ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳನೇ ಅಕ್ಕ ಸಮ್ಮೇಳನ ಅಟ್ಲಾಂಟಾದಲ್ಲಿ ಸಫಲ

By ವರದಿ: ಶ್ರೀವತ್ಸ ಜೋಶಿ, ಕ್ಯಾಂಪ್: ಅಟ್ಲಾಂಟ
|
Google Oneindia Kannada News

ಭಾನುವಾರ ಬೆಳಗ್ಗೆ ಮುಖ್ಯ ಸಭಾಂಗಣ 'ಅಮೋಘವರ್ಷ'ದಲ್ಲಿ ಮನರಂಜನಾ ಕಾರ್ಯಕ್ರಮಗಳ ಆರಂಭವಾದದ್ದು ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರ ಸುಗಮಸಂಗೀತದಿಂದ. "ಉಳುವ ಯೋಗಿಯ ನೋಡಣ್ಣ...", "ಎಲ್ಲಾದರೂ ಇರು ಎಂತಾದರೂ ಇರು...", "ಚೆಲ್ಲಿದರು ಮಲ್ಲಿಗೆಯ...", "ಕೋಡಗನ ಕೋಳಿ ನುಂಗಿತ್ತಾ..." ಮುಂತಾದ ಜನಪ್ರಿಯ ಕೃತಿಗಳಷ್ಟೇ ಅಲ್ಲದೆ ಬಸವಣ್ಣನವರ ವಚನ ಮತ್ತೊಂದೆರಡು ಭಾವಗೀತೆಗಳ ಪ್ರಸ್ತುತಿ. ಕಿಕ್ಕೇರಿಯವರ ಶೈಲಿಯೇ ಹಾಗೆ, ಕೇಳುಗರಿಗೆ ಕಿಕ್ ಕೊಡುವಂಥದು.

ಅಕ್ಕ ಐಡಲ್- ಹಾಡು ಬಾ ಕೋಗಿಲೆ'ಸ್ಪರ್ಧೆಯಲ್ಲಿ ಜ್ಯೂನಿಯರ್ಸ್ ವಿಭಾಗದಲ್ಲಿ ಮೇರಿಲ್ಯಾಂಡ್‌ನ ಸಾನಿಕಾ ಮಹಾಶೆಟ್ಟಿ, ಟೀನ್ಸ್ ವಿಭಾಗದಲ್ಲಿ ಮಿನೆಸೋಟದ ಪ್ರಣೀತಾ ಕಾಗಿನೆಲೆ, ಮತ್ತು ಹಿರಿಯರ ವಿಭಾಗದಲ್ಲಿ ಸೀಮಾ ಮೂರ್ತಿ ಕಸ್ತೂರಿ ವಿಜೇತರಾದರು. ಅಮೆರಿಕನ್ನಡಿಗರ ಪೈಕಿ ಹಾಡುಹಕ್ಕಿಗಳನ್ನು ಆರಿಸುವ ಈ ಸ್ಪರ್ಧೆಯನ್ನು ಇಂದಿರಾ ರಾಮಸ್ವಾಮಿ ನೇತೃತ್ವದ ತಂಡ ನಿರ್ವಹಿಸಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರ ಆಲ್ಬಮ್ ಹೊರತರಲು ಬೆಂಗಳೂರಿನ ಲಹರಿ ರೆಕಾರ್ಡಿಂಗ್ ಕಂಪನಿ ಮುಂದಾಗಿದೆ. ಮೈಸೂರಿನ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಕಂಪನಿಯ ಪ್ರಾಯೋಜಕತ್ವವೂ ಸಿಕ್ಕಿದೆ. ಯುವಪ್ರತಿಭೆಗಳನ್ನು ಗುರುತಿಸುವಲ್ಲಿ 'ಅಕ್ಕ' ಸಂಸ್ಥೆ ಮತ್ತು ಈ ಸಮ್ಮೇಳನ ಒಂದು ವೇದಿಕೆಯಾದ ಉತ್ತಮ ನಿರ್ದೇಶನ.

ಮಧ್ಯಾಹ್ನದ ರುಚಿಕರ ಭೋಜನಕ್ಕೆ ಡುಂಡಿರಾಜ್ ಅವರ 'ಹನಿ ಹನಿ ಹಾಸ್ಯ' ಕಾರ್ಯಕ್ರಮದ ಡೆಸರ್ಟ್. "ವಿಷ್ಣುವರ್ಧನ" ಸಭಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದರು. ಈ ಹಿಂದಿನ ಜನಪ್ರಿಯ ಚುಟುಕಗಳಷ್ಟೇ ಅಲ್ಲದೆ ಅಮೆರಿಕ ಪ್ರವಾಸದ ವೇಳೆ, ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡ ವೇಳೆ ಹೊಸದಾಗಿ ಹೊಸೆದ ಕೆಲವು ಚುಟುಕಗಳನ್ನೂ ವಾಚಿಸಿ ಡುಂಡಿರಾಜ್ ಹಾಸ್ಯ ಕಾರ್ಯಕ್ರಮಕ್ಕೆ ಸುಂದರ ಮೆರುಗನ್ನು ಕೊಟ್ಟರು. ಅವರು ತಂದಿದ್ದ ಪುಸ್ತಕಗಳೆಲ್ಲ ಅಲ್ಲಿ ಬಿಸಿಬಿಸಿದೋಸೆಯಂತೆ ಖರ್ಚಾದವು. ಹಸ್ತಾಕ್ಷರಕ್ಕಾಗಿ ಅವರ ಅಭಿಮಾನಿಗಳೂ ಅಭಿಮಾನಿನಿಯರೂ ದುಂಬಾಲು ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಭಾನುವಾರ ಸಮಾಂತರ ವೇದಿಕೆ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಲ್‌ನಲ್ಲಿ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಿದ್ದವು. ಕವಿಗೋಷ್ಠಿ ಚೆನ್ನಾಗಿ ಮೂಡಿಬಂತು. ಅಮೆರಿಕನ್ನಡಿಗ ಕವಿಗಳನೇಕರು ತಂತಮ್ಮ ಕವನಗಳನ್ನು ವಾಚಿಸಿದರು. 'ಮಕ್ಕಳ ಸಾಹಿತ್ಯ' ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು, ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಕೊರತೆ, ಅದನ್ನು ನೀಗಬೇಕಾದ ಆವಶ್ಯಕತೆಯನ್ನು ಅವರು ವಿವರಿಸಿದರು. ಅದಾದ ಮೇಲೆ "ರಂಗ ಪ್ರಪಂಚ" ಎಂಬ ಗೋಷ್ಠಿ ಇತ್ತು. ಮೈಸೂರಿನ ರಂಗಕರ್ಮಿ ರಾಜಶೇಖರ ಕದಂಬ ಅವರು ಸಮಕಾಲೀನ ರಂಗಭೂಮಿಯ ಸ್ಥಿತಿಗತಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.

English summary
7th AKKA World Kannada Conference, Atlanta, USA. Highlights of day 3 by Srivathsa Joshi. Day 3 witnessed hoards of activities including interaction with TN Seetharam, singing by Kikkeri Krishnamurthy, AKKA Idol. At the end Dr. Ramaswamy, the person behind sammelana, was a satisfied person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X