ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬರ್ಟಿ ಸ್ಟಾಚ್ಯೂ ಕೈಯಲ್ಲೂ ಹೊತ್ತಿತು ಕನ್ನಡದ ದೀಪ?

By * ಶ್ರೀವತ್ಸ ಜೋಶಿ
|
Google Oneindia Kannada News

Srivathsa Joshi
ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಮೊಟ್ಟಮೊದಲ ಬಾರಿಗೆ ವಿದ್ಯುದ್ದೀಪವನ್ನು ಸಂಶೋಧಿಸಿ ಅದು ಬೆಳಗಿದಾಗ ಆತನಿಗೆ ಹೃದಯ ತುಂಬಿ ಬಂದಿರಬಹುದು. ಪರಂತು ಖಂಡಿತವಾಗಿಯೂ ಈ ಕಲ್ಪನೆ ಇದ್ದಿರಲಿಕ್ಕಿಲ್ಲ- ಏನೆಂದರೆ ಮುಂದೊಂದು ದಿನ ಅಮೆರಿಕ ದೇಶದಲ್ಲಿ, ತನ್ನ ಹೆಸರಿನ ನಗರದಲ್ಲಿ, ಸಾವಿರಾರು ಜನ ಕನ್ನಡಿಗರು ಸೇರಿ ಕನ್ನಡ ಪ್ರೀತಿಯೆಂಬ ದೀಪವನ್ನು ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನವಾಗಿ, ಹರ್ಷ ಉಕ್ಕಿಸುವಂತೆ ಶೋಭಾಯಮಾನವಾಗಿ' ಬೆಳಗಿಸಬಹುದೆಂದು! ನ್ಯೂ ಜೆರ್ಸಿ ಸಂಸ್ಥಾನದ ಎಡಿಸನ್ ನಗರದಲ್ಲಿ ಶುಕ್ರವಾರ ಸಪ್ಟೆಂಬರ್ 3ರಂದು ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಶುಭಾರಂಭದ ಕ್ಷಣಗಳು ಅಂತಹದೊಂದು ಕಲ್ಪನೆ ಸಾಕಾರಗೊಳ್ಳುವುದಕ್ಕೆ ಸಾಕ್ಷಿಯಾದವು.

ಇದು ಅಮೆರಿಕ ಕನ್ನಡ ಕೂಟಗಳ ಆಗರ ಅಕ್ಕ ನಡೆಸುತ್ತಿರುವ 6ನೆಯ ವಿಶ್ವ ಕನ್ನಡ ಸಮ್ಮೇಳನ. ಈ ಬಾರಿಯ ಆತಿಥೇಯ ಕನ್ನಡಕೂಟ ನ್ಯೂ ಜೆರ್ಸಿ ಸಂಸ್ಥಾನದಲ್ಲಿ ಕೆಲ ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾದ ಬೃಂದಾವನ' ಕನ್ನಡ ಕೂಟ. ಶುಕ್ರವಾರ ಸಂಜೆ ಉದ್ಘಾಟನಾ ಸಮಾರಂಭ ನಡೆದದ್ದು ಈಗ ಅಮೆರಿಕದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ. ಅದಕ್ಕೆ ಮೊದಲು ಪೂರ್ಣಕುಂಭ ಸ್ವಾಗತ, ವೇದಘೋಷ. ಆಶೀರ್ವಚನ ಭಾಷಣದಲ್ಲಿ ಸ್ವಾಮೀಜಿ ಬಣ್ಣಿಸಿದ ಒಂದು ಕಲ್ಪನೆ ತುಂಬ ಸುಂದರವಾಗಿತ್ತು. ಅದನ್ನು ಇಲ್ಲಿ ಪ್ರಸ್ತಾಪಿಸಬೇಕು. ಏನೆಂದರೆ, ನ್ಯೂ ಜೆರ್ಸಿ ಸಂಸ್ಥಾನ ಗಾರ್ಡನ್ ಸ್ಟೇಟ್ ಅಥವಾ ಉದ್ಯಾನ ರಾಜ್ಯ ಎಂದೇ ಪ್ರಸಿದ್ಧ. ಇಲ್ಲಿ ನಳನಳಿಸುವ ವನರಾಶಿಯಿಂದಾಗಿ ಆ ಹೆಸರು. ಸ್ವಾಮೀಜಿ ಹೇಳುತ್ತಾರೆ ಬೃಂದಾವನವೇ ಆ ಉದ್ಯಾನ. ಜೆರ್ಸಿ ಅಂದರೆ ಗೋವು; ಕೃಷ್ಣಾನುಗ್ರಹಕ್ಕೆ ಇನ್ನೇನು ಬೇಕು? ಸ್ವಾಮೀಜಿಯವರ ಕವಿಹೃದಯದ ಬತ್ತಳಿಕೆಯಿಂದ ಬಂದ ಇನ್ನೂ ಒಂದು ಕಲ್ಪನೆ- ಪ್ರಪ್ರಥಮವಾಗಿ ಸಾಗರೋಲ್ಲಂಘನ ಮಾಡಿದವನು ಒಬ್ಬ ಕನ್ನಡಿಗ! ಆತ ಯಾರು ಗೊತ್ತೇ? ವಾಯುಪುತ್ರ ಹನುಮಂತ! ಸಪ್ತಸಾಗರಗಳಾಚೆ ಬಂದು ನೆಲೆಸಿರುವ ಕನ್ನಡಿಗರೆಲ್ಲ ಒಟ್ಟು ಸೇರಿ ಸಮ್ಮೇಳನ ಮಾಡುತ್ತಿದ್ದಾರೆಂದರೆ ಅದಕ್ಕೂ ಒಂದು ದೈವಿಕತೆ ಇದೆಯೆಂದು ಅವರ ಪ್ರತಿಪಾದನೆ. ಸಮ್ಮೇಳನ ಲಾಂಛನದಲ್ಲೂ ಒಂದು ಸೊಗಸಾದ ಕಲ್ಪನೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವವಿಖ್ಯಾತ ಸ್ಟಾಚ್ಯೂ ಆಫ್ ಲಿಬರ್ಟಿಯ ಕೈಯಲ್ಲಿ ಹೊತ್ತಿತೋ ಹೊತ್ತಿತು ಕನ್ನಡದ ದೀಪ'!

ಏನು, ಬರೀ ಕಲ್ಪನಾಲಹರಿಗಳೇ ಹರಿಯುತ್ತಿವೆಯಲ್ಲ ಅಂದುಕೊಂಡಿರಾ? ಹಾಗೇನಿಲ್ಲ, ಅಕ್ಕ' ಸಮ್ಮೇಳನದ ಆಪ್ಯಾಯಮಾನವಾದ ಆನಂದದ ವಾತಾವರಣವೇ ಹಾಗಿದೆ. ಇಲ್ಲಿ ಸೇರಿರುವ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸಮ್ಮೇಳನಾರ್ಥಿಗಳ ಮೊಗದಲ್ಲಿ ಅಂತಹದೊಂದು ಸಂಭ್ರಮ ಗೂಡುಕಟ್ಟಿದೆ. ಈ ಅಂಕಣವನ್ನು ನಾನು ಬರೆಯುತ್ತಿರುವ ಹೊತ್ತಿಗಿನ್ನೂ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮಗಳಷ್ಟೇ ಮುಗಿದಿವೆ. ಮುಂದಿನೆರಡು ದಿನಗಳಲ್ಲಿ ಎಡಿಸನ್‌ನ ಈ ಬೃಹತ್ ಸಭಾಂಗಣದ ಗುಬ್ಬಿ ವೀರಣ್ಣ ರಂಗಮಂಟಪದಲ್ಲಿ, ರಾಣಿ ಚೆನ್ನಮ್ಮ ಸಭಾಮಂದಿರದಲ್ಲಿ, ಶಾಂತಲಾ ನಾಟ್ಯಾಲಯದಲ್ಲಿ, ಪುರಂದರ ಭವನದಲ್ಲಿ, ಡಿವಿಜಿ ಭವನದಲ್ಲಿ, ಕೆಂಪೇಗೌಡ ಸಾಂಸ್ಕೃತಿಕ ಭವನದಲ್ಲಿ, ಅಕ್ಕ ಟಿಫಿನ್ ರೂಮ್ನಲ್ಲಿ, ಚಿಕ್ಕಪೇಟೆ, ಬ್ರಿಗೇಡ್ ರೋಡ್ಗಳಲ್ಲಿ (ಇವೆಲ್ಲ ಸಮ್ಮೇಳನದ ವಿವಿಧ ವೇದಿಕೆಗಳು, ಸಭಾಗೃಹಗಳು, ಭೋಜನಶಾಲೆ, ವ್ಯಾಪಾರಮಳಿಗೆಗಳಿಗೆ ಇಟ್ಟಿರುವ ಹೆಸರುಗಳು) ಕನ್ನಡ ಕಲರವ ಮುಗಿಲುಮುಟ್ಟಲಿದೆ. ಕನ್ನಡ ಮನಸ್ಸುಗಳು ಮುದಗೊಂಡು ಅರಳಲಿವೆ.

ಸಮ್ಮೇಳನ ಸ್ಥಳದಿಂದ ಪ್ರತ್ಯಕ್ಷ ವರದಿಯ ಮಾದರಿಯಲ್ಲಿ ಹೇಳುವುದಾದರೆ ಮೊದಲ ದಿನದ ಮುಖ್ಯಾಂಶಗಳು ಇವಿಷ್ಟು : ಮೈಸೂರು ದಸರಾ ವೈಭವವನ್ನು ನೆನಪಿಸಿದ, ಆಬಾಲವೃದ್ಧರಾಗಿ ಎಲ್ಲರನ್ನೂ ಆಕರ್ಷಿಸಿದ ಆನೆ ಮೇಲೆ ಅಂಬಾರಿ' ದಸರಾ ಮೆರವಣಿಗೆ; ಉದ್ಘಾಟನಾ ಸಮಾರಂಭದ ಭಾಗವಾಗಿ ಪ್ರಸ್ತುತಗೊಂಡು ರೋಮಾಂಚನ ಹುಟ್ಟಿಸಿದ ನೃತ್ಯವೈವಿಧ್ಯ, ಯಕ್ಷಗಾನ, ವೃಂದಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್; ಪುನೀತ್ ರಾಜಕುಮಾರ್, ರಮ್ಯಾ, ಜಗ್ಗೇಶ್ ಮುಂತಾಗಿ ಕನ್ನಡ ಚಲನಚಿತ್ರ ತಾರೆಗಳ ಉಪಸ್ಥಿತಿ ನಿರ್ಮಿಸಿದ ಸ್ಪೆಷಲ್ ಗ್ಲಾಮರ್; ಎಂಬತ್ತರ ಆಸುಪಾಸಿನಲ್ಲಿದ್ದರೂ ಈಗಲೂ ಅದೇ ಕಂಚಿನಕಂಠದಿಂದ ಹಾಡುವ ಬಾಲಮುರಳೀಕೃಷ್ಣ ಗಾನಾಮೃತ; ಯೋಗ-ಧ್ಯಾನಗಳಿಂದ ಶಿಬಿರಾರ್ಥಿಗಳ ಮನಸ್ಸನ್ನು ಪ್ರಫುಲ್ಲಗೊಳಿಸಿದ ಆರ್ಟ್ ಆಫ್ ಲಿವಿಂಗ್' ಶಿಬಿರ (ಶ್ರೀ ರವಿಶಂಕರ್ ಅವರು ಬಂದಿಲ್ಲದಿರುವುದರಿಂದ ಅವರ ಬದಲಿಗೆ ಶ್ರೀ ಸೂರ್ಯಪಾದ ಅವರಿಂದ ಶಿಬಿರದ ನಿರ್ವಹಣೆ); ಅನಿವಾಸಿ ಕನ್ನಡಿಗ ಉದ್ಯಮಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳ ಪರಿಚಯ ಮಾಡಿಕೊಟ್ಟ ವಾಣಿಜ್ಯ ವಿಚಾರಸಂಕಿರಣ; ಎಡಿಸನ್ ನಗರದ ಮೇಯರ್ ಅಮೆರಿಕನ್ ಮಹಿಳೆ ಆಂಟೊನಿಯೊ ರಿಸಿಗ್ಲಿಯಾನೊ ಅವರಿಂದ ಭಾರತೀಯ/ಕನ್ನಡಿಗ ಸಮುದಾಯದ ಕುರಿತು ಪ್ರಶಂಸೆ; ಮಹಿಳಾವೇದಿಕೆಯಲ್ಲಿ ಉದ್ಯಮ, ಆರೋಗ್ಯ, ಅಡುಗೆ ಮುಂತಾದ ವಿವಿಧ ವಿಷಯಗಳ ಗೋಷ್ಠಿಗಳು; ಇವೆಲ್ಲಕ್ಕಿಂತ ಮುಖ್ಯವಾಗಿ ಅಪರೂಪಕ್ಕೆ ಭೇಟಿಯಾಗುತ್ತಿರುವ ಸ್ನೇಹಿತರ/ಆಪ್ತರ ಮಧ್ಯೆ ಉಭಯಕುಶಲೋಪರಿ ಲೋಕಾಭಿರಾಮ ಹರಟೆ. ಅಸಲಿಗೆ ಸಮ್ಮೇಳನಗಳಲ್ಲಿ ಭಾಗವಹಿಸುವ ಬಹುಮಂದಿಯ ಮುಖ್ಯ ಅಜೆಂಡಾ ಸ್ನೇಹಕೂಟಮಿಲನವೇ ಆಗಿರುವುದು.

ಈ ಸಮ್ಮೇಳನಕ್ಕೆ ಯಾರೆಲ್ಲ ಬಂದಿದ್ದಾರೆ? ಮುಖ್ಯಮಂತ್ರಿ ಯಡ್ಯೂರಪ್ಪ ಬಂದಿಲ್ಲ, ಆದರೆ ಮುಖ್ಯಮಂತ್ರಿ ಚಂದ್ರು ಬಂದಿದ್ದಾರೆ. ಕರ್ನಾಟಕದಿಂದ ಶಾಸಕರ ದೊಡ್ಡದೊಂದು ಪಟಾಲಂ ಬಂದಿದೆ/ಬರುತ್ತಿದೆ ಎಂದು ವದಂತಿಯಿದೆ (ಅವರೆಲ್ಲ ಬರುವುದು ಇಲ್ಲಿ ಯಾರಿಗೂ ಬೇಕಿಲ್ಲ, ಇಷ್ಟವೂ ವಿಲ್ಲ; ಆದರೂ). ಸರಕಾರದಿಂದ ಪ್ರಾಯೋಜಿತ ಮತ್ತು ಅಕ್ಕ'ದಿಂದ ಆಹ್ವಾನಿತ ಕಲಾವಿದರನೇಕರು ಬಂದಿಳಿದ್ದಾರೆ. ಯಶವಂತ ಸರದೇಶಪಾಂಡೆ ಮತ್ತು ಅವರ ಪತ್ನಿ ಮಾಲತಿ ಸರದೇಶಪಾಂಡೆ ಪಕ್ಕಾ ಉತ್ತರಕರ್ನಾಟಕ ಶೈಲಿಯ ಉಡುಪುಗಳಿಂದ ಮಿಂಚುತ್ತಿದ್ದರೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಪ್ರೊ.ಕೃಷ್ಣೇಗೌಡರು ಬಂದಿದ್ದಾರೆ. ಪ್ರಭಾತ ಕಲಾವಿದರು ಕೃಷ್ಣ-ವೈಜಯಂತಿ' ನೃತ್ಯನಾಟಕವಾಡುವವರಿದ್ದಾರೆ. ಹಿಂದುಸ್ಥಾನಿ ಶೈಲಿಯ ಗಾಯನ ಪ್ರತಿಭೆ ಪಂಡಿತ್ ವಿನಾಯಕ ತೊರವಿ ಬಂದಿದ್ದಾರೆ. ಭಕ್ತಿಗಾನಸುಧೆ ಹರಿಸಲು ವಿದ್ಯಾಭೂಷಣ ಬಂದಿದ್ದಾರೆ; ಸುಗಮಸಂಗೀತದ ಕಿಕ್ ಕೊಡಲು ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ.ಮುದ್ದುಕೃಷ್ಣ ಇದ್ದಾರೆ. ಫಿಲ್ಮಿ ಸಂಗೀತದ ಕೋಡಿ ಹರಿಸಲು ದಿವ್ಯಾ ರಾಘವನ್, ಅಜಯ ವಾರಿಯರ್, ಶಂಕರ್ ಶಾನುಭಾಗ್ ಮುಂತಾದವರೆಲ್ಲ ಬಂದಿದ್ದಾರೆ. ಅಂತೂ ಭರಪೂರ ಮನರಂಜನೆ ಇದೆ.

ಅಕ್ಕ' ಸಮ್ಮೇಳನಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆಯಿರುವುದಿಲ್ಲ. ಮತ್ತೆ ಅಲ್ಪಸ್ವಲ್ಪ ಅವ್ಯವಸ್ಥೆಗಳು, ಅಧ್ವಾನಗಳೂ ಇದ್ದೇಇರುತ್ತವೆನ್ನಿ. ನಾಲ್ಕುಸಾವಿರದಷ್ಟು ಜನರು ಸೇರಬಹುದೆಂಬ ಅಂದಾಜಿರುವಾಗ ಅದಕ್ಕೆ ತಕ್ಕಂತೆಯೇ ಊಟ-ತಿಂಡಿ ವ್ಯವಸ್ಥೆ ಮಾಡಬೇಕಾಗುತ್ತದೆ. ಊಟಕ್ಕೆ ತುಂಬಾ ಉದ್ದದ ಸರತಿಸಾಲುಗಳಲ್ಲಿ ಕಾಯುತ್ತ ನಿಲ್ಲಬೇಕಾಗಿ ಬಂದರೆ ಜನ ತಾಳ್ಮೆಗೆಡುತ್ತಾರೆ. ಮೇಲಾಗಿ ಅಡುಗೆರುಚಿಯೂ ಅಷ್ಟಕ್ಕಷ್ಟೇ ಎಂದಾದರಂತೂ ಬೇರೆಲ್ಲ ವಿಭಾಗಗಳಲ್ಲಿ ಜಾಸ್ತಿ ಸ್ಕೋರ್ ಗಳಿಸಿದರೂ ಊಟದ ಡಿಪಾರ್ಟ್‌ಮೆಂಟು ಪಾಸ್ ಮಾರ್ಕ್ಸ್ ಗಳಿಸಲು ಹೆಣಗಾಡುತ್ತದೆ. ಇದರಲ್ಲಿ ಅಕ್ಕ' ಸಮ್ಮೇಳನಗಳು ಬೇರಲ್ಲ, ಕರ್ನಾಟಕದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಂಥವು ಬೇರಲ್ಲ. ರುಚಿಕಟ್ಟಾದ ಊಟ-ತಿಂಡಿ, ಎಲ್ಲ ಸಮ್ಮೇಳನಾರ್ಥಿಗಳಿಗೂ ಸಲೀಸಾಗಿ ಸರಿಯಾದ ಸಮಯಕ್ಕೆ ದೊರೆತರೆ ಎಲ್ಲ ಸುಗಮವಾದಂತೆಯೇ. ಈ ಸಮ್ಮೇಳನದಲ್ಲಿ ಅದು ಸ್ವಲ್ಪ ದುರ್ಗಮವೇ ಅನಿಸಬಹುದೇನೋ. ಇರಲಿ, ಸಮ್ಮೇಳನವೆಂದರೆ ಊಟ-ತಿಂಡಿಯೊಂದೇ ಅಲ್ಲ. ಅದಕ್ಕಿಂತ ಹೆಚ್ಚುಹೊತ್ತು ಮೆಲುಕು ಹಾಕಿ ಸವಿಯಬಹುದಾದಂತಹ ವಿಷಯಗಳೂ ಇರುತ್ತವೆ.

ಉದಾಹರಣೆಗೆ, ಸಮ್ಮೇಳನ ಸ್ಮರಣಸಂಚಿಕೆ. ಹಾಗೆಯೇ ಅದರ ಜತೆಯಲ್ಲೇ ಪ್ರಕಟಗೊಂಡಿರುವ, ಪ್ರತಿಯೊಬ್ಬ ಸಮ್ಮೇಳನಾರ್ಥಿಗೂ ವಿತರಿಸಲ್ಪಟ್ಟಿರುವ ಪುಸ್ತಕಗಳು. ಇವೆಲ್ಲವೂ ಬಹಳ ಚೆನ್ನಾಗಿವೆ. ಸುಮಾರು 350ಕ್ಕೂ ಹೆಚ್ಚು ಪುಟಗಳಿರುವ ಸ್ಮರಣಸಂಚಿಕೆ ಸಿಂಚನ'ದಲ್ಲಿ ಹಿರಿಕಿರಿಯರ ಲೇಖನಗಳಷ್ಟೇ ಅಲ್ಲದೆ ಚಲನಚಿತ್ರ ಮತ್ತು ರಂಗಭೂಮಿ' ಎಂಬ ಪ್ರತ್ಯೇಕ ವಿಭಾಗದಲ್ಲಿ ಆ ಕ್ಷೇತ್ರದಲ್ಲಿ ನುರಿತವರಿಂದ ಬರೆಸಿದ, ಅವರೊಂಗಿದೆ ಸಂದರ್ಶನಗಳನ್ನಾಧರಿಸಿದ ಲೇಖನಗಳಿವೆ. ಇವು ಸ್ಮರಣಸಂಚಿಕೆಗೆ ವಿಶಿಷ್ಟವಾಗ ಮೌಲ್ಯ ಮತ್ತು ಮೆರುಗು ತಂದುಕೊಟ್ಟಿವೆ. ಕನ್ನಡ ಪ್ರಜ್ಞೆ' ಎಂಬ ಹೆಸರಿನ ವೈಚಾರಿಕ ಪ್ರಬಂಧಗಳ ಸಂಕಲನ, ಅಕ್ಕ' ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಕಲನ ದೀಪ ತೋರಿದೆಡೆಗೆ' ಎಂಬೆರಡು ಪುಸ್ತಕಗಳೂ ಮೌಲ್ಯಯುತವಾಗಿವೆಯೆಂದು ಮೇಲ್ನೋಟದಲ್ಲೇ ಗೊತ್ತಾಗುತ್ತದೆ.

ಇವೆಲ್ಲವುಗಳಿಗೆ ಮುಕುಟಪ್ರಾಯವಾಗಿ ಇನ್ನೂ ಒಂದು ಚಂದದ ಪುಸ್ತಕ ಪ್ರಕಟವಾಗಿದೆ, ಅದೇ ಗುಬ್ಬಿ ಗೂಡು' ಮಕ್ಕಳ ವಿಶೇಷ ಸಂಚಿಕೆ. ಇದೊಂದು ವಿನೂತನ ವಿಭಿನ್ನ ಪ್ರಯತ್ನ, ಪ್ರಯೋಗ. ಆಕರ್ಷಕ ಮತ್ತು ಅಷ್ಟೇ ಅರ್ಥಪೂರ್ಣ.

ಗುಬ್ಬಿಗೂಡು' ಕಟ್ಟುವುದರಲ್ಲಿ ಕೆಲವಾರು ಸೃಜನಶೀಲ ಪ್ರತಿಭೆಗಳು ಕೈಜೋಡಿಸಿವೆ. ಪುಸ್ತಕದ ಪರಿಕಲ್ಪನೆ ಮೀರಾ ಪಿ.ಆರ್ ಅವರದು. ಆಕೆಯೇ ಸಂಪಾದಕಿ ಕೂಡ. ಅಪಾರ ರಘು ಪುಟವಿನ್ಯಾಸ ಮಾಡಿದ್ದಾರೆ. ಗುಜ್ಜಾರಪ್ಪ, ಸೃಜನಾ ಕಾಯ್ಕಿಣಿ ಮತ್ತು ಸ್ವತಃ ಮೀರಾ ಅವರೇ ಚಿತ್ರಗಳನ್ನು ಬರೆದುಕೊಟ್ಟಿದ್ದಾರೆ. ಡಿ.ಜಿ.ಮಲ್ಲಿಕಾರ್ಜುನ ಛಾಯಾಚಿತ್ರಗಳನ್ನು ಒದಗಿಸಿದ್ದಾರೆ. ಪುಸ್ತಕದ ಹೂರಣವಾಗಿ ಎಚ್.ಎಸ್.ವೆಂಕಟೇಶಮೂರ್ತಿ ಬರೆದ ಮಕ್ಕಳ ಕವಿತೆಗಳಿವೆ; ವೈದೇಹಿ ಬರೆದ ಮಕ್ಕಳ ನಾಟಕವಿದೆ; ಶ್ರೀನಿವಾಸ ಉಡುಪ ಬರೆದ ಮಕ್ಕಳ ಕತೆಯಿದೆ; ಜತೆಗೆ ಕನ್ನಡ ಅಕ್ಷರಮಾಲೆ ಪರಿಚಯ, ಚಿತ್ರಗಳ ಮೂಲಕ ಕಲಿಕೆ, ಪದವಿನೋದ, ಇಂಗ್ಲಿಷ್ ಶಿಶುಗೀತೆಗಳ ಕನ್ನಡ ರೂಪಾಂತರ- ಹೀಗೆ ಕನ್ನಡದಲ್ಲಿ ಓದು-ಬರಹ ಕಲಿಯುವಿಕೆಯನ್ನು ಆಸಕ್ತಿಕರವಾಗಿಸಲು ಬೇಕಾದ ಎಲ್ಲ ಅಂಶಗಳೂ ಇವೆ. ಪುಸ್ತಕಕ್ಕೆ ಜಯಂತ ಕಾಯ್ಕಿಣಿ ಬರೆದ ಬೆನ್ನುಡಿಯ ಒಂದು ಭಾಗವನ್ನೇ ಇಲ್ಲಿ ಉಲ್ಲೇಖಿಸುತ್ತೇನೆ. ಏನಿರಬಹುದು, ಹೇಗಿರಬಹುದು ಈ ಪುಸ್ತಕ ಎಂದು ಆಗ ನಿಮಗೂ ಅಂದಾಜಾಗುತ್ತದೆ. ಅಕ್ಕನಿಗೊಂದು ಪುಕ್ಕ'ವಾಗಿ ಮೂಡಿರುವ ಗುಬ್ಬಿಗೂಡು ಚಿಣ್ಣರಿಗಾಗಿ ಸೂಕ್ಷ್ಮ ತಿಳಿವಿನಿಂದ ಕಲೆಹಾಕಿದ ಇಂಚರಗಳ ಗೊಂಚಲಾಗಿದೆ. ಭಾಷಾತೀತವೂ, ಸೀಮಾತೀತವೂ ಆಗಿರುವ ಮಕ್ಕಳ ಮನಸ್ಸನ್ನು ಸುತ್ತಣ ಇಂದ್ರಿಯಗಮ್ಯ ಅಚ್ಚರಿಗಳತ್ತ ಅರಳಿಸುತ್ತಲೇ ಕನ್ನಡ ಎಂಬುದನ್ನು ಒಂದು ಸಂವೇದನೆಯಾಗಿ, ಪರಿಸರವಾಗಿ ಜೀವಂತಗೊಳಿಸುವ ಹೃದಯಂಗಮ ಚಟುವಟಿಕೆ ಇದು. ಕತೆ, ಹಾಡು, ಕವಿತೆ, ನಾಟಕ, ಲೇಖಾಂಕ, ಟಿಪ್ಪಣಿ, ಚಿತ್ರಾಂಕನ-ಇಂಥ ವೈವಿಧ್ಯಪೂರ್ಣ ಇಂಪಾದ ತಂಪಾದ ಸಾಮಗ್ರಿಗಳಿಂದ ಹೆಣೆಯಲಾದ ಈ ಗೂಡಿನ ನೇಯ್ಗೆಯೂ ಅದರ ಹೂರಣದಷ್ಟೇ ಮನೋಹರವಾಗಿದೆ...

ನಿಜ, ಗುಬ್ಬಿಗೂಡು ನಿಜವಾಗಿಯೂ ಗಮನ ಸೆಳೆಯುವ ಒಂದು ಪುಸ್ತಕ. ಏಕೆಂದರೆ, ಅನಿವಾಸಿ ಕನ್ನಡಿಗರನ್ನೇ ಪರಿಗಣಿಸಿದರೂ ಕರ್ನಾಟಕದಿಂದ ಇಲ್ಲಿಗೆ ವಲಸೆ ಬಂದ ತಲೆಮಾರಿನವರು ಮಾತ್ರ ಕನ್ನಡ-ಕನ್ನಡಿಗ-ಕರ್ನಾಟಕ ಎಂದು ಬಡಬಡಾಯಿಸುತ್ತೇವೆ. ಮುಂದಿನ ತಲೆಮಾರಿನವರಲ್ಲೂ ಕನ್ನಡ ಓದು-ಬರಹದ ಬಗ್ಗೆ ಆಸಕ್ತಿ ಹುಟ್ಟಿಕೊಳ್ಳುತ್ತದೆಂದು ಏನು ಗ್ಯಾರಂಟಿ? ಆ ನಿಟ್ಟಿನಲ್ಲಿ ಭಾಷಾ ಪರಿಚಯದ ಮೂಲಕ ಸಂಸ್ಕೃತಿಯ ಬೀಜಗಳನ್ನು ಬಿತ್ತುವ ಇಂತಹ ಪ್ರಯತ್ನಗಳು ಹೆಚ್ಚುಹೆಚ್ಚು ನಡೆಯಬೇಕು. ಅಕ್ಕ'ದಂತಹ ಸಂಘಸಂಸ್ಥೆಗಳು ಅವನ್ನು ಗುರುತಿಸಿ ಬೆಂಬಲಿಸಬೇಕು. ಆಗ ಆಯಾ ಸಂಸ್ಥೆಗಳ ಧ್ಯೇಯೋದ್ದೇಶಗಳಿಗೂ ಬೆಲೆ ಬರುತ್ತದೆ. ಸುಗುಣೇಂದ್ರ ತೀರ್ಥ ಸ್ವಾಮಿಜಿ ಅದನ್ನೇ ಹೇಳಿದರು- ನಿಮ್ಮ ಸಮ್ಮೇಳನ ಅಂಥ ಘನಂದಾರಿ ಕೆಲಸ ಎಂದೇನೂ ತಿಳಿದುಕೊಳ್ಳಬೆಕಿಲ್ಲ. ಶಕ್ತಿ ಇದ್ದರೆ ಅಮೆರಿಕದಲ್ಲೇ ಹುಟ್ಟಿಬೆಳೆದ ಕನ್ನಡ ಮಕ್ಕಳನ್ನು ಒಂದುಕಡೆ ಒಟ್ಟುಸೇರಿಸಿ ಮಕ್ಕಳ ಸಮ್ಮೇಳನ ಮಾಡಿ!

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X