ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಬಿಎಸ್ ಗೆ 'ವಿಶ್ವಮಾನ್ಯ ಸುವರ್ಣ' ಪ್ರಶಸ್ತಿ

By Prasad
|
Google Oneindia Kannada News

PB Srinivas felicitated in Singapore
ಕನ್ನಡಸಂಘ (ಸಿಂಗಪುರ) ಹಾಗೂ ಹೃದಯವಾಹಿನಿ ಪತ್ರಿಕೆ (ಮಂಗಳೂರು) ವತಿಯಿಂದ ನವೆಂಬರ್ 27 ಮತ್ತು 28ರಂದು ಸಿಂಗಪುರ್ ಪಾಲಿಟೆಕ್ನಿಕ್, ಕನ್ವೆನ್ಷನ್ ಸೆಂಟರಿನಲ್ಲಿ 7ನೆಯ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಗಾನಗಾರುಡಿಗ ಪಿ.ಬಿ.ಶ್ರೀನಿವಾಸ್ ಅವರಿಗೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಬರಗೂರು ರಾಮಚಂದ್ರಪ್ಪನವರು "ವಿಶ್ವಮಾನ್ಯ ಸುವರ್ಣ" ಪ್ರಶಸ್ತಿ ನೀಡಿ ಗೌರವಿಸಿದರು.

ಎಂಬತ್ತರ ಇಳಿವಯಸ್ಸಿನ ಗಾನಗಾರುಡಿಗ ಡಾ. ಪಿ.ಬಿ.ಶ್ರೀನಿವಾಸ್ ಸಭಾಂಗಣಕ್ಕೆ ಬಂದಾಗ ತುಂಬು ಕರತಾಡನ. ಹಿರಿಯ ಜೀವದ ಕಾಲಿಗೆ ಬಿದ್ದು ನಮಸ್ಕರಿಸಿದರು ಹಲವರು, ಕೈ ಮುಗಿದರು ಕೆಲವರು. ನೆರೆದಿದ್ದ ಸಾವಿರಕ್ಕೂ ಹೆಚ್ಚು ಜನರ ಮೈ ರೋಮಾಂಚನಗೊಂಡಿತ್ತು. ಹಣೆಯಲ್ಲಿ ಉದ್ದನೆಯ ಕೆಂಪು ಶ್ರೀಚರಣ, ಮೈಸೂರು ಪೇಟ, ಶಾಲು ಹೊದ್ದು ಇಕ್ಕೆಲಗಳಲ್ಲಿ ಅಭಿಮಾನಿಗಳ ಕೈ ಹಿಡಿದು ವೇದಿಕೆ ಏರಿದ ಮಹಾನುಭಾವರಿಗೆ ವೇದಿಕೆಯ ಮೇಲಿದ್ದ ಗಣ್ಯರ ನಮನ. ಶಿವರಾಜ್‍ಕುಮಾರ್ ಅವರು ಪಿ.ಬಿ.ಎಸ್ ಅವರನ್ನು ಕಂಡೊಡನೆ ಕಾಲಿಗೆ ನಮಸ್ಕರಿಸಿದಾಗ ವಾತ್ಸಲ್ಯದಿಂದ ಆತನನ್ನು ತಬ್ಬಿ ಮುತ್ತಿಕ್ಕಿದರು ಪಿ.ಬಿ.ಎಸ್. ಗೌರವ, ಆದರ, ಪ್ರೀತಿ, ಸೌಹಾರ್ದಗಳ ಈ ಹಿರಿ-ಕಿರಿಯರ ಸಮ್ಮಿಲನ ಮನೋಜ್ಞವಾಗಿತ್ತು. ಶಿವಣ್ಣನ ಕಣ್ಣಂಚಿನಲ್ಲಿ ಆನಂದಭಾಷ್ಪ ಜಿನುಗಿದ್ದನ್ನು ಸಭಿಕರು ಗದ್ಗದಿತರಾಗಿ ನೋಡಿದರು. [ಚಿತ್ರಪಟ ನೋಡಿರಿ]

ಸಿಂಗಪುರದಲ್ಲಿ ನಡೆದ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಪಿ.ಬಿ.ಎಸ್ ಅವರಿಗೆ "ವಿಶ್ವಮಾನ್ಯ ಸುವರ್ಣ" ಪ್ರಶಸ್ತಿ ನೀಡಿ ಗೌರವಿಸಿದರು. ಸಭಿಕರೆಲ್ಲರೂ ತುಂಬು ಗೌರವದೊಂದಿಗೆ ಎದ್ದು ನಿಂತು, ಚಪ್ಪಾಳೆಯ ಸುರಿಮಳೆಯೊಂದಿಗೆ ತಮ್ಮ ಹರ್ಷವನ್ನು ಸೂಚಿಸಿದರು. ನಂತರ "ನನ್ನ ಪ್ರೀತಿಯ ಕನ್ನಡ ಬಂಧುಗಳೇ ಎಲ್ಲರಿಗೂ ಕೃತಜ್ಞತಾ ನಮಸ್ಕಾರ" ಎಂದು ಎರಡೂ ಕೈಯೆತ್ತಿ ಮುಗಿದ ಹಿರಿಯ ತುಂಬಿ ಮಾತನಾಡಿದ ಹಿರಿ ಚೇತನದ ನುಡಿಗಳಿವು.

"ರಸಿಕತೆಯೇ ಕಲೆಯ ಬೆಲೆ". ಕಲಾ ಪ್ರತಿಭೆ ಇದ್ದರೆ ಸಾಲದು ಅದಕ್ಕೆ ಪ್ರೋತ್ಸಾಹ, ಪೋಷಣೆ ಮುಖ್ಯ. ನಾನು ಕುಮಾರ ತ್ರಯರಿಗೆ ಹಾಡಿದ್ದೇನೆ (ರಾಜ್‌ಕುಮಾರ್, ಉದಯಕುಮರ್, ಕಲ್ಯಾಣಕುಮಾರ್). ಆದರೆ ರಾಜ್ ಅವರು ಚಿತ್ರರಂಗಕ್ಕೆ ಕೊಟ್ಟಿರುವ ಕಾಣಿಕೆ "ಕುಮಾರತ್ರಯ (ಶಿವಣ್ಣ, ರಾಘವೇಂದ್ರ, ಪುನೀತ್)". ಒನ್ ಹೀರೋ ಕಾಂಟ್ರಿಬ್ಯೂಟೆಡ್ ತ್ರೀ ಹೀರೋಸ್. ಅಂತಹ ಮಹಾನುಭಾವನಿಗೆ ಹಾಡಿದ ಸುಯೋಗ ನನ್ನದು. ನಮ್ಮೀರ್ವರ ಶರೀರ-ಶಾರೀರ ಸಂಬಂಧ ನಿರಂತರವಾದದ್ದು. ಡಾ.ರಾಜ್ ಅಂತಹ ಮೇರು ನಟನಿಗೆ ಹಾಡಿದ್ದಕ್ಕೆ ನನಗೆ ಈ ಪ್ರಾಧಾನ್ಯ, ಈ ಮನ್ನಣೆ ಸಿಕ್ಕಿತು. ಕರ್ನಾಟಕದ ವೈಭವದ ಒಂದು ಪ್ರತೀಕ - ಕನ್ನಡಕ್ಕೊಬ್ಬನೇ ರಾಜ್‍ಕುಮಾರ್, ಕನ್ನಡನಾಡಿಗೆ ನಾನು ಋಣಿಯಾಗಿದ್ದೇನೆ.

ನನಗೆ ಕನ್ನಡನಾಡಿನ ಆದರ, ಅಭಿಮಾನ ಸದಾ ಇದೆ. ಇನ್ನೂ ಸೇವೆ ಸಲ್ಲಿಸಬೇಕೆಂಬ ಆಸೆ ಇದೆ. ಡಾ.ರಾಜ್ ಅವರ ಪುತ್ರರಾದ "ಕುಮಾರತ್ರಯ"ರಿಗೆ ಹಾಡುವ ಅಭಿಲಾಷೆ ಇದೆ, ಹಾಡಬಲ್ಲೆ ಕೂಡ ಎನ್ನುತ್ತಾ ತಾವೇ ರಚಿಸಿದ "ಕನ್ನಡ ಬಂಧುವೆ ಸುದ್ದಿಯ ಕೇಳು, ಕನ್ನಡಾಭಿಮಾನಿಯಾಗಿ ಏಳು" ಎಂಬ ಕವನವನ್ನು ಹಾಡಿದರು. ಅವರು ಅಂದು ಮನೆಯಿಂದ ಸಭಾಂಗಣಕ್ಕೆ ಪ್ರಯಣಿಸುತ್ತಾ, ಅಂದಿನ ಕಾರ್ಯಕ್ರಮಕ್ಕೆಂದೇ ಬರೆದ ವಿಶೇಷ ಕವನವೊಂದನ್ನೂ ವಾಚಿಸಿದರು.

ಕನ್ನಡ ಸಿನಿಮಾ ಸುವರ್ಣಯುಗದ ಗಾನ ಗಾರುಡಿಗ ವೇದಿಕೆಯನ್ನಿಳಿದಂತೆ ಮತ್ತೊಮ್ಮೆ ನೆರೆದಿದ್ದ ಸಭಿಕರ ಪ್ರೀತಿಪೂರ್ವಕ, ಗೌರವ, ಆದಾರದ ಚಪ್ಪಾಳೆ ಸುರಿಮಳೆ. ಗಾನಮೋಡಿಗೆ ಮಾರುಹೋದವರು ಇಂದು ಪ್ರತ್ಯಕ್ಷ ಕಂಡು ಕೇಳಿದ ಮಾತಿನ ಮೋಡಿಗೆ ಮಾರು ಹೋಗಿದ್ದರು ಸಭಿಕರು. ಸಿಂಗಪುರ ಕನ್ನಡ ಸಂಘದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಸಂಗತಿ ಇದು.

- ವರದಿ: ಸುದ್ದಿವಾಹಿನಿ ತಂಡ (ಗಿರೀಶ್ ಜಮದಗ್ನಿ, ವೆಂಕಟ್, ಸುರೇಶ್, ವಸಂತ ಕುಲಕರ್ಣಿ ಹಾಗೂ ವಾಣಿ ರಾಮದಾಸ್)

English summary
Veteran Kannada playback singer PB Srinivas felicitated at 7th Singapore Kannada Convention organized by Kannada Sangha (Singapore) and Hrudayavahini. Kannada actor Shivaraj Kumar also participated in the Kannada conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X