ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಚಿತ್ರಗಳ ವಿದೇಶಯಾತ್ರೆಗೆ ಪುನೀತ್ ಏರ್‌ಟಿಕೆಟ್

By * ಎಸ್ಕೆ ಶಾಮಸುಂದರ; ಕ್ಯಾಂಪ್ - ಎಡಿಸನ್
|
Google Oneindia Kannada News

ಎಡಿಸನ್ (ಗುಬ್ಬಿ ವೀರಣ್ಣ ವೇದಿಕೆ): ಸೆಪ್ಟೆಂಬರ್ 6 : ಉತ್ತರ ಅಮೆರಿಕದಲ್ಲಿ ಕನ್ನಡ ಚಲನಚಿತ್ರಗಳ ಹಂಚಿಕೆ ಮತ್ತು ನಿಯಮಿತ ಪ್ರದರ್ಶನಕ್ಕೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸುವುದಕ್ಕೆ ತಾನು ಬದ್ಧ ಎಂದು ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಇಂದು ಇಲ್ಲಿ ಘೋಷಿಸಿದರು.

ಭಾನುವಾರ ಸಂಜೆ ಇಲ್ಲಿ ಮುಕ್ತಾಯವಾದ 6ನೇ ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಟ್ಟಕಡೆಯ ಕಾರ್ಯಕ್ರಮ ಚಲನಚಿತ್ರ ರಸಮಂಜರಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಅಮೆರಿಕದಿಂದ ಭಾರತಕ್ಕೆ ಮರಳಿದ ನಂತರ ನಿರ್ಮಾಪಕರು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖಂಡರೊಡನೆ ಚರ್ಚಿಸಿ ಕನ್ನಡ ಚಲನಚಿತ್ರಗಳ ಸಾಗರದಾಚೆಯ ಪರಿಕ್ರಮ ಕುರಿತಂತೆ ಕೂಲಂಕಶವಾಗಿ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು. ಪುನೀತ್ ಅವರ ಈ ಭರವಸೆಯಿಂದ ಪುಳಕಗೊಂಡ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿದ್ದ ಅನಿವಾಸಿ ಕನ್ನಡಿಗರು ಹರ್ಷೋದ್ಗಾರಗಳಿಂದ ಕಿವಿಗಡಚಿಕ್ಕುವ ಕರತಾಡನ ಮಾಡಿದರು. ಕನ್ನಡ ಚಿತ್ರಗಳ ವ್ಯಾಪ್ತಿ ಇನ್ನಷ್ಟು ಮತ್ತಷ್ಟು ವಿಶಾಲವಾಗಬೇಕು. ನಮ್ಮ ಚಿತ್ರಗಳು ಕನ್ನಡ ಜಗತ್ತನ್ನು ತಲುಪಬೇಕು. ಆ ಮೂಲಕ ಉದ್ಯಮ ಹಾಗೂ ಕಲಾವಿದರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಂಚುವಂತಾಗಬೇಕು ಎಂದು ಪುನೀತ್ ಅಭಿಪ್ರಾಯಪಟ್ಟರು.

ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ನವರಸನಾಯಕ ಜಗ್ಗೇಶ್, ಕನ್ನಡದ ಅಂತಃಸತ್ವವನ್ನು ಉಳಿಸಿಕೊಂಡೇ ನಾವು ಬೆಳೆಯಬೇಕು. ಪರಭಾಷಾ ಚಿತ್ರಗಳತ್ತ ಓಡಿಹೋಗದೆ ಕನ್ನಡದಲ್ಲೇ ಈಜಬೇಕು ಮತ್ತು ಇದ್ದು ಜೈಸಬೇಕು ಎಂಬ ಅಣ್ಣಾವ್ರ ಮಂತ್ರವನ್ನು ಸ್ಮರಿಸಿಕೊಂಡರು. ರಾಜಕುಮಾರ್ ತುಳಿದ ಹಾದಿಯನ್ನೇ ತಾವೂ ತುಳಿಯುತ್ತಿರುವುದಾಗಿಯೂ, ಮತ್ತೆಲ್ಲ ಕನ್ನಡಿಗರೂ ಈ ದಿವ್ಯ ಪಥವನ್ನು ಹಿಂಬಾಲಿಸಬೇಕೆಂದು ಅನಿವಾಸಿ ಕನ್ನಡಿಗರಿಗೆ ಕರೆ ಕೊಟ್ಟರು. ನಾನು ಡಿವಿಡಿ ನೋಡುವುದಿಲ್ಲ, ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡದೇ ಬಿಡುವುದಿಲ್ಲ ಎಂಬ ಸಂಕಲ್ಪವನ್ನು ಪ್ರತಿಯೊಬ್ಬ ಅಮೆರಿಕನ್ನಡಿಗನೂ ಸ್ವೀಕರಿಸಬೇಕೆಂದು ಅವರು ಕರೆಕೊಟ್ಟಾಗ ಗುಬ್ಬಿ ವೀರಣ್ಣ ರಂಗಮಂಟಪದಲ್ಲಿ ಶಿಳ್ಳೆ ಚಪ್ಪಾಳೆಗಳ ಮಳೆ ಸುರಿಯಿತು.

ಅಕ್ಕ ಚಲನಚಿತ್ರ ಪ್ರಶಸ್ತಿ : ಇದೇ ಪ್ರಥಮ ಬಾರಿಗೆ ಅಕ್ಕ' ಸ್ಥಾಪಿಸಿರುವ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಸಿನಿ ತಾರೆಯರ ಉಪಸ್ಥಿತಿ ಹಾಡು ನೃತ್ಯದ ರಸಗವಳದ ಮಧ್ಯೆ ನೆರವೇರಿತು. ಅತ್ಯುತ್ತಮ ನಟನಾಗಿ ಪುನೀತ್ ರಾಜಕುಮಾರ್ (ರಾಮ್' ಚಿತ್ರ) ಹೊರಹೊಮ್ಮಿದರೆ ಐಂದ್ರಿತಾ ರೇ (ಮನಸಾರೆ' ಚಿತ್ರಕ್ಕೆ) ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರರಾದರು. ಅತ್ಯುತ್ತಮ ನೃತ್ಯನಿರ್ದೇಶಕ ಪ್ರಶಸ್ತಿ ಮನಸಾರೆ ಚಿತ್ರದ ಶ್ರೀಹರ್ಷ ಅವರಿಗೆ ಸಂದಿತು. ಜಗ್ಗೇಶ್ ಅವರಿಗೆ ಜೀವಮಾನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. ಇನ್ನೊಬ್ಬ ನಾಯಕನಟ ವಿಜಯ ರಾಘವೇಂದ್ರ ಸಹ ಮತ್ತೆ ಬಂದ ಗಣೇಶ' ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆದರು. ನೂರು ಜನ್ಮಕು ಚಿತ್ರದ ಸಂತೋಷ್ ಅವರಿಗೆ ಉದಯೋನ್ಮುಖ ನಟ ಪ್ರಶಸ್ತಿ ಕೊಟ್ಟು ಅಕ್ಕ' ಬೆಳೆಯುವ ಹುಡುಗನ ಬೆನ್ನುತಟ್ಟಿತು.

ಈ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದವರು ಜೀ ಕನ್ನಡ ಚಾನೆಲ್. ಕಾರ್ಯಕ್ರಮ ಪ್ರಾಯೋಜನೆ ಜಸ್ಟ್ ಡಯಲ್ ಡಾಟ್ ಕಾಮ್ ಸಂಸ್ಥೆ ವಹಿಸಿತ್ತು.

ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುಗಳ ಝೇಂಕಾರ ಮತ್ತು ನುರಿತ ಕಲಾವಿದರಿಂದ ನೃತ್ಯ ಕಾರ್ಯಕ್ರಮ ತುಂಬಿದ ಸಭೆಯನ್ನು ರಂಜಿಸಿತು. ಪುನೀತ್ ರಾಜಕುಮಾರ್ ಮಿಲನ ಚಿತ್ರದ ನಿನ್ನಿಂದಲೇ ನಿನ್ನಿಂದಲೇ' ಹಾಡಿಗೆ ಕಂಠವಾದರೆ ಹೇ ಪಾರೋ' ಹಾಡಿಗೆ ಕುಣಿದು ಕುಪ್ಪಳಿಸಿದರು. ಅವರ ಜತೆಗೆ ಸಭೆಯೂ ಹುಚ್ಚೆದ್ದು ಕುಣಿಯಿತು. ಭಾಗ್ಯದ ಬಳೆಗಾರ ಹೋಗಿ ಬಾ ತವರಿಗೆ' ಹಾಗೂ ಮಾಯದಂಥ ಮಳೆ ಬಂತಣ್ಣ' ಹಾಡಿನ ಪಲ್ಲವಿಗಳಿಗೆ ವಿಜಯ ರಾಘವೇಂದ್ರ ಮತ್ತು ಸಂಗಡಿಗರು ಡ್ಯಾನ್ಸ್ ಮಾಡಿದರು. ಹಾಡಿಗಿಂತ ಕುಣಿತವನ್ನೇ ಹೆಚ್ಚು ಅಪೇಕ್ಷೆಪಟ್ಟ ಅನಿವಾಸಿ ಹಿರಿಯ-ಕಿರಿಯ ಕನ್ನಡ ಸಮೂಹಕ್ಕೆ ಓಗೊಟ್ಟ ಐಂದ್ರಿತಾ ರೇ ಜಂಗ್ಲೀ ಚಿತ್ರದ ಹಳೇಪಾತ್ರೆ ಹಳೇಕಬ್ಬಿಣ ಹಳೇಪೇಪರ್' ಹಾಡಿಗೆ ಸೊಂಟ ಬಳುಕಿಸಿದರು. ಕಾರ್ಯಕ್ರಮವು ಗುರುಕಿರಣ್ ಮತ್ತು ಸಂಗಡಿಗರ ಚೌಚೌ ಹಾಡು ಚೌಚೌ ನೃತ್ಯದೊಂದಿಗೆ ಸಮಾಪ್ತವಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀ ಕನ್ನಡ ಚಾನೆಲ್‌ನ ಮುಖ್ಯಸ್ಥರು, ಅಮರನಾಥ ಗೌಡ ಆದಿಯಾಗಿ ಅಕ್ಕ ಮತ್ತು ಬೃಂದಾವನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X