• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನು ಬಳಿಗಾರ್ ಬಗ್ಗೆ ನಿಮಗೆಷ್ಟು ಗೊತ್ತು?

By * ವೆಂಕಟ್, ಸಿಂಗಪುರ
|

ಮನು ಬಳಿಗಾರ್ ಎಂಬ ಹೆಸರಿಗೆ ಕರ್ನಾಟಕದಲ್ಲಿ ಬಹುಶಃ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲವೆನಿಸುತ್ತದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಇವರು ಸಿಂಗಪುರದಲ್ಲಿ ನವಂಬರ್ ತಿಂಗಳ 27 ಮತ್ತು 28ಕ್ಕೆ ನಡೆಯುತ್ತಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ಬರುತ್ತಿದ್ದಾರೆಂಬ ಸುದ್ದಿಯನ್ನು ಕೇಳಿದಾಗಿನಿಂದ ಅವರನ್ನು ಮತ್ತೊಮ್ಮೆ ಭೇಟಿಯಾಗುವ ಸುಸಂದರ್ಭಕ್ಕೆ ಸಿಂಗನ್ನಡಿಗರು ಕಾತುರದಲ್ಲಿದ್ದಾರೆ.

ಬಳಿಗಾರರು ಸ್ವತಃ ಲೇಖಕರು, ಕವಿಗಳು, ನಾಟಕಕಾರರು, ಒಳ್ಳೆಯ ವಾಗ್ಮಿಗಳು ಮತ್ತು ಹಾಡುಗಾರರು ಕೂಡ. ಇದೆಲ್ಲ ಅವರ ಚಟುವಟಿಕೆಗಳ ಒಂದು ಮುಖವಾದರೆ ಇನ್ನೊಂದಡೆ ಕರ್ನಾಟಕ ಸರ್ಕಾರದ ಅತಿ ದಕ್ಷ ಆಡಳಿತಗಾರರೆಂಬುದು ಪ್ರಶಂಸನೀಯ. ವೃತ್ತಿ ಮತ್ತು ಪ್ರವೃತ್ತಿಗಳೆರಡರಲ್ಲೂ ಸಫಲತೆಯ ಶೃಂಗಕ್ಕೇರಿ ಜೀವನದ ಸವಿಯನ್ನುಂಡವರೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಮಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯೊಂದಿಗೆ ವೃತ್ತಿ ಆರಂಭಿಸಿದ ಮನು ಬಳಿಗಾರರು ನಂತರ ಸರ್ಕಾರದ ಅನೇಕ ಹುದ್ದೆಗಳಲ್ಲಿ ಗುಲ್ಬರ್ಗ,ವಿಜಾಪುರ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ಅಲ್ಲಿಯ ಮರಾಠಿ ಮಾತನಾಡುವವರ ಮನಗೆದ್ದು ಅವರನ್ನು ಕನ್ನಡ ಕಲಿಯಲು ಹುರಿದುಂಬಿಸಿದ ಮೊದಲ ಕನ್ನಡದ ಅಧಿಕಾರಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂತಹವರು ಗಡಿಜಿಲ್ಲೆಗಳಲ್ಲಿ ಕನ್ನಡ ಮತ್ತು ಅದರ ಸಂಸ್ಕೃತಿಯ ರಕ್ಷಣೆಯ ಕೆಲಸವನ್ನು ಹೆಚ್ಚಾಗಿ ಮಾಡುವುದರ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಹರಡಿಸಲು ಇತರ ಅಧಿಕಾರಿಗಳಿಗೆ ಸ್ಪೂರ್ತಿ ಮತ್ತು ಮಾದರಿಯಾಗಲೆಂಬುದು ಎಲ್ಲ ಕನ್ನಡಿಗರ ಆಶಯ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಉಪ ಆಯುಕ್ತರಾಗಿದ್ದಾಗ ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಬಳಿಗಾರರು ಬಹುಪವಾಗಿ ಶ್ರಮಿಸಿದ್ದಾರೆ. ನಾಗರೀಕರಲ್ಲಿ ಸ್ವಚ್ಚತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಮತ್ತು ಅದರ ಅವಶ್ಯಕತೆಯ ಸಂಪೂರ್ಣ ಮಾಹಿತಿಗಳನ್ನೊದಗಿಸಿ ಅಧಿಕಾರಿಗಳೊಂದಿಗೆ ಸ್ವತಃ ತಾವೆ ಕೊಳಚೆ ಪ್ರದೇಶ, ಮಾರುಕಟ್ಟೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗಮನಿಸಿ ಹಲವಾರು ಪರಿಹಾರಗಳನ್ನು ಸೂಚಿಸಿದ್ದಾರೆ. ವಿಜಾಪುರದಲ್ಲಿ ಸಮಗ್ರ ಗ್ರಾಮೀಣ ಅಭಿವೃಧ್ದಿಯ ಕಾರ್ಯಕ್ರಮಕ್ಕಾಗಿ ಎರಡು ಸುವರ್ಣಪದಕಗಳನ್ನು ಪಡೆದಿದ್ದಾರೆಂಬುದು ಅವರ ಶ್ರಮ ಮತ್ತು ದಕ್ಷ ಆಡಳಿತ ಕ್ರಮದ ವೈಖರಿಗೆ ಹಿಡಿದ ಕನ್ನಡಿ.

ಮನೆಯೆ ಮೊದಲ ಪಾಠಶಾಲೆ : ಗದಗಿನ ಜಿಲ್ಲೆಯ ಶಿರಹಟ್ಟಿ ತಾಲೂಕು ಶಿಗ್ಲಿ ಗ್ರಾಮದವರಾದ ಬಳಿಗಾರ್ ಅವರದು ಕೃಷಿ ಪ್ರಧಾನವಾದ ಕುಟುಂಬ. ಇವರ ತಂದೆ ಪರಮೇಶ್ವರಪ್ಪ ಎಲ್ಲ ಮಕ್ಕಳ ಶಿಕ್ಷಣದತ್ತ ಗಮನ ನೀಡಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮುಖ್ಯಪಾತ್ರರು. ಅವರ ತಂದೆಯ ಕಟ್ಟು ನಿಟ್ಟು ಮತ್ತು ಕ್ರಮಬದ್ಧ ಶಿಕ್ಷಣ ಗರಡಿಯಲ್ಲಿ ಬೆಳೆದು ಅವರು ಹಾಕಿಕೊಟ್ಟಂತಹ ಹಾದಿಯಲ್ಲಿ ಸಾಗಿ ಸಫಲತೆಯ ಮೆಟ್ಟಿಲೇರಿ ಇಂದು ಬಳಿಗಾರ್ ಸಹೋದರರು ಸರ್ಕಾರದ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಗ್ಲಿಯಲ್ಲಿ SSLCವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಬ್ಯಾಸ ಮಾಡಿದ ಮನು ಬಳಿಗಾರ್ ಬಿ.ಎ.ನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರಲ್ಲದೆ ವಿದ್ಯಾಭ್ಯಾಸ ಮುಂದುವರೆಸಿ LLB ಪಾಸಾಗಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಇವರು ಸುಮಾರು 22 ಪುಸ್ತಕಗಳನ್ನು, 5 ಕವನ ಸಂಕಲನಗಳನ್ನು, 3 ಜೀವನ ಚರಿತ್ರೆಗಳನ್ನು, 2 ಪ್ರಬಂಧಗಳನ್ನು ಮತ್ತು 4 ಸಣ್ಣಕತೆಗಳ ಸಂಗ್ರಹವನ್ನು ನೀಡಿದ್ದಾರೆ. ರವೀಂದ್ರನಾಥ ಟಾಗೂರರ ಕೆಲವು ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ಸಾಹಿತ್ಯದಲ್ಲಿನ ಇವರ ಸೇವೆಗೆ ಗೊರೂರು, ರನ್ನ ಮತ್ತು ಲಿಂಗರಾಜ ದೇಸಾಯಿ ಪ್ರತಿಷ್ಠಿತ ಪ್ರಶಸ್ತಿಗಳು ಲಭ್ಯವಾಗಿವೆ. ಸಂಗೀತ ಕ್ಷೇತ್ರದಲ್ಲೂ ಕೂಡ ಇವರು ಪರಿಣಿತರು. ಕುಮಾರ ಗಂಧರ್ವ, ಭಾರತರತ್ನ ಭೀಮಸೇನ್ ಜೋಷಿ, ಸಿದ್ಧರಾಮ ಜಂಬಲದಿನ್ನಿ, ಟಿ.ಎಸ್.ಸತ್ಯವತಿ ಮತ್ತು ಎಮ್.ಎಸ್.ಶೀಲ ರವರ ಅಭಿಮಾನಿಯಾದ ಇವರು ಅವರಿಂದ ಪ್ರೇರಿತಗೊಂಡು ಬಸವಣ್ಣ, ಅಕ್ಕಮಹಾದೇವಿಯವರ ವಚನಗಳನ್ನು ಮತ್ತು ವರಕವಿ ಬೇಂದ್ರೆ, ರಾಷ್ಟ್ರಕವಿ ಕುವೆಂಪುರವರ ಕವನಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ಮನು ಬಳಿಗಾರ್ ಅವರು 2004 ರ ಗದಗಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. 2005 ರಲ್ಲಿ ಸಿಂಗಪುರದಲ್ಲಿ ನಡೆದ 2ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರೆಂಬುದು ಇಲ್ಲಿ ಸ್ಮರಣೀಯ. ಅಂದು ಅಧ್ಯಕ್ಷತೆಯ ಭಾಷಣವನ್ನು "ಮುಂಜಾನೆದ್ದು ಯಾರ್ಯಾರ ನೆನೆಯಲಿ" ಎಂಬ ಶುದ್ಧ ಜನಪದ ಗೀತೆಯನ್ನು ಹಾಡುವುದರಿಂದ ತಮ್ಮ ಮಾತಿನ ಧಾಟಿಗೆ ಧುಮುಕಿದ್ದು ನನಗಿನ್ನು ನೆನಪಿದೆ. ಇವರು ಅಮೇರಿಕಾದಲ್ಲಿ "ಭಾರತೀಯ ಸಂಸ್ಕೃತಿ ಮತ್ತು ಪರಂಪರೆ" ಹಾಗೂ ವಚನ ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿರುವ ಇವರ "ಶಿಗ್ಲಿ ಮನೆ"ಯಲ್ಲಿ ಒಂದು ಪುಟ್ಟ ಗ್ರಂಥಾಲಯಯಿದೆ. ಅಲ್ಲಿ ನಿಮ್ಮನ್ನು ಎದುರುಗೊಳ್ಳುವ "ಕಾಯಕವೇ ಕೈಲಾಸ"ವೆಂದು ಬರೆದು ಹಾಕಿದ ನಾಣ್ಣುಡಿಯಫಲಕ ಅವರ ಜೀವನದ ಆದರ್ಶಗಳನ್ನೇ ಪ್ರತಿಬಿಂಬಿಸುತ್ತದೆ. ಇಂತಹ ಬಹುಮುಖ ಪ್ರತಿಭೆಯ, ದಕ್ಷ ಆಡಳಿತಗಾರರು ಸಿಂಗಪುರದಲ್ಲಿ ನಡೆಯುತ್ತಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ಬರುತ್ತಿದ್ದಾರೆಂದರೆ ನಮಗದು ಹೆಮ್ಮೆಯ ವಿಷಯವೆ.

English summary
Profile of Manu Baligar, Director department of Kannada and Culture, Government of Kannada. An able administrator and a prolific writer, Baligar is the chief guest of 7th World Kannada and Culture Conference [27-28 Nov] organized by Singapore Kannada Sangha. A pen portrait of the visiting dignitary by Venkat in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more