ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲೊಂದು ಆತ್ಮೀಯ ಸಾಹಿತ್ಯ ಸಂಜೆ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Jayanth Kaikini in Singapore
ನವೆಂಬರ್ 9ರ ಸಂಜೆ ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಆಹ್ವಾನಿತರಾಗಿದ್ದ ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕ ಎಸ್.ಕೆ.ಶಾಮ ಸುಂದರ ಅವರೊಡನೆ ಸಿಂಗಪುರದ ಗೋವಿಂದಸ್ವಾಮಿ ಕಲ್ಯಾಣ ಮಂಟಪದಲಿ ಸಾಹಿತ್ಯ-ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.

ಅಂದಿನ ಸಭಾಂಗಣಕ್ಕೆ ಕಾಲಿಟ್ಟಾಗ ಸಾಹಿತ್ಯ, ಕವನ, ಬರವಣಿಗೆ ಬಗ್ಗೆ ಕಾಯ್ಕಿಣಿ, ಶ್ಯಾಮ್ ಅವರ ಬಳಿ ನಾಲ್ಕೈದು ಜನರ ಗುಂಪು ಬರವಣಿಗೆ, ಮಾಧ್ಯಮ, ಸಾಹಿತ್ಯ, ಬರೆಯುವಿಕೆಗಳ ಬಗ್ಗೆ ಮಾತನಾಡುತ್ತಿದ್ದರೆ, ಪ್ರೊ. ನಿಸಾರ್ ಅವರ ಮಾತುಗಳನ್ನು ಆಲಿಸುತ್ತಾ ವಿಧೇಯ ವಿದ್ಯಾರ್ಥಿಗಳಂತೆ ಕೂತವರ ಮತ್ತೊಂದು ಗುಂಪು ಕಂಡಿತು. ಸಾಹಿತ್ಯ-ಸಂಜೆ ಅದಾಗಿತ್ತು. ಕರ್ನಾಟಕ ವೈಭವದ ಅಧ್ಯಕ್ಷರಾದ ರಾಮಚಂದ್ರ ಹೆಗ್ದೆ ಅವರು ಎಲ್ಲರನ್ನೊ ಒಂದುಗೂಡಿಸುತ್ತಾ ಅತಿಥೇಯರನ್ನು ವೇದಿಕೆಗೆ ಆಹ್ವಾನಿಸಿದರು.

ಪ್ರೊ.ನಿಸಾರ್, ಜಯಂತ್ ಕಾಯ್ಕಿಣಿ, ಶಾಮ್ ಅವರುಗಳು ಸಭಿಕರಿಗೆ ಕವನ, ಕವಿತ್ವ, ಬರವಣಿಗೆಯ ಬಗ್ಗೆ ಕೆಲವೊಂದು ಅನುಭವಗಳನ್ನು, ಮಾತುಗಳನ್ನು ನುಡಿಯುತ್ತಾ "ಕವಿ ಸಮಾಜದ ಅಂತರಂಗಕ್ಕೆ ತನ್ನ ಅಂತರಂಗದಿಂದ ಪ್ರತಿಸ್ಪಂದಿಸುತ್ತಾನೆ, ಕವಿತೆ ಎಂಬುದು ಅವ್ಯಕ್ತವನ್ನು ವ್ಯಕ್ತಪಡಿಸುವಂತಹುದು. ಕವನ ಭಾವನೆಗಳನ್ನು ಅಭಿವ್ಯಕ್ತಿಗೊಳುಸುವಂತಹುದು. ವಸ್ತುವಿನ ಮೂಲ ಕಾವ್ಯ- ನಾವು ಬರೆಯುವುದು ನಮ್ಮಿಂದ ಬಿಡುಗಡೆ ಆಗುವುದಕ್ಕಾಗಿ. ನಾವು ಬರವಣಿಗೆಯ ಮೂಲಕ ಕೆಲವೊಂದು ವಿಷಯಗಳನ್ನು ಅರಿಯುತ್ತೇವೆ, ಜಗತ್ತನ್ನು ನೋಡುವ ಪ್ರಯತ್ನ ಪಡುತ್ತೇವೆ ಎಂಬುದು ಜ್ಞಾನೋದಯ.

ಪ್ರೊ. ನಿಸಾರ್ ಅವರು ಎಲ್ಲರೂ ಡಿ.ವಿ.ಜಿ. ಅವರ ಜ್ಞಾಪಕ ಚಿತ್ರಶಾಲೆಯನ್ನು ಎಲ್ಲರೂ ಓದಲೇಬೇಕು. ಬೇಂದ್ರೆ ಅವರು ಹೇಳಿದಂತೆ ನಮ್ಮ ಕಿರಣ ನಮಗೆ ಹಗಲು; ಉಳಿದ ಬೆಳಕು ಕತ್ತಲು. ನಮ್ಮ ಮನೆಯ ಕಿಟಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ! ನಾವು ಹುದ್ದೆ-ಮುದ್ದೆ-ನಿದ್ದೆ-ಇದೇನಾ ಬದುಕು ಪೆದ್ದೇ ಎಂಬುದನು ಬಿಟ್ಟು ನಾವುಗಳು ಹೊರಬರಬೇಕಾಗಿದೆ ಎಂದು ಸಂದೇಶ ನೀಡಿದರು. ಪ್ರೊ. ನಿಸಾರ್ ಅವರು ಇಲ್ಲಿನ ಸಿಂಗಡಿಗನ್ನರ ಆದರಾತಿಥ್ಯಕ್ಕೆ ಆಭಾರಿ, ಸಿಂಗಪುರದಲಿ ಹೀಗೆ ಸಧಬಿರುಚಿಯ ಕಾರ್ಯಕ್ರಮಗಳು ನೆರವೇರಲಿ, ಎಂದು ಹಾರೈಸಿದರು.

ಬರವಣಿಗೆಯ ಬಗ್ಗೆ ಮಾತನಾಡಿದ ಶಾಮ್ ಅವರ ಈ ಮಾತು ನೆನಪಿನಲಿ ನಿಂದಿತು. Dialogue should be like poor man's telegram ಇದನ್ನು ಯಾರೋ ಹೇಳಿದ್ದಾರೆ, ಬರವಣಿಗೆ ಹಾಗಿರಬೇಕು. ಚಿಕ್ಕದಾಗಿ, ನಾಟುವಂತಿರಬೇಕು ಎಂದು ಹೇಳಿದ್ದು ಚೆನ್ನಾಗಿತ್ತು.

ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ

1. ಪ್ರೊ. ನಿಸಾರ್ ಅವರಿಗೆ: ನಿಮ್ಮ ಕವನಗಳಲ್ಲಿ ನೋವು ಇದೆ, ಬರೆಯಲು ಪ್ರೇರಣೆ ಏನು?

ಪ್ರೊ.ನಿಸಾರ್ : ನನ್ನ ಇಡೀ ಬರವಣಿಗೆಯ ಸೆಲೆ ನೋವಿನ ಎಳೆ. ನಾವು ಉಸಿರಾಡುತ್ತಿರುವ ವಾತಾವರಣ, ಜನ್ಮದಿಂದ ಹೊತ್ತು ತಂದ ಸಂಘರ್ಷ, ತಿಕ್ಕಾಟ, ಒಳತೋಟಿಯಿಂದ ಹೊರಬಂದದ್ದು. ಎರಡು ಸಂಸ್ಕೃತಿಗಳ ಬಗ್ಗೆ ನಿಂದು ಬರೆಯುವುದು ಬಲು ಕಷ್ಟ. 63ರಲ್ಲಿ ಚೀನಿಯರ ಆಕ್ರಮಣ ಬಹಳ ಆಘಾತ ನೀಡಿತು. ಆಗ ಬಂದದ್ದು ಕುರಿಗಳು ಸಾರ್ ಕುರಿಗಳು. ಈ ನೋವು ಬೇರೆಯವರಿಗೆ ಅರ್ಥ ಆಗೋಲ್ಲ. ಕೆಲವೊಮ್ಮೆ ಅನಿಸುತ್ತೆ ನಮ್ಮನ್ನು ಸಾಕಿದವರೇ ಕಟುಕಿಗಳಾಗಿ, ನಮ್ಮನ್ನು ಕುರಿಗಳಾಗಿ ಮಾಡುತ್ತಾರಲ್ಲಾ ಎಂದು ನೋವಾಗುತ್ತದೆ. ನಮ್ಮ ಬೆವರಿನ ಹಣ ಪೋಲಾಗುತ್ತಿದೆ ಎಂದು ನೋವಾಗುತ್ತದೆ. ಸಂವೇದನಾಶೀಲ ಕವಿ ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಕವಿ ಆದವನು ಒಳಿತನ್ನು ಮಾಡುವುದಕ್ಕೆ ಇದನ್ನು ಮಾಡಬೇಕು. ಸಾಹಿತ್ಯದಲಿ ವಿನಮ್ರತೆ ಇರಬೇಕು, ಧಾಷ್ಟ್ಯ ಸಲ್ಲದು. ಇದೀಗ ಭಾವನಾತ್ಮಕ ಕಡಿಮೆ ಆಗುತ್ತಿದೆ, ಘೋಷಣೆ ಜಾಸ್ತಿ ಆಗುತ್ತಿದೆ.

2. ಜಯಂತ್ ಅವರಿಗೆ : ನಿಮ್ಮ ಬರಹದಿಂದ ಪ್ರಭಾವಿತನಾಗಿ ಪ್ರೇರೇಪಣೆ ಮಾಡಿರುವ ಬಗ್ಗೆ ಅನುಭವ ಆಗಿದೆಯಾ?

ಜಯಂತ್ : ನನ್ನ ಬರವಣಿಗೆಯಿಂದ ನನಗೆ ವಿನೀತ ಭಾವನೆ ಬಂದಿದೆ, ಜಗತ್ತನ್ನು ಕಾಣುವ ಆಸೆ ಮೂಡುತ್ತೆ. ನಾನು ಬರೆದುದು ನನ್ನ ಬದುಕಿನ ಪ್ರಯಾಣದ ಮೇಲೆ. ಬರವಣಿಗೆ ಬರೆವಾಗ ಮಾತ್ರ ನಾವು ಬರಹಗಾರರು. ಬರವಣಿಗೆಯಲಿ ಅನುಭವ, ಮಾಹಿತಿ ರಕ್ತಗತ ಆಗಬೇಕು. ಮಾಹಿತಿ ಕಲೆಹಾಕಿ ಬರೆದರೆ ಅದಕ್ಕೆ ತಾಳಿಕೆ ಗುಣ ಇರಬೇಕು. ಆತ್ಮ ವಿಮುಖನಾಗಿ ಅನುಭವಿಸಬೇಕು. ಸಂವೇದನವನ್ನು ಪರಿವರ್ತಿಸುವುದಕ್ಕೆ ಸಾಹಿತ್ಯ ಕುಮ್ಮಕ್ಕು ನೀಡುತ್ತೆ. ಪರೋಕ್ಷವಾಗಿ ಸಂಗೀತ, ಸಾಹಿತ್ಯ ಪ್ರೇರೇಪಣೆ ಕೊಡುತ್ತೆ.

3. ಕವನ, ಕಥೆ ಬರೆವಾಗ ಅದು ಇನ್ನೊಬ್ಬರು ಓದುತ್ತಾರೆ ಎಂಬ ಲಕ್ಷ್ಯ ಇರುವುದಾ?

ಜಯಂತ್ : ನಾವು ಬರೆಯುವುದೇ ಇನ್ನೊಬ್ಬರು ಓದುತ್ತಾರೆ ಎಂದು ಗೊತ್ತಿರುವುದಕ್ಕೇ. ಖಚಿತವಾಗಿ ಇಂಥವರಿಗೇ ಎಂಬ ಲಕ್ಷ್ಯ ಇರುವುದಿಲ್ಲ. ಬರವಣಿಗೆ, ಕವನ ಒಂದು ಸ್ಪಂದನ ಮಾತ್ರ. ಅದು ಈಜು ಕಲಿಯುತ್ತಲ್ಲೇ ನದಿ ದಾಟುವ ಪ್ರಯತ್ನ ಮಾತ್ರ.

4. ಕನ್ನಡ ಸಾಹಿತ್ಯದ ಮಟ್ಟ ಕುಸಿಯುತ್ತಿದೆಯೇ? ಕಾರಣ ಏನು? ಇದು ಎಲ್ಲ ಸಾಹಿತ್ಯಕ್ಕೂ ಅನ್ವಯಿಸುತ್ತದೆ?

ಪ್ರೊ. ನಿಸಾರ್ : ಬರವಣಿಗೆ ಕುಂಠಿತವಾಗುತ್ತಿಲ್ಲ. ಒಂದು ರೀತಿಯಲಿ ಬೆಳೆಯುತ್ತಲಿದೆ. ದಿನಂಪ್ರತಿ ಪುಸ್ತಕಗಳು ಮುದ್ರಣಗೊಳ್ಳುತ್ತಲಿವೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಒಟ್ಟಾರೆ ಸಾಹಿತ್ಯದಲಿ ಒಂದು ತೇಜೋಹೀನತೆ ಕಂಡು ಬರುತ್ತಿದೆ. ಕಾವ್ಯ ವೈಯುಕ್ತಿಕ ಎಂಬ ಭಾವನೆ ಕಾಣಿಸದಿದ್ದಲ್ಲಿ ನಾವು ಭಾವನಾತ್ಮಕವಾಗಿ ಕುಬ್ಜರಾಗುತ್ತಿದ್ದೇವೆ.

ಮುಖ್ಯವಾಗಿ ಮನಗಾಣಬೇಕಾದ್ದು-ಭಾಷೆ ಬಳಸುವ, ಬರೆಸುವ ರೀತಿ. ಈಗ ಅದು ಲೋಕಾಭಿರೂಢಿ ಆಗಿದೆ. ಸೃಜನಶೀಲತೆ ಕಮ್ಮಿ ಆಗಿದೆ. ವಾಚ್ಯತೆ ಬೆಳೆಯುತ್ತಿದೆ, ಚಮತ್ಕಾರಿಕ ಬರವಣಿಗೆ ಹೆಚ್ಚಿದೆ. ಬಹಳಷ್ಟರಲ್ಲಿ ತಿರುಳಿರುವುದಿಲ್ಲ. ಮತ್ತೆ ಸಾಹಿತ್ಯಕ್ಕೆ ಸಮತೋಲನ ಸ್ಥಿತಿ ಬರುವುದು ಎಂಬ ನಂಬಿಕೆ ಇದೆ, ಬರಲಿ ಎಂದು ಹಾರೈಸುತ್ತೇನೆ.

ವೇಳೆಯ ಮಿತಿಯಿಂದ ಸಾಹಿತ್ಯ-ಸಂವಾದಕ್ಕೆ ಪುಲ್‌ಸ್ಟಾಪ್ ಹಾಕಲಾಯಿತು. ಸ್ವಾಗತ-ಭಾಷಣ ಹಾಗೂ ವಂದನೆ ಸಂಘದ ಅಧ್ಯಕ್ಷರಿಂದ, ಕುವೆಂಪು ವಿರಚಿತ "ತೆರೆದಿದೆ ಮನೆ" ಸೀಮಾರಾವ್ ಅವರ ಸಿರಿಕಂಠದಲಿ ಸೊಗಸಾಗಿ ಮೂಡಿ ಬಂದಿತು. ಒಟ್ಟಾರೆ ಸಾಹಿತ್ಯ ಈ ಸಂಜೆ ಭಿನ್ನವಾಗಿತ್ತು. ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X