• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವೀಣ್ ಗೋಡ್ಖಿಂಡಿ ಜೊತೆ ಕೊಳಲ ಮಾತು

By Prasad
|

ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ ಮತ್ತು ಬಸವರಾಜ ರಾಜಗುರು ಅವರಂತಹ ಅನರ್ಘ್ಯ ರತ್ನಗಳನ್ನು ನೀಡಿದ ಧಾರವಾಡ ಈಗ ಮತ್ತೊಂದು ಪ್ರತಿಭೆಯನ್ನು ಸಂಗೀತ ಲೋಕಕ್ಕೆ ನೀಡಿದೆ. ಅವರೆಲ್ಲ ಗಾಯನ ಗಂಧರ್ವರಾದರೆ ಇವರು ವಾದ್ಯ ಗಂಧರ್ವರು. ಕೊಳಲು ಸುರಮಣಿ ಎಂದೇ ಪ್ರಖ್ಯಾತರಾದ ಪ್ರವೀಣ್ ಗೋಡಖಿಂಡಿಯವರ ಹೆಸರು ಈಗ ಭಾರತದಲ್ಲಿ ಅಗ್ರಗಣ್ಯವಾಗಿದೆ. ಇವರ ವೇಣುನಿನಾದವನ್ನು ಪ್ರತ್ಯಕ್ಷವಾಗಿ ಕೇಳುವ ಅವಕಾಶ ನಮಗೆ ಒದಗಿ ಬಂದಿತ್ತು - ಕನ್ನಡಸಂಘ (ಸಿಂಗಪುರ) ಹಾಗೂ ಹೃದಯವಾಹಿನಿ ಪತ್ರಿಕೆ(ಮಂಗಳೂರು)ಯ ನೇತೃತ್ವದಲ್ಲಿ 27, 28ನೇ ನವೆಂಬರ್ 2010ರಂದು ಸಿಂಗಪುರದಲ್ಲಿ ಭವ್ಯವಾಗಿ ನಡೆದ 7ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ. ಆಗ ಗೋಡಖಿಂಡಿಯವರನ್ನು ಸಂದರ್ಶನ ಮಾಡುವ ಅವಕಾಶ ಸುದ್ದಿವಾಹಿನಿ ತಂಡದವರಿಗೆ ಸಿಕ್ಕಿದ್ದು ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿತ್ತು.

ಪ್ರಶ್ನೆ: ಸಂಗೀತ ಪ್ರಧಾನ ಕುಟುಂಬವೊಂದರಿಂದ ಬಂದ ನಿಮಗೆ ಸಂಗೀತದಲ್ಲಿ ರುಚಿ ಸಹಜ. ಆದರೆ ಇಂಜಿನಿಯರ್ ಆಗಿ ತರಬೇತಿಗೊಂಡ ನೀವು ಸಂಗೀತವನ್ನೇ ಜೀವನದ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ಸ್ವೀಕರಿಸಬೇಕು ಎಂಬ ಭಾವನೆ ಮೂಡಿದ್ದು ಹೇಗೆ?

ಪ್ರವೀಣ್: ಮೂರನೇ ವಯಸ್ಸಿನ್ಯಾಗ ಕಲಿಕೆ ಪ್ರಾರಂಭ ಮಾಡ್ದೆ. ಮನ್ಯಾಗನ ಸಂಗೀತದ ವಾತಾವರಣ ಇತ್ತು. ತಂದೀ ಅವರೇ ಸಂಗೀತ ಹೇಳಿಕೊಡ್ತಿದ್ರು. ಇಂಜಿನೀಯರ್ ಕಲಿಕಿ ಮುಗದ ಮ್ಯಾಲ ಮುಂದ ಏನು ಅನ್ನೂ ಪ್ರಶ್ಣೀ ಬಂದಾಗ, ತಂದೀ ಒಂದು ಸಲಹಾ ಕೊಟ್ರು. "ಒಂದು ವರ್ಷ ತನಕಾ ಸಂಗೀತ ಪ್ರಯತ್ನಾ ಮಾಡು, ಗಾಡೀ ಚಲೋ ಹೊಂಟತು ಅಂದ್ರ ಸರಿ, ಇಲ್ಲದಿದ್ರ ಇಂಜಿನೀಯರ್ ಡಿಗ್ರೀ ಅಂತೂ ಅದನೇ ಅದ" ಅಂದ್ರು. ಇದು ನನ್ನ ಜೀವನದಾಗ ಒಂದು ಟರ್ನಿಂಗ್ ಪಾಯಿಂಟ್ ಅನಬಹುದು. ನನ್ನ ತಂದೀ ನನಗ ಸಂಗೀತ ಮತ್ತು ವಿದ್ಯಾಭ್ಯಾಸ ಎರಡೂ ಕಡೆ ಲಕ್ಷ ಕೊಡು ಅಂತ ಮೊದಲಿಂದ ಹೇಳ್ತಿದ್ರು. "ಒಮ್ಮೆ ಒಂದು ಪದವಿ ತೊಗೊಂಡ್ ಮ್ಯಾಲ ನಿನಗೇ ಏನೂ ಸರಿ ಕಾಣುತ್ತೋ ಅದನ್ನು ಮಾಡು" ಅಂದ್ರು. ಅವರ ಸಹಕಾರ, ಅವರ ಸಲಹೆಗಳಂತೆ ನಡಕೊಂಡ್ ಹೋಗಿದ್ರಿಂದ ದಾರಿ ಸುಗಮ ಆಯ್ತು ಅನಬಹುದು.

ಪ್ರಶ್ನೆ: ಜನಪ್ರಿಯ ಸಿನೆಮಾ ಹಾಡುಗಳ ಧುನ್‌ನಿಂದ ಆರಂಭಿಸಿ ಜನರನ್ನು ಶಾಸ್ತ್ರೀಯ ಸಂಗೀತದ ಸಂಕೀರ್ಣತೆಗಳ ಪರಿಚಯ ಮಾಡಿಸುವುದು ತಮ್ಮ ವೈಶಿಷ್ಟ್ಯ. ಹೀಗೆ ಮಾಡುಬೇಕೆಂಬ ಕಲ್ಪನೆ ತಮಗೆ ಹೇಗೆ ಬಂದಿತು?

ಪ್ರವೀಣ್ : ಎಲ್ಲಾ ಕಲಾವಿದರೂ ಏನರ ಒಂದು ಹೊಸತನ ಹುಡುಕೋದರಾಗ ಇರ್ತಾರ. ಮತ್ತ ಜಾಸ್ತಿ ಜನಕ್ಕ ನಮ್ಮ ಸಂಗೀತ ಮುಟ್ಟಬೇಕು ಅಂದ್ರ ಅದರಲ್ಲೇನರ ಒಂದು ಆಕರ್ಷಣಿ ಬೇಕು ನೋಡ್ರಿ. ಚಲನಚಿತ್ರ ಮತ್ತು ಸುಗಮ ಸಂಗೀತದಾಗ ನನಗ ಮೊದಲಿಂದನೂ ಸ್ವಲ್ಪ ಆಸಕ್ತಿ. ಆ ಸಂಗೀತ ನಾನು ಭಾಳ ಆಳವಾಗಿ ಕೇಳ್ತಿದ್ದೆ. ಅದರೊಳಗ ಏನು ವಾದ್ಯಗಳನ್ನ ಬಳಸಿದಾರ, ಏನು ಹಿನ್ನೆಲೆ ಅದ, ಏನೂ ಮುರಕಿ ಅವ, ಏನು ಖಟಕಾ ಅವ ಅಂತ ನಾನು ಆಸಕ್ತಿಯಿಂದ ಕೇಳ್ತಿದ್ದೆ. ಹಿಂಗೇ ನನಗ ಆ ಸಂಗೀತಾನ ಭಾಳ ವ್ಯಾಕರಣಬದ್ಧವಾಗಿ ಕೇಳೋ ರುಚಿ ಬೆಳೀತು. ಅಲ್ಲದ ವಿವಿಧ ಭಾರತಿ ಒಳಗ "ಸಂಗೀತ ಸರಿತಾ" ಅಂತ ಒಂದು ಕಾರ್ಯಕ್ರಮ ಬರ್ತಿತ್ತು. ಅದರೊಳಗೂ ಒಂದ್ ರಾಗದ ಆರೋಹ, ಅವರೋಹ, ಸಣ್ಣ ಬಂದಿಶ್ ಮತ್ತು ಆ ರಾಗದಾಗ ಇರೂ ಅಂಥ ಒಂದು ಅಥವಾ ಎರಡು ಸಿನೇಮಾ ಹಾಡುಗಳನ್ನ ಕೇಳಿಸ್ತಾ ಇದ್ರು. ಅದನ್ನೇ ಇನ್ನಷ್ಟು ಬೆಳೆಸಿ ಕಂಟೆಂಪೊರರೈಸ್ ಮಾಡಿ ಜನರ ತನಕ ಮುಟ್ಟುಸೂಣು ಅಂತ ವಿಚಾರ ಮಾಡ್ದೆ. ಸಂಗೀತ ನಿರ್ಮಾಪಕರಾದಂಥಾ ಪೂಜಾರ್ ಅವರನ್ನು ಭೆಟ್ಟಿ ಆಗಿ, ನನ್ನ ವಿಚಾರ ಹೇಳಿದೆ. ಅವರೂ ಒಪ್ಪಿಕೊಂಡು ಮಾಡಿದ ಮ್ಯಾಲ ಅದು ಸುಪರ್ ಹಿಟ್ ಆಯ್ತು. ಕನ್ನಡ, ಹಿಂದಿ ಸಿನೇಮಾ ಧುನ್‌ಗಳ ಧಾಟಿ ಮ್ಯಾಲಿನ ಈ ಅಲ್ಬಮ್‌ಗಳು ಈಗ ಎಲ್ಲಾ ಕಡೆ ಇಷ್ಟೊಂದ್ ಹಿಟ್ ಅಗ್ಯಾವ ಅಂದ್ರ - ಎಲ್ಲಾ ಮಾಲ್‌ಗಳೊಳಗ, ಲಿಫ್ಟ ಒಳಗ ಎಲ್ಲಾ ಕಡೆ ಅವೇ ಧುನ್‌ಗಳು ಕೇಳಿಸ್ತಾವ. ಈ ಅಲ್ಬಂಗಳನ್ನ ಕೇಳಿದ ಜನಗಳು, ಇದನ್ನ ನೀವು ಟಿವಿ ಮಾಧ್ಯಮದಾಗ ಯಾಕ್ ತರಬಾರದು ಅಂತ ಕೇಳಿದ್ರು. ಆವಾಗ ನಾನು "ರಾಗ ರಂಜಿನಿ" ಅಂತ ಕಾರ್ಯಕ್ರಮ ಮಾಡ್ದೆ. ಅದೂ ಸಹ ಭಾಳ ಪ್ರಖ್ಯಾತ ಆಯ್ತು.

ಪ್ರಶ್ನೆ: ಇನ್ನೂ ಏನಾದರೂ ಹೊಸತನ ತರಬೇಕೆಂಬ ವಿಚಾರ ಇದೆಯೆ?

ಪ್ರವೀಣ್: ಸಂಗೀತಗಾರ ಅಂದ್ರ ಏನಾದರೂ ಹೊಸತನ ಮಾಡಬೇಕು ಅಂತ ಆಸಕ್ತಿ ಇದ್ದೇ ಇರತದ. ಸ್ಪ್ಯಾನಿಷ್ ಗಿಟಾರ್ ಅದರಲ್ಲೂ ಫ್ಲೆಮೆಂಕೋ ಗಿಟಾರ್ ಜೊತೆ ಜುಗಲ್‌ಬಂದಿ ಮಾಡಬೇಕೆಂದು ಮಾತುಕತೆ ನಡದದ. ಕೊಳಲಿನ ಟೆಕ್ನಿಕ್‌ಗಳ ಮ್ಯಾಲ ಸಂಶೋಧನಾ ಮಾಡಲಿಕ್ಕ ಹತ್ತೀನಿ. ಮುಂದ ಎಲ್ಲ ಹಂತ ಹಂತವಾಗಿ ಬೆಳಕಿಗೆ ಬರ್ತಾವ.

ಪ್ರಶ್ನೆ: ಕಾರ್ಯಕ್ರಮ ನೀಡಲು ಮೊದಲ ಬಾರಿಗೆ ಸಿಂಗಪುರಕ್ಕೆ ಬಂದಿದ್ದೀರಿ. ನಿಮಗೆ ಈ ಸಮ್ಮೇಳನದ ಬಗ್ಗೆ, ಸಿಂಗಪುರದ ಬಗ್ಗೆ ಏನನ್ನಸ್ತಾ ಇದೆ?

ಪ್ರವೀಣ್: ಭಾಳ ಖುಷಿ ಆಗ್ಯದ. ಇಲ್ಲಿ ಜನರ ಉತ್ಸಾಹ ನೋಡಿ, ಈ ವ್ಯವಸ್ಥಾ, ಕಾರ್ಯಕ್ರಮದ ಹಾಲ್ ಎಲ್ಲಾ ನೋಡಿ ಭಾಳ ಸಂತೋಷ ಆಗ್ಯದ. ನನ್ನ ಹಳೇ ಮಿತ್ರರನ್ನೂ ನೋಡೂ ಅವಕಾಶ ಸಹಾ ಸಿಕ್ಕಿತು.

ಪ್ರಶ್ನೆ: ಪ್ರಬಲ ಮಾಧ್ಯಮವಾದ ಟಿವಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಮಹತ್ವ ದೊರಕುತ್ತಿಲ್ಲ. ಇದರಿಂದ ಜನಗಳಿಗೆ ಅದು ಮುಟ್ಟುತ್ತಿಲ್ಲ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು?

ಪ್ರವೀಣ್: ಇದು ಅಕ್ಷರಶಃ ಸತ್ಯ. ಖಾಸಗೀ ಚಾನೆಲ್‌ಗಳು ಯೋಚನೀ ಮಾಡೂ ರೀತಿನೇ ಬ್ಯಾರೆ. ಹಂಗ ಒಂದು ದೃಷ್ಟಿಯಿಂದ ನೋಡಿದ್ರ, ನಮ್ಮ ಸಂಸ್ಕೃತೀನ ಅವರ ಕೈಯಾಗ ಕೊಟ್ಟ ಬಿಟ್ಟೀವೇನೋ ಅಂತ ಆತಂಕ ಅದ. ಆದರೂ "ರಾಗ ರಂಜಿನಿ" ಅಂಥಾ ಕಾರ್ಯಕ್ರಮಗೋಳು ಮರುಭೂಮಿ ಒಳಗಿನ ಓಯಸಿಸ್ ಥರಾ ಅಲ್ಲಲ್ಲಿ ಕಂಡು ಬರ್ತಾವ. ಇಂಥ ಕಾರ್ಯಕ್ರಮಗಳ ಮೂಲಕ ನಮ್ಮ ಕೈಲಾದಷ್ಟು ಕೆಲಸ ನಾವು ಮಾಡಲಿಕ್ಕ ಹತ್ತೀವಿ. ನನ್ನ ಅನಿಸಿಕಿಗಳ ಪ್ರಕಾರ ಈಗ ರಿಯಾಲಿಟಿ ಶೋಗಳಂಥವುಗಳು ವಿಜೃಂಭಿಸಿದರೂ, ಕ್ರಮೇಣ ಕಾಲಚಕ್ರಾ ತಿರುಗಿ ಶಾಸ್ತ್ರೀಯ ಸಂಗೀತಕ್ಕ ಮತ್ತ ಪ್ರಾಮುಖ್ಯತಾ ಬಂದೇ ಬರ್ತದ ಅನ್ನೂದು ನನ್ನ ನಂಬಿಕಿ.

ಪ್ರಶ್ನೆ: ಜನರಲ್ಲಿ ಶಾಸ್ತ್ರೀಯ ಸಂಗೀತ ಕಲಿಯೋ ಉತ್ಸಾಹ ಕಡಿಮೆ ಅಗ್ತಾ ಇದೆಯೋ ಹೇಗೆ?

ಪ್ರವೀಣ್: ನನಗನಿಸಿದರ ಮಟ್ಟಿಗೆ ಶಾಸ್ತ್ರೀಯ ಸಂಗೀತ ಕಲಿಯೋ ಉತ್ಸಾಹ ಕಮ್ಮಿ ಆಗಿಲ್ಲ, ಆಗೂದು ಇಲ್ಲ. ಒಂದು ಬದಲಾವಣೆ ಕಂಡು ಬಂದಿದ್ದು ಅಂದ್ರ, ಮಕ್ಕಳ IQ ಭಾಳ ಜಾಸ್ತಿ ಆಗ್ಯದ. ನಾನು ನನ್ನ ಬಗ್ಗೆನ ಹೇಳಬೇಕಂದ್ರ, ಹತ್ತು ವರ್ಷ ರಿಯಾಜ್ ಮಾಡ್ದೆ. ಶಾಸ್ತ್ರೀಯ ಸಂಗೀತದ ಆಳದ ಮತ್ತು ಅರ್ಥದ ಬಗ್ಗೆ ನನಗ ಅರಿವಾಗಲಿಕ್ಕೆ ತೊಡಗಿದ್ದು ನನ್ನ ಹದಿನಾರನೇ ವರ್ಷದಲ್ಲಿ. ನನ್ನ ಮಗ ಅದನ್ನ ಆರನೇ ವರ್ಷಕ್ಕೆ ಕಲತು ಅದೇ ಮಟ್ಟದಾಗ ಇದ್ದಾನ. ಅವನ ಜೊತೆಗಿರೋ ಹಲವಾರು ಮಕ್ಕಳೂ ಅದೇ ಮಟ್ಟಕ್ಕಿದ್ದಾರ. ಇದರಿಂದ ನಮಗ ಶಾಸ್ತ್ರೀಯ ಸಂಗೀತದ ಭವಿಷ್ಯದ ಬಗ್ಗೆ ಇರೂ ಆತಂಕ ಸ್ವಲ್ಪ ಮಟ್ಟಿಗ ಕಮ್ಮಿಯಾಗ್ಯದ. ಆದರೆ ಮಕ್ಕಳ ಆಸಕ್ತೀನ ಸರಿಯಾದ ಮಾರ್ಗದಾಗ ಕೊಂಡೊಯ್ಯಬೇಕಾಗ್ಯದ. ಅದಕ್ಕ ನನ್ನ ಪ್ರಕಾರ ತಂದೀ ತಾಯಿಗಳು ಶೀಘ್ರ ಜನಪ್ರಿಯತೆಯನ್ನ ಗುರಿ ಆಗಿಟ್ಟು ಕೊಳ್ಳಬಾರದು ಅಂತ ನನಗ ಅನಿಸ್ತದ.

ಪ್ರಶ್ನೆ: "ಎದೆ ತುಂಬಿ ಹಾಡುವೆನು" ತುಂಬಾ ಜನಪ್ರಿಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿನ ನಿಮ್ಮ ಅನುಭವಗಳ ಬಗ್ಗೆ ಸ್ವಲ್ಪ ಹೇಳುತ್ತೀರಾ?

ಪ್ರವೀಣ್: ಇದು ಭಾಳ ಉತ್ತಮ ಗುಣಮಟ್ಟದ ಕಾರ್ಯಕ್ರಮ. ಅದರಾಗೂ ಬಾಲು ಸರ್ (ಎಸ್. ಪಿ. ಬಾಲಸುಬ್ರಮಣ್ಯಂ) ಅವರದು ಭಾಳ ಅದ್ಭುತ ವ್ಯಕ್ತಿತ್ವ ಮತ್ತು ಸರಳ ಜೀವಿ ಅವರು. ಅವರು ಒಂದು ರೀತಿನ್ಯಾಗ ನನ್ನ ಗುರು ಸಹಾ ಅನಬಹುದು. ಸಂಗೀತದ ವಿಚಾರದಾಗ, ನಮ್ಮ ನಡವಳಿಕೀ ವಿಚಾರದಾಗ, ಸಭಿಕರ ಜೊತೆಗಿನ ಸ್ಪಂದನಾ, ವೃತ್ತಿ ಒಳಗ ನಮ್ಮ ಬೆಳವಣಿಗೀ, ಈ ಎಲ್ಲಾದರ ಬಗ್ಗೆ ನಾನು ಸಾಕಷ್ಟು ಅವರಿಂದ ಕಲಿತಿದ್ದೀನಿ. "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಾಗ ಅವರು ನನ್ನ ಬಗ್ಗೆ, ನನ್ನ ಕಲೆಯ ಬಗ್ಗೆ ಜನಗಳಿಗೆ ಭಾಳ ಚಲೋ ಪರಿಚಯ ಮಾಡಿಕೊಟ್ರು.

ಪ್ರಶ್ನೆ: ನಿಮ್ಮ ಮನೆಯಲ್ಲಿ ಮೂರು ಪೀಳಿಗೆಗಳು ಕೊಳಲು ವಾದನದಲ್ಲಿ ಪ್ರವೀಣರು ಮತ್ತು ಅನೇಕ ಕಡೆಗಳಲ್ಲಿ ಮೂವರೂ ನುಡಿಸಿದ್ದೀರಿ. ಈ ಪ್ರಯೋಗ ಒಂದು ಯುನೀಕ್ ಪ್ರಯೋಗ. ಇದನ್ನು ಹೇಗೆ ಆರಂಭಿಸಿದಿರಿ?

ಪ್ರವೀಣ್: ನನ್ನ ಮಗ ಕೂಸಾಗಿದ್ದಾಗಿಲಿಂದ ಅವನನ್ನ ನನ್ನ ತಂದೆ ತೊಡೆ ಮೇಲೆ ಹಾಕಿಕೊಂಡು, ಸಂಗೀತದ ಪಾಠ ಮಾಡ್ತಾ ಇದ್ದರು. ಹೀಗಾಗಿ ಅವನು ಕಾರು, ಬೈಕು ಅಂತ ಆಟ ಆಡದೇ ತಾನ್‌ಪುರ ಮತ್ತು ತಬಲಾಗಳ ಜೊತೆಯೇ ಆಟ ಆಡಿದ ಅನಬಹುದು. ಅವನು ಹಂಗೆ ಅನೇಕ ವಾದ್ಯಗಳನ್ನ ನುಡಿಸಲಿಕ್ಕೆ ಹತ್ತಿದ. ಅವನ ಈ ಪ್ರತಿಭೆಯನ್ನ ಜನರ ಜೋಡಿ ಹಂಚಿಕೊಳ್ಳೂಣು ಅನ್ನೂ ಉದ್ದೇಶದಿಂದ ನಾವು ಎಲ್ಲಾರೂ ಕಾರ್ಯಕ್ರಮ ಕೊಡಲಿಕ್ಕೆ ಪ್ರಾರಂಭಿಸಿದೆವು. ಆದರ ಈಗ ಅವಾ ಎಲ್ಲರ ಹಂಗ ಬೆಳೀಯೋದು ಅಷ್ಟೇ ಮುಖ್ಯ ಆದ್ದರಿಂದ ಅವನನ್ನ ಈಚೆಗೆ ಹೆಚ್ಚು ಕಾರ್ಯಕ್ರಮ ನೀಡಲಿಕ್ಕೆ ಬಿಡುತ್ತಿಲ್ಲ. ವರ್ಷಕ್ಕೆ ಎರಡು ಮೂರು ಕಾರ್ಯಕ್ರಮಗಳನ್ನ ಮಾಡಿಸ್ತೀವಿ ಅಷ್ಟೆ.

ಪ್ರಶ್ನೆ: ತಮ್ಮ ತಂದೆ ವೆಂಕಟೇಶ ಗೋಡಖಿಂಡಿಯವರು ಹಾಡುಗಾರಿಕೆ ಮತ್ತು ಕೊಳಲು ವಾದನಗಳಲ್ಲಿ ದೊಡ್ಡ ಪಂಡಿತರು. ಅವರಿಗೆ ತಕ್ಕ ಮನ್ನಣೆ ಸಿಗಲಿಲ್ಲ. ಧಾರವಾಡದಲ್ಲಿಯೇ ಉಳಿದುಕೊಂಡಿದ್ದು ಇದಕ್ಕೆ ಕಾರಣವೆ?

ಪ್ರವೀಣ್ : ಇಲ್ಲ ಅವರು ನೌಕರಿಗೆ ಕಟ್ಟು ಹಾಕಿಕೊಂಡಿದ್ದರಿಂದ ಈ ಸಮಸ್ಯೆ ಆಯ್ತು ಅಷ್ಟೇ. ಆದೇ ಕಾರಣಕ್ಕ ಅವರು ನನಗ ಆ ಸ್ವಾತಂತ್ರ್ಯ ಕೊಟ್ಟರು. "ನಾನೇನೂ ಮಾಡಲು ಸಾಧ್ಯ ಆಗಲಿಲ್ಲವೋ ಅದನ್ನು ನನ್ನ ಮಗ ಮಾಡಲಿ" ಅನ್ನೂ ಭಾವನಾ ಅವರನ್ನ ಅದಕ್ಕ ಪ್ರೇರೇಪಿಸಿರಬೇಕು ಅಂತ ನನಗ ಅನಿಸ್ತದ.

ಸಂದರ್ಶಕರು: ಧನ್ಯವಾದಗಳು.

ಪ್ರವೀಣ್: ಧನ್ಯವಾದಗಳು.

ಮಾತುಕತೆ : ವಸಂತ ಕುಲಕರ್ಣಿ, ಎಚ್.ಸಿ. ಸುರೇಶ್, ಗಿರೀಶ್ ಜಮದಗ್ನಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flute artist "Suramani" Pravin Godkhindi interview in Singapore by Vasanth Kulkarni, HC Suresh and Girish Jamadagni. Pravin Godkhidi was in Singapore to attend 7th World Kannada Cultural Convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more