• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡತನ ಎಂದರೇನು? ಕನ್ನಡಿಗ ಎಂದರೆ ಯಾರು?

By * ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
|

ಸೆಪ್ಟೆಂಬರ್ ಮೊದಲವಾರ ನ್ಯೂ ಜೆರ್ಸಿಯಲ್ಲಿ ನಡೆದ 6ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ 'ಕನ್ನಡತನ ಮತ್ತು ಕನ್ನಡಿಗ" ಎಂಬ ವಿಷಯದ ಮೇಲೆ ಒಂದು ಅರ್ಥಪೂರ್ಣ ಸಂವಾದ ನಡೆಯಬೇಕಾಗಿತ್ತು. ಆದರೆ, ಅಲ್ಲಿ ನಡೆದ 'ಸಂವಾದ" ಮಾತ್ರ ತನ್ನ ಉದ್ದೇಶವನ್ನು ಕಳೆದುಕೊಂಡಿತು.

ಮೊದಲಿಗೆ, 'ಕನ್ನಡತನ"ವೆಂದರೇನು? ಎಂಬುದನ್ನು ಸ್ಫಷ್ಟೀಕರಿಸಿಕೊಂಡಿದ್ದಲ್ಲಿ ಸಂವಾದ ತನ್ನ ಉದ್ದೇಶವನ್ನು ಸಾಧಿಸುತ್ತೇನೋ ಎಂದು ನಾನು ಯೋಚಿಸುತ್ತಿದ್ದೇನೆ. ಹಾಗೆಯೇ, 'ಕನ್ನಡಿಗ" ಎಂದರೆ ಯಾರು? ಎಂಬುದನ್ನೂ ನಿರೂಪಿಸಿಕೊಳ್ಳಬಹುದಾಗಿತ್ತು. ಬದಲಿಗೆ, 'ಮಾತೃಭಾಷೆ" ಎಂಬ ಶಬ್ದಕ್ಕೆ ಮಹತ್ವ ಕೊಟ್ಟು ಸಂವಾದ ತನ್ನ ದಿಕ್ಕನ್ನು ತಪ್ಪಿಸಿಕೊಂಡಿತು. ಆ ಸಂವಾದದಲ್ಲಿ ಭಾಗವಹಿಸಿದ ಎಂ.ಎಂ. ಕಲ್ಬುರ್ಗಿಯವರು 'ಮಾತೃಭಾಷೆ" ಶಬ್ದವನ್ನು ಬೇರೆಯೇ ರೀತಿಯಲ್ಲಿ define ಮಾಡಲು ಹೊರಟು ಸಲ್ಲದ ಗೊಂದಲಕ್ಕೆ ಎಡೆಮಾಡಿಕೊಟ್ಟರು.

ಕನ್ನಡ ನಾಡಿನಲ್ಲಿ ವಾಸಿಸುವವರೆಲ್ಲ ಕನ್ನಡವನ್ನು ಕಲಿತು, ಅದನ್ನೇ ಮಾತೃಭಾಷೆಯನ್ನಾಗಿ ಒಪ್ಪಿಕೊಳ್ಳಬೇಕೆಂಬ ಅರ್ಥದಲ್ಲಿ ಕಲ್ಬುರ್ಗಿಯವರು ಮಾತಾಡಿದರು. ಇದನ್ನು ನಾನಂತೂ ಒಪ್ಪಿಕೊಳ್ಳಲಾರೆ. ಯಾಕೆಂದರೆ, ಮಾತೃಭಾಷೆ ಯಾವಾಗಲೂ ಮಾತೃಭಾಷೆಯಾಗಿಯೇ ಉಳಿಯುತ್ತದೆ. ತಾಯ್ನುಡಿ ಕನ್ನಡವಾಗಿದ್ದರೆ, ಒಬ್ಬ ಮಹಾರಾಷ್ಟ್ರದಲ್ಲಿ ನೆಲೆಸಿದ ಮಾತ್ರಕ್ಕೆ, ಮರಾಠಿ ಅವನ ತಾಯ್ನುಡಿಯಾಗಲು ಸಾಧ್ಯವಿಲ್ಲ. ಆದರೆ, ಅವನು ಮರಾಠಿಗನೆಂದೆನಿಸಿಕೊಳ್ಳಲು ಖಂಡಿತ ಸಾಧ್ಯ. ಅಂತೆಯೇ ತಾಯ್ನುಡಿ ಮರಾಠಿಯಾಗಿದ್ದರೂ, ಒಬ್ಬ ಕನ್ನಡಿಗನೆಂದೆನಿಸಿಕೊಳ್ಳಬಹುದು. ವರಕವಿ ಬೇಂದ್ರೆಯವರೇ ಈ ನಿಲುವಿಗೊಬ್ಬ ಉದಾಹರಣೆಯಾಗಿದ್ದಾರೆ.

ಮಾತೃಭಾಷೆ ಬಿಡದ ಕನ್ನಡಿಗ : ಹಾಗಾದರೆ, 'ಕನ್ನಡಿಗ" ಎಂದರೆ ಯಾರು? ಯಾರ ಹೃದಯದಲ್ಲಿ ಕನ್ನಡ ಮಿಡಿಯುವುದೋ, ಅರಳುವುದೋ, ಯಾರು ತಮ್ಮ ಭಾವನೆಗಳನ್ನು ಕನ್ನಡದಲ್ಲಿ ಸುಲಭವಾಗಿ ಅಭಿವ್ಯಕ್ತಗೊಳಿಸಿ, ವಿಶೇಷ ತೃಪ್ತಿ ಪಡೆಯುತ್ತಾರೋ, ಅಂಥವರು ನಿಜಕ್ಕೂ ಕನ್ನಡಿಗರಾಗುತ್ತಾರೆ. ಅವರ ತಾಯ್ನುಡಿ ಯಾವುದೇ ಇರಲಿ, ಅವರ ಭಾವನೆಗಳ ಅಭಿವ್ಯಕ್ತಿ ಕನ್ನಡದಲ್ಲಿ ಸಲೀಸಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತದೆ. ಅದಕ್ಕಾಗಿಯೇ ಬೇಂದ್ರೆ, ಮಾಸ್ತಿ, ರಾಜರತ್ನಂ, ಡಿವಿಜಿ ಮುಂತಾದವರನ್ನು ನಾವು ಕನ್ನಡ ಶ್ರೇಷ್ಠ ಸಾಹಿತಿಗಳೆಂದೂ, ಅದಕ್ಕೂ ಹೆಚ್ಚಾಗಿ ಅವರು ಕನ್ನಡಿಗರೆಂದೂ ಹೇಳಿಕೊಳ್ಳುವುದು ನಮ್ಮೆಲ್ಲರಿಗೂ ಒಂದು ಅಭಿಮಾನದ ಸಂಗತಿ!

ತುಳು ಮಾತಾಡುವ (ಅದು ಅವರ ತಾಯ್ನುಡಿ) ಯು.ಆರ್. ಅನಂತಮೂರ್ತಿಯವರು ಒಮ್ಮೆ ಹೇಳಿದ ಮಾತು ಇಲ್ಲಿ ನೆನಪಿಗೆ ಬರುತ್ತಿದೆ. ತುಳು ಸಮ್ಮೇಳನವೊಂದರಲ್ಲಿ ಮಾತಾಡುತ್ತ ಅವರು 'ತುಳುವನ್ನು ಬಿಡದೆ ಕನ್ನಡಿಗರಾಗಿರಿ" ಎಂದು ಹೇಳಿದ್ದರು. ಹಾಗಿರಲು ಸಾಧ್ಯವೆಂಬಂತೆ ಕಯ್ಯಾರ ಕಿಞಣ್ಣರಂಥ ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ. ಅಂಥವರ ಹೃದಯದಲ್ಲಿ 'ಕನ್ನಡತನ" ಬೆಳಗಿ ಮೆರೆದಿದೆ. ಇದು 'ಕನ್ನಡತನ" ಮತ್ತು 'ಕನ್ನಡಿಗ" ಎಂಬ ಶಬ್ದಗಳನ್ನು ನಾನು ಅರ್ಥಮಾಡಿಕೊಂಡಂತೆ. ಈ ಬಗ್ಗೆ ಬೇರೆಯವರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಹಾಗಿದ್ದಲ್ಲಿ, ಅವನ್ನು ನನ್ನೊಡನೆಯೂ, ಹಾಗೂ ಇತರ ಓದುಗರೊಡನೆಯೂ ಹಂಚಿಕೊಂಡಲ್ಲಿ, ಅಕ್ಕ ಸಮ್ಮೇಳನದಲ್ಲಿ ನಡೆಯಬೇಕಾದ ಸಂವಾದದ ನಿಜ ಉದ್ದೇಶವನ್ನು ಸಾಧಿಸಬಹುದೋ ಏನೋ!

ಈ ಸಂವಾದ ನಿಜಕ್ಕೂ ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರಿಗೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಂಥವರು ಕರ್ನಾಟಕದಿಂದಲೂ,ಕನ್ನಡದಿಂದಲೂ ದೂರವಾಗಿದ್ದರೂ, 'ಕನ್ನಡತನ"ವನ್ನು ಅವರು ಕಟ್ಟಿಕೊಂಡೇ ಬಂದಿರುತ್ತಾರೆ. 'ಕನ್ನಡತನ" ಅವರು ಹೊತ್ತು ತಂದ ಭೌತಿಕ ಗಂಟುಮೂಟೆಗಳಲ್ಲಿರದೆ, ಅವರ ಹೃದಯದಲ್ಲಿ ಬೇರ್ಪಡಿಸಲಾರದಷ್ಟು ಬಂಧವಾಗಿದೆ. ಇದು ಬರಿಯ ತೋರ್ಪಡಿಕೆಯ ಮಾತಾಗಿರದೆ, ಹೃದಯಾಂತರಾಳದಿಂದ ಮೂಡಿದ ಮಾತು. ಕುವೆಂಪು ಹೇಳಿದ 'ನೀ ಮೆಟ್ಟಿದ ನೆಲ, ಅದೆ ಕರ್ನಾಟಕ" ಎಂಬ ನುಡಿಯನ್ನು ಅವರು ನಿಜಪಡಿಸಿದ್ದಾರೆ.

ಅಮೆರಿಕನ್ನಡ ಅಧ್ಯಯನ ಕೇಂದ್ರ : ಸಮ್ಮೇಳನದಲ್ಲಿ ಎಚ್.ವೈ. ರಾಜಗೋಪಾಲ್ ಹೇಳಿದಂತೆ, ಅಮೆರಿಕದಲ್ಲಿ ಹಲವಾರು 'ಕರ್ನಾಟಕ"ಗಳು ಅಸ್ತಿತ್ವದಲ್ಲಿವೆ. 'ಕವಿರಾಜ ಮಾರ್ಗ" ಹಾಕಿದ ಗಡಿಯನ್ನೂ ಮೀರಿ ಬಂದು ಕರ್ನಾಟಕ ಅಮೆರಿಕದಲ್ಲೂ ಬೆಳೆದಿದೆ ಎನ್ನಬಹುದು. 'ಕನ್ನಡತನ" ಮತ್ತು ಕನ್ನಡಭಾಷೆ - ಇವುಗಳನ್ನು ನೆಲೆಸಿದ ನಾಡಿನಲ್ಲಿ ಬಳಸಿ ಬೆಳೆಸುವ ಪ್ರಯತ್ನಗಳು ಇಲ್ಲಿ ನಡೆಯುತ್ತಲೇ ಇವೆ. ಸಾಹಿತ್ಯಕ್ಕೆಂದೇ ಮೀಸಲಾದ 'ಕನ್ನಡ ಸಾಹಿತ್ಯ ರಂಗ"ವನ್ನು ಸ್ಥಾಪಿಸಿ, ಇಲ್ಲಿ ಸಾಹಿತ್ಯ ಸೇವೆಯನ್ನು ತಮ್ಮ ಕೈಲಾದಮಟ್ಟಿಗೆ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳಲ್ಲಿ ಭಾರತದಿಂದ ಕನ್ನಡ ಸಾಹಿತಿಗಳ ಪ್ರೋತ್ಸಾಹವಂತೂ ನಮ್ಮನ್ನು ಇನ್ನಷ್ಟು ಹುರಿದುಂಬಿಸುತ್ತಿದೆ.

ಆದರೆ, ಅಮೆರಿಕಾದಲ್ಲಿ ಜನಿಸಿದ ಕನ್ನಡ ಮಕ್ಕಳಿಗೆ ಕನ್ನಡವನ್ನು ಓದಲು ಬಾರದಿರುವಾಗ (ಶಾಲಾ-ಕಾಲೇಜುಗಳಲ್ಲಿ ಕನ್ನಡ ಅಧ್ಯಯನವಿಲ್ಲದೆ), ಕನ್ನಡ ಸಾಹಿತ್ಯದ ಹಲವಾರು ಪ್ರಮುಖ ಕೃತಿಗಳ ಸಮರ್ಥ ಪರಿಣಾಮಕಾರಿ ಇಂಗ್ಲಿಷ್ ಅನುವಾದದಿಂದ ಅವರು ಕನ್ನಡ ಸಾಹಿತ್ಯದ ಕಡೆಗೆ ಆಕರ್ಷಿತರಾಗಬಹುದು, ಉತ್ತೇಜಿತರಾಗಬಹುದು, ಕನ್ನಡ ಸಾಹಿತ್ಯದ ಮೇಲೆ ಹೆಮ್ಮೆಪಡುವಂತಾಗಬಹುದು. ಅಲ್ಲದೆ, ಅಂಥ ಸಮರ್ಥ ಅನುವಾದಗಳಿಂದ ಪಾಶ್ಚಾತ್ಯ ಸಾಹಿತಿಗಳೂ ನಮ್ಮ ಕನ್ನಡ ಸಾಹಿತ್ಯದ ಕಂಪನ್ನು ಅನುಭವಿಸುವ ಅನನ್ಯ ಅವಕಾಶ ಮಾಡಿಕೊಟ್ಟಂತಾಗುವುದು.

ಅಮೆರಿಕದ ಯುನಿವರ್ಸಿಟಿಯೊಂದರಲ್ಲಿ ಒಂದು ಕನ್ನಡ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದಲ್ಲಿ ಈ ಕಾರ್ಯ ಹೆಚ್ಚಿನ ಸಾಧನೆ ಪಡೆಯಬಹುದೆಂಬ ಭರವಸೆ ಹೊತ್ತವ ನಾನು. ಅಮೆರಿಕದಲ್ಲಿನ ಎಲ್ಲ ಕನ್ನಡ ಸಂಘಟನೆಗಳೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರವೂ ಗರಿಷ್ಠ ಪ್ರಮಾಣದಲ್ಲಿ ತಮ್ಮೆಲ್ಲ ಸಹಾಯವನ್ನು ನೀಡುವರೆಂಬ ಮಹತ್ವಾಕಾಂಕ್ಷೆ ನಮ್ಮದು. ಈ ಕಾರ್ಯ ಕರ್ನಾಟಕ ಸರಕಾರದ ಘನತೆಯನ್ನೂ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಈ ಮೂಲಕ ತಮ್ಮ ಸಹಾಯ ಮತ್ತು ಸಹಕಾರಗಳನ್ನು ನೀಡಲು ಕನ್ನಡ ಸರಕಾರವನ್ನೂ, ಅಮೆರಿಕದ ವಿವಿಧ ಕನ್ನಡ ಸಂಘಟನೆಗಳನ್ನು ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ. ಈ ವಿಷಯ ಸರಕಾರದ ಗಮನಕ್ಕೂ ಬೀಳಬಹುದೆಂಬ ಆಸೆ ತುಂಬಿದ ನಿರೀಕ್ಷೆ ನನ್ನದು.

ಕನ್ನಡ ಸಾಹಿತ್ಯ ಮತ್ತು 'ಕನ್ನಡತನ" ಅಮೆರಿಕದಲ್ಲಿ ಬೆಳೆಯುತ್ತಿರಲಿ ಎಂಬ ಮಹತ್ತರ ಆಸೆ ನನ್ನದು. ಅಮೆರಿಕನ್ನಡಿಗರೆಲ್ಲರ ಆಸೆಯೂ ಅದೇ ಆಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸಂಘಟನೆಯಿಂದ ಈ ಉದ್ದೇಶವನ್ನು ಸಾಧಿಸುವುದು ಕಷ್ಟವೇನಲ್ಲ. ನಮ್ಮೆಲ್ಲರ ಕನಸು ಶೀಘ್ರದಲ್ಲೇ ನನಸಾಗುವ ಸಮಯ ಬಂದೀತೆಂದು ನಿರೀಕ್ಷಿಸೋಣ!

ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ'

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X