• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮೇಳನದ ಕಡಲಲ್ಲಿ ಸಾಹಿತ್ಯದ ಹಾಯಿದೋಣಿ

By Shami
|

Dr MS Nataraj
ಕನ್ನಡಿಗರ ಸಮ್ಮೇಳನ ಎಂದಮೇಲೆ ಅಲ್ಲಿ ಕನ್ನಡ ಸಾಹಿತ್ಯದ ಗಂಧ ಗಾಳಿ ಸುಳಿದಾಡಲೇಬೇಕು. ಅಕ್ಷರ ಪ್ರೀತಿ ಮತ್ತು ಸಾಹಿತ್ಯ ಸಂವೇದನೆಗಳ ವಿನಿಮಯ ನಡೆಯದಿದ್ದರೆ ಅದನ್ನು ಕನ್ನಡ ಸಮ್ಮೇಳನ ಎಂದು ಕರೆಯುವುದಾದರೂ ಹೇಗೆ? ಇತ್ತೀಚೆಗೆ ನ್ಯೂ ಜೆರ್ಸಿಯಲ್ಲಿ ನಡೆದ ಅಕ್ಕ ಕನ್ನಡ ಸಮ್ಮೇಳನದಲ್ಲಿ ಕುಳಿತುಕೊಳ್ಳುವುದಕ್ಕೆ ಸಾಹಿತ್ಯ ಸರಸ್ವತಿಗೂ ಒಂದು ಚಾಪೆ ಸಿಕ್ಕಿದುದು ಕೆಲವರಿಗಾದರೂ ಸಂತಸ ತಂದಿರಬೇಕು. ಭಾಷಣಗಳ ಮಳೆ, ಸಂಗೀತದ ಹೊಳೆ, ಹಾಸ್ಯಧಾರೆ ಮತ್ತು ನೃತ್ಯ ನಾಟಕಗಳ ಸೆಳವಿನಲ್ಲಿ ಸಾಹಿತ್ಯಗೋಷ್ಠಿಗಳ ಕಾಗದದ ದೋಣಿಗಳೂ ತೇಲಿದವು ಎನ್ನುವುದು ಸಾಹಿತ್ಯಾಸಕ್ತರಿಗೆ ಸಮಾಧಾನ ನೀಡುವ ವಿಷಯವಾಗಿತ್ತು. ಸಮಾವೇಶದಲ್ಲಿ ಸಂಭವಿಸಿದ ಸಾಹಿತ್ಯ ಚಟುವಟಿಕೆಗಳ ಒಟ್ಟು ಸಾರಾಂಶವನ್ನು ಇಲ್ಲಿ ದಾಖಲಿಸಲಾಗಿದೆ, ಓದಿ - ಸಂಪಾದಕ.

ಡಾ|| ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್

ನ್ಯೂ ಜೆರ್ಸಿಯಲ್ಲಿ ನಡೆದ ಆರನೇ ಅಕ್ಕ ಸಮ್ಮೇಳನದ ಹಲವಾರು ಮನರಂಜನಾ ಕಾರ್ಯಕ್ರಮಗಳ ನಡುವೆ, ಸಾಹಿತ್ಯ ಸಮಿತಿಯವರು ನಡೆಸಿಕೊಟ್ಟ ಕಾರ್ಯಕ್ರಮಗಳೂ ಇದ್ದವು. ಮುಖ್ಯವೇದಿಕೆಯ ಮೇಲೆ ಕರ್ನಾಟಕ ಮತ್ತು ಅಮೇರಿಕದ ನಡುವೆ ಸಂಪರ್ಕವನ್ನುಂಟುಮಾಡುವ ಉದ್ದೇಶದಿಂದ ರೂಪಿತವಾದ ಕಾರ್ಯಕ್ರಮ "ಯಾವ ಮೋಹನ ಮುರಳಿ ಕರೆಯಿತು" ಪರಿಕಲ್ಪನೆಯೇನೋ ಚೆನ್ನಾಗಿತ್ತು, ಆದರೆ ಸಾಗರದಾಚೆಯಿಂದ ಈಚೆಯೊಂದಿಗೆ ನಡೆಯಬೇಕಿದ್ದ ಸಂವಾದ ಏಕಮುಖವಾಗಿದ್ದು ನಿರಾಸೆಯನ್ನುಂಟುಮಾಡಿತು.

ವೀಡಿಯೋ ಕಾನ್ಫರೆನ್ಸ್ ಮೂಲಕ ಅಲ್ಲಿನ ಅತಿಥಿಗಳು ಮಾಡಿದ ಭಾಷಣಗಳನ್ನು ನಾವೆಲ್ಲ ಕೇಳಿದ್ದಾಯಿತು, ಸಮಯ ಹೆಚ್ಚು ತೆಗೆದುಕೊಂಡದ್ದರಿಂದ ಇಲ್ಲಿನ ಸಭಿಕರು ತಾಳ್ಮೆಗೆಟ್ಟು ಸಭಾಂಗಣದಿಂದ ಚದುರಿದರು. ಇಲ್ಲಿ ವೇದಿಕೆಯಮೇಲೆ ಕುಳಿತಿದ್ದ ನಮ್ಮವರ ಸರದಿ ಬರುವ ವೇಳೆಗೆ ಸಂಪರ್ಕದ ಕಡಿತವಾಯಿತು. ಕಾರ್ಯಕರ್ತರ ಉದ್ದಿಶ್ಯ ಮತ್ತು ಪರಿಕಲ್ಪನೆ ಸಮರ್ಪಕವಾಗಿತ್ತು ಆದರೆ ಕಾರ್ಯರೂಪಕ್ಕಿಳಿಸುವಾಗ ಎಡವಟ್ಟಾಯಿತು. ಮುಂದೆ ಇಂಥಾ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ, ದೂರಸಂಪರ್ಕದ ಇತಿಮಿತಿಗಳನ್ನು ಮತ್ತು ಸರಾಸರಿ ಸಭಾಸದರ ನಿರೀಕ್ಷೆ ಮತ್ತು ಅವರ ತಾಳ್ಮೆಯ ಮಿತಿ ಇವುಗಳನ್ನು ಅರಿತುಕೊಂಡು ಎಲ್ಲವನ್ನೂ ಚಿಕ್ಕದಾಗಿ ಚೊಕ್ಕವಾಗಿ ಎರಡೂ ತೀರಗಳನ್ನು ತೊಡಗಿಸಿಕೊಂಡು ಕಾರ್ಯಗತಮಾಡಿದರೆ ಉತ್ತಮ. ಇಲ್ಲದಿದ್ದರೆ, ಪಡುವ ಶ್ರಮ, ಮಾಡುವ ಖರ್ಚು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಬೆಲೆಬಾಳುವ ಸಮಯ ವ್ಯರ್ಥವಾಗುತ್ತದೆ.

ಮುಖ್ಯವೇದಿಕೆಯಮೇಲೆ ನಡೆದ ಮತ್ತೊಂದು ಕಾರ್ಯಕ್ರಮ, ಕಥಾಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಕಲನ "ದೀಪ ತೋರಿದೆಡೆಗೆ" ಪುಸ್ತಕದ ಲೋಕಾರ್ಪಣೆ. ಡಾ|| ಎಚ್.ವೈ. ರಾಜಗೋಪಾಲ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಭಾರತದಿಂದ ಬಂದಿದ್ದ ಡಾ|| ಕಲ್ಬುರ್ಗಿ, ಎಚ್.ಎಸ್. ವೆಂಕಟೇಶಮೂರ್ತಿ, ಮತ್ತು ಸಂಕಲನದ ಪ್ರಧಾನ ಸಂಪಾದಕರಾದ ಡಾ|| ಮೈ.ಶ್ರೀ. ನಟರಾಜ ಅವರುಗಳು ಮಾತನಾಡಿದರು. ರಾಜಗೋಪಾಲ್ ಅವರು ಸ್ಪರ್ಧೆಯ ವಿವರಗಳನ್ನೂ ನಟರಾಜ್ ಅವರು ಸಂಕಲನದ ಕೆಲವು ವಿವರಗಳನ್ನೂ ತಿಳಿಯಪಡಿಸಿದರು. ವೆಂಕಟೇಶಮೂರ್ತಿಯವರು ಅಮೆರಿಕದ ಕನ್ನಡಿಗರು ಕನ್ನಡ ಭಾಷೆಯಲ್ಲಿ ಬರೆಯಲು ಆಸಕ್ತಿಯುಳ್ಳ ಯುವ ಬರಹಗಾರರನ್ನು ಹುರಿದುಂಬಿಸಲು ಇಂಥಾ ಒಂದು ಕೆಲಸವನ್ನು ಕೈಗೊಂಡಿದ್ದರ ಮಹತ್ವವನ್ನು ವಿಶ್ಲೇಷಿಸಿ, ಅಕ್ಕ ಸಾಹಿತ್ಯ ಸಮಿತಿಯ ಈ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಎಲ್ಲಾ ಆಹ್ವಾನಿತರ ಭಾಷಣಗಳಿಗೂ ಸಮಯ ಸಾಕಾಗದೇ ಹಲವು ಭಾಷಣಗಳನ್ನು ಮೊಟಕುಗೊಳಿಸಿ ಮತ್ತೆ ಹಲವನ್ನು ಮುಂದಿನ ಗೋಷ್ಠಿಗಳಿಗೆ ಮೂಂದೂಡಬೇಕಾಯಿತು.

ಇನ್ನೂ ಕಲಿಯಬೇಕು : ಇಲ್ಲಿಯೂ ಸಹ ನಾವು (ಸಾಹಿತ್ಯ ಸಮಿತಿಯ ಸಂಚಾಲಕರು) ಕಲಿಯಬೇಕಾದ್ದು ಏನೆಂದರೆ, ಮುಖ್ಯವೇದಿಕೆಯ ಮೇಲೆ ನಡೆಯುವ ಭಾಷಣಗಳ ಸಂಖ್ಯೆಯನ್ನು ಆದಷ್ಟು ಕಡಿಮೆ ಮಾಡಿ, ಪ್ರತಿ ಭಾಷಣದ ಸಮಯವನ್ನೂ ಸಾಧ್ಯವಾದಷ್ಟು ಮೊಟಕುಗೊಳಿಸಿ ಸಾಧ್ಯವಾದರೆ ಐದು ನಿಮಿಷಗಳ ಮಿತಿಗೆ ಒಡ್ಡುವ ಪದ್ಧತಿಯನ್ನು ಆಚರಣೆಗೆ ತಂದರೆ ಎಲ್ಲವೂ ಸುಗಮವಾಗುತ್ತದೆ. ಅಗತ್ಯವಾದ ಕೆಲವೇ ಕೆಲವು ಉದ್ದನೆಯ ಭಾಷಣಗಳನ್ನು ಪರ್ಯಾಯ ವೇದಿಕೆಗಳಿಗೆ ಮುಡಿಪಾಗಿಡಬೇಕು. ಮುಖ್ಯವಾಗಿ ಮನೋರಂಜನೆಗಾಗಿಯೇ ಬರುವ ಸರಾಸರಿ ಸಭಾಸದರನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಮ್ಮ ಮುಖ್ಯವೇದಿಕೆಯ ಕಾರ್ಯಕ್ರಮಗಳನ್ನು ರೂಪಿಸಬೇಕು.

ಆಹ್ವಾನಿತರಾಗಿದ್ದ ಹಾಗು ಆಡಳಿತವರ್ಗದಿಂದ ಪ್ರತಿನಿಧಿಗಳಾಗಿ ಬಂದಿದ್ದ ಪ್ರಮುಖರ ಪುಸ್ತಕ ಬಿಡುಗಡೆ, ಕವನ ವಾಚನ, ಭಾಷಣ ಮೊದಲಾದ ಕಾರ್ಯಕ್ರಮ ಡಿವಿಜಿ ಭವನದಲ್ಲಿ ಚೊಕ್ಕವಾಗಿ ನಡೆಯಿತು. ಸತ್ಯಪ್ರಸಾದ್ ನೇತೃತ್ವದಲ್ಲಿ ಉಮೇಶ್ ಮೂರ್ತಿ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಶ್ರೀಯುತರುಗಳಾದ, ಜಯರಾಮರಾಜೇ ಅರಸ್, ಮನು ಬಳಿಗಾರ್, ಜರಗನಹಳ್ಳಿ ಶಿವಶಂಕರ್, ಜೋಗಿ, ಮಹೇಶ್ವರಯ್ಯ, ಮಣಿಕಾಂತ್ ಮತ್ತು ದೊಡ್ಡರಂಗೇ ಗೌಡ ಹಾಗು ಶ್ರೀಮತಿಯರಾದ ಮಲ್ಲಿಕಾ ಘಂಟಿ, ಮತ್ತು ರಾಜೇಶ್ವರಿ ಗೌಡ ಭಾಗವಹಿಸಿದ್ದರು. ಅದೇರೀತಿ, ಮೈ.ಶ್ರೀ. ನಟರಾಜರು ನಡೆಸಿಕೊಟ್ಟ ಮತ್ತೊಂದು ಗೋಷ್ಠಿಯಲ್ಲಿ ಭಾರತದಿಂದ ಬಂದಿದ್ದ ಕವಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ ರಾವ್, ಭಾಗ್ಯಲಕ್ಷ್ಮಿ ಅವರ ಜೊತೆಗೆ, ಅಮೆರಿಕದ ಕವಿಗಳು ಮತ್ತು ಬರಹಗಾರರಾದ, ಮೈ.ಶ್ರೀ. ನಟರಾಜ, ಜಯರಾಮ ಉಡುಪ, ಮಾಯಾ ಮತ್ತು ರವಿ ಹರಪನಹಳ್ಳಿ, ಜಿ.ವಿ. ಕುಲಕರ್ಣಿ, ಸವಿತಾ ಮತ್ತು ರವಿ ರವಿಶಂಕರ್, ಸುಮನ ಗಿರಿಧರ್ ಮುಂತಾದವರು ಪಾಲ್ಗೊಂಡಿದ್ದರು.

ದೂರದ ಸಿಂಗಪುರದಿಂದ ಬಂದಿದ್ದ ರಾಮಚಂದ್ರ ಹೆಗ್ಡೆ ಮತ್ತು ಭಾರತದ ಭಾಗ್ಯಲಕ್ಷ್ಮಿ ಅವರೂ ಸಹ ತಮ್ಮ ತಮ್ಮ ಕವನಗಳನ್ನು ವಾಚಿಸಿದರು. ಕವಿತೆಗಳೇ ಅಲ್ಲದೇ ಭೈರಪ್ಪನವರ ಇತ್ತೀಚಿನ ಕವಲು' ಕಾದಂಬರಿಯ ವಿಮರ್ಶೆಯನ್ನು ರವಿಶಂಕರ್ ಮಂಡಿಸಿದರೆ, ಹೆಗ್ಡೆ ಅವರು ಪರದೇಶದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಿಂದ ಕೆಲಕಾಲದ ಭೇಟಿಗಾಗಿ ಬಂದಿರುವ ಕವಿ ಬರಹಗಾರ ಸುಬ್ಬರಾವ್ ದೇಶಪಾಂಡೆ ಅವರು ಅಮೆರಿಕದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯದ ಕೆಲಸವನ್ನು ಸಮೀಕ್ಷಿಸಿ ಹಲವಾರು ರಚನಾತ್ಮಕ ಸಲಹೆ, ಸೂಚನೆ, ಅಭಿಪ್ರಾಯ ಮತ್ತು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು. ಕನ್ನಡಭಾಷೆಯ ಪ್ರಮುಖ ಕಾದಂಬರಿಗಳಲ್ಲಿ ಕೆಲವನ್ನು ಆಯ್ದು ಅವುಗಳ ಬಗ್ಗೆ ವಿಮರ್ಶಾತ್ಮಕ ಪ್ರಬಂಧಗಳನ್ನು ಅಮೆರಿಕದ ಕನ್ನಡ ಬರಹಗಾರು ಪುಸ್ತಕರೂಪದಲ್ಲಿ ಪ್ರಕಟಿಸಿರುವುದರ ಬಗ್ಗೆ (ನೋಡಿ: ಕನ್ನಡ ಸಾಹಿತ್ಯ ರಂಗದ ಪ್ರಕಟಣೆ "ಕನ್ನಡ ಕಾದಂಬರೀ ಲೋಕದಲ್ಲಿ ...ಹೀಗೆ ಹಲವು..." ಅಭಿನವ ಪ್ರಕಾಶನ, ಬೆಂಗಳೂರು, 2009, ಪ್ರಧಾನ ಸಂಪಾದಕ, ಮೈ.ಶ್ರೀ. ನಟರಾಜ) ತಮ್ಮ ಮುಕ್ತ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಈ ಗೋಷ್ಠಿಯ ಅಧ್ಯಕ್ಷತೆಯನ್ನು ಅಮೇರಿಕದ ಹಿರಿಯ ಕವಿ ಡಾ|| ಎಚ್.ವಿ. ರಂಗಾಚಾರ್ ವಹಿಸಿಕೊಂಡಿದ್ದು ಒಂದು ಸಂತಸದ ಸಂಗತಿ. ಅಕ್ಕ ಸಮ್ಮೇಳನಗಳಲ್ಲಿ ಮೊಟ್ಟ ಮೊದಲಬಾರಿಗೆ ಕನ್ನಡ ಬರಹಗಾರರನ್ನು ಗುರುತಿಸಿ ಸನ್ಮಾನ ಮಾಡುವ ಒಂದು ಪದ್ಧತಿ ಈ ವರ್ಷ ಪ್ರಾರಂಭವಾದದ್ದು ಮತ್ತೊಂದು ಸಂತಸದ ಸಂಗತಿ. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಅನುಪಮ ಸೇವೆಗಾಗಿ ಈ ಬಾರಿಯ ಸಮ್ಮಾನ ಫಲಕಗಳನ್ನು ಪಡೆದವರು ಡಾ|| ರಂಗಾಚಾರ್, ಡಾ||ನಾಗ ಐತಾಳ್, ಡಾ|| ವೈ.ಆರ್. ಮೋಹನ್, ಶ್ರೀಮತಿ ವಿಮಲಾ ರಾಜಗೋಪಾಲ್ ಮತ್ತು ಡಾ|| ಮೈ.ಶ್ರೀ. ನಟರಾಜ ಅವರುಗಳು. ಅಮೆರಿಕದಲ್ಲಿ ಹಲವಾರು ವರ್ಷಗಳು ಕನ್ನಡಸೇವೆಯನ್ನು ಮಾಡಿ ಕನ್ನಡನಾಡಿನಲ್ಲಿ ತಮ್ಮ ವಿಶ್ರಾಂತಿಜೀವನವನ್ನು ಸಕ್ರಿಯವಾಗಿ ಕಳೆಯುತ್ತಾ ಅಲ್ಲಿಯೂ ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇತ್ತೀಚೆಗೆ ಜುಲೈ 22ರಂದು ದೈವಾಧೀನರಾದ ಶಿಕಾರಿಪುರ ಹರಿಹರೇಶ್ವರ ಅವರನ್ನು ನೆನೆದು ಸಾಹಿತಿಗಳ ಈ ಸಭೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ತನ್ನ ಕರ್ತವ್ಯವನ್ನು ಪಾಲಿಸಿದ್ದು ಅತ್ಯಂತ ಸೂಕ್ತವೆನ್ನಿಸಿತು.

ಎರಡಲುಗಿನ ಕತ್ತಿಯಮೇಲಿನ ನಡೆ : ಕೊನೆಯ ಹಾಗು ಅತ್ಯಂತ ಸ್ವಾರಸ್ಯಕರವಾದ ಸಾಹಿತ್ಯ ಕಾರ್ಯಕ್ರಮವೆಂದರೆ ಡಾ. ಗುರುಪ್ರಸಾದ್ ಕಾಗಿನೆಲೆ ನಡೆಸಿಕೊಟ್ಟ ಸಂವಾದ. ಸಂವಾದದ ವಿಷಯ "ಕನ್ನಡತನ-ನೆನ್ನೆ-ಇಂದು-ಮತ್ತು ನಾಳೆ." ಸಂಶೋಧಕ ಪ್ರಾಧ್ಯಾಪಕ ಡಾ||ಎಂ. ಎಂ. ಕಲ್ಬುರ್ಗಿ, ಬರಹಗಾರ ಜೋಗಿ, ಕವಿಗಳಾದ ವೆಂಕಟೇಶಮೂರ್ತಿ ಮತ್ತು ಲಕ್ಷ್ಮಣ ರಾವ್ ಮುಂತಾದವರು ಮಾತನಾಡಿದ್ದು "ಕನ್ನಡ, ಕನ್ನಡಿಗ, ಕನ್ನಡತನ..." ಮುಂತಾದ ಭಾವಾತ್ಮಕ ವಿಷಯಗಳನ್ನು ಕುರಿತು. ಎಚ್‌ಎಸ್‌ವಿ ಮಾತಿನ ಮೂಲಕ ಅಭಿಪ್ರಾಯ ಮಂಡಿಸಿದರೆ, ಬಿಆರ್ಎಲ್ ತಮ್ಮ ಕವನವನ್ನು ಹಾಡುವುದರ ಮೂಲಕ ಕನ್ನಡತನವನ್ನು ಮೆರೆದರು! ಸಭೆಯಲ್ಲಿದ್ದ ಹಲವಾರು ಪ್ರತಿಷ್ಠಿತರಾದ ಮುಖ್ಯಮಂತ್ರಿ ಚಂದ್ರು, ಜರಗನಹಳ್ಳಿ ಶಿವಶಂಕರ್, ಮಹೇಶ್ವರಯ್ಯ, ನಾಗ ಐತಾಳ, ರಾಮಚಂದ್ರ ಹೆಗ್ಡೆ, ಮಲ್ಲಿಕಾ ಗಂಟಿ ಇನ್ನೂ ಮುಂತಾದವರೂ ಸೇರಿ ಅತ್ಯುತ್ಸಾಹದಿಂದ ನಡೆಸಿದ ಸಂವಾದವಿದು. ಅದರಲ್ಲೂ ಮುಖ್ಯಮಂತ್ರಿ ಚಂದ್ರು ಅವರು ಆಡಳಿತ ಮತ್ತು ಅಧಿಕಾರಿಗಳ ವರ್ಗ ನಡೆಯಬೇಕಾದ ಎರಡಲುಗಿನ ಕತ್ತಿಯಮೇಲಿನ ನಡೆಯನ್ನು ಬಹು ಮಾರ್ಮಿಕವಾಗಿ ಮಂಡಿಸಿದರು.

ಕನ್ನಡಿಗನೆಂದರೆ ಯಾರು? ಕನ್ನಡನಾಡು ಭೌಗೋಳಿಕ ಇತಿ-ಮಿತಿಗಳಿಗೆ ಒಗ್ಗಿದಂತೆ ಕನ್ನಡ ಭಾಷೆಗೂ ಗಡಿಯೊಂದಿದೆಯೇ? ಕಾಲಕ್ರಮದಲ್ಲಿ ಇತಿಹಾಸದ ವ್ಯತ್ಯಾಸಗಳಿಗೆ ಒಗ್ಗಿಕೊಳ್ಳುತ್ತಾ ಹಿಂದೆ ಮುಂದೆ ಚಲಿಸುವ ಭೌಗೋಳಿಕ ಗಡಿಗಳಿಂದ ಭಾಷೆಗಳು ಹಿಗ್ಗುತ್ತಾ ಕುಗ್ಗುತ್ತಾ ಹೋಗುತ್ತವೆಯೇ? ಹೊರನಾಡಿನಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗರು ಕನ್ನಡಿಗರೇ? ಕನ್ನಡತನವೆನ್ನುವುದು ಸುತ್ತಮುತ್ತಲ ವಾತಾವರಣದಿಂದ ಮಾತ್ರ ಬರುವುದೇ? ಮಾತೃಭಾಷೆ ಎಂಬ ಶಬ್ದದ ಪರಿಭಾಷೆ ಏನು? ಒಂದು ನಾಡಿನ ಅಥವಾ ರಾಜಕೀಯ ಪ್ರದೇಶದ ಅಧಿಕಸಂಖ್ಯಾತರ ಭಾಷೆಯನ್ನೇ ಆ ನಾಡಿನ ಎಲ್ಲರೂ ತಮ್ಮ ಮಾತೃಭಾಷೆಂದು ಒಪ್ಪಿಕೊಳ್ಳಬೇಕೆ? ಕನ್ನಡದಲ್ಲಿ ಮಾತನಾಡಿಸಿದರೂ ಇಂಗ್ಲೀಷಿನಲ್ಲೇ ಜವಾಬು ಕೊಡುವ ಅಮೇರಿಕದ ಕನ್ನಡ ಮಕ್ಕಳು ಕನ್ನಡಿಗರೇ? ಅವರಿಗೆ ಕನ್ನಡತನ ಅನ್ನುವ ಶಬ್ದದ ಪರಿಕಲ್ಪನೆ ಬರುವುದು ಸಾಧ್ಯವೇ...?

ಸಂಸ್ಕೃತದಿಂದ ಕನ್ನಡಕ್ಕೇನನ್ಯಾಯವಾಯಿತು? ಸಂಸ್ಕೃತದಲ್ಲೇ ಪೂಜೆಮಾಡಿಸಿಕೊಳ್ಳುವ ದೇವರಿಗೆ ಕನ್ನಡ ಅರ್ಥವಾಗುತ್ತದೆಯೇ? ಹಳ್ಳಿಗಳಲ್ಲಿ ಮಾರಿ, ದೇವಿ ಮುಂತಾದ ಗ್ರಾಮದೇವತೆಗಳಿಗೆ ಕನ್ನಡ ಅರ್ಥವಾಗುವುದಲ್ಲವೇ? ಇಂಗ್ಲೀಷಿನಿಂದ ಕನ್ನಡಕ್ಕೆ ಹಾನಿಯೇ? ಭಾಷಾಂತರದಿಂದಾಗುವ ಅವಾಂತರಗಳೇನು? ಸರ್ಕಾರ ಕನ್ನಡಕ್ಕಾಗಿ ಏನು ಮಾಡಬಹುದು, ಏನು ಮಾಡಲಾಗದು? ಹೀಗೇ ಇನ್ನೂ ಹಲವು ಹತ್ತು ಪ್ರಶ್ನೆಗಳನ್ನೆಬ್ಬಿಸಿದ ಆ ಸಂವಾದ ಒಮ್ಮೊಮ್ಮೆ ಬಿಸಿ ಏರಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಕಾವೇರಿಸಿತು. ಆದರೆ, ಕೊಂಚ ತಳಮಳವನ್ನುಂಟುಮಾಡಿದರೂ ಡಿವಿಜಿ ಭವನ'ಕ್ಕೆ ಗೋಡೆಗಳಿಲ್ಲದೇಯಿದ್ದುದರಿಂದ ಶಾಖ ಹೆಚ್ಚುಕಾಲ ಉಳಿಯಲಿಲ್ಲ. ಚರ್ಚೆಯ ಬಿರಿಸು ಅಕ್ಕ ಪಕ್ಕದಿಂದ ಕೇಳಿಬರುತ್ತಿದ್ದ ಸಂಗೀತ, ಮಾತು, ಮಕ್ಕಳ ಗಲಾಟೆಗಳ ಶಬ್ದಸಾಗರದಲ್ಲಿ ಲೀನವಾಗಿ ಸಾಹಿತ್ಯಚರ್ಚೆಗೆ ಕೊಕ್' ಕೊಡಲು ಸದಾ ಸಿದ್ಧರಾಗಿರುತ್ತಿದ್ದ ಆಧ್ಯಾತ್ಮ ಚರ್ಚೆಗಳಿಗೆ ಅವಕಾಶವನ್ನುಂಟುಮಾಡಿತು!

ಮುಗಿಸುವ ಮುನ್ನ: "ಕನ್ನಡದ ನೆಲದ ಪುಲ್ಲೆಮಗೆ ಪಾವನ ತುಳಸಿ, ಕನ್ನಡದ ನೆಲದ ಕಲ್ಲೆಮಗೆ ಸಾಲಿಗ್ರಾಮ ಶಿಲೆ, ಕನ್ನಡದ ನೆಲದ ನೀರ್ವೊನಲೆಮಗೆ ದೇವನದಿ, ಕನ್ನಡದ ಶಬ್ದಮೆಮಗೆ ಗಾಯತ್ರಿಯದ್ಭುತ ಮಂತ್ರಮ್" ಮುಂತಾದ ಸಾಲಿ ರಾಮಚಂದ್ರರಾಯರ ಕವಿತೆಯ ಸಾಲುಗಳಿಂದ ನಮಗಾಗುತ್ತಿದ್ದ ರೋಮಾಂಚನ ಅಮೆರಿಕದಲ್ಲಿ ಹುಟ್ಟಿದ ಕನ್ನಡ ಮಕ್ಕಳಿಗೆ ಆಗಲು ಸಾಧ್ಯವೇ? "ತುಳಸಿ ಏಕೆ ಪಾವನ? ಸಾಲಿಗ್ರಾಮವೆಂದರೇನು? ದೇವನದಿ ಎಂಬುದರ ಕಲ್ಪನೆ ಏಕೆ? ಗಾಯತ್ರಿ ಮಂತ್ರದ ಮಹಿಮೆ ಏನು, ಯಾರಿಗೆ? ಏತಕ್ಕೆ?" ಇನ್ನೂ ಮುಂತಾದ ನಮ್ಮ ಮಕ್ಕಳು ಹಾಕುವ ಕಠಿಣ ಪ್ರಶ್ನೆಗಳಿಗೆ ನಮ್ಮಲ್ಲಿ ಜವಾಬು ಇಲ್ಲದಮೇಲೆ, ನಮ್ಮಲ್ಲಿ ಎಷ್ಟೇ ಕನ್ನಡತನವಿದ್ದರೂ ಅದನ್ನು ನಮ್ಮ ಮುಂದಿನ ಪೀಳಿಗೆಗೆ, ಅದೂ ಈ ಪರದೇಶದಲ್ಲಿ (ನಮಗೆ ಪರದೇಶವೆನ್ನಿಸಿದರೂ ಅವರಿಗೆ ಅದು ತಮ್ಮ ನಾಡು ಎಂಬುದನ್ನು ಮರೆಯುವಂತಿಲ್ಲ!) ವರ್ಗಾಯಿಸಲು ಸಾಧ್ಯವೇ? ಎಂಬ ಚಿಂತನೆಯೊಂದಿಗೆ ಈ ವರದಿಯನ್ನು ಮುಗಿಸುತ್ತಿದ್ದೇನೆ.

ಕೊನೆಯದಾಗಿ. ಈ ಇಡೀ ಸಾಹಿತ್ಯಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ನಕ್ಷೆಯ ಘಟ್ಟದಿಂದ ಹಿಡಿದು ಕಾರ್ಯರೂಪಕ್ಕಿಳಿಸುವವರೆಗೆ ಹಲವಾರು ಸ್ವಯಂಸೇವಕರು ಹಗಲಿರುಳು ದುಡಿದಿದ್ದಾರೆ. ಎಚ್.ವೈ. ರಾಜಗೋಪಾಲ್ ಅವರ ನಿರ್ದೇಶನದಲ್ಲಿ ದುಡಿದ ಸಾಹಿತ್ಯ ಸಮಿತಿಯ ಸಾರಥಿ ಸತ್ಯಪ್ರಸಾದ್. ಸಹಪ್ರಯಾಣಿಕರು, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸ ರಾವ್, ಜಿ.ವಿ. ಕುಲಕರ್ಣಿ, ಪ್ರಸಾದ್ ಶಾಸ್ತ್ರಿ ಮತ್ತು ನಾನು. ಅಕ್ಕ ಅಧ್ಯಕ್ಷರಾದ ರವಿ ಡಂಕಣಿಕೋಟೆ, ಬೃಂದಾವನದ ಅಧ್ಯಕ್ಷೆ ಉಷಾ ಪ್ರಸನ್ನಕುಮಾರ್ ಮತ್ತು ಸಮ್ಮೇಳನದ ಸಂಚಾಲಕರಲ್ಲಿ ಮುಖ್ಯರಾದ ಪ್ರಸನ್ನಕುಮಾರ್, ಇವರೆಲ್ಲರೂ ಸಾಹಿತ್ಯದ ಚಟುವಟಿಕೆಗಳ ಬಗ್ಗೆ ತೋರಿದ ಗೌರವ ಮತ್ತು ಅಭಿಮಾನಕ್ಕಾಗಿ, ಹಾಗು ನನ್ನನ್ನು ಅಕ್ಕ ಸಾಹಿತ್ಯ ಸಮಿತಿಯ ಅಧ್ಯಕ್ಷನನ್ನಾಗಿ ಆರಿಸಿ ಗೌರವಿಸಿದ್ದಕ್ಕಾಗಿ ನನ್ನ ಹೃತ್ಪೂರ್ವಕ ವಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X