• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಪಿಬಿ ಶ್ರೀನಿವಾಸ್ ತಂನಂ ತಂನಂ

By * ವಾಣಿ ರಾಮದಾಸ್, ಸಿಂಗಪುರ
|

ಕನ್ನಡ ಚಿತ್ರರಂಗಕ್ಕೆ ಶರೀರ ರಾಜ್‌ಕುಮಾರ್, ಶಾರೀರ ಪಿ.ಬಿ.ಶ್ರೀನಿವಾಸ್ - ಹಾಲು-ಜೇನು ಒಂದಾದ ಹಾಗೆ. ಒಂದು ಇನ್ನೊಂದನ್ನು ಬಿಟ್ಟು ಕಲ್ಪಿಸಲಾಗದು. ರಾಜ್‌ಗೆ ಹೇಳಿ ಮಾಡಿಸಿದಂತಿತ್ತು ಪಿ.ಬಿ.ಎಸ್ ಕಂಠಸಿರಿ. ರಾಜ್ ನಟನೆ, ಪಿ.ಬಿ.ಶ್ರೀನಿವಾಸ್ ಕಂಠದಲಿ ಬಂದ ಅಂದಿನ ಮೃದು-ಮಧುರ ಹಾಡುಗಳನ್ನು ಮೆಲುಕು ಹಾಕಿಕೊಂಡು ಆರಾಧಿಸುವವರು ಅನೇಕರು.

30-40 ವರ್ಷಗಳ ಹಿಂದೆ ಇದ್ದದ್ದು ರೇಡಿಯೋ ಜಮಾನ. ರೇಡಿಯೋ, ದಿನಪತ್ರಿಕೆಗಳನ್ನು ಬಿಟ್ಟರೆ ಇನ್ಯಾವ ಮಾಧ್ಯಮಗಳೂ ಇರಲಿಲ್ಲ. ಹಳ್ಳಿ-ಹಳ್ಳಿಗಳಲ್ಲಿ ಸಿರಿವಂತ, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಶ್ರೀಸಾಮಾನ್ಯನಿಗೆ ಮುಟ್ಟುತ್ತಿದ್ದುದು ಸಿನಿಮಾ ಮಾಧ್ಯಮ ಹಾಗೂ ರೇಡಿಯೋ. ರೇಡಿಯೋ ಇದ್ದಲ್ಲಿ ಅವನ ಮನೆಯಲಿ ಸುದ್ದಿ, ಸಿನಿಮಾ ಹಾಡುಗಳು ಕೇಳಲು ಸಂತೆ ಸೇರುತ್ತಿದ್ದ ಕಾಲವದು. ಸಿನಿಮಾದಲಿ ರಾಜ್ ಸರಳ, ಸಜ್ಜನಿಕೆ, ದೇಶಪ್ರೇಮವೇ ಮೈಗೂಡಿಸಿಕೊಂಡ ಆದರ್ಶಪ್ರಾಯನಾದರೆ ಹಾಡುಗಳ ಮೂಲಕ ನೀತಿ, ಪ್ರೀತಿ, ಪ್ರೇಮ, ಮಮತೆಗಳನ್ನು ಬಿತ್ತರಿಸುತ್ತಿದ್ದ ಅಶರೀರವಾಣಿ ಪಿ.ಬಿ.ಎಸ್. ಕಂಠ. ಆ ಜಮಾನಾದ ಪ್ರಶಾಂತ ಗಾಯನ, ನೆಚ್ಚಿನ ಹೀರೋ ರಾಜ್‌ಕುಮಾರ್ ಕಲ್ಪನೆ, ಮನದಲಿ ಏಳುತ್ತಿದ್ದವು ನವಿರಾದ ಪ್ರೀತಿಯ ಭಾವನೆಗಳು, ಕಾಣದಿದ್ದ ಇನಿಯನ ಕಲ್ಪನೆಗಳು. ಈ ಕಾರಣಗಳಿಗಾಗಿಯೋ ಏನೋ ಕನ್ನಡದಲಿ ನನ್ನ ಮೆಚ್ಚಿನ ಗಾಯಕನ ಪಟ್ಟಿಯಲಿ ಪಿ.ಬಿ.ಎಸ್. ಮೊದಲಿಗರು. ಪ್ರಾಯಶಃ ಇದು ನನ್ನೊಬ್ಬಳ ಅನಿಸಿಕೆ ಆಗಿರಲಾರದು, ಮೂವತ್ತು-ನಲವತ್ತರ ಅಂಚಿನ ಎಲ್ಲರ ಕಥೆಯೂ ಇದೇ ಆಗಿರಬಹುದು.

ರಾಜ್‌ಕುಮಾರ್-ಚಿ.ಉದಯಶಂಕರ್-ಪಿ.ಬಿ.ಎಸ್. ನಟನೆ, ರಚನೆ, ಸಿರಿಕಂಠದಲಿ ಮೂಡಿ ಬಂದ ಮಧುರ-ಅತಿಮಧುರದ ತಂಪು-ಇಂಪೆನಿಪ ಸೊಗಸಾದ ಸಾಹಿತ್ಯದ ಚಿತ್ರಗೀತೆಗಳಿಗೆ ಲೆಕ್ಕವೇ ಇಲ್ಲ. ಹಲವಾರು ಹಾಡುಗಳು ಅಂದಿನ ಜನಸಾಮಾನ್ಯರಿಗೆ ನೀತಿಪಾಠದಂತಿದ್ದವು, ಪ್ರೋತ್ಸಾಹದಾಯಕವಾಗಿದ್ದವು.

ಪಿ.ಬಿ.ಎಸ್. ಅವರ ಕಸ್ತೂರಿ ನಿವಾಸ ಚಿತ್ರದ 'ನೀ ಬಂದು ನಿಂತಾಗ ಬಾರ ಬಾರ ಕೇಳುತ್ತಲೇ ಇರುವಂತೆ ಮಾಡಿದರೆ, 'ಬಿಂಕದ ಸಿಂಗಾರಿ' ನಲವತ್ತು ವರುಷಗಳು ಕಳೆದಿದ್ದರೂ ಯೌವನ ಮರಳಿ ತರುತ್ತದೆ. ನಿನ್ನ ಒಗಟಿಗೇ ಉತ್ತರ - ಹತ್ತಿರ ಬಂದ ನಲ್ಲೆಗೆ ಕೊಡದವರಾರು, ಬಾರೆ ಬಾರೆ, ಇವಳು ಯಾರು ಬಲ್ಲೆಯೇನು, ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ಒಲವಿನ ಪ್ರಿಯಲತೆ, ನಿಲ್ಲು ನೀ ನಿಲ್ಲುನೀ, ಮೌನವೇ ಆಭರಣ, ಬಿಂಕದ ಸಿಂಗಾರಿ, ಆಕಾಶವೆ ಬೀಳಲಿ ಮೇಲೆ, ಹೀಗೆ ನೂರಾರು ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಸುಮಾರು 3450ಕ್ಕೂ ಹೆಚ್ಚು ಸುಲಲಿತ-ಸುಮಧುರ ಕನ್ನಡ ಚಿತ್ರಗೀತೆಗಳನ್ನು ಅಮರರಾಗಿಸಿದಿವರು ಪಿ.ಬಿ.ಎಸ್. ಬಹುತೇಕ ಹಾಡುಗಳು ಮತ್ತೊಮ್ಮೆ-ಮಗದೊಮ್ಮೆ ಎಂದು ನಮ್ಮ ನೆನಪಿನ ಖಜಾನೆಯನು ಮುಚ್ಚದೆ ತೆರೆದಿಟ್ಟಿರುವಂತೆ ಮಾಡುತ್ತಲೇ ಇರುತ್ತದೆ. ಗಾನ ಮಾಧುರ್ಯದ ಮೋಡಿ ಅದು.

ಪಿ.ಬಿ.ಎಸ್. ಎಂದಾಕ್ಷಣ ಕಣ್ಣಿಗೆ ಮೂಡುವ ಚಿತ್ರ ತಲೆಗೆ ಟೊಪ್ಪಿ, ಹಣೆಯಲಿ ಶ್ರೀಚರಣ- ಕಿವಿಯಲಿ ಆ ಚಣದಲಿ ಅವರವರ ಭಾವನೆಗಳಿಗೆ ತಕ್ಕಂತೆ ಇಷ್ಟವಾದ ಹಾಡಿನ ನೆನಪು. ಎಂದೋ ಚಿತ್ರದಲಿ ಕಂಡ ಈ ವ್ಯಕ್ತಿಯ ಚಿತ್ರಣ ಹಾಡುಗಳಿಂದ ಮನದಲಿ ಅಚ್ಚೊತ್ತಿದ್ದರೂ ಇದೀಗ ಸಿಂಗಪುರದಲಿ ಸಾಕ್ಷಾತ್ಕಾರಗೊಳ್ಳಲಿದೆ ಎಂದಾಗ ಮನ ಪುಳಕಗೊಂಡು ಹಾಡಿತು ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ ಆ ಸಿರಿಕಂಠಕೆ ಸೋತಿದೆ ಎಂದು.

ಪ್ರತಿವಾದಿ ಭಯಂಕರ ಇದು ಪಿ.ಬಿ.ಎಸ್ ಮನೆತನದ ಹೆಸರು. ಇವರ ವಂಶಜರು ವಾದ ಮಾಡುವಲ್ಲಿ ಹೆಸರಾದರು. ರಾಜರು ಇವರ ವಂಶಜರಿಗಿತ್ತ ಬಿರುದು. ಅದೇ ವಂಶದ ಶ್ರೀನಿವಾಸ ಹಾಡುವುದರಲಿ ಪ್ರತಿವಾದಿ ಭಯಂಕರನೆನಿಸಿದರು. ಭಕ್ತಿ ಪ್ರಧಾನ ಗೀತೆಗಳಲ್ಲಿ ಅಭಿನಯಿಸುವುದರಲ್ಲಿ ರಾಜಕುಮಾರ್ ಅವರಿಗೆ ಸಾಟಿಯಿಲ್ಲ. ಇಂಥ ಗೀತೆಗಳ ರಚನೆಯಲ್ಲಿ ಹುಣಸೂರರಿಗೆ ಸಾಟಿಯಿಲ್ಲ. ಹಾಡುವುದರಲಿ ಪಿ.ಬಿ.ಎಸ್. ಗೆ ಸಾಟಿಯಿಲ್ಲ. ಎಂಬತ್ತರ ಇಳಿ ಅಂಚಿನಲ್ಲಿ ಅಬ್ಬಾ ಅದೆಷ್ಟೊಂದು ಜೀವನಾನುಭವಗಳನ್ನು ತಮ್ಮೊಳಗೆ ಹುದುಗಿಸಿಟ್ಟುಕೊಂಡಿದ್ದಾರೋ ಎಂಬ ಕುತೂಹಲ ನನ್ನಂತೆಯೇ ನಿಮ್ಮಲ್ಲೂ ಮೂಡಿದರೆ ಅಚ್ಚರಿ ಏನಿಲ್ಲ! ಹಾಗೆಯೇ ಈ ವಯಸ್ಸಿನಲ್ಲಿ ವಿದೇಶ ಪ್ರಯಾಣಕ್ಕೆ ಒಪ್ಪಿಗೆಯನಿತ್ತ ಪಿ.ಬಿ.ಎಸ್ ಉತ್ಸಾಹದ ಚಿಲುಮೆ ಎಂಬುದರಲಿ ಸಂಶಯವಿಲ್ಲ, ಈ ಹಿರಿ ಚೇತನ ಮುಂದಿನ ಪೀಳಿಗೆಗೆ ಆದರ್ಶಪ್ರಾಯ.

ಕನ್ನಡ ಚಲನಚಿತ್ರಗೀತೆಗಳಿಗೆ ಮಾಧುರ್ಯದ ಸ್ಪರ್ಶ, ಕನ್ನಡದ ಮೊಹಮದ್‌ ರಫಿ ಎನಿಪ ಡಾ. ಪಿ.ಬಿ. ಶ್ರೀನಿವಾಸ್, ಬಹಳ ಕಿರು ವಯಸ್ಸಿನಿಂದಲೇ ಸಂಗೀತದ ಮೋಹದಲಿ ಬಂದಿಯಾದವರು. ಓದಿದ್ದು ಕಾನೂನು ಶಾಸ್ತ್ರ ಹಿಡಿದದ್ದು ಗಾಯನ ಶಾಸ್ತ್ರ. ಎತ್ತಣಿಂದೆತ್ತ ಸಂಬಂಧವಯ್ಯಾ? ಪ್ರಾಯಶಃ ಕಾನೂನು ಹಿಡಿದಿದ್ದಲ್ಲಿ ಪ್ರತಿವಾದಿ ಭಯಂಕರ ಬಿರುದಿಗೇ ಅನ್ವರ್ಥ ನಾಮವಾಗುತ್ತಿದ್ದರೇನೋ! ಆರ್. ನಾಗೇಂದ್ರರಾಯರ 'ಜಾತಕ ಫಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಇವರು ಕರ್ನಾಟಕ ಜನತೆಗೆ ದಕ್ಕಿದ್ದು ನಮ್ಮ ಪುಣ್ಯ, ಕನ್ನಡಮ್ಮನ ಭಾಗ್ಯ. ಕನ್ನಡ ಸೇರಿದಂತೆ ಎಂಟು ಭಾಷೆಯ ಗೀತೆಗಳನ್ನು ಹಾಡಿರುವ ಇವರು ಸ್ವತಃ ಗೀತ ರಚನೆಕಾರರು. ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಭಾಷೆ, ಗಡಿಸೀಮೆಗಳ ಎಲ್ಲೆ ದಾಟಿ ಸಹಸ್ರಾರು ಅಭಿಮಾನಿಗಳ "ನಮ್ಮ ಪಿ.ಬಿ.ಎಸ್" ಅಬ್ಬಾ ಎಂದೂ ಮರೆಯದ ಹಾಡುಗಳು ಎಂಬ ಬಿರುದು ಪಡೆದ ಬೆರಳೆಣಿಕೆಯಷ್ಟು ಮಂದಿಯಲ್ಲಿ ಇವರೂ ಒಬ್ಬರು. ಪಿ.ಬಿ.ಎಸ್. ಅವರಿಗೆ ಜೇನ್ದುಂಬಿ ಎಂಬ ಉಪನಾಮ ಇದೆ ಎಂದು ಓದಿದ ನೆನಪು. ಮತ್ತೊಂದು ವಿಶೇಷವೆಂದರೆ ಇವರು ಬಹು ಭಾಷಾ ಪ್ರವೀಣರು. ಇವರ ಕವನ ಸಂಕಲನವೊಂದರಲ್ಲಿ ಒಂದೊಂದು ಭಾಷೆಯಲ್ಲೂ ಎಂಟು ಕವನಗಳು ಒಟ್ಟಾರೆ 64 ಕವನಗಳನ್ನು ಎಂಟು ಭಾಷೆಗಳಲ್ಲಿ ರಚಿಸಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ದೇಶ ವಿದೇಶದಲ್ಲಿ ಅದೆಷ್ಟೋ ಅಭಿಮಾನಿಗಳನ್ನು ತಮ್ಮ ಕಂಠದಿಂದಲೇ ಸೆಳೆಯುತ್ತಾ ಮನೆ ಮಾತಾಗಿರುವ ಪಿ.ಬಿ.ಶ್ರೀನಿವಾಸ್ ಅವರನ್ನು ಜೀವನದಲ್ಲೇ ಮೊದಲ ಬಾರಿಗೆ ಕಾಣುವ ಸುಯೋಗಕ್ಕೆ ಸಿಂಗಡಿಗನ್ನರು ಕಾತುರದಿಂದ ಕಾಯುತ್ತಿದ್ದಾರೆ, ಹಾಡಿನ ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಎಂದು ಗಾಯನದ ಕಲ್ಲುಸಕ್ಕರೆ ಕೇಳುವುದಕ್ಕಾಗಿ. ನ.27 ಮತ್ತು 28ರಂದು ಸಿಂಗಪುರದಲ್ಲಿ ನಡೆಯುತ್ತಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪಿಬಿಎಸ್ ಕಂಠಸಿರಿಯನ್ನು ಕೇಳುವ ಸೌಭಾಗ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Playback singer PB Srinivas participating in 7th World Kannada Cultural Convention in Singapore, which is being conducted on Nov 27-28. Author Vani Ramdas has recalled old kannada film songs sung by the veteran singer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more