ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಪುಟ್ಟ ಮಕ್ಕಳಿಗೂ ಕನ್ನಡ ಬರುತ್ತೆ

By Prasad
|
Google Oneindia Kannada News

Kannada Kali program in Singapore
ಅ-ಆ-ಇ-ಈ ಕನ್ನಡ ಕಲಿಕೆಯ ಕಾರ್ಯಕ್ರಮದ ವೀಕ್ಷಕ ವಿವರಣೆ... ಪ್ರಸ್ತುತ ಪಡಿಸುವವರು ವಾಣಿ ರಾಮದಾಸ್.

17 ಅಕ್ಟೋಬರ್ ಸಿಂಗಪುರದ ಲಿಟಲ್ ಇಂಡಿಯಾದಲ್ಲಿರುವ ಶ್ರೀನಿವಾಸ ಪೆರುಮಾಳ್ ದೇಗುಲದ ಸಭಾಂಗಣದಲ್ಲಿ ಮೈಕ್ ಮುಂದೆ ನಿಂತ 12 ವರುಷದ ಹುಡುಗಿಯೋರ್ವಳು "ನನ್ನ ತಂದೆ ಉತ್ತರದವರು-ತಾಯಿ ದಕ್ಷಿಣದವರು, ನನಗೆ ಅವರಿಟ್ಟ ಹೆಸರು ಸಂಯುಕ್ತ ಸಿಂಗ್. ನಾನೀಗ ಕನ್ನಡ ಕಲಿಯುತ್ತಿದ್ದೇನೆ. ಎಲ್ಲೆಡೆಯಲಿ ಪ್ರಾಂತೀಯ ಭಾಷೆ ಕಮ್ಮಿ ಆಗಿದೆ. ಭಾಷೆ ಸತ್ತು ಹೋದರೆ ಸಂಸ್ಕೃತಿ ಸತ್ತು ಹೋದಂತೆ, ನನಗೆ ಇನ್ನೂ ಕನ್ನಡ-ಕಲಿಯುವಾಸೆ" ಎಂದುಲಿದಾಗ ಬೇಂದ್ರೆ ಅವರ ಉತ್ತರಧೃವದಿಂ ದಕ್ಷಿಣಧೃವಕೂ ಕನ್ನಡ ಕಂಪು ಬೀಸುತಿದೆ ಎನಿಸಿತು. ಕನ್ನಡ ಭಾಷೆ ಕಲಿಯಲಿ ಎಂದು ಆಸ್ಥೆ ತೋರಿದ ಸಿಂಗ್ ದಂಪತಿಗಳ ಬಗ್ಗೆ ಹೆಮ್ಮೆ ಆಯಿತು.

ಭಾಷೆ ಅಳಿದಲ್ಲಿ, ಒಂದು ಸಂಸ್ಕೃತಿಯೇ ಅಳಿದಂತೆ ಇದು ಕಟು ಸತ್ಯ. ನಮ್ಮೀ ಕನ್ನಡ ಅಕ್ಷರ ಮಾಲೆ ಕನ್ನಡಿಗರ ಮಕ್ಕಳು ಕಲಿಯಲಿ ಎಂಬ ಧ್ಯೇಯದಿಂದ ಮೊದಲ ಬಾರಿಗೆ ಸಿಂಗಪುರದಲ್ಲಿ 'ಕನ್ನಡ ಕಲಿ' ಪ್ರಾರಂಭಿಸಿದ ಕರ್ನಾಟಕ ವೈಭವದ ಈ ಸತ್ಕಾರ್ಯ ಹೀಗೆಯೇ ಮುನ್ನಡೆಯಲಿ. ಇಂದು ಕಲಿತ ಮಕ್ಕಳು ಮುಂದೆ ತಾಯ್ನುಡಿಯ ಮರೆಯದೆ ಕನ್ನಡ ಸಂಸ್ಕೃತಿಯ ರಾಯಭಾರಿಗಳಾಗಲಿ. ಸುಮಾರು ಎರಡು ತಿಂಗಳಿನಿಂದ ಕಲಿತ 'ಕನ್ನಡ ಕಲಿ' ಮಕ್ಕಳಿಂದ ತಾವು ಕಲಿತ ಕೆಲವು ಪದ, ಪದ್ಯ, ಸ್ತೋತ್ತ್ರ, ಕಥೆ ಹಾಗೂ ಕಲಿಕೆಯ ಅನುಭವಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳುವ ವೇದಿಕೆ ಅಂದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ "ನಂಗೂ ಕನ್ನಡ ಬರುತ್ತೆ" ಎಂಬ ಮಕ್ಕಳ ತೊದಲ್ನುಡಿಯನು ಕಂಡು ಕರ್ನಾಟಕ ವೈಭವದ ಅಧ್ಯಕ್ಷರಾದ ರಾಮ್‌ಹೆಗ್ಡೆ ಅವರು "ಇದು ಕನ್ನಡದ ಬೆಳಕನ್ನು ಬೆಳಗುವ ಕೆಲಸ, ಈ ಬೆಳಕು ಮತ್ತಷ್ಟು ಬೆಳಗಬೇಕು, ಭಾಷೆ ಬೆಳೆಯಬೇಕು ಇದೇ ನಮ್ಮ ಹಂಬಲ" ಎಂದು ನುಡಿದರು.

ಹೊರನಾಡಿನಲ್ಲಿರುವ ಮಕ್ಕಳ ಕನ್ನಡ ಕಲಿಕೆಗೆ ಪೋಷಕರ ಪ್ರೋತ್ಸಾಹ ತೀರ ಅಗತ್ಯ
ಸುಮಾರು 3-12 ವರುಷದ, ಸಿಂಗಪುರದ 'ಕನ್ನಡ ಕಲಿ'ಯುತ್ತಿರುವ 30 ಮಕ್ಕಳಿಗೆ ತಾವು ಕಲಿತ ಪಾಠ, ಪದ್ಯಗಳನ್ನು ಜೊತೆಗಾರರೊಂದಿಗೆ ಹಂಚಿಕೂಳ್ಳುವ ವೇದಿಕೆ ಅದಾಗಿತ್ತು. ಹಾಗೂ ಮಕ್ಕಳಿಗಾಗಿ ವಿವಿಧ ವೇಷ-ವೇಷಭೂಷಣ ಸ್ಪರ್ಧೆ ಕೂಡ ಇದ್ದಿತು. ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಬಂದು ತಮಗೆ ಕಲಿಸಿದ ಗುರುವಿನ ಹೆಸರನ್ನು ಹೇಳಿ, ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕೆಲವು ಸ್ತೋತ್ರಗಳು ನುಡಿದಾಗ ಕನ್ನಡ ಭಾಷೆ "ಎಲ್ಲಿರುವೆ" ಎನ್ನದೆ "ಇಲ್ಲೂ-ಇರುವೆ" ಎಂದಂತಾಯಿತು. ಬಾಲ್ಯದಲಿ ಮಕ್ಕಳಿಗೆ ಕಲಿಸುವ ಅ, ಆ, ಇ, ಈ ಕನ್ನಡದ ಅಕ್ಷರ ಮಾಲೆ ಮಕ್ಕಳ ನೆನಪಿನ ಅಂಗಳದಲಿ ನಿಲ್ಲಲಿ, ನಲಿಯಲಿ. ಇದು ಭಾಷೆಯ ಉಳಿವಿಗೆ ಸಹಾಯಕ.

ಮಕ್ಕಳ ಕಾರ್ಯಕ್ರಮ ಮುಗಿದಂತೆ ಪಾಲಕರು, ಸಭಿಕರು ಸ್ಪೂರ್ತಿಗೊಂಡು ವೇದಿಕೆಗೆ ಬಂದು ಕೃಷ್ಣಾ ನೀ ಬೇಗನೆ ಬಾರೋ, ನಾರಾಯಣ ನಿನ್ನ ನಾಮದ ಬಲವ, ತಂಬೂರಿ ಮೀಟಿದವ, ಶ್ರೀಮನ್ನಾರಾಯಣ ಕೀರ್ತನೆ, ದಾಸರ ಪದಗಳನ್ನು ಹಾಡಿದರು. ಸಂಗೀತ ವಿದುಷಿ ಭಾಗ್ಯಮೂರ್ತಿ ಅವರು "ಇದು ಎನ್ನ ಬಿನ್ನಹ-ನಿನಗೆನ್ನ ತಾಯೇ, ದಯಪಾಲಿಸಮ್ಮ ಜಗದಂಬೆ ಮಾಯೆ" ಎಂದು ಹಾಡಿದಾಗ "ನಮ್ಮೀ ಭಾಷೆ ಸಂಸ್ಕೃತಿ ಉಳಿಸಮ್ಮ ಜಗದಂತೆ ತಾಯೆ, ಇದು ನಮ್ಮ ಬಿನ್ನಯ ನಿನಗೆನ್ನ ತಾಯೇ" ಎಂದು ಅಲ್ಲಿ ನೆರೆದಿದ್ದ ಕನ್ನಡಿಗರ ಮನದಲಿ ಮೂಡಿದಲ್ಲಿ ಅಚ್ಚರಿ ಏನಿಲ್ಲ. ನಾವೆಲ್ಲಾ ಪರದೇಶದಲ್ಲಿದ್ದೂ "ಕನ್ನಡ-ಕನ್ನಡ" ಎಂದು ಹಬ್ಬ ಹರಿದಿನಗಳಲ್ಲಿ ಒಂದುಗೂಡ್ತೀವಿ, ನಮ್ಮ ಸಂಸ್ಕೃತಿ, ಭಾಷೆ ಬೆಳೆಯಲು ಅಳಿಲು ಪ್ರಯತ್ನ ಆದ್ರೂ ಮಾಡ್ತ ಇದೀವಿ. ಆದರೆ ತವರಿನಲ್ಲಿ ಇದೀಗ ಕನ್ನಡ ಭಾಷೆಗೆ ಬರಗಾಲ ಬರುತ್ತಿರುವುದು ಶೋಚನೀಯ. ನಮ್ಮೀ ತಾಯ್ನುಡಿಯ ಉಳಿಸಲು, ಬೆಳೆಸಲು ಪ್ರಯತ್ನಿಸುತ್ತಿರುವ ಪ್ರತಿಯೋರ್ವ ಕನ್ನಡಿಗನಿಗೆ ನಾವು ಚಿರಋಣಿಗಳಾಗಬೇಕು. ಕಿವಿಗೆ ಕನ್ನಡದ ಕಲರವದ ಇಂಪು, ಕಣ್ಣಿಗೆ ತಮ್ಮದೇ ಪ್ರಪಂಚದಲಿ ಮೈ ಮರೆತಿದ್ದ ಪುಟಾಣಿಗಳ ಉತ್ಸಾಹದ ತಂಪು, ಪುಳಿಯೋಗರೆ, ಕೇಸರೀಬಾತಿನ ಸಿಹಿಯೂಟ ಜೊತೆಗೆ ವಿಜಯದಶಮಿ ಹಬ್ಬ "ಚೆಲುವಯ್ಯ ಚೆಲುವೋ ತಾನಿ ತಂದಾನ" ಎನಿಸಿದ್ದು ಸತ್ಯ.

ಇತ್ತೀಚೆಗಂತೂ ನಾವು ಬೆಂಗಳೂರಿಗೆ ಬಂದಾಗ ಕೆಲವೊಂದು ಸ್ಥಳಗಳಲ್ಲಿ ಮಾತ್ರ ಕನ್ನಡ ಮಾತನಾಡುವುದು ಕೇಳ್ತೀವಿ. ನಮ್ಮೂರಲ್ಲೇ ಕನ್ನಡ ಮಾತನಾಡೊಲ್ವಲ್ಲ ಎಂದು ಬೇಸರ ಆಗುತ್ತೆ. ಸಂಬಂಧಿಕರ ಮನೆ ಮಕ್ಕಳನ್ನು ಕೇಳಿ, ಪದ್ಯ ಬರುತ್ತಾ ಪುಟ್ಟಾ ಅಂತ. ಪದ್ಯ ಅಂದ್ರೆ ಪೊಯಮ್ಮಾ ಓ ಎಂದು "ಟ್ವಿಂಕಲ್, ಟ್ವಿಂಕಲ್" ಎನ್ನುತ್ವೆ. "ಟ್ವಿಂಕಲ್, ಟ್ವಿಂಕಲ್" ಹೇಳಿದ್ರೆ ಖಂಡಿತ ತಪ್ಪಲ್ಲ, ಆ ಮಕ್ಕಳು ಕೂಡ ನಕ್ಷತ್ರಗಳೇ. ಅದರ ಜೊತೆಗೆ "ಒಂದು ಎರಡು ಬಾಳೆಲೆ ಹರಡು, ಬಣ್ಣದ ತಗಡಿನ ತುತ್ತೂರಿ, ಪುಣ್ಯಕೋಟಿ" ಹಾಡುಗಳನ್ನೂ ಇಂದಿನ ಪೀಳಿಗೆ ಅಪ್ಪ-ಅಮ್ಮಂದಿರು ಕಲಿಸಿದರೆ ಒಳ್ಳೆಯದು.

ಕೆಟ್ಟಮೇಲೆ ಬುದ್ದಿ ಬಂತು ಎಂದು ಇದೀಗ 'ಗೋ-ಗ್ರೀನ್' ಎಂದು ಬಾಯಿ ಬಡಿದುಕೊಳ್ಳುವ ಸ್ಥಿತಿ ನಮ್ಮದಾಗಿದೆ. ಹಾಗೆಯೇ ಕನ್ನಡಕ್ಕೂ ಬರಗಾಲ ಬರದಂತೆ ಉಳಿಸಿಕೊಳ್ಳುವ ಪರಿಸ್ಥಿತಿ ಪಾಲಕರಾದ ನಮ್ಮ ಮೇಲಿದೆ. ಕರ್ನಾಟಕದಲ್ಲೇ ಆಗಲಿ ಹೊರದೇಶದಲ್ಲೇ ಆಗಲಿ ಇರುವ ಕನ್ನಡಿಗರು ''ಳೆದಂತೆ ದಾಯಾದಿಗಳು' ಭಾವವನ್ನು ತೊರೆದು 'ನಾವು-ನಮ್ಮವರು' ಎಂದು ಕನ್ನಡ ಭಾಷೆ ಉಳಿಸಿ-ಬೆಳೆಸಲಿ, ಸಂಸ್ಕೃತಿ ಕಾಪಾಡಲು ಒಂದುಗೂಡಿ ಪ್ರಯತ್ನಿಸಲಿ ಎಂಬ ಶುಭ ಹಾರೈಕೆಯೊಂದಿಗೆ....ವಂದನೆಗಳು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X