ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಸಮ್ಮೇಳನದಲ್ಲಿ ಮಿನುಗಿದ ಕನ್ನಡ ತಾರೆಯರು

By Prasad
|
Google Oneindia Kannada News

Actress Pooja Gandhi
ಎಲ್ಲರೂ ತುಂಬ ಕುತೂಹಲದಿಂದ ಕಾಯುತ್ತಿದ್ದ "ತಾರಾ ಸಂಜೆ" ಕಾರ್ಯಕ್ರಮ ಸಾಧುಕೋಕಿಲ ಅವರ ಹಾಸ್ಯಭರಿತ ನಿರ್ವಹಣೆಯ ಸಾರಥ್ಯದಲ್ಲಿ ಗಣಪತಿಯ ವಂದನೆಯೊಂದಿಗೆ ಪ್ರಾರಂಭಗೊಂಡು ಚಿರಂಜೀವಿ ಸತ್ಯ, ಪೂಜಾ ಗಾಂಧಿ, ಲೂಸ್ ಮಾದ-ಯೋಗಿ, ಐಂದ್ರಿತ ರೇ, ಯಶ್ ಅವರು ಅಮೋಘ ನೃತ್ಯವೃಂದದ ಸಮೂಹದಲ್ಲಿ ಪ್ರೇಕ್ಷಕರನ್ನು ಹಾಡಿ ಕುಪ್ಪಳಿಸುವಂತೆ ಮಾಡಿದರೆ, ರಮೇಶ್, ತಬಲಾ ನಾಣಿ ಮತ್ತು ಸಾಧು ಕೋಕಿಲರವರು ಹಾಸ್ಯಭರಿತ ಸಂಭಾಷಣೆ ಮತ್ತು ಅಣಕು-ತುಣುಕುಗಳಿಂದ ಎಲ್ಲರನ್ನು ನಗೆಯ ಕಡಲಲ್ಲಿ ತೇಲಿಸಿದರು.

ಪೂಜಾ ಗಾಂಧಿಯವರು ಕನ್ನಡದಲ್ಲಿ ಬಹುಸುಂದರವಾಗಿ ಮಾತನಾಡಿ "ಎಲ್ಲಾದರೂ ಇರು ಎಂತಾದರೂ ಇರು ನೀ ಕನ್ನಡವಾಗಿರು" ಎಂಬ ಕವಿವಾಣಿಯನ್ನು ತಮ್ಮದೇ ಆದ ಕನ್ನಡದಲ್ಲಿ ಓದಿ ಪ್ರೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ನಿಮಗೆ ಯಾರಿಗಾದರೂ ಕನ್ನಡ ಕಲಿಯಬೇಕೆಂದರೆ ನನ್ನನ್ನು ಸಂಪರ್ಕಿಸಿ ಎಂದು ಹಾಸ್ಯದ ಚಟಾಕಿಯನ್ನು ಹಾರಿಸಿದರು. ಐಂದ್ರಿತ ರೇ ಅವರು ನಾನು ಚಿಂಕಿ(ಚೀನಿ)ಯಂತೆ ಕಾಣುವುದರಿಂದ ನನಗೆ ಇಲ್ಲಿಗೆ ಬರಲು ಯಾವುದೇ ತೊಂದರೆಯಾಗಲಿಲ್ಲ, ಸಿಂಗಪುರ ವಿಮಾನ ನಿಲ್ದಾಣದಲ್ಲೂ ನನ್ನನ್ನು ಏನು ವಿಚಾರಿಸಲಿಲ್ಲವೆಂದು ಹೆಮ್ಮೆಯಿಂದ ಹೇಳುತ್ತಾ ಹಾಸ್ಯಮಾಡಿದರು.

ಪ್ರಹ್ಲಾದ್ ಹಾಗೂ ತಂಡವರು ಪ್ರಸ್ತುತಪಡಿಸಿದ ಭಾವಗೀತೆಗಳಿಂದ ಮಿಶ್ರಿತವಾದ ದೀಪ ನೃತ್ಯರೂಪಕವನ್ನು ನೋಡುವಾಗ ಎಲ್ಲರು ಒಂದು ಕ್ಷಣ ಭಾವಲೊಕದಲ್ಲಿ ವಿಹರಿಸಿದಂತಿತ್ತು. ಯಶ್ ಅವರಿಗೆ ಕಾರ್ಯಕ್ರಮದ ಹಿಂದಿನ ದಿನ ಅಭ್ಯಾಸಮಾಡುವಾಗ ಕಾಲು ಊನವಾಗಿದ್ದರೂ, ಡಾಕ್ಟರ್ ಡ್ಯಾನ್ಸ್ ಮಾಡುವುದು ಬೇಡವೆಂದು ಹೇಳಿದ್ದರೂ ಪ್ರೇಕ್ಷಕರ ಉತ್ಸಾಹವನ್ನು ನೋಡಿ ತಾಳದೆ ಕೊನೆಯ ಘಳಿಗೆಯಲ್ಲಿ ನಿರ್ಧಾರವನ್ನು ಬದಲಿಸಿ ಅಮೋಘವಾದ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು. ಎಲ್ಲ ತಾರೆಯರು ಮತ್ತೆ ಮತ್ತೆ ಇದೇ ರೀತಿಯಲ್ಲಿ ಸಿಂಗಪುರದಲ್ಲಿ ಸ್ಯಾಂಡಲ್‌ವುಡ್ ತಾರೆಯರಿಂದ ವರ್ಷಕ್ಕೊಂದು ಕಾರ್ಯಕ್ರಮ ಮಾಡಬೇಕೆಂಬ ಅಭಿಲಾಷೆಯನ್ನು ತೋರಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು. ಸಾಧು-ಕೋಕಿಲರವರು ಜಿ.ಪಿ.ರಾಜರತ್ನಂ ಅವರ "ನೀ ನಟ್ಟಿಗೆ ಬೆಳಕಂಗಿದ್ದೆ ನಂಜಿ" ಹಾಡನ್ನು ಭಾವನಾತ್ಮಕವಾಗಿ ಹಾಡಿ ಮನರಂಜಿಸಿದರು.

ಎಲ್ಲ ಪ್ರೇಕ್ಷಕರು ರಾತ್ರಿ ತಡವಾದರೂ ಕಾದಿದ್ದಕ್ಕೆ ಸಾರ್ಥಕವೆಂಬಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು "ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು.." ಹಾಡಿಗೆ ನರ್ತಿಸಿ, ರಂಜಿಸಿ ಎರಡು ದಿನಗಳ ಕನ್ನಡ ಹಬ್ಬಕ್ಕೆ ಅದ್ಧೂರಿ ಮುಕ್ತಾಯವನ್ನು ನೀಡಿ ಸಿಂಗನ್ನಡಿಗರಿಗೆ ಎಂದಿಗೂ ಮರೆಯಲಾರದ ನೆನಪಿನ ಬುತ್ತಿಯನ್ನು ನೀಡಿದರು.

ಇನ್ನಿತರ ವೈಶಿಷ್ಟ್ಯಗಳು: ಒಂದೂವರೆ ದಿನ ನಡೆದ ಈ ಕಾರ್ಯಕ್ರಮದ ಪ್ರಧಾನ ನಿರೂಪಣೆಯ ಭಾರವನ್ನು ಹೊತ್ತು ಸೊಗಸಾಗಿ ನಡೆಸಿಕೊಟ್ಟವರು ಸಿಂಗನ್ನಡತಿಯಾದ ವಿಶಾಲಾಕ್ಷಿ ಅವರು. ಪ್ರತಿಯೊಂದು ಕಾರ್ಯಕ್ರಮಕ್ಕೂ ಉತ್ತಮವಾದ ಹಿನ್ನೆಲೆ ಸಂಗೀತ, ಪವರ್ ಪಾಯಿಂಟ್ ಸ್ಲೈಡ್ ಹಾಗೂ ವಿಡಿಯೋ ಚಿತ್ರಗಳ ರಚನೆ; ಕಾರ್ಯಕ್ರಮದ ಚೀಟಿ ಹಾಗೂ ಆಹಾರ ಚೀಟಿಗಳ ನಿಭಾವಣೆ, ಸರಬರಾಜು, ಅತಿಥಿಗಳ ಸ್ವಾಗತ ಮತ್ತು ಸತ್ಕಾರ, ವೇದಿಕೆಯ ಹಿಂಭಾಗದಲ್ಲಿ ಸಹಕಾರ, ಸ್ಥಿರ ಮತ್ತು ವೀಡಿಯೋ ಚಿತ್ರ, ಸಂದರ್ಶನ, ವರದಿ - ಹೀಗಿದ್ದ ನೂರಾರು ಕೆಲಸಗಳು ಸಂಘದ ಕಾರ್ಯಕರ್ತರ, ಕಲಾವಿದರ ಹಾಗೂ ಸಿಂಗನ್ನಡಿಗ ಸ್ವಯಂಸೇವಕರ ನಿಸ್ವಾರ್ಥಸೇವೆ ಇಲ್ಲದೇ ಈ ಕಾರ್ಯಕ್ರಮ ಇಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ. ಇದಲ್ಲದೇ ಆಟದ ಮಳಿಗೆಯನ್ನು ತೆರೆದು ಮಕ್ಕಳಿಗೆ ಹಾಗೂ ವಯಸ್ಕರಿಗೆ ಕರ್ನಾಟಕದ ಸಾಂಪ್ರದಾಯಿಕ ಆಟಗಳನ್ನು ಪರಿಚಯಿಸಿ, ಅವರಿಗೆ ಕನ್ನಡ ಕಲಿಸುವ ಹಾಗೂ ವಯಸ್ಕರಿಗೆ 'ರಸಪ್ರಶ್ನೆ' ಹಾಗೂ 'ಒಂದು ನಿಮಿಷ ಮಾತಾಡಿ' ಮುಂತಾದ ನೂತನ ಕಾರ್ಯಕ್ರಮಗಳನ್ನು ಆಯೋಜಿಸಿದವರು ದಿವ್ಯಾ ರಾಜೇಶ್ ಮತ್ತು ತಂಡ.

ವಾಣಿಜ್ಯ ಸಮಾವೇಶಕ್ಕೆ ಉಪಾಹಾರ ಸರಬರಾಜು ಕಾಮತ್ ರೆಸ್ಟೋರಂಟ್ ಅವರಿಂದ. ಇನ್ನುಳಿದ ಒಂದೂವರೆ ದಿನ ಎಲ್ಲರ ಊಟದ ಜವಾಬ್ದಾರಿಯನ್ನು ಹೊತ್ತಿದ್ದು ಸ್ಪೈಸ್ ಆಫ್ ಇಂಡಿಯ ಹೋಟಲ್‌ನವರು. ಮಾಧ್ಯಮ ಪಾಲುಗಾರರು ಜೀ-ಟಿ ವಿ. ತಾರಾ ಸಂಜೆ ಕಾರ್‍ಯಕ್ರಮಕ್ಕೆ ಟಿ ವಿ. ಮಾಧ್ಯಮದ ವರದಿ ಟಿವಿ9 ಚಾನಲ್‌ನವರಿಂದ. ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರು "ಹೃದಯವಾಹಿನಿ" ಕನ್ನಡ ಮಾಸ ಪತ್ರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಕರ್ನಾಟಕ ಸರ್ಕಾರ) ಹಾಗೂ ಯುನೈಟೆಡ್ ಲ್ಯಾಂಡ್ ಬ್ಯಾಂಕ್. ಅದಲ್ಲದೇ "ಒನ್ ಇಂಡಿಯ" ಒಳಗೊಂಡಂತೆ ಸುಮಾರು ಇನ್ನೂ ಮೂವತ್ತು ಸಹ ಪ್ರಾಯೋಜಕರು. ಪತ್ರಿಕಾ ವರದಿ kannada.oneindia.comನಲ್ಲಿ.

ವರದಿ: ಸುದ್ಧಿವಾಹಿನಿ ತಂಡ (ಗಿರೀಶ್ ಜಮದಗ್ನಿ, ವೆಂಕಟ್, ಸುರೇಶ್, ವಸಂತ ಕುಲಕರ್ಣಿ ಹಾಗೂ ವಾಣಿ ರಾಮದಾಸ್)

English summary
7th World Kannada Cultural Convention, Singapore concluded with colorful star night. Shivaraj Kumar, Pooja Gandhi, Aindrita Ray, Yogesh, Yash and Sadhu Kokila participated in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X