• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಸ್ಟನ್ ಭವ್ಯ ವಿಶ್ವ ಕನ್ನಡ ಸಮಾವೇಶದ ಪಕ್ಷಿನೋಟ

By ಮಧುಸೂದನ್ ಅಕ್ಕಿಹೆಬ್ಬಾಳ್
|

ವಿಶ್ವದ ಎಲ್ಲ ಕನ್ನಡಿಗರನ್ನು ಒಟ್ಟುಗೂಡಿಸಿ, ಹೊರನಾಡಿನಲ್ಲಿರುವ ಮುಂದಿನ ಪೀಳಿಗೆಯವರಿಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಮನದಟ್ಟು ಮಾಡುವ ಮಹತ್ತರ ಆಕಾಂಕ್ಷೆ ಹೊತ್ತಿದೆ "ನಾವಿಕ" ಸಂಸ್ಥೆ. ನಾವಿಕದ 2ನೆಯ ವಿಶ್ವ ಕನ್ನಡ ಸಮಾವೇಶವನ್ನು ಆ.30ರಿಂದ ಸೆ.1ರವರೆಗೆ ಬಾಸ್ಟನ್ ನಲ್ಲಿ ನಡೆಯುತ್ತಿರುವುದು ಬಹಳ ಹೆಮ್ಮೆಯ ವಿಷಯ. ಬಲು ದೂರ ಇರುವ ನಾಡಿನಲ್ಲಿ ಕನ್ನಡ ಉತ್ಸವ ನಡೆಸುವುದು ಸುಲಭದ ಮಾತಲ್ಲ. ಆದರೆ 40 ವರ್ಷಗಳಿಂದಲೂ ಅಮೆರಿಕಾದ ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿ ನೆಲೆಸಿರುವ ಕನ್ನಡಿಗರು ದಶಕಕ್ಕೂ ಮೀರಿದ ತಮ್ಮ ಕನಸನ್ನು ನನಸು ಮಾಡಲು ಸಜ್ಜಾಗಿದ್ದಾರೆ.

ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಹೊಯ್ಸಳ ಕನ್ನಡ ಕೂಟಗಳ ಸಹಯೋಗದೊಂದಿಗೆ ಈ ಕನ್ನಡ ನಾಡಹಬ್ಬ ಶುಕ್ರವಾರ, ಆಗಸ್ಟ್ 31ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಬಾಸ್ಟನ್ ಬಳಿಯ ವೂಸ್ಟರ್ ನಗರದ ಭವ್ಯ ಡಿ.ಸಿ.ಯು. ಸಭಾಂಗಣ ಮತ್ತು ಹತ್ತಿರದ ಮೆಕ್ಯಾನಿಕ್ಸ್ ಹಾಲ್ ನಲ್ಲಿ ಭರ್ಜರಿ ಮೇಳಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಕರ್ನಾಟಕದ ನುರಿತ ಕಲಾವಿದರು ಮತ್ತು ಅಮೆರಿಕಾದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭೆ-ಸೌಂದರ್ಯ-ರಸಪ್ರಶ್ನೆ ಸ್ಪರ್ಧೆಗಳು, ವರ್ಣರಂಜಿತ ಮೆರವಣಿಗೆ, ಉದ್ಯಮ/ಶಿಕ್ಷಣ/ಪ್ರಾಜೆಕ್ಟ್ ಮ್ಯಾನೇಜ್ಮೆಂಟ್/ವೈದ್ಯಕೀಯ ಕ್ಷೇತ್ರ/ಯೋಗ/ಯುವ ನಾವಿಕ ವಿಚಾರ ವೇದಿಕೆಗಳು, ವಧು-ವರಾನ್ವೇಷಣೆ ಕಾರ್ಯಕ್ರಮ, ಕಿರು-ಚಿತ್ರ ಪ್ರದರ್ಶನ, ಮಕ್ಕಳ ಮನರಂಜನೆ... ಹೀಗೆ ಎಲ್ಲರಿಗೂ ಹಿಡಿಸುವಂಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬನ್ನಿ, ಈ ಸಮಾವೇಶದ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿಕೊಳ್ಳೋಣ.

ಶುಕ್ರವಾರದ ಕಾರ್ಯಕ್ರಮಗಳು : ಈ ಸಮಾವೇಶ ಶುಕ್ರವಾರದಂದು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಔದ್ಯಮಿಕ ವಿಚಾರ ವೇದಿಕೆಗಳೊಂದಿಗೆ ಆರಂಭಗೊಳ್ಳಲಿದೆ. ಕರ್ನಾಟಕ ಮೂಲದ ಹಲವಾರು ವಾಣಿಜ್ಯ ತಜ್ಞರು ಮತ್ತು ಗುರುರಾಜ್ ದೇಶಪಾಂಡೆ ಮತ್ತು ಸದಾನಂದ ಮೈಯರಂತಹ ಉದ್ಯಮಪತಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಲಿದ್ದಾರೆ. ಆ ದಿನ ಸಂಜೆ ಪ್ರೊ. ಮಲ್ಲಣ್ಣ ಮತ್ತು ಮಂದಾರ ಕನ್ನಡ ಕೂಟದವರಿಂದ ಅವರ ಗೀತ ವೈಭವ ಕಾರ್ಯಕ್ರಮ, ಶ್ರೀನಾಥ್ ವಸಿಷ್ಠ ಅವರ ಹಾಸ್ಯ, ಹೊಯ್ಸಳ ಕನ್ನಡ ಕೂಟದ ಸುಗಮ ಸಂಗೀತ, ಭ್ರಮರ ತಂಡದ "ದಶಾವತಾರ"... ಇವೆಲ್ಲಾ ಅಲ್ಲದೆ ಎಮ್.ಡಿ ಪಲ್ಲವಿ, ಅರುಣ್, "ಜೋಗಿ" ಸುನಿತಾ ಅವರನ್ನು ಒಳಗೊಂಡ ಎರಡು ಸುಮಧುರ ಸಂಗೀತ ಕಾರ್ಯಕ್ರಮಗಳೂ ಉಂಟು.

ಶನಿವಾರದ ಕಾರ್ಯಕ್ರಮಗಳು : ಮೊದಲ ದಿನವೇ ಇಷ್ಟು ಚೆನ್ನ ಆದರೆ ಮುಂದೆ ಇನ್ನೇನಿದೆ ಅಂದಿರಾ? ಅಲ್ಲೇ ನೋಡಿ ಮಜಾ! ಮಾರನೇ ದಿನ ಶನಿವಾರ ಬೆಳಿಗ್ಗೆ ವೂಸ್ಟರ್ ನಗರದ ಪುರ ಭವನದಿಂದ ಭವ್ಯ ಮೆರವಣಿಗೆ - ಕಲಾವಿದರು, ಗಣ್ಯರು, ವಿವಿಧ ವೇಷ-ಪೋಷಾಕು ತೊಟ್ಟ ಮಕ್ಕಳು-ದೊಡ್ಡವರು, ಗಾಯನ-ವಾದನ ಇವೆಲ್ಲಾ ಕೂಡಿದ ವರ್ಣರಂಜಿತ ಮೆರವಣಿಗೆಯಲ್ಲಿ ನಮ್ಮ ಕಲೆ-ಸಂಸ್ಕೃತಿಯ ಸುಂದರ ಪ್ರದರ್ಶನ ನಡೆಯಲಿದೆ. ಇದರ ನಂತರ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರ ಅವರು ಪಾಲ್ಗೊಳ್ಳಲಿದ್ದಾರೆ. ನಾವಿಕ 2013 ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಂಧ್ಯಾ ಶ್ರೀನಾಥ್ ಅವರ ನೃತ್ಯದೊಂದಿಗೆ ಈ ಕಾರ್ಯಕ್ರಮ ಸಮಾರೋಪಗೊಳ್ಳುವುದು.

ಆ ದಿನ ಮಧ್ಯಾಹ್ನ - ನಕ್ಷತ್ರ ಪ್ರತಿಭಾ ಸ್ಪರ್ಧೆ, ಅಪ್ಸರ ಸೌಂದರ್ಯ ಸ್ಪರ್ಧೆ ಮತ್ತು ಕುಬೇರ ರಸಪ್ರಶ್ನೆ ಸ್ಪರ್ಧೆಗಳ ಜತೆ ಯೋಗ / ಉನ್ನತ ಶಿಕ್ಷಣ / ಜೀವನ ಸಂಗಾತಿ - ಹೀಗೆ ಹಲವು ವಿಚಾರ ವೇದಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವು ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮದಲ್ಲಿ ಕ್ಯಾಲಿಫೋರ್ನಿಯಾದ ರಾಗ ತಂಡದ ಕಾರ್ಯಕ್ರಮವೂ ಇದೆ. ಸಂಜೆಗೆ ಕಿಕ್ಕೇರಿ ವೃಂದ, ಸರಳ ವಾಸ್ತು ಬಗ್ಗೆ ಕಾರ್ಯಕ್ರಮ ಅಲ್ಲದೆ ಪ್ರವೀಣ್ ಗೋಡಖಿಂಡಿ ಅವರ ಮೋಹಕ ಕೊಳಲುವಾದನ ಮತ್ತು ನಿರುಪಮ/ರಾಜೇಂದ್ರ ಅವರ ನೃತ್ಯ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ಇವೆಲ್ಲಾ ಕಾರ್ಯಕ್ರಮಗಳ ಮಧ್ಯೆ ಮೂರು ಹೊತ್ತೂ ಕರ್ನಾಟಕದ ಹಲವು ರುಚಿಕರ ತಿಂಡಿ ಮತ್ತು ಭೋಜನವನ್ನು ಆಸ್ವಾದಿಸುವ ಅವಕಾಶ! ಊಟ-ನೋಟ-ಒಡನಾಟ ಇವೆಲ್ಲರದಲ್ಲೂ ಅಚ್ಚುಕಟ್ಟು ವ್ಯವಸ್ಥೆಗಾಗಿ ನೂರಾರು ಸ್ವಯಂಸೇವಕರು ಒಂದು ವರ್ಷದಿಂದ ಶ್ರಮ ಪಟ್ಟಿದ್ದಾರೆ. "ಕಾರ್ಯಕರ್ತರ ಆಸಕ್ತಿ ಮತ್ತು ಪರಿಶ್ರಮವೇ ಈ ಭವ್ಯ ಸಮಾವೇಶಕ್ಕೆ ಭದ್ರ ಬುನಾದಿ", ಎಂದು ಸಂಚಾಲಕ ಶರಣಬಸವ ರಾಜೂರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾನುವಾರದ ಕಾರ್ಯಕ್ರಮಗಳು : ಕಡೆಯ ದಿನವಾದ ಭಾನುವಾರ ಬೆಳಿಗ್ಗೆ ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ ಅಲ್ಲದೇ ಗಮಕ ವಿದುಷಿಗಳಾದ ವಸಂತ ವೆಂಕಟೇಶ್ ಮತ್ತು ಬಿ.ಎಚ್. ನಾಗರತ್ನ ಅವರಿಂದ ಗಮಕ ವಾಚನ, ದೀಪ್ತಿ ನವರತ್ನ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಸೋಮನಾಥ್ ಮರ್ದೂರ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ. ಮಧ್ಯಾಹ್ನ ನಗೆ ನಾಟಕಗಳಲ್ಲದೇ ಯಕ್ಷ ಮಂಜೂಷ ತಂಡದಿಂದ ಯಕ್ಷಗಾನ, ಭರತ್ ರಾಮ್ ಅವರ ಭರತನಾಟ್ಯ ಮತ್ತು ಸಾಹಿತ್ಯ ಕಮ್ಮಟ ಕಾರ್ಯಕ್ರಮಗಳಿವೆ.

ವಿವಿಧ ಸ್ಪರ್ಧೆಗಳ ಕಡೆಯ ಹಂತ ಕೂಡ ನಡೆಯಲಿದ್ದು ಪ್ರೇಕ್ಷಕರ ಮತ್ತು ಭಾಗವಹಿಸಿದವರ ಕುತೂಹಲ ಹೆಚ್ಚಿಸುವುದು ಖಚಿತ. 'ಶೃಂಗಾರ' ಪ್ರತಿಭಾ ಪ್ರದರ್ಶನ ಎಲ್ಲರ ಗಮನ ಸೆಳೆಯಲಿದೆ. ಸಾಯಂಕಾಲ ಜಿ.ಪಿ. ರಾಜರತ್ನಂ ಅವರ ನಾಟಕ ಪ್ರದರ್ಶನ, ನಂತರ ಭವ್ಯ ತಾರಾ ಲೋಕ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಪ್ರತಿಭೆಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಜನರನ್ನು ರಂಜಿಸಲಿದ್ದಾರೆ. ವಿಜಯ ಪ್ರಕಾಶ್ ಮತ್ತು ಶಮಿತಾ ಮಲ್ನಾಡ್ ಅವರ ಸುಮಧುರ ಗಾಯನದೊಂದಿಗೆ ಈ ಅದ್ದೂರಿ ವಿಶ್ವ ಕನ್ನಡ ಸಮಾವೇಶಕ್ಕೆ ತೆರೆ ಬೀಳುವುದು.

ವಿಶ್ವ ಕನ್ನಡಿಗರ ಪ್ರಗತಿ ಮತ್ತು ಬಾಂಧವ್ಯದ ಸೌರಭ ಸೂಸುವ ಈ ಭವ್ಯ ನಾಡಹಬ್ಬದ ಪಕ್ಷಿ ನೋಟ ನೋಡಿದಿರಲ್ಲಾ? ಇನ್ನು ತಡವೇಕೆ? ನಿಮ್ಮ ಕುಟುಂಬವನ್ನು ನೋಂದಾಯಿಸಲು ಇನ್ನೂ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಈ ಅಂತರಜಾಲ ತಾಣಕ್ಕೆ ಇಂದೇ ಭೇಟಿ ನೀಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bird's eye view of Navika 2nd World Kannada Conference, Boston, USA to be held from August 30 to September 1, 2013. For three days several cultural, business, entertaining activities are lined up to enthrall the Kannada diaspora in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more