ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಿಸನ್ ಚಪ್ಪರದಲ್ಲಿ ಅಕ್ಕ ಸಮ್ಮೇಳನಕ್ಕೆ ನಾಂದಿಪೂಜೆ

By * ಎಸ್ಕೆ. ಶಾಮಸುಂದರ
|
Google Oneindia Kannada News

Raritan Center, New Jersey
ಆರ್ಥಿಕ ಹಿಂಜರಿತಗಳ ಬವಣೆಗಳು, ನಿರುದ್ಯೋಗದ ಬೆದರಿಕೆಗಳು, ವಲಸೆಬಂದ ಕುಟುಂಬಗಳ ತವಕ ತಲ್ಲಣಗಳು, ಮಣ್ಣು ಮಸಿಗಳೇನೇ ಇರಲಿ, ಎರಡು ವರ್ಷಕ್ಕೊಮ್ಮ ಬಂದೊದಗುವ ಅಕ್ಕ ವಿಶ್ವ ಕನ್ನಡಿಗರ ಸಮ್ಮೇಳನಕ್ಕೆ ಅಮೆರಿಕಾ ಕನ್ನಡಿಗರು ಇನ್ನೊಮ್ಮೆ ಗೆಜ್ಜೆ ಕಟ್ಟಿದ್ದಾರೆ. ಜಾಗತಿಕ ಕನ್ನಡಿಗರ ಸಮ್ಮೇಳನ ಸಾಕಾರಗೊಳ್ಳಲು ಸಿದ್ಧವಾಗಿರುವುದು ಭಾರತೀಯ ಸಮುದಾಯವೇ ಹೆಚ್ಚಾಗಿ ನೆಲೆಸಿರುವ ನ್ಯೂ ಜೆರ್ಸಿ ರಾಜ್ಯದ ಪ್ರಮುಖ ನಗರ ಎಡಿಸನ್ ನಲ್ಲಿ. ಕಾರ್ಮಿಕ ದಿನಾಚರಣೆಯ ದೀರ್ಘವಾರಾಂತ್ಯದ ರಜಾದಿನಗಳಾದ ಸೆಪ್ಟೆಂಬರ್ 3,4,5 ಶುಕ್ರವಾರದಿಂದ ಭಾನುವಾರದವರೆಗೆ ಕನ್ನಡದ ವಾತಾವರಣ ಇಲ್ಲಿ ಮೈದುಂಬುತ್ತಿದೆ. ಕ್ರೆಡಿಟ್ ಕಾರ್ಡುಗಳೂ ಸಹ ಕನ್ನಡದಲ್ಲೇ ವ್ಯವಹಾರ ಮಾಡಲಿವೆಯೋ ಎಂಬಂತ ವಾತಾವರಣ!

ಅಕ್ಕ ಸಂಸ್ಥೆಯ ಬ್ಯಾನರಿನಲ್ಲಿ ಸಮ್ಮೇಳನ ನಡೆಯುತ್ತದಾದರೂ ಸಮ್ಮೇಳನವನ್ನು ವ್ಯವಸ್ಥೆಗೊಳಿಸುವ ಜವಾಬ್ದಾರಿಯನ್ನು ಯಾವುದಾದರೂ ಒಂದು ಕನ್ನಡ ಸಂಘ ಹೊತ್ತುಕೊಳ್ಳಬೇಕು. ಈ ಸಲದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವವರು ನ್ಯೂ ಜೆರ್ಸಿಯ ಸ್ಥಳೀಯ ಬೃಂದಾವನ ಕನ್ನಡ ಸಂಘದವರು. ಅಕ್ಕ ಸಂಸ್ಥೆ ಆಯೋಜಿಸುತ್ತಿರುವ 6ನೇ ಸಮ್ಮೇಳನ ಇದು. 2 ವರ್ಷಕ್ಕೊಮ್ಮೆ ಜರುಗುವ ಸಮ್ಮೇಳನ ಕಳೆದ ಬಾರಿ ಶಿಕಾಗೋ ಪಟ್ಟಣದಲ್ಲಿ ಏರ್ಪಾಟಾಗಿತ್ತು. ಮುಂದಿನ ಸಮ್ಮೇಳನದ ತಾಣ ಯಾವುದು ಎಂಬ ಬಗ್ಗೆ ಹಾಲಿ ಸಮ್ಮೇಳನದ ಸಮಯದಲ್ಲೇ ನಿರ್ಧರಿಸಲಾಗುತ್ತದೆ. ನಾಳೆ ನಾಡದ್ದು ಈ ಬಗ್ಗೆ ಇಲ್ಲಿ ನಡೆಯುವ ಅಕ್ಕ ಸಭೆಯಲ್ಲಿ ಸಮಾಲೋಚನೆಗಳು ನಡೆಯುತ್ತವೆ. ಸೆಪ್ಟೆಂಬರ್ 3ರ ಶುಕ್ರವಾರ ಅಕ್ಕ ಟ್ರಸ್ಟಿಗಳ ಸಭೆ, ಶನಿವಾರ ಅಕ್ಕ ನಿರ್ದೇಶಕ ಮಂಡಳಿ ಸಭೆ ಮತ್ತು ಭಾನವಾರದಂದು ಅಕ್ಕ ಸರ್ವಸದಸ್ಯರ ಸಭೆ ನಡೆಯಲಿದ್ದು ಸಂಸ್ಥೆಯ ಆಗುಹೋಗುಗಳು ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಈ ಬಾರಿಯ ಸಮ್ಮೇಳನದಲ್ಲಿ ಹತ್ತಿರ ಹತ್ತಿರ 4000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಅಮೆರಿಕಾದ ನಾನಾ ರಾಜ್ಯಗಳಲ್ಲಿ ವಾಸವಾಗಿರುವ ನೊಂದಾಯಿಸಿಕೊಂಡ ಕನ್ನಡ ಕುಟುಂಬಗಳ ಜತೆಗೆ ಕರ್ನಾಟಕದಿಂದ ಆಗಮಿಸುವ ನೂರಕ್ಕೂ ಹೆಚ್ಚು ಕವಿ ಕಲಾವಿದರು ಚಲನಚಿತ್ರ ತಾರೆಯರು ಮಂತ್ರಿ ಮಹೋದಯರಿಂದಾಗಿ ಸಮ್ಮೇಳನಕ್ಕೆ ಸಾಂಸ್ಕೃತಿಕ ಮತ್ತು ಆರ್ಥಿಕ ಶೋಭೆ ವೃದ್ದಿಸುವ ಅಪೇಕ್ಷೆ ಇದೆ. ಅಮೆರಿಕೆಯಲ್ಲಿರುವ ನಾನಾ ಕನ್ನಡ ಸಂಘಗಳ ವತಿಯಿಂದ ಕಲಾವಿದರು ತಂಡೋಪತಂಡವಾಗಿ ಆಗಮಿಸಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಕೆಲಸದ ದಿನ ಗುರುವಾರ ಸಂಜೆ ಜುಬ್ಬ ಮತ್ತು ಸೀರೆಗಳಿಗೆ ಇಸ್ತ್ರಿ ಹಾಕುತ್ತಿದ್ದಾರೆ. ಕರ್ನಾಟಕದಿಂದ ಆಹ್ವಾನಿತರಾದ ಬಹುತೇಕ ಗಣ್ಯರ ತುಕಡಿಗಳು ಇದೀಗ ಒಂದೊಂದಾಗಿ ಬಂದಿಳಿಯುತ್ತಿದ್ದು ಸಂಚಾಲಕ ಪ್ರಸನ್ನ ಮತ್ತು ಉಷಾ ಅವರ ಮನೆ ಮಿನಿ ಸಮ್ಮೇಳನ ಸಮಾವೇಶಗೊಂಡಂತಾಗಿದೆ.

ಸಮ್ಮೇಳನವು ಎಡಿಸನ್ ನಗರದ ಭವ್ಯ ರಾರಿಟಾನ್ ಸಭಾಂಗಣದಲ್ಲಿ ವ್ಯವಸ್ಥೆಯಾಗಿದೆ. ಮದುವೆ ಮನೆಯಂತೆ ಸಭಾಂಗಣವನ್ನು ಸಿಂಗಾರಗೊಳಿಸಲಾಗಿದ್ದು ಪ್ರತಿನಿಧಿಗಳಿಗೆ ಶುಭಾಗಮನ ಕೋರುವುದಕ್ಕೆ ಸ್ವಯಂಸೇವಕರ (ಅಕ್ಕ ಗ್ಯಾಲರಿ ನೋಡಿರಿ) ಉತ್ಸಾಹ ಕಾರಂಜಿಯಾಗಿದೆ. ಸಭಾಂಗಣದ ಸುತ್ತಮುತ್ತಲಿರುವ ಹೊಟೇಲುಗಳಲ್ಲಿ ಪ್ರತಿನಿಧಿಗಳು ಇಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳ ಊಟೋಪಚಾರ ವ್ಯವಸ್ಥೆಯನ್ನು ಅಮೆರಿಕಾದಲ್ಲಿರುವ ಪ್ರಸಿದ್ಧ (whole foods) ಭಾರತೀಯ ಅಡುಗೆ ಕಂಪನಿಯ ಹರಿ ನಾಯಕ್ ಮಾಡುತ್ತಿದ್ದಾರೆ. ಈ ಮುಂಚೆ ನಿರೀಕ್ಷಿಸಿದ್ದಂತೆ ಬೆಂಗಳೂರಿನ ಹೆಸರಾಂತ ಅಡಿಗಾಸ್ ಹೊಟೇಲ್ ಅಮೆರಿಕಾಗೆ ಬರಲಾಗಿಲ್ಲ. ವಾಸುದೇವ ಅಡಿಗರ ಅಡುಗೆಭಟ್ಟರ ತಂಡದ ಎಲ್ಲ 25 ಮಂದಿಗೆ ವೀಸಾ ಸಮಸ್ಯೆ ತಲೆದೋರಿದ್ದರಿಂದ ಆ ಯೋಜನೆ ಕೈಬಿಡಲಾಯಿತು ಎಂದು ಸಮ್ಮೇಳನದ ವ್ಯವಸ್ಥಾಪಕರೊಬ್ಬರು ದಟ್ಸ್ ಕನ್ನಡಕ್ಕೆ ಗುರುವಾರ ತಿಳಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಮ್ಮೇಳನ ಉದ್ಘಾಟಿಸುವ ಕಾರ್ಯಕ್ರಮ ಇತ್ತು. ಆದರೆ, ಆಡಳಿತಾತ್ಮಕ ಸವಾಲುಗಳು ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉದ್ಭವಿಸಿರುವ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅವರ ಅಮೆರಿಕಾ ಭೇಟಿ ರದ್ದಾಗಿದೆ ಎಂದು ಅಕ್ಕ ಅಧ್ಯಕ್ಷ ರವಿ ಡೆಂಕಣಿಕೋಟೆ ತಿಳಿಸಿದರು. ಅವರ ಪರವಾಗಿ ಆಗಮಿಸುತ್ತಿರುವ ಅಬಕಾರಿ ಮಂತ್ರಿ ರೇಣುಕಾಚಾರ್ಯ ಅಥವಾ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಅವರುಗಳ ಪೈಕಿ ಯಾರಾದರೊಬ್ಬರು ಉದ್ಘಾಟನೆ ನೆರವೇರಿಸಿ ಸಮ್ಮೇಳನ ಉದ್ದೇಶಿಸಿ ಪ್ರಮುಖ ಭಾಷಣ ಮಾತನಾಡಲಿದ್ದಾರೆ. ಜತೆಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ವಾರ್ತಾ ಮತ್ತು ಪ್ರಸಾರ ಇಲಾಖಾ ಕಾರ್ಯದರ್ಶಿ ಜಯರಾಮರಾಜೇ ಅರಸ್ ಇಲ್ಲಿನ ಕನ್ನಡಿಗರನ್ನು ಉದ್ದೇಶಿಸಿ ಭಾಷಣ ಮಾಡುವವರಿದ್ದಾರೆ.

ಹವಾಮಾನ ವೈಪರೀತ್ಯ : ಅಕ್ಕ ಸಮ್ಮೇಳನಗಳಿಗೂ ಹವಾಮಾನ ವೈಪರೀತ್ಯಗಳಿಗೂ ಬಿಡಲಾರದ ನಂಟು. 2006ರ ಬಾಲ್ಟಿಮೋರ್ ಸಮ್ಮೇಳನದಲ್ಲಿ ಜಿಟಿಜಿಟಿ ಮಳೆರಾಯ ಕಾಡಿದ್ದ. ಅದಕ್ಕೂ ಹಿಂದಿನ ಆರ್ಲ್ಯಾಂಡೋ ಸಮ್ಮೇಳನಕ್ಕೆ ಬಲಶಾಲಿಯಾದ ಚಂಡಮಾರುತಗಳು ಸವಾಲು ಹಾಕಿದ್ದವು. ಈ ಎರಡು ಸ್ಥಿತಿಗಳನ್ನು ದಾಟಿ ಬಂದಿರುವ ಅಕ್ಕ ಸಮ್ಮೇಳನವನ್ನು ಕಳೆದ ಎರಡು ದಿನಗಳಿಂದ ಅಟ್ಲಾಂಟಿಕ್ ಸಾಗರದಲ್ಲಿ ರುಬ್ಬುತ್ತಿರುವ ಶಕ್ತಿಶಾಲಿಯಾದ ತೂಫಾನು (Earl) ಗುರ್ರೆನ್ನುತ್ತಿದೆ. ಇದು ಪೂರ್ವ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದ್ದರೂ ಎಡಿಸನ್ ನಗರದವರೆಗೂ ನುಗ್ಗುವ ಸಾಹಸ ಮಾಡಲಾರದು ಎಂದು ಹವಾಮಾನ ಮುನ್ಸೂಚನೆಗಳು ಸ್ಥಳೀಯ ಟಿವಿ ಚಾನಲ್ಲುಗಳಲ್ಲಿ ಬಿತ್ತರಗೊಳ್ಳುತ್ತಿವೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಪ್ರತಿನಿಧಿಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ವ್ಯವಸ್ಥೆಗೊಳಿಸುವಲ್ಲಿ ಸಮಿತಿಯ ಸದಸ್ಯರೆಲ್ಲ ಮಗ್ನರಾಗಿದ್ದೇವೆ ಎಂದು ಸಮಿತಿಯ ಪರವಾಗಿ ಶಂಕರ ಶೆಟ್ಟಿ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ನಿಮ್ಮನ್ನು ಎದುರುಗೊಳ್ಲುವ ಪುರಂದರ ಭವನದಲ್ಲಿ ಸ್ವಾಗತ ಮತ್ತು ನೊಂದಣಿ ಡೆಸ್ಕ್ ದಿನದ 24 ಗಂಟೆ ತೆರೆದಿರುತ್ತದೆ. ಇದು ಶನಿವಾರ ಸಂಜೆಯವರೆಗೂ ಇರಲಿದ್ದು ಆನಂತರ ಬರುವ ಕನ್ನಡಿಗರಿಗೆ ಪ್ರವೇಶಾವಕಾಶ ಸಿಗಲಾರದು. ಶುಕ್ರವಾರ ಬೆಳಗ್ಗೆ ಪೂರ್ಣಕುಂಭ ಸ್ವಾಗತದೊಂದಿಗೆ ಆರಂಭವಾಗುವ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆಯೇ ಇದೆ. 108 ಕಲಾವಿದರು ಸಾದರಪಡಿಸುವ 208 ಮನರಂಜನೆ ಮತ್ತು ಮನೋಲ್ಲಾಸ ಕಾರ್ಯಕ್ರಮ ಅನಾವರಣಕ್ಕೆ ಮುಖ್ಯವೇದಿಕೆ ವೃತ್ತಿ ರಂಗಭೂಮಿ ಪಿತಾಮಹ 'ಗುಬ್ಬಿ ವೀರಣ್ಣ' ವೇದಿಕೆ ಎದು ನಾಮಕರಣ ಮಾಡಲಾಗಿದೆ. ಸಾಹಿತ್ಯಿಕ ಕಾರ್ಯಕ್ರಮಗಳಿಗೆ 'ಡಿವಿಜಿ ಭವನ' ಸೇರಿದಂತೆ ಒಟ್ಟು ಆರುವೇದಿಕೆಗಳಿವೆ. ನೃತ್ಯ, ನಾಟಕ, ಕವಿಗೋಷ್ಠಿ, ಹಾಸ್ಯಧಾರೆ, ಸಾಹಿತ್ಯ ಸಂವಾದ, ಯಾವನ ಮೋಹನ ಮುರಳಿ ಕರೆಯಿತು, ಕರುನಾಡ ಗೀತೆ, ಯಕ್ಷಗಾನ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಅಕ್ಕ ಐಡಲ್, ಅಕ್ಕ ಕ್ರಿಕೆಟ್ ಲೀಗ್, ಧಾರ್ಮಿಕ ಮತ್ತು ಆದ್ಯಾತ್ಮಿಕ ಉಪನ್ಯಾಸಗಳು, ಶಾಸ್ತ್ರೀಯ ಸಂಗೀತ ರಸದೌತಣಗಳ ಜತೆಗೆ ಅಕ್ಕ ಚಲನಚಿತ್ರ ಪ್ರಶಸ್ತಿ ಪ್ರದಾನ ಮತ್ತು ಭಾನುವಾರ ಸಂಜೆಯ ಚಲನಚಿತ್ರ ರಸಮಂಜರಿ ಕಾರ್ಯಕ್ರಮ ವಿಶೇಷ ಆಕರ್ಷಣೆಗಳಾಗಿವೆ.

English summary
AKKA World Kannada Conference, a curtain Raiser by Sham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X