• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನ ರಸವಾರ್ತೆ, ಓದುತ್ತಿರುವವರು ಶಾಮ್

By * ಎಸ್ಕೆ ಶಾಮಸುಂದರ; ವಾಷಿಂಗ್ಟನ್
|

SK Shama Sundara
ಉತ್ತರ ಅಮೆರಿಕ ದೇಶದಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಶ್ವ ಕನ್ನಡಿಗರ ಮೂರು ದಿನಗಳ ಸಮ್ಮೇಳನ ನಾನಾ ಸ್ವರೂಪದ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಸಮ್ಮೇಳನ ಆಯೋಜಿಸಿದ್ದು ಅಮೆರಿಕ ಕನ್ನಡ ಕೂಟಗಳ ಆಗರ ಅಕ್ಕ'; ವ್ಯವಸ್ಥೆಗೊಳಿಸಿದ್ದು ಅಕ್ಕ ಬಳಗದ ಸದಸ್ಯ ಸಂಘ ನ್ಯೂ ಜೆರ್ಸಿಯ ಬೃಂದಾವನ' ಕನ್ನಡಕೂಟ. ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪನ್ನವಾದ ಈ ಸಮ್ಮೇಳನ ಹಲವರಿಗೆ ಸಂತೋಷದಾಯಕವಾಗಿದ್ದರೆ ಕೆಲವರಲ್ಲಿ ಅತೃಪ್ತಿ, ಅಸಮಾಧಾನದ ಹೊಗೆಯನ್ನೂ ಹುಟ್ಟಿಹಾಕಿತು. ಸಮ್ಮೇಳನದ ಆಗುಹೋಗುಗಳಿಗೆ ಪ್ರತ್ಯಕ್ಷ ದರ್ಶಿಯಾಗಿದ್ದ ನಮ್ಮ ಬಾತ್ಮೀದಾರರಿಂದ ಇದೀಗ ಪ್ರದೇಶ ಸಮಾಚಾರ.

***

ಸುಮಾರು ಐದುನೂರು ಮಂದಿ ಅನಿವಾಸಿ ಕನ್ನಡ ಕಾರ್ಯಕರ್ತರು ಸಮ್ಮೇಳನದ ಯಶಸ್ಸಿಗಾಗಿ ಒಂದು ವರ್ಷ ಕಾಲ ಸಿದ್ಧತೆ ನಡೆಸಿದ್ದರು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡತನವನ್ನು ಇಲ್ಲೂ ಅಲ್ಲೂ ಎಲ್ಲೆಲ್ಲೂ ಬೆಳೆಸುವ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಸಾವಿರಾರು ಕನ್ನಡ ಮನಸ್ಸುಗಳು ಕೈಜೋಡಿಸಿದ್ದವು. ದುರ್ಭರ ಆರ್ಥಿಕ ಸ್ಥಿತಿಗತಿಗಳ ನಡುವೆಯೂ ಮನೆಗೆಲಸ, ಕಚೇರಿ ಕೆಲಸ ಬದಿಗಿಟ್ಟು ಹೆಂಡತಿ ಮಕ್ಕಳ ಕೋಪತಾಪ ಸಹಿಸಿಕೊಂಡು ಸ್ವಯಂಸೇವಕರು ಕನ್ನಡ ಕೆಲಸಗಳಿಗೆ ಟೊಂಕ ಕಟ್ಟಿದ್ದು ಸಮ್ಮೇಳನದ ಗಮನಾರ್ಹ ಸಂಗತಿಗಳಲ್ಲೊಂದಾಗಿತ್ತು.

ಅಮೆರಿಕದ ದಶದಿಕ್ಕುಗಳಿಂದ ಕನ್ನಡ ಹಬ್ಬದಲ್ಲಿ ಭಾಗವಹಿಸಿದ್ದ ಅನಿವಾಸಿ ಕನ್ನಡ ಕುಟುಂಬಗಳ ಜತೆಗೆ ಕರ್ನಾಟಕದಿಂದ ಆಗಮಿಸಿದ ನೂರಾರು ಕನ್ನಡಿಗರು ಬೆರೆತಿದ್ದರು. ಕರ್ನಾಟಕದಿಂದ ಬಂದಿದ್ದವರಲ್ಲಿ ಪ್ರಮುಖವಾಗಿ ವೃತ್ತಿಪರ ಕಲಾವಿದರು, ಕವಿಕೋಗಿಲೆಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸಿನೆಮಾ ತಾರೆಯರಿದ್ದರು. ಸರಕಾರದ ವತಿಯಿಂದ ಆಗಮಿಸಿದ್ದ ಕಲಾವಿದರ ತಂಡದ ಜತೆಗೆ ಕೆಲವು ಸರಕಾರಿ ಅಧಿಕಾರಿಗಳೂ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲ ದಿನ ಶುಭಾರಂಭ. ಕಣ್ಮನ ತಣಿಸುವ ಹತ್ತಾರು ಕಾರ್ಯಕ್ರಮಗಳ ಸುಗ್ಗಿ. ಸುಗ್ಗಿಯ ಹುಗ್ಗಿಯ ಜತೆಗೆ ಕೆಲವು ನುಗ್ಗೆ ಮುಳ್ಳುಗಳು ಮೊದಲ ದಿನವೇ ಇಣುಕಿದವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗೈರುಹಾಜರಿಯಲ್ಲಿ ಸಮ್ಮೇಳನವನ್ನು ಯಾರಿಂದ ಉದ್ಘಾಟನೆ ಮಾಡಿಸಬೇಕು? ಎನ್ನುವುದು ಆಯೋಜಕರನ್ನು ಗೊಂದಲಕ್ಕೆ ದೂಡಿತು. ರಾಜಕಾರಣಿಗಳು ಮತ್ತು ಅಧಿಕಾರಿಗಳ ದೊಡ್ಡ ಪಾಳಯದಲ್ಲಿ ಗಣ್ಯಾತಿಗಣ್ಯರು ಯಾರು? ಬರೀ ಗಣ್ಯರು ಯಾರು? ಎಂದು ನಿರ್ಧರಿಸುವುದೇ ಗೋಜಲಾಗಿತ್ತು. ಮೊದಲದಿನ ಜರುಗಿದ ವಾಣಿಜ್ಯ ವೇದಿಕೆಯನ್ನು ಉದ್ಘಾಟಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರನ್ನು ವಿನಂತಿಸಿಕೊಳ್ಳಲಾಯಿತು. ಆದರೆ, ವಾಣಿಜ್ಯ ವಿಷಯಗಳ ಬಗ್ಗೆ ಮಾತನಾಡುವುದಕ್ಕೆ ತಾವು ತಯಾರಾಗಿ ಬಂದಿಲ್ಲವೆಂದೂ ತಮ್ಮ ಬದಲಿಗೆ ಬೇರಿನ್ನಾರಾದರೂ ಉದ್ಘಾಟನೆ ನೆರವೇರಿಸಬೇಕೆಂದು ಅರಸ್ ಅವರು ಹೇಳಿದುದರಿಂದ ಗಣ್ಯರ ಸಾಲಿನಲ್ಲಿ ಎದ್ದುಕಾಣುತ್ತಿದ್ದ ಸಭಾಪತಿ ಡಿ.ಎಸ್.ಶಂಕರಮೂರ್ತಿಯವರಿಂದಲೇ ಸಭೆಯನ್ನು ಉದ್ಘಾಟಿಸಲಾಯಿತು. ಬಂಡವಾಳ ಹೂಡಿಕೆಯ ಅಗತ್ಯ ಮತ್ತು ಅದಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವ ಸರಕಾರದ ಇಂಗಿತವನ್ನು ಮೂರ್ತಿಗಳು ತಮ್ಮ ಭಾಷಣದಲ್ಲಿ ಸವಿಸ್ತಾರವಾಗಿ ಪ್ರಸ್ತಾಪಿಸಿದರು.

ವಾಣಿಜ್ಯ ವೇದಿಕೆಯ ಉದ್ಘಾಟನೆ ಮತ್ತು ಮುಖ್ಯ ಸಮ್ಮೇಳನದ ಉದ್ಘಾಟನೆ ಎರಡನ್ನೂ ಶಂಕರಮೂರ್ತಿಯವರೇ ನೆರವೇರಿಸಿದರು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳನ್ನು ವಾಣಿಜ್ಯ ಸಭೆಯಲ್ಲಿ ಅವರು ಪ್ರಸ್ತಾಪಿಸಿದರೆ ಮುಖ್ಯ ವೇದಿಕೆಯಲ್ಲಿ ಅಮೆರಿಕನ್ನಡಿಗರ ಮಾತೃಭಾಷಾ ಪ್ರೇಮ ಹಾಗೂ ಕನ್ನಡೋತ್ಸಾಹಗಳನ್ನು ಮೆಚ್ಚಿ ಅನಿವಾಸಿ ಕನ್ನಡ ಕುಟುಂಬಗಳ ಬೆನ್ನು ತಟ್ಟುವ ಭಾಷಣ ಮಾಡಿದರು. ಹೊರನಾಡಿನಲ್ಲಿ ಬೆಳಗುವ ಕನ್ನಡ ದೀಪಗಳು ಮತ್ತಷ್ಟು ಪ್ರಜ್ವಲಿಸುವುದಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡಲು ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಶಂಕರಮೂರ್ತಿ ಘೋಷಿಸಿದರು.

ಇದೇ ವೇಳೆ, ಮೂರು ದಿನಗಳ ಕಾಲ ಸಾಂಗವಾಗಿ ನೆರವೇರಿದ ಸಮ್ಮೇಳನ ಸಂಭ್ರಮಕ್ಕೆ ಮಂಜು-ಮಳೆ-ಗಾಳಿಯ ಹಾವಳಿ ಕಾಡದಿದ್ದುದನ್ನು ಹವಾಮಾನದ ವಿಪರೀತ ಮುಖಗಳನ್ನು ನಿತ್ಯ ಕಾಣುವ ಬಹುತೇಕ ಅಮೆರಿಕನ್ನಡಿಗರು ಅದೃಷ್ಟವೆಂದೇ ಬಣ್ಣಿಸಿಕೊಂಡರು. ಸ್ವಯಂಸೇವಕರ ದಣಿವರಿಯದ ದುಡಿಮೆ, ಸಮ್ಮೇಳನಕ್ಕೆ ನೊಂದಾಯಿಸಿಕೊಳ್ಳಲು ಕನ್ನಡ ಕುಟುಂಬಗಳು ತೋರಿದ ಉತ್ಸಾಹ ಮತ್ತು ದಾನಿಗಳ ಸಹಕಾರದಿಂದ ಕಾರ್ಯಕ್ರಮಗಳು ಸಾಂಗವಾಯಿತು ಎಂದು ಸಮ್ಮೇಳನದ ನಂತರ ಅಕ್ಕ ಸಂಸ್ಥೆಯ ಅಧಿಕಾರಿಗಳು ವಾಷಿಂಗ್ಟನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪದಾಧಿಕಾರಿಗಳ ಗಮನಕ್ಕೆ ಬಾರದೆ ಸಮ್ಮೇಳನಾರ್ಥಿಗಳಿಗೆ ಏನಾದರೂ ಅನನುಕೂಲವಾಗಿದ್ದರೆ ಅದಕ್ಕೆ ತಾವು ವಿಷಾದ ವ್ಯಕ್ತಪಡಿಸುವುದಾಗಿಯೂ ಅವರು ಸುದ್ದಿಗಾರರಿಗೆ ಹೇಳಿದರು.

ಸಮ್ಮೇಳನ ಮುಗಿದ ಮಾರನೆ ದಿನ ಕರ್ನಾಟಕದ ಅತಿಥಿಗಳನ್ನು ನ್ಯೂಯಾರ್ಕ್ ಮುಂತಾದ ಪ್ರೇಕ್ಷಣೀಯ ತಾಣಗಳಿಗೆ ಕರೆದೊಯ್ಯುವ ಪ್ರವಾಸ ಕಾರ್ಯಕ್ರಮವಿತ್ತು. ಆದರೆ, ಪ್ರವಾಸಕ್ಕೆ ಹೊರಟ ಹಳದಿ ಬಸ್ ಕೆಟ್ಟು ನಿಂತಿದ್ದರಿಂದ ನ್ಯೂಯಾರ್ಕ್ ಯಾತ್ರಾ ಕಾರ್ಯಕ್ರಮಕ್ಕೆ ವಿಳಂಬವುಂಟಾಯಿತು. ಮತ್ತು ಅಂದು ಬೆಳಗಿನ ಉಪಾಹಾರ ಏರ್ಪಡಿಸುವಲ್ಲಿ ಆಯೋಜಕರ ಕೆಲವು ಕೈಮೀರಿದ ಕಾರಣಗಳಿಂದಾಗಿ ಏರುಪೇರುಗಳು ಉಂಟಾದವು. ಇಡ್ಲಿ ಸಾಂಬಾರ್ ಬಯಸುವ ನಾಲಗೆಗಳಿಗೆ ಡೋನಟ್ಟೇ ಗತಿಯಾಯಿತು. ಇವೇ ಮುಂತಾದ ಕಾರಣಗಳಿಂದಾಗಿ ಮೂರು ದಿನದ ಕಾರ್ಯಕ್ರಮಗಳು ಅದ್ಭುತವಾಗಿ ಜರುಗಿದವು ಎಂದು ಹೊಗಳುತ್ತಿದ್ದ ಗಣ್ಯ ಅಧಿಕಾರಿಗಳು ಏಕಾಏಕಿ ಕುಪಿತರಾಗಿ ಇಡೀ ಸಮ್ಮೇಳನಕ್ಕೆ ಮಸಿಬಳಿಯುವಂತಹ ಮಾತುಗಳನ್ನು ಆಡಿದರು ಎಂದು ಎಡಿಸನ್ ನಗರದ ಹಾಲಿಡೇ ಇನ್' ಹೋಟೆಲ್‌ನಲ್ಲಿ ಉಪಸ್ಥಿತರಿದ್ದ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಇಷ್ಟೇ ಅಲ್ಲ. ಕರ್ನಾಟಕದ ಅತಿಥಿಗಳು ಹೊಟ್ಟೆಗೆ ಹಿಟ್ಟಿಲ್ಲದೆ ಇರಬೇಕಾಯಿತು ಎಂಬ ಸುದ್ದಿ ವಿಶ್ವಾದ್ಯಂತ ಹಂದಿಜ್ವರದಂತೆ ಹರಡತೊಡಗಿತು. ಇದಕ್ಕೆ ತತ್ ಕ್ಷಣ ಪ್ರತಿಕ್ರಿಯಿಸಿದ ನ್ಯೂಯಾರ್ಕ್ ನಿವಾಸಿ ಹಿರಿಯ ಕನ್ನಡಿಗರೊಬ್ಬರು ತಿನ್ನುವುದಕ್ಕೆ ಅನ್ನವಿಲ್ಲದಂಥ ಪರಿಸ್ಥಿತಿ ಯಾರಿಗೂ ಬಂದಿಲ್ಲ; ಬರುವುದೂ ಬೇಡ ಎಂದು ತಮ್ಮ ಒಂದು ಇಮೇಲ್ ಸಂದೇಶವನ್ನು ನಮ್ಮ ನಿಲಯಕ್ಕೆ ಕೂಡಲೇ ರವಾನಿಸಿದರು.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ನಮ್ಮ ಅಮೆರಿಕ ನ್ಯೂಸ್ ನೆಟ್‌ವರ್ಕ್ ವಾರ್ತಾವಾಹಿನಿ ಅಕ್ಕ ಸಮ್ಮೇಳನದ ಫಲಶೃತಿಯ ಕುರಿತಂತೆ ಒಂದು ದಿಢೀರ್ ಸಮೀಕ್ಷೆಯನ್ನು ಕೈಗೆತ್ತಿಕೊಂಡಿತು. ಸಮೀಕ್ಷೆಯ ಹೈಲೈಟ್ಸ್ ಇಂತಿವೆ:

ಮುಂದೆ ಓದಿ : ಅಮೆರಿಕ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆಯ ಹೈಲೈಟ್ಸ್ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more