ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ಕೋಲು ಕೋಲೆನ್ನ ಕೋಲೆ

By * ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Karnataka Vybhava, Singapore 2010
ಕರ್ನಾಟಕ ವೈಭವ ಸಂಸ್ಥೆ ನವೆಂಬರ್ 6 ಮತ್ತು 7ರಂದು ಚೀನಿಯರ ನಾಡು, ಭಾರತೀಯರ ಬೀಡು ಸಿಂಗಾಪುರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಅಪ್ಪಟ ಕನ್ನಡ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿತ್ತು. ವಿಶೇಷವಾಗಿ, ಡಾ. ಸಂಜಯ್ ಶಾಂತಾರಾಮ್ ಅವರ ನೇತೃತ್ವದ ಕಲಾತಂಡ ಪ್ರದರ್ಶಿಸಿದ ಕರ್ನಾಟಕದ ವಿವಿಧ ಜಾನಪದ ನೃತ್ಯಗಳು ಕಲಾರಸಿಕರಿಗೆ ರಸದೌತಣವನ್ನೇ ಉಣಬಡಿಸಿತು.

ಬೆಂಗಳೂರಿನ ಶಿವಪ್ರಿಯ ನೃತ್ಯ ಶಾಲೆಯ ಸಂಸ್ಥಾಪಕರಾದ ಪ್ರಸಿದ್ಧ ನೃತ್ಯ ಪಟು ಡಾ.ಸಂಜಯ್ ಶಾಂತಾರಾಮ್ ಅವರು ಸತತ ಎರಡು ವಾರಗಳ ಕಾಲ ಸಿಂಗಪುರದಲ್ಲಿ ಉಳಿದು ಸ್ಥಳೀಯ ಕನ್ನಡಿಗ ಕಲಾವಿದರಿಗೆ ತರಬೇತಿ ನೀಡಿದ್ದರು. ತಮ್ಮ ಶಾಲೆಯ ಕೆಲವು ಕಲಾವಿದರೊಡನೆ ಹಲವಾರು ಸ್ಥಳೀಯ ಕಲಾವಿದರನ್ನೂ ಸೇರಿಸಿಕೊಂಡು ಅನೇಕ ನೃತ್ಯ ರೂಪಕಗಳನ್ನು ಸಿದ್ಧಗೊಳಿಸಿ ಪ್ರದರ್ಶನ ನೀಡಿದರು. ಈ ಪ್ರದರ್ಶನಗಳಲ್ಲಿ ಮುಖ್ಯವಾದದ್ದು ಜಾನಪದ ನೃತ್ಯ ಮೇಳಗಳು.

ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಸುಗ್ಗಿ ಕುಣಿತ ಮತ್ತು ಯಕ್ಷಗಾನ ನೃತ್ಯಗಳ ಪ್ರದರ್ಶನ ಪ್ರೇಕ್ಷಕರ ಮನಸ್ಸನ್ನು ಎಷ್ಟೊಂದು ಆಕರ್ಷಿಸಿತೆಂದರೆ, ಇಡೀ ಸಭೆ ಒಕ್ಕೊರಲಿನಿಂದ once more ಎಂದು ಬೇಡಿಕೊಂಡಿತು. ಸಭಿಕರ ಸವಿನಯ ಆಗ್ರಹಕ್ಕೆ ಮಣಿದ ಕಾರ್ಯಕ್ರಮದ ಆಯೋಜಕರು ಸಮಯದ ಆಭಾವವಿದ್ದರೂ, ಜಾನಪದ ನೃತ್ಯ ಮೇಳವನ್ನು ಮತ್ತೊಮ್ಮೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟದ್ದು ಸಂತಸತಂದಿತು.

ಕಂಸಾಳೆ ನೃತ್ಯ ಪ್ರಕಾರ ಮೈಸೂರು ಮತ್ತು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಜಾನಪದ ಕಲೆ. ಕಂಸಾಳೆ ವಾದ್ಯವನ್ನು ಉಪಯೋಗಿಸುವರಿಂದ ಈ ಕಲೆಗೆ ಅದರ ಹೆಸರು ಬಂದಿದೆ. ಈ ಕಲೆ ಮಲೆ ಮಹಾದೇಶ್ವರನ ಆರಾಧಿಸುವ ಒಂದು ಪದ್ಧತಿ. ಡೊಳ್ಳು ಕುಣಿತ ಉತ್ತರ ಕರ್ನಾಟಕದ ಜಾನಪದ ಸಮೂಹ ನೃತ್ಯ. ಹದಿನಾರು ಜನರು ಡೊಳ್ಳನ್ನು ಹೊತ್ತು ಅದನ್ನು ಬಾರಿಸುತ್ತ ಮತ್ತು ಅದೇ ಸಮಯದಲ್ಲಿ ನರ್ತಿಸುತ್ತಾರೆ. ದಕ್ಷ ಯಜ್ಞ ಮತ್ತು ವೀರಭದ್ರನ ಕಥೆಯನ್ನು ನೃತ್ಯ ರೂಪಕವಾಗಿ ಹೇಳುವ ವೀರಗಾಸೆ, ಅನೇಕ ತೀವ್ರಗತಿಯ ನಾಟ್ಯ ಭಂಗಿಗಳನ್ನು ಹೊಂದಿದ್ದು ಎರಡು, ನಾಲ್ಕು ಅಥವಾ ಆರು ಜನರ ತಂಡಗಳಿಂದ ಪ್ರದರ್ಶಿಸಲ್ಪಡುತ್ತದೆ.

ಯಕ್ಷಗಾನ ಕರಾವಳಿಯ ಅತ್ಯಂತ ಜನಪ್ರಿಯ ಜಾನಪದ ಕಲೆ. ಈ ಕಲೆಯಲ್ಲಿ ಸಂಗೀತ, ಸಾಹಿತ್ಯ ಮತ್ತು ನೃತ್ಯ, ಮೂರೂ ಕಲೆಗಳ ಸಂಗಮವಿದೆ. ಯಕ್ಷಗಾನ ಪ್ರಸಂಗವೊಂದರಲ್ಲಿ ಕಲಾವಿದರು ಮಹಾಭಾರತ, ರಾಮಾಯಣ ಮತ್ತು ಪುರಾಣದ ಕಥೆಗಳನ್ನು ಅಭಿನಯಿಸಿ ಪ್ರಸ್ತುತಪಡಿಸುತ್ತಾರೆ. ಯಕ್ಷಗಾನದ ರಾಗ ತಾಳಗಳ ಮೂಲ ಜಾನಪದ. ಆದರೆ ಯಕ್ಷಗಾನದ ರಾಗ ತಾಳಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಬಹುದು. ಕರಾವಳಿಯ ಹಾಲಕ್ಕಿ ಒಕ್ಕಲಿಗರು ಸುಗ್ಗಿಯ ಕಾಲದಲ್ಲಿ ಸಂಭ್ರಮದಿಂದ ಆಚರಿಸುವ ನೃತ್ಯ ಸುಗ್ಗಿ ಕುಣಿತ. ಹನ್ನೆರಡರಿಂದ ಹದಿನಾಲ್ಕು ಜನ ನೃತ್ಯಪಟುಗಳು ಸಾದರಪಡಿಸುವ ಈ ನೃತ್ಯ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರಚಲಿತವಿರುವ ಜಾನಪದ ನೃತ್ಯ. ಕೋಲಾಟ ಬಣ್ಣ ಬಣ್ಣದ ಕೋಲುಗಳಿರುವ ಜಾನಪದ ನೃತ್ಯ ರಾಜ್ಯದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಕೋಲು ಕೋಲೆನ್ನ ಕೋಲೆ ಮತ್ತು ಚೆಲುವಯ್ಯ ಚೆಲುವೋ ತಾನಿ ತಂದಾನ ಜನಪ್ರಿಯ ಗೀತೆಗಳನ್ನು ಕೋಲಾಟದಲ್ಲಿ ಸಾಮಾನ್ಯವಾಗಿ ಬಳಸುವದುಂಟು.

ಆಧುನಿಕತೆಯ ಪ್ರವಾಹದಲ್ಲಿ ನಮ್ಮತನ ಮತ್ತು ನಮ್ಮ ಸಂಸ್ಕೃತಿಗಳೆಲ್ಲಿ ಕೊಚ್ಚಿಹೋಗುವವೋ ಎಂಬ ಅಳುಕು ನಮ್ಮಲ್ಲನೇಕರಿಗಿದೆ. ಆದರೆ ಈ ರೀತಿಯ ಜಾನಪದ ನೃತ್ಯಗಳನ್ನು ಜನರು ನೋಡಿ ಮೆಚ್ಚಿ ಮತ್ತೆ ಮತ್ತೆ ನೋಡುವ ಇಚ್ಛೆ ವ್ಯಕ್ತಪಡಿಸುತ್ತಿರುವುದು ಸಮಾಧಾನಕರ. ಈ ತರಹದ ಕಲೆಗಳಿಗೆ ವೇದಿಕೆ ಒದಗಿಸಿ ಅವುಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿರುವ ಕರ್ನಾಟಕ ವೈಭವದಂತಹ ಸಂಸ್ಥೆಗಳೂ ಅಭಿನಂದನಾರ್ಹ. ಕರ್ನಾಟಕ ಪಾರಂಪರಿಕ ಸಂಸ್ಕೃತಿಗೆ ಸಂಕೇತಗಳಾದ ಈ ಅಪೂರ್ವ ಕಲೆಗಳಿಗೆ ವಿಶ್ವದೆಲ್ಲೆಡೆಯ ಕನ್ನಡಿಗರಿಂದ ಮನ್ನಣೆ ದೊರೆತು ಈ ಕಲೆಗಳು ಉಳಿದು ಬೆಳೆಯಬೇಕು ಎಂಬುದು ಜಾನಪದ ಕಲಾಭಿಮಾನಿಗಳ ಆಶಯ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

English summary
Summary in english : Highlights of Karnataka folk dance performance by Dr. Sanjay Shantaram (Shivapriya School of Dance, Bangalore) in Singapore. A report of two days cultural feast organized by Karnataka Vybhava, a Kannada community org in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X