ಲ. ಆದರೆ ಅವರು ನಮಗೆಲ್ಲ ಶುಭ ಕೋರುವ ಸಂದೇಶವನ್ನು ವಿಡಿಯೋ ಮುಖೇನ ಈಗಾಗಲೇ ರವಾನಿಸಿದ್ದಾರೆ.

ಈಶ ಫೌಂಡೇಷನ್ನಿನ ವತಿಯಿಂದ ಅವರು 2 ಗಂಟೆಗಳ ಯೋಗ ಮತ್ತು ಧ್ಯಾನದ ಸೆಶ್ಶನ್ನುಗಳನ್ನು ನಡೆಸಿಕೊಡಲಿದ್ದಾರೆ. ಅಲ್ಲದೇ ಈ ಬಾರಿ, ಯೂತ್ ಕಮಿಟಿಯ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸುಮಾರು 16ರಿಂದ 30 ವರ್ಷ ವಯಸ್ಸಿನವರಿಗೆ ಹಾಗೂ ಇಲ್ಲೇ ಹುಟ್ಟಿ ಬೆಳೆದ ಎರಡನೇ ತಲೆಮಾರಿನ ಕನ್ನಡಿಗರಿಗೆ ಆದ್ಯತೆ ಕೊಡುವುದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಆಲಮ್ನಿ ಮೀಟ್, ನಮ್ಮ ಮೈಸೂರು ವಿಶ್ವವಿದ್ಯಾನಿಲಯದಿಂದ ಸುಮಾರು $15K ಅಷ್ಟು ಧನ ಸಂಗ್ರಹಣೆ ಮಾಡಿದ್ದು ಎಲ್ಲ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳೆಲ್ಲ ಒಂದೇ ಸೂರಿನಲ್ಲಿ ಸೇರಿಕೊಳ್ಳುವ ವಿಶೇಷತೆ ಈ ಸಮ್ಮೇಳನದಲ್ಲಿದೆ. ಬಹಳ ಸಂಭ್ರಮದ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು.

ಸತೀಶ್ ಹೊಸನಗರ : ಚಂದ್ರು ಅವರೆ, ವೈಯಕ್ತಿಕವಾಗಿ ನಿಮಗೆ ಇಷ್ಟವಾಗುವ ಹಾಗೂ ನಿಮಗೆ ಹತ್ತಿರವಾದ ಕಾರ್ಯಗಳು ಯಾವುವು, ಅವುಗಳ ಬಗ್ಗೆ ಸ್ವಲ್ಪ ತಿಳಿಸಿ...

ಚಂದ್ರು ಆರಾಧ್ಯ : (ನಗು), ಖಜಾಂಚಿ ಎಂದ ಮೇಲೆ ಎಲ್ಲವೂ ನನಗೆ ಇಷ್ಟವಾಗುವ ಕಾರ್ಯಕ್ರಮಗಳೇ, ಆದರೂ ಈ ಒಂದಿಷ್ಟು ಕಾರ್ಯಗಳು ಬಹಳ ವಿಶೇಷವಾದವು, ಇವುಗಳು ಒಂದು ರೀತಿ ನನ್ನ ಕನಸುಗಳು ನನಸಾದಂತೆ ಎನ್ನಬಹುದು. ವೈಯಕ್ತಿಕವಾಗಿ ನನಗೆ ಸಾಹಿತ್ಯ, ಸಂಸ್ಕೃತಿ ಮತ್ತು ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಗಳು ಬಹಳ ಖುಷಿಕೊಟ್ಟಿವೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಒಳ್ಳೆಯ ಹೆಸರನ್ನು ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ನಿಟ್ಟಿನಲ್ಲಿ ನಮ್ಮ ಮಲ್ಲಿಕ್ ಪ್ರಸಾದ್ ಅವರು ಅದ್ಭುತವಾದ ಸಿನಿಮಾ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಅದರೆ ಒಟ್ಟು 12 ಕನ್ನಡ ಸಿನಿಮಾಗಳನ್ನು ಸಮ್ಮೇಳನಾದ್ಯಂತ ತೋರಿಸುವ ವ್ಯವಸ್ಥೆ ಇದೆ (ರೂಮ್ ನಂಬರ್ 301). ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ದಿಗ್ಗಜಗಳು ಭಾಗವಹಿಸುತ್ತಿರುವುದು ವಿಶೇಷ.

ಇನ್ನು ಸ್ಮರಣ ಸಂಚಿಕೆಯ ವಿಚಾರದಲ್ಲಿ ಈ ಬಾರಿ ನಾವು ಎರಡು ಅಮೂಲ್ಯವಾದ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಅದರಲ್ಲಿ "ಚಿತ್ತಾರ" ಸುಮಾರು 60-65 ಪುಟಗಳ ಸುಂದರವಾದ ಪುಸ್ತಕ, ಅಶೋಕ್ ಕಟ್ಟೀಮನಿ ಮತ್ತು ಅವರ ತಂಡದವರ ಪ್ರಯತ್ನದ ಫಲವಿದು. ಎಂದಿನಂತೆ ಈ ಸ್ಮರಣ ಸಂಚಿಕೆಯಲ್ಲಿ ನಮ್ಮ ಪ್ರಾಯೋಜಕರ ಜಾಹೀರಾತುಗಳೊಂದಿಗೆ, ಕಥೆ, ಕವನ ಹಾಗೂ ಅನೇಕ ಚಿತ್ರಗಳು ಮೂಡಿಬರಲಿವೆ.

ನಮ್ಮ ಸ್ಮರಣ ಸಂಚಿಕೆಯವತಿಯಿಂದಲೇ, ನನ್ನ ಅನೇಕ ವರ್ಷಗಳ ಮನದಾಳದ ಇಂಗಿತದಂತೆ "ಐಸಿರಿ" ಅನ್ನೋ ಕಾಫೀ ಟೇಬಲ್ ಪುಸ್ತಕವೊಂದನ್ನು ಹೊರತರುತ್ತಿದ್ದೇವೆ. "ಐಸಿರಿ"ಯ ವಿಶೇಷತೆ ಎಂದರೆ ನಮ್ಮ ಕರ್ನಾಟಕದಲ್ಲಿ ಯುನೆಸ್ಕೋನಿಂದ ಗುರುತಿಸಲ್ಪಟ್ಟ ತಾಣಗಳಾದ ಹಂಪಿ, ಪಟ್ಟದಕಲ್ಲು, ಪಶ್ಚಿಮ ಘಟ್ಟ ಮೊದಲಾದ ಸುಂದರ ಸ್ಥಳಗಳ ವರ್ಣ ರಂಜಿತ ಚಿತ್ರಗಳನ್ನು ಹೊತ್ತು ತರಲಿದೆ

ನಮ್ಮ ಕರ್ನಾಟಕದ ಸಿರಿವಂತಿಕೆಯನ್ನು ಚಿತ್ರಗಳ ಮುಖೇನ ವಿಶ್ವದಾದ್ಯಂತ ಪಸರಿಸಿರುವುದು ನಮ್ಮೆಲ್ಲರ ಆಶಯ. ಈ ಪುಸ್ತಕವನ್ನು ನಾವು ನಾಲ್ಕು ಜನ, ತನು-ಮನ-ಧನ ಸಹಾಯ ಮಾಡಿಕೊಂಡು ರೂಪಿಸಿದ್ದೇವೆ: ಸರಿತಾ ನವಲಿ, ಅಹೀಶ್ ಭಾರಧ್ವಾಜ್, ಅಶೋಕ್ ಕಟ್ಟಿಮನಿ ಮತ್ತು ನಾನು. ನಾವೆಲ್ಲ ನಮ್ಮ ಕೈಯಾರೆ ದುಡ್ಡು ಹಾಕಿಕೊಂಡು ಹೊರತರುತ್ತಿರುವ ಪುಸ್ತಕ, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಕೈ ಸೇರಿಲಿದೆ, ಕಾದು ನೋಡಿ.

ಈ ಪುಸ್ತಕವನ್ನು ನಾವು ಅಕ್ಕ ಸಮ್ಮೇಳನದಲ್ಲಿ ನಾಮಿನಲ್ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ, ನಿಮ್ಮ ಪ್ರತಿಯನ್ನು ಕೂಡಲೇ ಕೊಂಡುಕೊಳ್ಳಿ. ನನ್ನ ಊಹೆಯ ಪ್ರಕಾರ ಈ ಪುಸ್ತಕ ಶೀಘ್ರವೇ ಮರು ಮುದ್ರಣ ಹೊಂದುತ್ತದೆ ಎಂದರೆ ಅತಿಶಯವೇನಲ್ಲ. ಇನ್ನು ಕೊನೆಯದಾಗಿ, ನಮ್ಮ ಸಾಹಿತ್ಯ ಸಮಿತಿಯ ಕೊಡುಗೆಯನ್ನು ನೆನೆಯದಿದ್ದರೆ ತಪ್ಪಾಗುತ್ತದೆ. ಸಾಹಿತ್ಯ ಸಮಿತಿಯಲ್ಲಿ ನೀವೆಲ್ಲ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ನಿಮ್ಮ "ಅನಿವಾಸಿಗಳಲ್ಲಿ ಕನ್ನಡ ಪ್ರಜ್ಞೆ" ಪುಸ್ತಕವನ್ನು ಎದುರು ನೋಡುತ್ತೇವೆ, ಜೊತೆಗೆ ನೀವು ಆಯೋಜಿಸಿದ ಕಾರ್ಯಕ್ರಮಗಳನ್ನೂ ಸಹ ಕಾದು ನೋಡುತ್ತೇವೆ.

AKKA conference : Treasurer Chandru Aradhya interview

ಸತೀಶ್ ಹೊಸನಗರ : ಚಂದ್ರು ಅವರೆ ನಿಮ್ಮ ತಂಡವನ್ನು ಪರಿಚಯ ಮಾಡಿಕೊಡಿ.

ಚಂದ್ರು ಆರಾಧ್ಯ : ಹಣಕಾಸಿನ ವಿಚಾರಗಳಿಗೆ ನಮ್ಮ ಅಧ್ಯಕ್ಷರಾದ ರಾಜ್ ಪಾಟೀಲ್ ಹಾಗೂ ಹಿರಿಯರಾದ ಅಮರನಾಥ ಗೌಡರು ನಮಗೆಲ್ಲ ಮುಖ್ಯಸ್ಥರು. ಅವರ ಮಾರ್ಗದರ್ಶನದಲ್ಲಿ ನನ್ನ ಜೊತೆ ದಿಲೀಪ್ ಕುಮಾರ್ (ಸಹ ಕಾರ್ಯದರ್ಶಿ) ಹಾಗೂ ಗುಬ್ಬಿ ನರಹರಿ ರಾವ್ (ಸಹ ಕಾರ್ಯದರ್ಶಿ ಮತ್ತು ಆಡಿಟರ್) ಕೆಲಸ ಮಾಡುತ್ತಿದ್ದಾರೆ. ಎಷ್ಟೊಂದು ಕಷ್ಟಗಳ ನಡುವೆಯೂ ನಾವು ನಾಲ್ಕು ಜನ ಹಗಲೂ-ರಾತ್ರಿ ಈ ಸಮ್ಮೇಳನಕ್ಕಾಗಿ ದುಡಿಯುತ್ತೇವೆ. ಹಣಕಾಸಿನ ವಿಚಾರದಲ್ಲಿ ಎಲ್ಲ ಕಮಿಟಿಗಳ ಜೊತೆಯೂ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎನ್ನುವುದು ನಮಗೆ ಬಹಳ ಸಂತೋಷದ ವಿಚಾರ.

ಸತೀಶ್ ಹೊಸನಗರ : ವಿಶ್ವ ಕನ್ನಡಿಗರಿಗೆ ನಿಮ್ಮ ಕಿವಿ ಮಾತು...?

ಚಂದ್ರು ಆರಾಧ್ಯ : ಕವಿವಾಣಿಯಂತೆ, "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು..." ಎನ್ನುವುದು ನನ್ನ ಆಶಯ. ನಾವು ಉದಾರಿ ಮನಸ್ಸಿನ ಕನ್ನಡಿಗರು ಒಟ್ಟು ಸೇರಿ, ಸಮ್ಮೇಳನದ ಲೋಪದೋಷಗಳನ್ನು ಮನ್ನಿಸಿ ಕನ್ನಡ ತಾಯಿಯ ತೇರನ್ನು ಎಲ್ಲ ಸಹೋದರ-ಸಹೋದರಿಯರೂ ಒಡಗೂಡಿ ಎಳೆಯೋಣ, ಕನ್ನಡತನವನ್ನು ಸಂಭ್ರಮಿಸೋಣ. ಜೈ ಕರ್ನಾಟಕ ಮಾತೆ!

English summary
AKKA World Kannada Conference treasurer Chandru Aradhya interview by Satish Hosanagara. Chandru is the real force behind this convention. 9th AKKA WKC will be held in Atlantic City in New Jersey from September 2 to 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X