ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರುಹರಟೆಮಲ್ಲ ಪ್ರೊ. ಕೃಷ್ಣೇಗೌಡರ ಸಂದರ್ಶನ

By Shami
|
Google Oneindia Kannada News

Prof Krishne Gowda
ವೃತ್ತಿಯಿಂದ ಉಪಾಧ್ಯಾಯ, ಪ್ರವೃತ್ತಿಯಿಂದ ಹಾಸ್ಯಗಾರರಾಗಿರುವರು ನಮ್ಮ ಪ್ರೊ. ಕೃಷ್ಣೇಗೌಡರು. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ, ಜಾನಪದ ತಜ್ಞರಾಗಿ, ಹಾಡುಗಾರರಾಗಿ ಮತ್ತು ಕನ್ನಡ ಜನರ ಒಡನಾಡಿಯಾಗಿ ಜನಮನಗಳನ್ನು ಅಪಹರಿಸಿರುವ ಜಾಣರು ಅವರು. ವೇದಿಕೆ ಹತ್ತಿದರೆ ಸಾಕು, ನಿರರ್ಗಳವಾಗಿ, ಸ್ಪಷ್ಟವಾಗಿ, ಲೀಲಾಜಾಲವಾಗಿ ಸಂಪದ್ಭರಿತ ತಮಾಷೆಯ ಮಳೆ ಸುರಿಸುವ ಪ್ರವೀಣ ಹಾಸ್ಯಗಾರರು ಅವರು.

ಕನ್ನಡ ವಿಶ್ವದಲ್ಲಿ ವಿಸ್ತೃತ ಪ್ರವಾಸ ಮಾಡಿ ಸಹಸ್ರಾರು ಕನ್ನಡಿಗರ ಮೊಗದಲ್ಲಿ ನಗೆ ಮಿಂಚು ತರಿಸಿರುವ ಗೌಡರು ಮೈಸೂರು ವಾಸಿ. ಮೊನ್ನೆ ಅವರು ಸಿಂಗಪುರಕ್ಕೆ ಹೋಗಿದ್ದಾಗ ಅಲ್ಲಿನ ಕನ್ನಡ ಸ್ನೇಹಿತರು ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ. ಗೌಡರ ಸರಸ ಸಂಭಾಷಣೆಗಳನ್ನು ಕೇಳಿ ನಕ್ಕು ನಕ್ಕು ಸುಸ್ತಾದವರು ಅವರ ಸಂದರ್ಶನವನ್ನು ಓದಲು ಈಗ ಸಜ್ಜಾಗಬೇಕು - ಸಂಪಾದಕ.

ಪ್ರ : ಸರ್, ನೀವು ಒಬ್ಬ ಅಧ್ಯಾಪಕರಾಗಿ ಹಾಸ್ಯವನ್ನು ಅಪ್ಪಿಕೊಂಡದ್ದು ಹೇಗೆ?

ಕೃ ಗೌ:
ಹೌದು. ನನ್ನದು ಅಧ್ಯಾಪಕ ವೃತ್ತಿ, ನಗಿಸುವುದೊಂದು ಹವ್ಯಾಸವಷ್ಟೆ, ಇದು ನನ್ನ ಆಯ್ಕೆಕೂಡ ಅಲ್ಲ. ಜನಗಳನ್ನ ನಗಿಸಬೇಕಂತ ಕೂಡ ಅಂದುಕೊಂಡವನಲ್ಲ, ಅದು ಆಗೋಯ್ತು ಅಷ್ಟೆ. ನನಗೆ ಗೊತ್ತಿಲ್ಲದೆ ನನ್ನಲ್ಲಿ ಒಬ್ಬ ಹಾಸ್ಯಗಾರ ಅಡಗಿದ್ದಾನೆ ಮತ್ತು ಜನರು ಆವನನ್ನು ಸ್ವೀಕರಿಸಿದ್ದರಿಂದ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ.

ಪ್ರ : ಹಾಸ್ಯದಲ್ಲಿ ಹೊಸತನ್ನು ಸೃಷ್ಟಿಸಿ ನಗಿಸುವುದು ಬಹಳ ಕಷ್ಟ, ಅಲ್ವಾ ಸಾರ್?

ಕೃ ಗೌ: ಇದು ಹಾಸ್ಯಗಾರರಿಗೆ ಇರುವ ದೊಡ್ಡ ಸಮಸ್ಯೆ, ಹಾಡುಗಾರರಿಗೆ ಈ ತೊಂದರೆಯಿಲ್ಲ, ಅವರು ಅದೇ ಹಾಡನ್ನು ಸಾವಿರಸಲ ಹಾಡಿದರೂ ಪ್ರೇಕ್ಷಕರು ಕೇಳುತ್ತಾರೆ ಆದರೆ ಹಾಸ್ಯ ಇದಕ್ಕೆ ಹೊರತು. ಹಾಸ್ಯದಲ್ಲಿ ಪ್ರತಿಸಲ ಹೊಸತನ್ನು ನಿರೀಕ್ಷಿಸುತ್ತಾರೆ ಇದು ನಮಗೊಂದು ಸವಾಲಿದ್ದಂತೆ. ನಮ್ಮ ದಿನನಿತ್ಯದ ಬದುಕಲ್ಲಿ ಹೊಸತು ಸಿಗುತ್ತದೆ, ನಮ್ಮನ್ನು ನಮ್ಮಿಂದ ಹೊರಗಡೆ ನಿಂತು ನೋಡಿದರೆ ಅನೇಕ ತಮಾಷೆಗಳು ಕಾಣಸಿಗುತ್ತವೆ.

ಪ್ರ :
ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಈ ಜನಪದ ಸೊಗಡಿನಲ್ಲಿ ಅಡಗಿದೆ, ಆದರೆ ಇತ್ತೀಚಿಗೆ ಅದು ನಶಿಸುಹೋಗುತ್ತಿದೆಯೆಂಬ ಆತಂಕವಿದೆ. ಹಿಂದೆ ಹಳ್ಳಿಗಳಲ್ಲಿ ಇದ್ದ ಎಷ್ಟೊಂದು ಪಾತ್ರಗಳು ಮರೆಯಾಗಿ ಹೋಗುತ್ತಿವೆಯಲ್ಲವೆ?

ಕೃ ಗೌ:
ಹೌದು. ಮೊದಲು ನಮಗೆ ಸ್ಪಷ್ಟತೆ ಇರುವುದು ತುಂಬ ಮುಖ್ಯ. ಭಾರತೀಯ ಸಂಸ್ಕೃತಿ ಎಂದಾಕ್ಷಣ ನಮ್ಮ ಕಾಲಿಗೆ ನಾವು ಮುಗಿದುಕೊಳ್ಳುತ್ತೀವಿ, ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ಳುತ್ತೀವಿ. ಯಾವ ದೇಶದಲ್ಲೂ ಒಳ್ಳೆಯದು ಮಾತ್ರ ಇರುವುದಿಲ್ಲ. ನಾನು ಜಗತ್ತಿನ ಅನೇಕ ಕಡೆ ಓಡಾಡಿದ್ದೇನೆ, ಜನಜೀವನವನ್ನು ನೋಡಿದ್ದೇನೆ. ಅದರ ಆಧಾರದ ಮೇಲೆ ಹೇಳಬೇಕೆಂದರೆ ಬೆಳೆಯುವಂತಹ ದೇಶಗಳೆಂದರೆ ಒಳ್ಳೆಯದನ್ನು ನೋಡಿ ನೋಡಿ ಕಲಿಯುವುದು ಮತ್ತು ಅದೇ ತರಹ ಕೆಟ್ಟದನ್ನು ನೋಡಿ ನೋಡಿ ಬಿಡುವುದು. ಎಲ್ಲ ದೇಶಗಳು ತಮ್ಮದೆ ಆದ ಅಚಾರ-ವಿಚಾರಗಳೊಡನೆ ಬೆಳೆದು ಬಂದಿವೆ.

ಪ್ರ : ಸರ್, ಇತ್ತೀಚಿಗೆ ಹಾಸ್ಯ ಸಾಹಿತ್ಯದ ಕೊರತೆಯಿದೆ ಎನಿಸುತ್ತಿದೆ, ಕಾರಣವೇನಿರಬಹುದು?

ಕೃ ಗೌ: ತುಂಬ ವಿಷಾದದಿಂದ ಹೇಳಬೇಕು, ಭಾರತೀಯನಾಗಿ ಹೇಳುತ್ತಿದ್ದೇನೆ ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ಹಾಸ್ಯಪ್ರಜ್ಞೆ ಕಡಿಮೆಯಾಗಿದೆ. ಹಿಂದೆ ತುಂಬ ಹಾಸ್ಯಪ್ರಜ್ಞೆ ಇದ್ದಂತಹ ದೇಶ ನಮ್ಮದು, ರಾಜರ ಆಸ್ಥಾನದಲ್ಲಿ ವಿದೂಷಕನೆಂದಿರುತ್ತಿದ್ದ. ಅವನಿಗೆ ಬಹಳ ದೊಡ್ಡ ಸ್ವಾತಂತ್ರ್ಯವಿರುತಿತ್ತು, ರಾಜನ ಅಂತಃಪುರಕ್ಕೆ ನೇರವಾಗಿ ಹೋಗುವಷ್ಟು ಸ್ವಾತಂತ್ರ್ಯವನ್ನು ಹೊಂದಿರುತ್ತಿದ್ದ. ಈಗ ಶೂನ್ಯದಿಂದ ಹಾಸ್ಯವನ್ನು ಸೃಷ್ಟಿಸಬೇಕು, ಯಾವುದೋ ಜಾತಿ,ಪಂಥ,ಮತ ಮತ್ತು ಯಾವುದೇ ಪಕ್ಷದ ಬಗ್ಗೆ ಮಾತನಾಡುವಂತಿಲ್ಲ. ಅವರಿಗೆ ಮುಜಗರವಾಗುತ್ತೆ. ಪ್ರತಿಕ್ರಯಿಸುತ್ತಾರೆ, ವಿವರಣೆ ಕೇಳುತ್ತಾರೆ ವಿಶಾಲ ಮನೋಭಾವನೆ ಇರುವುದಿಲ್ಲ, ಎಲ್ಲವು ಗಂಭೀರವೆನಿಸಿದಾಗ ಹಾಸ್ಯಕ್ಕೆಲ್ಲಿ ಜಾಗ? ಆದ್ದರಿಂದ ಹಾಸ್ಯಕ್ಕೆ ಇದು ಅದ್ಭುತವಾದಂತಹ ದೇಶವಲ್ಲ. ಅದೇ ನೋಡಿ ಇಂಗ್ಲೆಂಡ್ ನವರು ಸ್ಕಾಡ್ಲೆಂಡ್ ಮೇಲೆ ಹಾಸ್ಯ ಮಾಡುತ್ತಾರೆ, ಸ್ಕಾಡ್ಲೆಂಡ್‌ನವರು ಇಟಲಿ ಮೇಲೆ, ಇಟಲಿಯವರು ಪೋಲಿಶ್‌ನವರ ಮೇಲೆ ಹಾಸ್ಯಮಾಡುತ್ತಾರೆ.

ಪ್ರ: ಜನಪದ ಸಾಹಿತ್ಯವೆಂಬುದು ಹಳ್ಳಿಗಳಿಂದ ಬಂದಿದ್ದು, ಈಗ ಹಳ್ಳಿಯಲ್ಲಿ ಕೃಷಿಜೀವನ ಕ್ಷೀಣಿಸುತ್ತಿದೆ ಇದರಿಂದ ಜನಪದ ಸಾಹಿತ್ಯ ಕುಂಠಿತವಾಗುತ್ತಿದೆಯ?

ಕೃ ಗೌ:
ಸಾಹಿತ್ಯವೆಂಬುದು ನೇರವಾಗಿ ಜೀವನದಿಂದ ಒದಗಿ ಬರುವಂತಾದ್ದು, ಜೀವನದ ರೀತಿ ನೀತಿಗಳು ಬದಲಾದಂತೆಲ್ಲ ಸಾಹಿತ್ಯಕೂಡ ಬದಲಾಗುತ್ತ ಹೋಗುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಹಿಂದೆ ಹಚ್ಚೆಹುಯ್ಯಿಸಿಕೊಳ್ಳುವಾಗ "ಹಚ್ಚೆಹುಯ್ಯಿಸಿದಮ್ಮ ರಾಕ್ಲಸೀತಮ್ಮ, ಹಸುಮಕ್ಕಳಿಗೆ ಹಾಲ ಎರೆದೆಮ್ಮ ಹೂವೆ ನಿನ್ನಾರೆ ನಾನಿಟ್ಟು ಬಂದೆ" ಎಂದು ಹಾಡನ್ನು ಹೇಳುತ್ತಿದ್ದರು. ಹಚ್ಚೆಹುಯ್ಯಿಸಿಕೊಳ್ಳುವ ಸಂಸ್ಕೃತಿ ಹೋಗಿ ನೀವು ಸ್ಟಿಕರ್ ಹಚ್ಚಿಕೊಂಡ್ರೆ ಆ ಹಾಡಿಗೆ ಅರ್ಥ ಹೋಗುತ್ತೆ. ಆದ್ರೆ ಜೀವನ ಅಷ್ಟೊಂದು ಬರಡಲ್ಲ ನೀವು ಬದುಕನ್ನೆ ಪ್ರೀತಿಸುವುದಾದ್ರೆ ಯಾವುದನ್ನೊ ಮುಗಿಸಿ ಇನ್ನೊಂದು ಹುಟ್ಟುತ್ತೆ, ಹುಟ್ಟಬೇಕು. ನಾವು ಮನುಷ್ಯತ್ವವನ್ನು ಮರೆತು ಎಲ್ಲವನ್ನು ಯಾಂತ್ರಿಕರಿಸುತ್ತಿದ್ದೇವೆ. ಮನೆಯಲ್ಲಿ ಅಪ್ಪ-ಅಮ್ಮ ಹೊಗಳುವುದು ಹೆಚ್ಚು ಅಂಕಗಳನ್ನು ತೆಗೆದುಕೊಂದಿರುವವನಿಗೆ ಮಾತ್ರ ಒಳ್ಳೆಯವನಿಗಲ್ಲ. ಒಳ್ಳೆಯದು, ಒಳ್ಳೆಯವನೆಂಬುದು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ.

ಪ್ರ :
ನೀವು ಅಧ್ಯಾಪಕರು, ಹಾಡು ಹೇಳುತ್ತೀರಿ, ಹಾಸ್ಯವನ್ನು ಕರಗತ ಮಾಡಿಕೊಂಡಿದ್ದೀರಿ ಇವುಗಳಲ್ಲಿ ನಿಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದುದು ಯಾವುದು?

ಕೃ ಗೌ: ನನಗೆ ಎಲ್ಲವು ಇಷ್ಟ, ನಾನು ಯಾವುದನ್ನು ಸುಮ್ಮನೆ ಬದುಕುವುದಿಲ್ಲ. ಹರಟುವುದು, ಊಟಮಾಡುವುದು, ಮಕ್ಕಳೊಡನೆ ಹರಟುವುದು ಎಲ್ಲವೂ ಇಷ್ಟ ನನಗೆ. ಬದುಕಿನಲ್ಲಿ ಏನು ಮಾಡಿದರು ಇಷ್ಟಪಟ್ಟು ಮಾಡಬೇಕು, ಬೇರೆಯವರಿಗೆ ಅಲ್ಲ ನಮಗೋಸ್ಕರ ನಮ್ಮ ಸಂತೋಷಕ್ಕಾಗಿ ಮಾಡಿ ಅದನ್ನು ಅನುಭವಿಸಬೇಕು. ಪ್ರತಿಯೊಂದನ್ನು ರಚನಾತ್ಮಕ, ಭಾವನಾತ್ಮಕ ಮತ್ತು ಪ್ರಶಂಸನೀಯ ದೃಷ್ಟಿಯಿಂದ ನೋಡುವ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಪ್ರ : ನಿಮ್ಮ ಹಾಸ್ಯದಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ಒಂದು ಸಂದೇಶವನ್ನು ಕೊಡುತ್ತೀರೆಂಬುದನ್ನು ಕಳೆದಬಾರಿಯ ನಿಮ್ಮಯ ಕಾರ್ಯಕ್ರಮದಲ್ಲಿ ಗಮನಿಸಿದ್ದೀನಿ, ಒಬ್ಬ ಅಧ್ಯಾಪಕರಾಗಿ ನೀವು ನಿಮ್ಮ ಹಾಸ್ಯದ ಮುಖೇನ ನಮಗೆ ಕೊಡಲು ಬಯಸಿದಂತಹ ಸಂದೇಶದ ಬಗ್ಗೆ ಒಂದೆರಡು ಮಾತು?

ಕೃ ಗೌ:
ತುಂಬ ಒಳ್ಳೆಯ ಪ್ರಶ್ನೆ. ಹಾಸ್ಯವೆಂಬುದು ಕೊನೆಯಲ್ಲ, ಅದೊಂದು ವಾಹನ ಅದರ ಮುಖಾಂತರ ನಾನು ಬೇರೆ ವಿಷಯ ಹೇಳಲು ಪ್ರಯತ್ನಿಸುತ್ತೇನೆ. ಬರಿ ಹಾಸ್ಯವಾದರೆ ನಾನೊಬ್ಬ ವಿದೂಷಕನಾಗಿ ಬಿಡುತ್ತೇನೆ. ನಾನು ಹಾಸ್ಯದ ಮೂಲಕ ಭಾಷಶಾಸ್ತ್ರವನ್ನು ಕಲಿಸುವ ಪ್ರಯತ್ನಮಾಡುತ್ತೇನೆ, ಕಾವ್ಯವನ್ನು ಕಲಿಸುವ, ಜೀವನದ ವೈವಿಧ್ಯಗಳನ್ನು ಹೇಳುವುದಕ್ಕೆ ಪ್ರಯತ್ನಿಸುತ್ತೇನೆ.

ಸಂದರ್ಶನ : ಸುದ್ಧಿವಾಹಿನಿ ತಂಡ (ಸಿಂಗಪುರ)

[ಕನ್ನಡ ಸಂಘ (ಸಿಂಗಪುರ) ಮತ್ತು ಹೃದಯವಾಹಿನಿ (ಮಂಗಳೂರು) ಅವರ ಜಂಟಿ ಆಯೋಜನೆಯಲ್ಲಿ ನಡೆದ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೆಳನದಲ್ಲಿ ಭಾಗವಹಿಸಿದ್ದ ಪ್ರೊ.ಕೃಷ್ಣೇಗೌಡ ಅವರೊಂದಿಗೆ ನಡೆಸಿದ ಸಂವಾದ]

English summary
An interview with Prof. Krishne Gowda, Kannada teacher and a humor artist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X