• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಹರೇಶ್ವರ ದಂಪತಿಗೆ ಅನಂತಾನಂತ ಕೃತಜ್ಞತೆ

By * ಸತೀಶ್ ಹೊಸನಗರ
|

ಹತ್ತು ವರ್ಷಗಳ ಹಿಂದೆ ಮೊದಲ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡದ ಸ್ಥಿತಿ-ಗತಿ ಎನ್ನುವ ವಿಚಾರವಾಗಿ ಹಿರಿಯರಾದ ಅನಂತ ಮೂರ್ತಿ, ಗಿರೀಶ್ ಕಾರ್ನಾಡ್ ಮೊದಲಾದವರು ವಿದ್ವತ್‌ಪೂರ್ಣ ಭಾಷಣಗಳನ್ನು ಮಂಡಿಸಿದ್ದರು. ವಿಶ್ವಸಹಸ್ರಮಾನ ಸಮ್ಮೇಳನದಲ್ಲಿ ಆಗಿನ ಸಾಧ್ಯತೆ-ಬಾಧ್ಯತೆಗಳ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳು ಅನೇಕ ಜನರಲ್ಲಿ ಹಲವಾರು ಆಲೋಚನಾ ಸರಣಿಗಳನ್ನು ಮೂಡಿಸಿರಲಿಕ್ಕೂ ಸಾಕು. ಒಬ್ಬ ಅನಿವಾಸಿಯಾಗಿ ಕಳೆದ ಒಂದೂವರೆ ದಶಕಗಳ ವೈಯಕ್ತಿಕ ಅನುಭವದಲ್ಲಿ ಹಾಗೂ ಕನ್ನಡ ನಾಡು-ನುಡಿ ಮತ್ತು ಜನತೆ ತತ್ಕಾಲ ಹಾಗೂ ಧೀರ್ಘಕಾಲೀನ ಬದಲಾವಣೆಗಳಿಗೊಳಪಡುತ್ತಿರುವ ನಿಟ್ಟಿನಲ್ಲಿ ಈ ವರ್ಷದ ಆರನೆಯ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ವಿಶೇಷ ಕೃತಿಯೊಂದನ್ನು ಹೊರತರಬಾರದೇಕೆ ಎಂಬ ಆಲೋಚನೆ ಬಂದದ್ದು ಮುಂದೆ ಈ ರೀತಿಯಲ್ಲಿ ಕಾರ್ಯಗತಗೊಂಡಿತು.

ಕೇವಲ ಜಾಗತೀಕರಣ ಯುಗದಲ್ಲಿ ಕನ್ನಡದ ಸ್ಥಿತಿ-ಗತಿ ಎಂಬ ಬೀಜವನ್ನು ಮನಸ್ಸಿನಲ್ಲಿಟ್ಟು ಚಿಂತಿಸುತ್ತಿದ್ದವನಿಗೆ ಸಕಾಲದಲ್ಲಿ ನೆರವಾಗಿ ಮೊದಲ ಪೋಷಣೆಗಳನ್ನು ನೀಡಿದವರು ನಮ್ಮ ಸ್ಮರಣ ಸಂಚಿಕೆ ಮಂಡಳಿಯ ಇತರ ಸದಸ್ಯರು. ಹೀಗೊಂದು ವಿಚಾರವಿದೆ ಅದನ್ನು ಬೆಳೆಸಿದರೆ ಹೇಗೆ ಎಂಬುದನ್ನು ಪುರಸ್ಕರಿಸಿ ಸಕಾಲಕ್ಕೆ ಸಲಹೆ ನೀಡಿದವರು ವಿಜಯಾ ಮನೋಹರ್ ಹಾಗೂ ತ್ರಿವೇಣಿ ಶ್ರೀನಿವಾಸ್ ರಾವ್ ಅವರು. ಮುಂದೆ ಈ ಬೀಜವನ್ನು ವೃಕ್ಷವಾಗಿ ಬೆಳೆಸಿ ಪೋಷಿಸಿದವರು ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರು. ಈ ಕೃತಿ ಹೊರಬರುವ ಹೊತ್ತಿನಲ್ಲಿ ನಾವು ಹರಿಹರೇಶ್ವರ ಅವರನ್ನು ಕಳೆದುಕೊಂಡು ಬಡವರಾಗಿದ್ದೇವೆ, ಅವರನ್ನು ನೆನೆದರೆ ಕಣ್ಣು ಮಂಜಾಗುತ್ತದೆ, ಕಂಠ ಗದ್ಗದಿತವಾಗುತ್ತದೆ, ಇನ್ನು ಮುಂದೆ ನಮ್ಮ ಆಲೋಚನೆಗಳಿಗೆ ಪೋಷಣೆ ನೀಡಲು ಅವರಿಲ್ಲದೆ ಎಲ್ಲವೂ ಖಾಲಿಯಾದ ಅನುಭವವಾಗುತ್ತದೆ.

ವಿಶೇಷವೆಂದರೆ - 2000ದ ಮೊದಲ ಸಮ್ಮೇಳನದಲ್ಲಿ ಹರಿಹರೇಶ್ವರ ಅವರು ಆಯೋಜಿಸಿದ ಭಾಷಣಗಳ ಸ್ಪೂರ್ತಿಯಿಂದ ಆರಂಭಗೊಂಡ ಈ ಪ್ರಬಂಧ ಸಂಕಲನದ ಆಲೋಚನೆಗಳು, ಹತ್ತು ವರ್ಷಗಳ ನಂತರ ಅವರ ಸಹಾಯ ಹಸ್ತದಿಂದಲೇ ಪೂರ್ಣಗೊಂಡು ಸಾಕಾರವಾದದ್ದು, ಈ ನಿಟ್ಟಿನಲ್ಲಿ ನಾನು ಅವರಿಗೆ ಹಾಗೂ ಅವರ ಕುಟುಂಬದವರಿಗೆ ಚಿರಋಣಿ. ಇಂದಿಗೂ ಈ ವೈಚಾರಿಕ ಪ್ರಬಂಧ ಸಂಪುಟವು ಒಂದು ಆಕರ ಗ್ರಂಥವಾಗಿ ಮುಂದಿನ ಬರಹಗಾರರಿಗೆ ದಾರಿ-ದೀಪವಾಗುವಂತಿರಲಿ ಎನ್ನುವುದು ನನ್ನ ಆಶಯ. ಹಾಗೂ ಈ ಸಂಕಲನದ ಬರಹಗಳು ವಿಶ್ವವಿದ್ಯಾನಿಲಯಗಳ ಸಂಶೋಧನ ಪ್ರಬಂಧಗಳಾಗಲಿ ಎನ್ನುವುದು ನನ್ನ ಕಲ್ಪನೆ. ಚರಿತ್ರಾರ್ಹವಾದ 2010ರ ಆರನೆಯ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಹೊರತರುತ್ತಿರುವ ಈ ಸಂಚಿಕೆಯನ್ನು ನಿಮ್ಮ ಮುಂದಿಡಲು ಹರ್ಷವಾಗುತ್ತದೆ. ಈ ವೈಚಾರಿಕ ಬರಹಗಳಲ್ಲಿ ಕನ್ನಡನಾಡಿನ ಪರಿಣತ ವಿದ್ವಾಂಸರು ತಮ್ಮ ಅನಿಸಿಕೆ, ಕನ್ನಡದ ಬಗೆಗಿನ ಕಾಳಜಿ ಹಾಗೂ ದೃಷ್ಟಿಕೋನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಈ ವರ್ಷದ ಮೇ 30ರಂದು ಮೊದಲ ಬಾರಿಗೆ ನಾನು ಹರಿಹರೇಶ್ವರ ಅವರಲ್ಲಿ ಹೀಗೊಂದು ಆಲೋಚನೆಯಿದೆ ಎಂದು ನನ್ನ ಹಳವಂಡಗಳನ್ನು ತೋಡಿಕೊಂಡೆ. ಅದಕ್ಕೂ ಮೊದಲು 'ಜಾಗತೀಕರಣದಲ್ಲಿ ಕನ್ನಡದ ಸ್ಥಿತಿ-ಗತಿ' ಎಂಬ ಮೂಲ ಉದ್ದೇಶದ ಅಡಿ, ಒಂದಿಷ್ಟು ಸಹ-ವಿಚಾರಗಳನ್ನು ಮುಂದಿಟ್ಟುಕೊಂಡು, ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರ ಒಂದಿಷ್ಟು ಹೆಸರುಗಳನ್ನೂ ಹಾಗೂ ಅವರಿಗೆ ಕಳುಹಿಸಬಹುದಾದ ಮನವಿ ಪತ್ರವನ್ನೂ ತಯಾರು ಮಾಡಿಟ್ಟುಕೊಂಡಿದ್ದೆ. ಹರಿಹರೇಶ್ವರ ಅವರು ಸುಮಾರು ಒಂದು ಘಂಟೆಯಷ್ಟು ಮಟ್ಟಿಗೆ ನಡೆದ ಮಾತುಕಥೆಯಲ್ಲಿ ನನ್ನ ಉದ್ದೇಶದ ಆಳ, ವಿಸ್ತಾರ ಹಾಗೂ ಸಾಧ್ಯತೆಗಳನ್ನು ನಿಧಾನವಾಗಿ ಹೊರತರತೊಡಗಿದರು. ಅಲ್ಲಲ್ಲಿ ಅವರ ಹಿಂದಿನ ಸಂಪಾದಕತ್ವದ ಅನುಭಗಳನ್ನೂ, ಸಾಧ್ಯಾಸಾಧ್ಯತೆಗಳನ್ನೂ ಚರ್ಚಿಸಿದರು. ಹೀಗೆ ಅನೇಕಾನೇಕ ಚರ್ಚೆ, ಪ್ರಸ್ತಾಪ, ಕಾರ್ಯಾಲೋಚನೆಯಿಂದ ಹುಟ್ಟಿ ಬೆಳೆದು ಬಂದದ್ದೇ ಈ ಪ್ರಬಂಧ ಸಂಕಲನ.

ಈ ಪ್ರಬಂಧ ಸಂಕಲನದ ಆಯ್ದ ಭಾಗಗಳಾಗಿ ನಾನು ಮೊದಲು ಹಾಕಿಕೊಂಡ 30 ಸಾಹಿತ್ಯ ಕ್ಷೇತ್ರಗಳನ್ನು ಸ್ಥೂಲವಾಗಿ ವಿಂಗಡಿಸಿ, ಅವುಗಳಲ್ಲಿ ಮತ್ತಷ್ಟು ಆಳಕ್ಕೆ ಹೋಗಿ ಒಟ್ಟು 47 ಶೀರ್ಷಿಕೆ/ವಿಚಾರಗಳನ್ನು ಆಯ್ದುಕೊಂಡೆವು. ಈ ಪ್ರತಿಯೊಂದು ವಿಷಯ-ವಿಚಾರಕ್ಕೂ ಆಯಾ ಕ್ಷೇತ್ರದಲ್ಲಿ ಇಬ್ಬರು ಅಥವಾ ಮೂವರನ್ನು ಹೆಸರಿಸಿ ಅವರನ್ನು ಸಂಪರ್ಕಿಸಿ ಅವರ ಅನುಮತಿಯನ್ನು ಪಡೆಯುವಲ್ಲಿ ಹರಿಹರೇಶ್ವರ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದೆರೆಡು ದಿನಗಳಲ್ಲಿ ಸುಮಾರು ಮುವತ್ತು ಜನ ನುರಿತ ಬರಹಗಾರರು ಹಾಗೂ ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಒಪ್ಪಿಗೆಯನ್ನು ಪಡೆದುದರ ಕೀರ್ತಿ ಹರಿಹರೇಶ್ವರ ಹಾಗೂ ಅವರ ನಾಗಲಕ್ಷ್ಮಿಯವರಿಗೆ ಸೇರಬೇಕು. ಒಮ್ಮೆ ಬರಹಗಾರರು ಒಪ್ಪಿಕೊಂಡ ಮೇಲೆ ಪರಿಪೂರ್ಣ ಕಾರ್ಯ ಯೋಜನೆಯೊಂದನ್ನು ಹಾಕಿಕೊಂಡು ಅದಕ್ಕೆ ತಕ್ಕಂತೆ ಪ್ರತಿದಿನ ಹಾಗೂ ಪ್ರತಿ ವಾರ ಸಂಪರ್ಕದಲ್ಲಿ ತೊಡಗಿಕೊಂಡೆವು. ಬರಹಗಳು ಹೀಗಿರಬೇಕು ಎನ್ನುವ ಚೌಕಟ್ಟಿನ ಜೊತೆಗೆ ನಮಗೆ ಇಂತಹ ದಿನವೇ ಕಳುಹಿಸಿ ಎಂದು ಹೇಳುವಾಗ ಆಗಲೇ ಜುಲೈ ತಿಂಗಳು ಆರಂಭಿಸಿತ್ತು, ಕೇವಲ 25 ದಿನಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಅಭಿರುಚಿ ಹಾಗೂ ವಿಚಾರಗಳುಳ್ಳ 24 ಬರಹಗಳನ್ನು ಕಳುಹಿಸಿದ ಲೇಖಕ-ಲೇಖಕಿಯರಿಗೆ ನನ್ನ ಅನಂತಾನಂತ ನಮನಗಳು. ಜುಲೈ ಅಂತಿಮ ದಿನಗಳಲ್ಲಿ, ಪ್ರಬಂಧಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಜುಲೈ 25ರ ಎರಡು ದಿನಗಳ ಮೊದಲು ಹರಿಹರೇಶ್ವರ ಅವರು ದೈವಾಧೀನರಾದದ್ದು ನಮಗೆಲ್ಲ ಬಹಳ ದಿಗ್ಭ್ರಮೆಯನ್ನು ಮೂಡಿಸಿತ್ತು. ಇಂತಹ ಕಷ್ಟದ ಸಮಯದಲ್ಲೂ ಸಹ ಪ್ರಬಂಧಗಳನ್ನು ಅವರ ಮನೆಗೆ ತಂದು ಸಿ.ಡಿ., ಮೂಲಕ ಒದಗಿಸಿದ ಲೇಖಕರಿಗೆ, ಇ-ಮೇಲ್ ಮೂಲಕ ಪ್ರಬಂಧಗಳನ್ನು ಕಳುಹಿಸಿ ಕೊರತೆಯನ್ನು ನೀಗಿಸಿದ ಲೇಖಕರಿಗೆ ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಕಡಿಮೆಯೇ.

ಇನ್ನು ನಾಗಲಕ್ಷ್ಮಿಯವರ ವಿಚಾರದಲ್ಲಿ ಹೇಳುವುದಾದರೆ, ಮೊದಲ ದಿನದಿಂದ ಇಲ್ಲಿಯವರೆಗೆ ಅವರ ಅನುಭವ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಎಂತಹ ಕಷ್ಟದ ಸಮಯದಲ್ಲಿಯೂ ಹರಿ ಅವರ ಇಚ್ಛೆ ನೆರವೇರಲಿ ಎಂಬುದಕ್ಕೆ ಅವರ ಶಕ್ತಿ ಮೀರಿ ಶ್ರಮಿಸಿದ್ದಾರೆ. ಈ ಸಂಚಿಕೆ ನಿಮ್ಮ ಮುಂದಿರುವುದಕ್ಕೆ ಇಂದು ಅವರೇ ಕಾರಣೀಕರ್ತರು ಎಂದರೂ ತಪ್ಪಾಗಲಾರದು. ನಾಗಲಕ್ಷ್ಮಿಯವರು ಈ ವಿಚಾರದಲ್ಲಿ ಯಾವುದೇ ವಿಳಂಬವಾಗುವುದು ಬೇಡ ಎಂದು ಕಷ್ಟದ ಸಮಯದಲ್ಲಿ ಕಾರ್ಯತತ್ಪರರಾಗಿ, ನಮಗೆ ಬೇಕಾದ ಎಲ್ಲ ಸಹಾಯ ಸಿದ್ಧತೆಗಳನ್ನು ಒದಗಿಸಿಕೊಟ್ಟಿದ್ದಕ್ಕೆ ನಾವು ಆಭಾರಿಗಳು. ಈ ಕಾಯಕಕ್ಕೆ ಹಿನ್ನೆಲೆಯಲ್ಲಿ ಸಹಾಯ ನೀಡಿದವರು ಕುಮಾರಿ ರಾಧಿಕಾ ಮಹದೇವು ಮತ್ತು ಮಾಗಲು ಮಲ್ಲಿಕಾರ್ಜುನ ಅವರು - ಡಿಟಿಪಿ ಇಂದ ಹಿಡಿದು ಪ್ರತಿಯೊಂದು ಸಂವಹನ ಕಾರ್ಯದಲ್ಲಿ ನೆರವಾದ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಸಂಚಿಕೆಯ ಮುಖಪುಟವನ್ನು ಸಕಾಲದಲ್ಲಿ ಒದಗಿಸಿಕೊಟ್ಟ ಕಲಾವಿದರಾದ ಭರತೇಶ್ ಯಾದವ್ ಮತ್ತು ಸಮೂಹ ಸುರೇಶ್ ಅವರಿಗೆ ಧನ್ಯವಾದಗಳು. ಈ ಸಂಚಿಕೆಯ ಪುಟವಿನ್ಯಾಸವನ್ನು ಅಚ್ಚುಕಟ್ಟಾಗಿ ಮಾಡಿ ಮುದ್ರಣಕ್ಕೆ ಸಿದ್ಧಪಡಿಸಿಕೊಟ್ಟ ಮೈಸೂರಿನ ಎಮ್.ಸಿ. ಆನಂದ ಹಾಗೂ ಸಕಾಲದಲ್ಲಿ ಮುದ್ರಿಸಿ ಈ ಪುಸ್ತಕಗಳನ್ನು ಅಮೇರಿಕೆಗೆ ತಲುಪಿಸಿದ ಗೀತಾ ಬುಕ್‌ಹೌಸಿನ ಮಾಲಿಕರಾದ ಸತ್ಯನಾರಾಯಣ ರಾವ್ ಮತ್ತು ಸಂಜಯ ರಾವ್ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಒಬ್ಬ ಅನುಭವಿ ಪ್ರಕಾಶಕ ಹಾಗೂ ಹಿರಿಯ ಮುದ್ರಕರಾಗಿ ಸತ್ಯನಾರಾಯಣ ರಾವ್ ಅವರು ನನ್ನೊಂದಿಗೆ ಹಗಲಿರುಳು ಈ ಮುದ್ರಣ ಕಾರ್ಯದಲ್ಲಿ ವೈಯಕ್ತಿಕವಾಗಿ ಪಾಲ್ಗೊಂಡು ಈ ಪುಸ್ತಕವನ್ನು ಹೊರತಂದಿದ್ದಾರೆ ಎಂದರೆ ಅತಿಶಯವಲ್ಲ.

ನಮಗೆ ಮಾರ್ಗದರ್ಶನ ನೀಡಿ ಸಹಾಯ ಮಾಡಿದ ಸಂಚಾಲಕ ವಿ. ಪ್ರಸನ್ನ ಕುಮಾರ್, ಖಜಾಂಚಿ ಸಂತೋಷ್ ಕಡ್ಳೇಬೇಳೆಯವರಿಗೆ ಹಾಗೂ ಸಮಯಕ್ಕೆ ಸರಿಯಾಗಿ ಮುಖಪುಟಕ್ಕೆ ಕಲಾವಿದರನ್ನು ಗುರುತಿಸಿ ಕೊರತೆ ನೀಗಿದ ಚಂದ್ರಶೇಖರ ಆರಾಧ್ಯ ಅವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು. ಬಹಳ ಕಡಿಮೆ ಸಮಯದಲ್ಲಿ ಹಲವಾರು ಕಷ್ಟಗಳ ನಡುವೆ ಈ ಕೃತಿಯನ್ನು ಹೊರತರುತ್ತಿದ್ದೇವೆ, ಈ ಸಂಚಿಕೆಯಲ್ಲಿರಬಹುದಾದ ಲೋಪ-ದೋಷಗಳನ್ನು ಮನ್ನಿಸಿ ಆದರದಿಂದ ಬರಮಾಡಿಕೊಂಡು ಓದಿ ದಯವಿಟ್ಟು ನಿಮ್ಮ ಆನಿಸಿಕೆಗಳನ್ನು ಬರೆದು ತಿಳಿಸಿ ಉಪಕಾರ ಮಾಡುತ್ತೀರೆಂದು ಆಶಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X