ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಅಮವಾಸ್ಯೆಯಂದು ಸಿಂಗಪುರದಲಿ ಬೆಳಗಿದ ಕನ್ನಡ

By Prasad
|
Google Oneindia Kannada News

Karnataka Vybhava, Singapore 2010
ಶನಿವಾರ ನವೆಂಬರ್ 6, ಎಲ್ಲೆಡೆ ದೀಪಾವಳಿಯ ಅಮಾವಾಸ್ಯೆ, ಸಿಂಗಪುರದ ಕನ್ನಡಿಗರಿಗೆ ಹುಣ್ಣಿಮೆ. ಕರ್ನಾಟಕ ವೈಭವದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ಉಪಸ್ಥಿತರಿದ್ದವರು ನಿತ್ಯೋತ್ಸವದ ಕವಿ-ಪ್ರೊ. ಕೆ.ಎಸ್. ನಿಸಾರ್ ಅಹಮದ್. ಈ ಸಮಾರಂಭಕ್ಕೆ ಶೋಭೆಯನ್ನಿತ್ತವರು ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕರಾದ ಶ್ಯಾಮ್.

* ವಾಣಿ ರಾಮದಾಸ್, ಸಿಂಗಪುರ

ಶನಿವಾರ 6ರ ಸಂಜೆ ಸಿಂಗಪುರದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಮದುವೆಯ ಸಂಭ್ರಮ, ಉತ್ಸಾಹ, ಉಲ್ಲಾಸದ ವಾತಾವರಣ. ಗುರುತು ಪರಿಚಯ ಇಲ್ಲದವರೂ ಬಂದ್ರಾ ಅವ್ರು, ಎಲ್ಲಿದಾರಂತೆ, ಎಷ್ಟು ಹೊತ್ತಿಗೆ ಬರ್ತಾರಂತೆ ಮಾತುಗಳು. ಎಲ್ಲರೂ ಕಾಯುತ್ತಿದ್ದರು ಪದ್ಮಶ್ರೀ ಪುರಸ್ಕೃತ, ಜನಪ್ರಿಯ ಕವಿ ನಿಸಾರ್ ಅಹಮದ್, ಕವಿ, ಲೇಖಕ ಜಯಂತ ಕಾಯ್ಕಿಣಿ ಹಾಗೊ ಅದುವೆಕನ್ನಡದ ಸಂಪಾದಕ ಶ್ಯಾಮ್ ಅವರುಗಳ ಬರುವಿಕೆಗಾಗಿ. ಅತಿಥಿಗಳ ಆಗಮನವಾದಂತೆ ನಾದಸ್ವರ ಮೊಳಗಿತು, ಸಭಾಂಗಣದ ಬಾಗಿಲಲ್ಲೇ ಅತಿಥೇಯರಿಗೆ ಸಂಭ್ರಮದ ಸ್ವಾಗತ ದೊರೆಯಿತು.

ಮೊದಲಿಗೆ ಮಕ್ಕಳಿಂದ ಮಕ್ಕಳ ಬಾಳನು ಅಕ್ಕರೆಗೊಳಿಸಲು ಹಾಗೂ ಮಹಿಳೆಯರಿಂದ ಹಚ್ಚೇವು ಕನ್ನಡದ ದೀಪ, ಉದಯ ಗಗನದೊಳು ಹಾಗೂ ಕನ್ನಡನಾಡಿನ ಮಂಗಳ ಚಂದಿರ ಮೂಡಿ ಬಂದಿತು.

ಅತಿಥಿಗಳ ಮಾತುಗಳು : ಕವಿ ನಿಸಾರ್ ಅವರಿಂದ ಸ್ವಿಚ್ಚೇವು' ಕನ್ನಡದ ದೀಪದಿಂದ ಸಿಂಗಪುರದ ಕರ್ನಾಟಕ ವೈಭವದ ಕನ್ನಡ ಸಾಹಿತ್ಯ ಸಾಂಸ್ಕೃತಿಕ 2010ರ ಉದ್ಘಾಟನೆ. ಕರ್ನಾಟಕ ವೈಭವದ ಅಧ್ಯಕ್ಷರಾದ ರಾಮಚಂದ್ರ ಹೆಗ್ಡೆ ಅವರಿಂದ ಸ್ವಾಗತ ಭಾಷಣ. ನಂತರ "ನೀ ಮೆಟ್ಟುವ ನೆಲ ಅದೆ ಕರ್ನಾಟಕ" ಎಂದು ಕುವೆಂಪು ಅವರ ಅಜರಾಮರ ಪಂಕ್ತಿಗಳಿಂದ ತಮ್ಮ ಮಾತುಗಳನ್ನು ಪ್ರಾರಂಭಿಸಿದ ಪ್ರೊ. ನಿಸಾರ್ ಅವರು ಕನ್ನಡನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿ ಕೂಡ ನಮ್ಮೀ ಕನ್ನಡತಾಯಿ ಸ್ತುತ್ಯಾರ್ಹಳು, ಇಲ್ಲಿನ ನನ್ನೀ ಕನ್ನಡ ಬಂಧು-ಭಗಿನಿಯರೊಂದಿಗೆ ಇಂದಿನ ದೀಪಾವಳಿ ವಾಗ್ ಅತೀತವಾದದ್ದು ಎಂದು ನುಡಿದರು. ಕನ್ನಡ ಯೂಸ್ ಲೆಸ್ ಅಲ್ಲ ಯೂಸ್ಡ್‌ ಲೆಸ್ ಲೆಸ್ಸ್, ನಮ್ಮೀ ಕರ್ನಾಟಕ, ಕನ್ನಡ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿವು-ನಲಿವು ಕೊಡಿ ಎಂದು ಕಳಕಳಿಯಿಂದ ಪ್ರಾರ್ಥಿಸಿದರು. ಸಿಂಗಪುರದ ಕನ್ನಡಿಗರ ಈ ಹೃದಯವಂತಿಕೆ-ಈ ವಾತಾವರಣ ನನ್ನ ಮಾತಿಗೆ ಮೀರಿದ್ದು ಎಂದಾಗ ತುಂಬು ಕರತಾಡನ.

ಕವಿ, ಲೇಖಕ ಶ್ರೀಯುತ ಜಯಂತ್ ಕಾಯ್ಕಿಣಿ ಅವರು, ಅಚ್ಚಕನ್ನಡಿಗರು-ಗುಣಾತ್ಮಕವಾಗಿ ಹುಚ್ಚು ಕನ್ನಡಿಗರಾಗಬೇಕು. ಕನ್ನಡಮ್ಮ ಎಂದು ಮಾತನಾಡುತ್ತೇವೆ ಆದರೆ ಸ್ವಂತ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಹಾಕುತ್ತೇವೆ. ಸಭಿಕರ ಮನ ಮುಟ್ಟಿತೀ ಮಾತು.

ಅದುವೆ ಕನ್ನಡದ ಸಂಪಾದಕ ಶ್ಯಾಮ್ ಅವರು ನಮಸ್ಕಾರ ನೀವಿಲ್ಲದೆ ನಾವಿಲ್ಲ, ನಾವಿಲ್ಲದೆ ನೀವು ಇರಬಹುದು ಎನ್ನುತ್ತಾ ಕನ್ನಡ ಭಾಷೆ ಉಳಿಸಲು ಪ್ರತಿಯೋರ್ವರೂ ಶ್ರಮಿಸಬೇಕು, ವೇಳೆ ಇಲ್ಲ, ಆಗೋಲ್ಲ ಎಂಬ ಮಂತ್ರವನು ಬದಿಗೊತ್ತಿ, ಒಂದುಗೂಡಿ ಕನ್ನಡ ಕಾರ್ಯಕ್ರಮಗಳಿಗೆ ಭಾಗವಹಿಸಿ, ಪ್ರೋತ್ಸಾಹ ನೀಡಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ : ಅತಿಥೇಯರ ಮಾತುಗಳು ಮುಗಿದಂತೆ ಹೆಸರಾಂತ ನೃತ್ಯಪಟು, ನಟ ಡಾ. ಸಂಜಯ್ ಶಾಂತಾರಾಮ್ ತಂಡದವರಿಂದ ಕನ್ನಡ-ಆಂಗ್ಲ ರೂಪ-ವಿರೂಪ ಬ್ಯಾಲೆ. ಸಿಂಗಪುರದ ಸಭಿಕರು ಕಂಡ ಅತ್ಯುತ್ತಮ ನೃತ್ಯ ಸಂಯೋಜನೆ. ಆ ಬ್ಯಾಲೆಯಲಿ ನೃತ್ಯಾಭಿನಯ ನೀಡಿದ ಪ್ರತಿಯೋರ್ವ ನೃತ್ಯಪಟುವಿನ ಭಾವಾಭಿನಯ ಸ್ತುತ್ಯಾಹ. ಬಾಲ್ಯದಲಿ ಓದಿದ್ದ "ಬ್ಯೂಟಿ ಅಂಡ್ ದಿ ಬೀಸ್ಟ್" ಚೆಲುವ-ಚೆಲುವೆಯರು ಮಾಯವಾಗಿ ಮನದಲಿ ಅಚ್ಚೊತ್ತಿದರು ವಸುಂಧರಾ-ರವಿವರ್ಮರು. ಒಂದು ಚಣವೂ ಸಭಿಕರ ಗಮನವನು ಅತ್ತಿತ್ತ ಹರಿಸಿದೆ ಎಲ್ಲರನೂ ತಲ್ಲೀನರಾಗಿಸಿ ರೂಪ-ವಿರೂಪದ ಪ್ರತಿಯೊಂದು ಮಾತು, ಭಾವ, ನಟನೆ, ನೃತ್ಯಗಳಲ್ಲಿ ಸಭಿಕರನ್ನು ಆ ಲೋಕಕ್ಕೆ ಕರೆದೊಯ್ದ ಡಾ.ಸಂಜಯ್ ಶಾಂತಾರಾಮ್ ಹಾಗೂ ಸಿಂಗಪುರದ ಸ್ಥಳೀಯ ಕಲಾವಿದೆ ಮಾಲಿಕಾ ಪಣಿಕ್ಕರ್ ಅವರ ಶ್ರಮ, ನೂತನ ಪ್ರಯತ್ನ ಅತ್ಯಂತ ಶ್ಲಾಘನೀಯ, ಅಭಿನಂದನಾರ್ಹ.

ಕಾರ್ಯಕ್ರಮದ ಸೊಗಸಾದ ನಿರೂಪಣೆಯ ಕಾರ್ಯ ನಿರ್ವಹಿಸಿದ ರೇವಣ್ಣ ಹಾಗೊ ಸ್ವಪ್ನ ಮೋಹನ್ ಅವರಿಗೆ, ಮಕ್ಕಳು ಹಾಗೊ ಮಹಿಳೆಯರ ಕೋಗಿಲೆಯ ಗಾನಕ್ಕೆ ತರಬೇತು ನೀಡಿದ ಸ್ಥಳೀಯ ಸಂಗೀತ ವಿದುಷಿ ಭಾಗ್ಯಮೂರ್ತಿ ಹಾಗೊ ಸಂಗೀತ ಸಂಯೋಜಿಸಿದ ಕಿಶನ್ ಅವರ ಪರಿಶ್ರಮ ಸಭಿಕರ ತುಂಬು ಕರತಾಡನ ದೊರಕಿತು. ಕಣ್ಣಿಗೆ ಸೊಂಪು ನೀಡಿದ ಉತ್ತಮ ನೃತ್ಯ, ಕಿವಿಗಿಂಪಾದ ಗಾಯನ, ಗಣ್ಯ ಸಾಹಿತಿಗಳ ಹಿತ ನುಡಿಗಳು, ಸುಗ್ರಾಸ ಭೋಜನ ದೀಪಾವಳಿಯ ಆನಂದವನು ಇಮ್ಮಡಿಗೊಳಿಸಿ, ನೆರೆದಿದ್ದ ಸಭಿಕರ ಮನದಲಿ ಅಚ್ಚಳಿಯದ ಛಾಪನ್ನು ಮೂಡಿಸಿತು.

ರೂಪ-ವಿರೂಪ ಕಥಾ ಸಾರಾಂಶ : ಸುಂದರ, ವೀರ, ಸೌಂದರ್ಯೋಪಾಸಕ ರಾಜ ರವಿವರ್ಮ. ದೇವಿ ದುರ್ಗೆಯ ಆರಾಧಕ. ಅವನಲಿ ಇದ್ದ ದುರ್ಬಲತೆ ಸದಾ ಸರ್ವದಾ ಹೆಂಗಳೆಯರ ಮಧ್ಯದಲಿ ತನ್ನದೇ ಸೌಂದರ್ಯವನು ಕನ್ನಡಿಯಲಿ ನೋಡಿ, ನೋಡಿ ಆನಂದಿಸುವವ. ಒಮ್ಮೆ ದೇವಿ ದುರ್ಗೆ, ರಾಜನನು ಪರೀಕ್ಷಿಸಲು ಕುರೂಪಿಯ ರೂಪ ಹೊತ್ತು ರಾಜನ ಬಳಿ ಬರುತ್ತಾಳೆ, ಕುರೂಪ, ವೃದ್ಧಾಪ್ಯ ಕಂಡ ರಾಜ ಅಸಹ್ಯಗೊಂಡು ಅವಮಾನಿಸುತ್ತಾನೆ. ಬಾಹ್ಯರೂಪಕ್ಕೆ ಪ್ರಾಮುಖ್ಯತೆ ಕೊಡುವ ರಾಜಾ ನೀ ಕುರೂಪಿ ಆಗೆಂದು ಶಾಪವನಿತ್ತಳು. ಸ್ತುತಿಸಿ, ತನ್ನ ತಪ್ಪಿನ ಅರಿವಾಗಿ ಪರಿಹಾರ ಬೇಡಿದ ರಾಜನಿಗೆ ಆಂತರಿಕ ಸೌಂದರ್ಯ ಕಂಡು ಆರಾಧಿಸಿದಾಗ ನಿನ್ನೀ ಕುರೂಪ ಕೊನೆಗೊಳ್ಳುವುದು ಎಂದು ವರವನಿತ್ತು ತೆರಳುತ್ತಾಳೆ ದೇವಿ. ರಾಜನ ನಂದನವನ ಕಾಡಾಗುತ್ತದೆ. ಮಹಾರಾಜ ವಿರೂಪದೊಂದಿಗೆ ಕಿರಾತಕನೂ ಆಗುತ್ತಾನೆ.

ರಾಜನಿದ್ದ ಮೇಲೆ ರಾಜಕುವರಿ ಬೇಡವೇ? ವಸುಂಧರೆ ಓರ್ವ ರಾಜಕುವರಿ, ಸುಂದರಿ, ಗುಣವಂತೆ. ಮನದಲಿ ರವಿವರ್ಮನನ್ನು ಆರಾಧಿಸಿದವಳು. ಅವಳ ವಿವಾಹಕ್ಕೆ ವರಾನ್ವೇಷಣೆಗಾಗಿ ತೆರಳಿದ ವಸುಂಧರೆಯ ತಂದೆ ಹಾಗೂ ಸೂತ್ರಧಾರು ಕಾಡಿನಲ್ಲಿ ಕಿರಾತಕನಾಗಿದ್ದ ರಾಜನ ಬಂಧಿಯಾಗುತ್ತಾರೆ. ಬಹು ದಿನದಿಂದ ತಂದೆಯನು ಅರಸುತ್ತಾ ಬಂದ ವಸುಂಧರೆಯ ಸೌಂದರ್ಯಕ್ಕೆ ಮಾರು ಹೋದ ಕಾಡು ರಾಜ ಅವಳನ್ನು ತನ್ನ ಸೇವಕಿಯಾಗಿ ನೇಮಿಸುತ್ತಾನೆ. ಅವಳ ಗುಣ ಹಾಗೂ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಒಮ್ಮೆ ವನ್ಯ ಮೃಗಗಳಿಂದ, ವಸುಂಧರೆಯನು ಕಾಪಾಡಿದ ರಾಜನ ರೂಪಕ್ಕೆ ಬೆದರದೆ ಅವನ ವೀರಕ್ಕೆ, ಗುಣಕ್ಕೆ ಮಾರಿ ಹೋಗುತ್ತಾಳೆ ವಸುಂಧರೆ. ಒಮ್ಮೆ ಮತ್ತೋರ್ವ ವೈರಿಯಿಂದ ಇರಿತಕ್ಕೆ ಈಡಾಗುತ್ತಾನೆ ರಾಜ. ಅಂದು ವಸುಂಧರೆ ತನ್ನ ಪ್ರೀತಿಯನು ಬಿತ್ತರಿಸಿದಾಗ ದೇವಿಯಿತ್ತ ವರದಿಂದ ರಾಜನ ವಿರೂಪ -ರೂಪವಾಗಿ ಮಾರ್ಗೊಂಡು, ಸುಖಾಂತಗೊಳ್ಳುತ್ತದೆ.

ಸಂದೇಶ-ಬಾಹ್ಯ ರೂಪಕ್ಕೆ ಮಾರು ಹೋಗದಿರಿ, ಆಂತರಿಕ ಗುಣಕ್ಕೆ ಮಾರು ಹೋಗಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X