ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು

By * ಶ್ರೀವತ್ಸ ಜೋಶಿ ಮತ್ತು ಎಸ್ಕೆ ಶಾಮಸುಂದರ
|
Google Oneindia Kannada News

ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿಯ ಅಕ್ಕ' ಸಮ್ಮೇಳನದ ಹಿರಿಮೆಗಳಲ್ಲಿ ಒಂದು ಎಂಬುದು ನಿಸ್ಸಂದೇಹವಾಗಿ ಸಾಬೀತಾಯಿತು. ಪ್ರಭಾತ ಕಲಾವಿದರು ಪ್ರಸ್ತುತಪಡಿಸಿದ ಕೃಷ್ಣ ವೈಜಯಂತಿ' ನೃತ್ಯರೂಪಕ, ಅಮೆರಿಕದ ವಿವಿಧ ಕನ್ನಡಕೂಟಗಳ ಸದಸ್ಯರು ಒಟ್ಟಾಗಿ ಸಾದರಪಡಿಸಿದ ಕರುನಾಡ ಕೊಡುಗೆ' ಎಂಬ ಸಮೂಹನೃತ್ಯ ಗಾನವೈಭವ ಸಮ್ಮೇಳನಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸಿದವು.

ಕರ್ನಾಟಕದಿಂದ ಬಂದಿರುವ ಕಲಾವಿದರ ತಂಡಗಳ ಪ್ರದರ್ಶನಗಳು ತಮ್ಮ ಕಲಾತ್ಮಕತೆ ಮತ್ತು ವೈವಿಧ್ಯದಿಂದ ಅಕ್ಕ' ಸಮ್ಮೇಳನಕ್ಕೆ ಸಾಂಸ್ಕ್ರೃತಿಕ ಮೆರಗು ತಂದುಕೊಟ್ಟವು. ಇವುಗಳ ಮಧ್ಯೆ ಸ್ಥಳೀಯ ಕಲಾವಿದರಿಂದ ಹಾಸ್ಯನಾಟಕಗಳು, ನೃತ್ಯರೂಪಕಗಳು ಮನರಂಜನೆಯ ರಸದೌತಣ ಉಣಬಡಿಸಿದವು. ಕನೆಕ್ಟಿಕಟ್ ಕನ್ನಡಕೂಟದ ಮಲ್ಲಿ ಸಣ್ಣಪ್ಪನವರ್ ಮತ್ತು ತಂಡದವರು ಪ್ರಸ್ತುತಪಡಿಸಿದ ಅಮೆರಿಕದಲ್ಲಿ ಯಮಧರ್ಮರಾಯ' ಕಿರುಪ್ರಹಸನವಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಶುಕ್ರವಾರ ಮತ್ತು ಶನಿವಾರ ಪ್ರದರ್ಶಿತವಾದ ಬಹುತೇಕ ಕಾರ್ಯಕ್ರಮಗಳಿಗೆ ದೃಶ್ಯವೈಭವದ ಸ್ಪರ್ಶ ಕೊಟ್ಟ ಬೆಳಕಿನ ಸಂಯೋಜನೆ, ಧ್ವನಿಗ್ರಹಣ, ಹಿನ್ನೆಲೆಗಾಯನ ಮತ್ತು ಔಚಿತ್ಯಪೂರ್ಣ ಕಾರ್ಯಕ್ರಮ ನಿರೂಪಣೆಗಳು ಅತ್ಯಂತ ಸಮರ್ಪಕವಾಗಿದ್ದು ರಸಾಸ್ವಾದನೆಯ ಆನಂದವನ್ನು ದುಪ್ಪಟ್ಟಾಗಿಸಿದವು.

ಸುಧಾರಣೆಗೊಂಡ ಭೋಜನ ವ್ಯವಸ್ಥೆ : ಭೋಜನಶಾಲೆಯಲ್ಲಿ ಶನಿವಾರ ಮಧ್ಯಾಹ್ನದವರೆಗೂ ಕಂಡುಬಂದಿದ್ದ ಅವ್ಯವಸ್ಥೆ, ಗೊಂದಲಗಳು ಸಮ್ಮೇಳನ ಸಂಯೋಜಕ ಪ್ರಸನ್ನ ಕುಮಾರ್ ಮತ್ತು ಅಮರನಾಥ ಗೌಡ ಅವರ ಸಮಯೋಚಿತ ನಿರ್ದೇಶನದಿಂದಾಗಿ ನಿರಾಳವಾದವು. ಶನಿವಾರ ರಾತ್ರೆಯ ಊಟಕ್ಕೆ ಸರತಿಸಾಲಿನಲ್ಲಿ ಕಾಯುವ ಅವಶ್ಯಕತೆಯೇ ಇರಲಿಲ್ಲ. ಪೂರಿ-ಪಲ್ಯ, ಗೊಜ್ಜು, ಹುಳಿ, ಮೊಸರನ್ನ, ಬೂಂದಿಲಡ್ಡು ಸಹಿತ ಸ್ವಾದಿಷ್ಟ ಭೋಜನವನ್ನು ಎಲ್ಲ ಸಮ್ಮೇಳನಾರ್ಥಿಗಳೂ ಹೊಟ್ಟೆತುಂಬ ಸವಿದರು.

ಬಾಲಮುರಳೀಕೃಷ್ಣ ಗಾನಾಮೃತ : ಶುಕ್ರವಾರ ಸಂಜೆ ಸಮ್ಮೇಳನ ಉದ್ಘಾಟನೆಯ ನಂತರ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದ ಬಾಲಮುರಳೀಕೃಷ್ಣ ಅವರ ಸಂಗೀತ ಕಛೇರಿ ಶಾಸ್ತ್ರೀಯ ಸಂಗೀತ ರಸಿಕರಿಗೆ ಮುದ ನೀಡಿತು. ಎಪ್ಪತ್ತಾರರ ಇಳಿವಯಸ್ಸಿನಲ್ಲೂ ಮನೋಜ್ಞ ಕಛೇರಿ ನೀಡಿದ ಬಾಲಮುರಳಿಯವರ ವಿದ್ವತ್ತಿಗೆ ತಲೆದೂಗದವರೇ ಇಲ್ಲ. ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ' ಕೀರ್ತನೆಯನ್ನು ಅವರು ಸುಶ್ರಾವ್ಯವಾಗಿ ಹಾಡಿದಾಗ ಭಾರತೀಯ ಶಾಸ್ತ್ರೀಯ ಸಂಗೀತದ ಸಮ್ಮೋಹನವು ಗುಬ್ಬಿ ವೀರಣ್ಣ ರಂಗಮಂಟಪವನ್ನು ಆವರಿಸಿಕೊಂಡಿತು.

ಸಂಗೀತ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಪುರಂದರ ಸಭಾಂಗಣದಲ್ಲಿ ಇಡೀದಿನ ಒಂದಾದ ಮೇಲೊಂದರಂತೆ ಸಂಗೀತ ಕಾರ್ಯಕ್ರಮಗಳ ಝೇಂಕಾರ. ವಿದ್ಯಾಭೂಷಣರ ದೇವರ ನಾಮಗಳಿಗೆ ಅಮೆರಿಕದಲ್ಲಿ ಎಲ್ಲಿಲ್ಲದ ಬೇಡಿಕೆ. ಅವರ ಕಛೇರಿಯ ನಂತರ ವೇದಿಕೆ ಹತ್ತಿದ್ದು ಅವರ ಶಿಷ್ಯರೇ ಆದ ಶಂಕರ ಶಾನುಭಾಗ್ ಮತ್ತು ತಂಡ. ಶನಿವಾರ ಮಧ್ಯಾಹ್ನ ಸಂಗೀತಪ್ರಿಯರಿಗೆ ಮತ್ತೊಂದು ರಸದೌತಣ ಉಣಬಡಿಸಿದವರು ಸ್ಯಾಕ್ಸೊಫೋನ್ ವಾದಕ ಕದ್ರಿ ರಮೇಶನಾಥ್. ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ಮೂಡಿಬಂದದ್ದು ರಾತ್ರಿ ಭೋಜನಾನಂತರದ ಕನ್ನಡವೇ ಶ್ರೇಷ್ಠ" ಸಂಗೀತ ಸೌರಭ.

ಹತ್ತರೊಡನೆ ಹನ್ನೊಂದು ಸಾಹಿತ್ಯ' : ಇಂಥ ಸಮ್ಮೇಳನಗಳಲ್ಲಿ ತಾನೇತಾನಾಗುವ ಜನಪ್ರಿಯ ಕಾರ್ಯಕ್ರಮಗಳ ನಡುವೆ ಸೊರಗುವ ಏಕೈಕ ಕಾರ್ಯಕ್ರಮವೆಂದರೆ ಕನ್ನಡ ಸಾಹಿತ್ಯ. ಆದರೆ ಕಾರ್ಯಕ್ರಮವನ್ನು ಮೂಲೆಗುಂಪಾಗಿಸಲು ಬಿಡದ ಸಾಹಿತ್ಯ ಕಮಿಟಿಯ ಮುಂದಾಳು ಸತ್ಯಪ್ರಸಾದ್ ಅವರ ಉಮೇದಿನಿಂದ ಕವಿಗೋಷ್ಠಿ ಅಂತೂ ಇಂತೂ ಡಿವಿಜಿ ಭವನದಲ್ಲಿ ನಡೆದೇಬಿಟ್ಟಿತು. ಹಿರಿಯ ಅನಿವಾಸಿ ಲೇಖಕರಾದ ಎಚ್.ವಿ.ರಂಗಾಚಾರ್ ಮತ್ತು ಮೈ.ಶ್ರೀ.ನಟರಾಜ್ ಅವರ ಮುಂದಾಳತ್ವದಲ್ಲಿ ಕವನವಾಚನ ಗೋಷ್ಠಿ ಸಾಕಾರಗೊಂಡಿತು. ಬಿ.ಆರ್.ಲಕ್ಷ್ಮಣ ರಾವ್ ಅವರು ವಿಷಾದಗೀತೆಯನ್ನು ವಾಚಿಸಿದರೆ, ಎಚ್ಚೆಸ್ವಿಯವರು ಕವಿತೆಯ ಬದಲಾಗಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಅನಾತ್ಮಕಥನ ಕೃತಿಯಿಂದ ಆಯ್ದ ಒಂದು ಹೃದಯಸ್ಪರ್ಶಿ ಪ್ರಸಂಗವನ್ನು ಸಭಿಕರೊಂದಿಗೆ ಹಂಚಿಕೊಂಡರು. ಈ ಹೃದಯಸ್ಪರ್ಶಿ ಪ್ರಸಂಗದ ಕೇಂದ್ರವ್ಯಕ್ತಿ ಪು.ತಿ.ನರಸಿಂಹಾಚಾರ್ ಮತ್ತು ಅವರ ಪ್ರಿಯ ಶಿಷ್ಯ, ಇಂತೀ ನಿಮ್ಮ ವಿಧೇಯ ಎಚ್.ಎಸ್.ವೆಂಕಟೇಶಮೂರ್ತಿ.

ಅಕ್ಕ ಗ್ಯಾಲರಿ : ಸೌಂದರ್ಯ ಸ್ಪರ್ಧೆಯಲ್ಲಿ ಸುಂದರಿಯರ ಬೆಕ್ಕಿನ ನಡಿಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X