ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ

By * ಶ್ರೀವತ್ಸ ಜೋಶಿ ಮತ್ತು ಎಸ್ಕೆ ಶಾಮಸುಂದರ
|
Google Oneindia Kannada News

ಅಕ್ಕ ಸಮ್ಮೇಳನದ ಅವಿಭಾಜ್ಯ ಅಂಗ ಕಣ್ಮನ ತಣಿಸುವ ಮೆರವಣಿಗೆ. ಇದರಲ್ಲಿ ಅಮೆರಿಕದ ವಿವಿಧ ಪ್ರಾಂತ್ಯಗಳ ಕನ್ನಡ ಸಂಘಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತಂತಮ್ಮ ಸಂಘಗಳ ಬ್ಯಾನರ್ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆಗೆ ಹೆಜ್ಜೆಯಾಗುವುದು ಸಂಘ ಸದಸ್ಯರಿಗೆ ಅತೀವ ಹೆಮ್ಮೆ ಕೊಡುವ ಒಂದು ಘಳಿಗೆ. ಈಬಾರಿ ಮೆರವಣಿಗೆಯ ಕೇಂದ್ರವಸ್ತು (ಥೀಮ್) ಕರ್ನಾಟಕದ ಹಬ್ಬಹರಿದಿನಗಳು. ಸಂಕ್ರಾಂತಿಯಿಂದ ಹಿಡಿದು ವಿಜಯದಶಮಿಯವರೆಗಿನ ಸಣ್ಣದೊಡ್ಡ ಹಬ್ಬಗಳೆಲ್ಲವೂ ವಿವಿಧ ಸಂಘಗಳು ಕಟ್ಟಿಕೊಟ್ಟ ಸ್ತಬ್ಧಚಿತ್ರಗಳ ಮೂಲಕ ಪ್ರತಿಬಿಂಬಿತವಾದವು. ಸಂಕ್ರಾಂತಿಯ ತಂಡ ಎಳ್ಳುಬೀರಿದರೆ ಯುಗಾದಿಯ ತಂಡ ಬೇವುಬೆಲ್ಲ ಹಂಚಿತು. ಬಸವನ ಪರಿಷೆಯ ತಂಡ ಕಳ್ಳೇಕಾಯಿ ಕೊಟ್ಟರೆ ಗಣೇಶಚೌತಿಯ ತಂಡ ಮೋದಕಪ್ರಿಯರ ಬಾಯಿಯನ್ನು ಸಿಹಿಯಾಗಿಸಿತು.

ವಿಡಿಯೋ ಕಾನ್ಫರೆನ್ಸ್ ಸಾಹಿತ್ಯಗೋಷ್ಠಿ

ಟೆಲಿಕಾನ್ಫರೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಕರ್ನಾಟಕ ಮತ್ತು ಅನಿವಾಸಿ ಭಾರತೀಯರ ನಡುವಿನ ಸಾಹಿತ್ಯ ಸಂವೇದನಗಳಿಗೆ ಸೇತುವೆ ನಿರ್ಮಿಸುವ ಯಾವ ಮೋಹನ ಮುರಳಿ ಕರೆಯಿತು' ಶೀರ್ಷಿಕೆಯ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತು. ಬೆಂಗಳೂರಿನ ನಯನ ಸಭಾಂಗಣ ಮತ್ತು ನ್ಯೂ ಜೆರ್ಸಿಯ ಗುಬ್ಬಿ ವೀರಣ್ಣ ರಂಗಮಂಟಪದಲ್ಲಿ ಏಕಕಾಲಕ್ಕೆ ಉಪಸ್ಥಿತರಿದ್ದ ಕವಿಪುಂಗವರು ಮುಖಾಮುಖಿಯಾದರು. ನಯನದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದರೆ ಅಕ್ಕ' ವೇದಿಕೆಯಲ್ಲಿ ನೆರೆದಿದ್ದ ಅನಿವಾಸಿ ಕನ್ನಡ ಸಾಹಿತಿಗಳ ಬಳಗ ಕವಿಕಾವ್ಯಕ್ಕೆ ಧ್ವನಿಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಅಕ್ಕ ಆಶಯಗೀತೆ ಅಲ್ಲೇ ಹುಟ್ಟಿದರೂ ಇಲ್ಲೇ ಹುಟ್ಟಿದರೂ..." ಅತ್ಯಂತ ಸುಶ್ರಾವ್ಯವಾಗಿ ಮೂಡಿಬಂತು. ಈ ಗೀತೆಯನ್ನು ಬರೆದವರು ಎಚ್ಚೆಸ್ವಿ ಮತ್ತು ಸಂಗೀತಕ್ಕೆ ಅಳವಡಿಸಿದವರು ಸುನೀತಾ ಅನಂತಸ್ವಾಮಿ. ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯಿಂದ ಇಂಡ್ಯಾಕಾಮಿಕ್ಸ್ ಡಾಟ್ ಕಾಮ್ ಪ್ರಾಯೋಜಿಸಿದ್ದ ಈ ಕಾರ್ಯಕ್ರಮ ಈ ಬಾರಿಯ ಅಕ್ಕ' ಸಮ್ಮೇಳನದ ವಿಶೇಷಗಳಲ್ಲಿ ಒಂದಾಗಿ ಜನಮನ ಗೆದ್ದಿತು.

ಇದೇ ವೇದಿಕೆಯನ್ನು ಬಳಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಅಕ್ಕ' ಸಮ್ಮೇಳನದ ಸಂದರ್ಭದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದರು. ಕಳೆದೆರಡು ಸಮ್ಮೇಳನಗಳಲ್ಲಿ ತಾವು ಪ್ರತ್ಯಕ್ಷವಾಗಿ ಭಾಗವಹಿಸಿದ್ದನ್ನು ನೆನೆಸಿಕೊಂಡರು. ಅಮೆರಿಕ ಒಂದು ನದಿ, ಕರ್ನಾಟಕ ಒಂದು ನದಿ. ಈ ಎರಡೂ ನದಿಗಳ ನಡುವೆ ಒಂದು ಅಮೃತವಾಹಿನಿ ಹರಿಯುತ್ತಿದೆ ಎಂದು ಮುಖ್ಯಮಂತ್ರಿಗಳು ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ನಂಟನ್ನು ಕಾವ್ಯಾತ್ಮಕವಾಗಿ ಬಣ್ಣಿಸಿದರು. ನಯನ ಸಭಾಂಗಣದಲ್ಲಿ ಉಪಸ್ಥಿತರಿದ್ದ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಲಸೆಹಕ್ಕಿಗಳ ಕಲರವವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಈ ಹಿಂದಿನ ಎಲ್ಲ ಅಕ್ಕ' ಸಮ್ಮೇಳನಗಳಲ್ಲಿ ತಾನು ಭಾಗವಹಿಸಿದ್ದುದಾಗಿ ಹೇಳಿ, ಪ್ರಸಕ್ತ ಸಮ್ಮೇಳನದಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳಲಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಆದರೆ ಈ ವಿಷಾದವನ್ನು ಟೆಲಿಕಾನ್ಫರೆನ್ಸ್ ನೀಗುತ್ತಿದೆ ಎಂದು ಸಮಾಧಾನಿಸಿಕೊಂಡರು.

<strong>ರಕ್ತದಾನ</strong>ರಕ್ತದಾನ

ಈ ಬಾರಿಯ ಅಕ್ಕ' ಸಮ್ಮೇಳನದ ಹಲವು ಪ್ರಥಮಗಳಲ್ಲಿ ಮತ್ತೊಂದಾಗಿ ಗಮನ ಸೆಳೆದದ್ದು ರಕ್ತದಾನ ಶಿಬಿರ. ಪಿಟ್ಸ್‌ಬರ್ಗ್ ಕನ್ನಡ ಸಂಘದ ಅಧ್ಯಕ್ಷ ಶಶಿಶೇಖರ ಅವರ ಮುತುವರ್ಜಿಯಿಂದ ಆಯೋಜಿತವಾದ ಈ ಶಿಬಿರಕ್ಕೆ ಅಕ್ಕ' ಅಧ್ಯಕ್ಷ ರವಿ ಡಂಕಣಿಕೋಟೆಯವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ನ್ಯೂಯಾರ್ಕ್‌ನ ಬ್ಲಡ್ ಪ್ರೊಗ್ರಾಂ' ಅಡಿಯಲ್ಲಿ ಈ ಶಿಬಿರ ನಡೆಯಿತು. ಒಟ್ಟು ನೂರೈವತ್ತು ದಾನಿಗಳಿಂದ ರಕ್ತ ಸಂಗ್ರಹಿಸುವ ಉದ್ದೇಶ ಈ ಕಾರ್ಯಕ್ರಮದ್ದು. ಶನಿವಾರ ಸಂಜೆಯ ಹೊತ್ತಿಗೆ ಮೂವತ್ತು ಅನಿವಾಸಿ ಕನ್ನಡಿಗರು ರಕ್ತದಾನ ಮಾಡುವುದರೊಂದಿಗೆ ಕರ್ನಾಟಕದ ರಕ್ತ ಅಮೆರಿಕ ರಕ್ತದಲ್ಲಿ ಬೆರೆಯಿತು.

ರಾಜಕಾರಣಿಗಳು

ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಪ್ರದರ್ಶಿಸುವಲ್ಲಿ ಈ ಬಾರಿಯೂ ರಾಜಕಾರಣಿಗಳು ಹಿಂದೆ ಬೀಳಲಿಲ್ಲ. ರಾಜ್ಯದಿಂದ ಸರಿಸುಮಾರು ಮೂವತ್ತೆರಡು ಮಂದಿ ಶಾಸಕರು ಕುಟುಂಬ ಸಮೇತರಾಗಿ ಆಗಮಿಸಿ ಕಡಲಾಚೆಯ ಕನ್ನಡಿಗರ ಭಾವಬಿಂದುಗಳಲ್ಲಿ ಒಂದಾದರು. ಸಭಾಪತಿ ಡಿ.ಎಸ್.ಶಂಕರಮೂರ್ತಿ, ಸಚಿವರುಗಳಾದ ಜಗದೀಶ ಶೆಟ್ಟರ್, ನರೇಂದ್ರ ಸ್ವಾಮಿ, ಕರಾರಸಾಸಂ ಅಧ್ಯಕ್ಷ ಜಗ್ಗೇಶ್, ಬೊಮ್ಮನಹಳ್ಳಿಯ ಶಾಸಕ ಸತೀಶ ರೆಡ್ಡಿ ವೇದಿಕೆಯನ್ನು ಹಂಚಿಕೊಂಡರೆ ಉಳಿದ ಶಾಸಕರು ನಾಲ್ಕುಸಾವಿರ ಸಮ್ಮೇಳನಾರ್ಥಿಗಳ ಸಾಲಿನಲ್ಲಿ ತಾವೂ ಒಬ್ಬರಾಗಿ ಕನ್ನಡ ಕಾರ್ಯಕ್ರಮಗಳಿಗೆ ಸಾಕ್ಷೀಭೂತರಾದರು. ತಮ್ಮ ಎಂದಿನ ಖಾದಿ ಉಡುಪಿಗೆ ತಾತ್ಕಾಲಿಕ ವಿರಾಮ ಘೋಷಿಸಿಕೊಂಡರು. ಶಾಸಕರ ತಂಡ ಅಮೆರಿಕದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟು ಇನ್ನೆರಡು ವಾರಗಳಲ್ಲಿ ಕರ್ನಾಟಕಕ್ಕೆ ವಾಪಸಾಗುವ ನಿರೀಕ್ಷೆಯಿದೆ.

ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X