• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರ್ತಾವಾಹಿನಿ ಸಮೀಕ್ಷೆಯ ಇನ್ನಿತರ ಫಲಿತಾಂಶ

By Shami
|

AKKA WKC-6 volunteers
"ಸಮ್ಮೇಳನದ ಎಲ್ಲ ಕಾರ್ಯಕ್ರಮಗಳನ್ನೂ ನೋಡಿ ಆನಂಸಿದಿದ್ದೇವಷ್ಟೇ ಅಲ್ಲ, ವಿಡಿಯೋ ರೆಕಾರ್ಡ್ ಸಹ ಮಾಡಿಟ್ಟಿದ್ದೇವೆ. ಅದರ ಡಿವಿಡಿ ಮಾಡುತ್ತೇವೆ. ಯೂಟ್ಯೂಬ್‌ನಲ್ಲಿ ಹಾಕುತ್ತೇವೆ. ನಮ್ಮ ಸ್ನೇಹಿತರಿಗೆಲ್ಲ ತೋರಿಸುತ್ತೇವೆ" ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ ಟೆಕ್ಸಾಸ್‌ನ ಯುವಕಯುವತಿಯರು ಫೇಸ್‌ಬುಕ್‌ನಲ್ಲಿ ಬರೆದುಕೊಂಡರು.

ಸಮ್ಮೇಳನದ ಕೊನೆಯ ದಿನ ಅಕ್ಕ ಸರ್ವಸದಸ್ಯರ ಸಭೆ ಸಮ್ಮೇಳನದ ತಾಣದಲ್ಲಿಯೇ ಜರುಗಿತು. ಕೊರತೆ ಬಿದ್ದಿರುವ ಸುಮಾರು ಅರವತ್ತುಸಾವಿರ ಡಾಲರ್‌ಗಳನ್ನು ತುಂಬುವ ಮಾರ್ಗೋಪಾಯಗಳ ಕುರಿತು ಸಭೆ ಗಹನವಾಗಿ ಆಲೋಚಿಸಿತು. ಮುಂದಿನ ಸಮ್ಮೇಳನವನ್ನು ಯಾವ ನಗರದಲ್ಲಿ ಆಯೋಜಿಸಬೇಕೆಂಬ ನಿರ್ಧಾರ ಕೈಗೊಳ್ಳುವುದನ್ನು ಮುಂದಕ್ಕೆ ಹಾಕಲಾಯಿತು. ಅಕ್ಕದ ಚುಕ್ಕಾಣಿಯನ್ನು ಮುಂದೆ ಯಾರು ಹಿಡಿಯಬೇಕೆಂಬ ಬಗ್ಗೆ ಸರ್ವಸದಸ್ಯರ ಸಭೆಯ ನಂತರ ಗುಬ್ಬಿವೀರಣ್ಣ ರಂಗಮಂದಿರದ ಮೊಗಸಾಲೆಯಲ್ಲಿ ಅನೌಪಚಾರಿಕ ಮಾತುಕತೆಗಳು ನಡೆದವು ಎಂದು ಅಕ್ಕ ಸಂಸ್ಥೆಯ ಹಿತಚಿಂತಕರೊಬ್ಬರು ಎಡಿಸನ್ ನಗರದ ಸ್ಟಾರ್‌ಬಕ್ಸ್ ಕಾಫಿಶಾಪ್‌ನಲ್ಲಿ ನಮ್ಮ ಸಾಗರೋತ್ತರ ಪ್ರತಿನಿಧಿಗೆ ತಿಳಿಸಿದರು.

ಅಮೆರಿಕದ ಕನ್ನಡ ಸಮ್ಮೇಳನಗಳ ಬಗ್ಗೆ ಕರ್ನಾಟಕದಿಂದಲೂ ಅಭಿಪ್ರಾಯಗಳು ಓತಪ್ರೋತವಾಗಿ ಹರಿದುಬಂದವು. "ಅಮೆರಿಕವನ್ನು ಯಾವ ಕನ್ನಡಕ ಹಾಕಿಕೊಂಡು ನೋಡಬೇಕೆಂದು ಕರ್ನಾಟಕದವರಿಗೆ ಅರ್ಥವಾಗುವ ತನಕ ಈ ಗೋಜಲುಗಳು ತಪ್ಪುವುದಿಲ್ಲ" ಎಂಬುದು ಬೆಂಗಳೂರಿನ ಬಿಸಿನೆಸ್ ಮ್ಯಾಗ್ನೆಟ್ ಒಬ್ಬರ ಅನಿಸಿಕೆಯಾದರೆ "ಕರ್ನಾಟಕ ಸರಕಾರದ ಮೇಲೆ ಅತಿಯಾದ ಅವಲಂಬನೆ ಮಾಡುವ ಚಾಳಿಯನ್ನು ಅಕ್ಕ ನಿಲ್ಲಿಸಬೇಕು" ಎಂದು ಈ ಹಿಂದಿನ ಅಕ್ಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಕನ್ನಡದ ರಂಗಕರ್ಮಿಯೊಬ್ಬರು ಎಸ್ಸೆಮ್ಮೆಸ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

"ಕನ್ನಡದ ಕಂಪು ಎಲ್ಲೆಡೆ ಹರಡಬೇಕಾದರೆ ಅದಕ್ಕೆ ಭಾಷಾಮಮತೆಯೇ ಬಂಡವಾಳ; ಉಳಿದುದೆಲ್ಲವೂ ನಗಣ್ಯ" ಎಂಬುದು ವರ್ಜೀನಿಯಾದ ಒಬ್ಬ ಕವಿಯೊಬ್ಬರು ಟಿಟ್ಟರ್‌ನಲ್ಲಿ ತೇಲಿಬಿಟ್ಟ ಅನಿಸಿಕೆಯಾಗಿತ್ತು. ಈ ಸಂದೇಶ ಕತ್ರೀನಾ ಚಂಡಮಾರುತಕ್ಕಿಂತ ವೇಗವಾಗಿ ಅಮೆರಿಕಾದ ಮೂಲೆಮೂಲೆಗಳನ್ನು ತಲುಪಿತು. "ನ್ಯೂಜೆರ್ಸಿ ಸಮ್ಮೇಳನದಲ್ಲಿ ಮುಖ್ಯವಾಗಿ ಊಟ-ತಿಂಡಿ ವಿಭಾಗದಲ್ಲಿ ಲೋಪದೋಷಗಳು ಕಂಡುಬಂದದ್ದು ಅಕ್ಷಮ್ಯ. ಆದರೆ, ಕರ್ನಾಟಕದಲ್ಲಿ ನಡೆಯುವ ಸಾಹಿತ್ಯಸಮ್ಮೇಳನಗಳ ಅಧ್ವಾನಗಳಿಗೆ ಹೋಲಿಸಿದರೆ ಅಮೆರಿಕದ ಸಮ್ಮೇಳನ ಎಷ್ಟೋ ವಾಸಿ" ಎಂದು ಕ.ಸಾ.ಪ ಸಮ್ಮೇಳನಗಳಲ್ಲಿ ತಪ್ಪದೇ ಪಾಲ್ಗೊಳ್ಳುವ ಸಾಕ್ರಮೆಂಟೋದಲ್ಲಿರುವ ಕನ್ನಡದಾಸರೊಬ್ಬರು ಕನ್ನಡ ಸಮ್ಮೇಳನಗಳನ್ನು ತಕ್ಕಡಿಯಲ್ಲಿ ತೂಗುವ ಪ್ರಯತ್ನ ಮಾಡಿದರು.

"ಮಠಗಳ ಸ್ವಾಮೀಜಿಗಳೇ ಪರಸ್ಪರ ಜಗ್ಗಾಡಿಕೊಳ್ಳುವ, ಕವಿಗೋಷ್ಠಿಗಳಲ್ಲಿ ಸಹೃದಯ ಕವಿಗಳು ದಾಂಧಲೆಯೆಬ್ಬಿಸುವ, ಊಟತಿಂಡಿಗೆ ಹಾಹಾಕಾರ ಪಡುವ ಪ್ರಸಂಗಗಳು ಕರ್ನಾಟಕದಲ್ಲಿನ ಸಮ್ಮೇಳನಗಳಲ್ಲಿ ಸರ್ವೇಸಾಮಾನ್ಯವಾಗಿರುವಾಗ ಇಲ್ಲಿ ಅಂಥ ನಾಚಿಕೆಗೇಡಿನ ವಿದ್ಯಮಾನಗಳು ಜರುಗದಿರುವುದೇ ನಮ್ಮ ಅದೃಷ್ಟ" ಎಂದು ಸಮ್ಮೇಳನದಲ್ಲಿ ಪಾಲ್ಗೊಂಡ ಫ್ಲಾರಿಡಾದ ಹಿರಿಯ ಕನ್ನಡಿಗರೊಬ್ಬರು ವ್ಯಂಗ್ಯವಾಡಿದರು.

"ಕನ್ನಡದ ಸಮ್ಮೇಳನಗಳು ಯಾವುದೇ ನೆಲದಲ್ಲಿ ನಡೆಯಲಿ, ಅದರ ಮೂಲ ಸ್ವರೂಪ ಕನ್ನಡ ಭಾಷೆ ಮತ್ತು ಕನ್ನಡಿಗರೊಂದಿಗಿನ ಸಂಬಂಧವರ್ಧನೆಗೆ ಪ್ರತೀಕವಾಗಬೇಕು. ಕವಿ ಎಚ್ಚೆಸ್ವಿ ಒಮ್ಮೆ ಹೇಳಿರುವಂತೆ ಇಬ್ಬರು ಕನ್ನಡಿಗರು ಎಲ್ಲಿ ಸೇರುತ್ತಾರೋ ಅಲ್ಲಿ ಒಂದು ಕರ್ನಾಟಕ ನಿರ್ಮಾಣವಾಗಬೇಕು. ಚಿತ್ರನಿರ್ದೇಶಕ ನಾಗತಿಹಳ್ಳಿ ಇತ್ತೀಚೆಗೆ ಉದ್ಗರಿಸಿದಂತೆ 'ಇಬ್ಬರು ಕನ್ನಡಿಗರು ಸೇರುವುದೇ ಇಲ್ಲ, ಸೇರಿದರೆ ಜಗಳಾಡದೆ ಇರುವುದಿಲ್ಲ' ಎಂಬ ವ್ಯಾಖ್ಯಾನ ದಿನಗಳೆದಂತೆ ಸುಳ್ಳಾಗಬೇಕು. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರು ಪ್ರತಿಪಾದಿಸಿದ 'ಅವಕಾಶಗಳ ಅಮರಾವತಿ ಅಮೆರಿಕ' ನುಡಿಗಟ್ಟಿನೊಳಗೆ ಅಡಗಿರುವ ಸುಪ್ತಸಂದೇಶವನ್ನು ಪೂರ್ವ-ಪಶ್ಚಿಮಗಳಲ್ಲಿ ನೆಲೆಸಿರುವ ಕನ್ನಡಿಗರು ಇನ್ನಾದರೂ ಮನನ ಮಾಡಿಕೊಳ್ಳಬೇಕು, ಇಲ್ಲವಾದರೆ ಕನ್ನಡ ಪ್ರೀತಿ ವೃಷಭಾವತಿಯಲ್ಲಿ ಲೀನವಾದೀತು" ಎಂದು ಎಚ್ಚರಿಸುವ ಪ್ರಸ್ತಾಪವನ್ನು ಸದ್ಯದಲ್ಲೇ ಪ್ರಕಟವಾಗಲಿರುವ ತಮ್ಮ ಪ್ರವಾಸಕಥನದಲ್ಲಿ ಮೈಸೂರಿನ ಲೇಖಕರೊಬ್ಬರು ಟಿಪ್ಪಣಿ ಮಾಡಿದ್ದಾರೆ ಎಂದು ಕನ್ನಡ ಪುಸ್ತಕಗಳನ್ನೇ ಅಚ್ಚು ಹಾಕುವ ಕರ್ನಾಟಕದ ಒಂದು ಪ್ರಖ್ಯಾತ ಪ್ರಕಾಶನ ಸಂಸ್ಥೆಯ ಸಂಪಾದಕರು ನಮ್ಮ ಪ್ರತಿನಿಧಿಗೆ ತಿಳಿಸಿದರು.

ಕೊನೆಯಲ್ಲಿ ಮತ್ತೊಮ್ಮೆ ಸಮ್ಮೇಳನದ ಮುಖ್ಯಾಂಶಗಳು:

ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಸ್ವಯಂಸೇವಕರಿಗೆ ಅಂಕಗಳು ಹತ್ತಕ್ಕೆ ಹತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ರಸಗವಳಕ್ಕೆ ಹತ್ತರಲ್ಲಿ ಒಂಬತ್ತು. ಆದರಾತಿಥ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಹತ್ತರಲ್ಲಿ ಎಂಟು. ಹೊಸತನ ಮತ್ತು ವೈವಿಧ್ಯಗಳಿಗೆ ಹತ್ತರಲ್ಲಿ ಏಳು ಅಂಕಗಳು. ಹಣಕಾಸು ನಿರ್ವಹಣೆಗೆ ಹತ್ತಕ್ಕೆ ಆರು ಮಾರ್ಕ್ಸ್. ಊಟ-ತಿಂಡಿ ವ್ಯವಸ್ಥೆಗೆ ಹತ್ತರಲ್ಲಿ ಐದು. ಸರಕಾರದೊಂದಿಗಿನ ಮೈತ್ರಿಸಂಬಂಧಗಳಿಗೆ ಹತ್ತಕ್ಕೆ ನಾಲ್ಕು. ಸರಕಾರಿ ಕಲಾವಿದರ ಆಯ್ಕೆಯ ಮಾನದಂಡ ಮತ್ತು ಗಾತ್ರಕ್ಕೆ ಹತ್ತರಲ್ಲಿ ಮೂರು. ಭಾನುವಾರ ರಾತ್ರಿಯ ಪ್ರೈಮ್ ಟೈಮ್ ಮನರಂಜನೆಗೆ ಅಂಕಗಳು ಹತ್ತಕ್ಕೆ ಎರಡು. ರಾಜಕಾರಣಿಗಳನ್ನು ಸುಮ್ಮಸುಮ್ಮನೆ ವೇದಿಕೆ ಹತ್ತಿಸಿ ಕುಣಿಸಿದ್ದಕ್ಕೆ ಹತ್ತಕ್ಕೆ ಒಂದು ಅಂಕ. ಮತ್ತು, ಮೊಸರಲ್ಲಿ ಕಲ್ಲು ಹುಡುಕುವವರಿಗೆ ಸೊನ್ನೆ ಅಂಕಗಳು.

ಇಲ್ಲಿಗೆ ಅಕ್ಕ ಸಮ್ಮೇಳನದ ರಸವಾರ್ತೆಗಳು ಮುಕ್ತಾಯವಾದವು. ನಮಸ್ಕಾರ.

* ಎಸ್ಕೆ ಶಾಮಸುಂದರ; ವಾಷಿಂಗ್ಟನ್. ಇಮೇಲ್: shami.sk@greynium.com

ವಿಡಿಯೋ : ಶ್ವೇತಭವನದಿಂದ ಶಾಮ್ - ನೇರ ಪ್ರಸಾರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more