• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಪ್ತಸಾಗರದಾಚೆ ಕನ್ನಡ ಕಲರವ

By * ಎಸ್. ಉಮೇಶ್, ಮೈಸೂರು
|

AKKA World Kannada Conference
ಅಮೆರಿಕಾದ ನ್ಯೂ ಜೆರ್ಸಿ ನಗರ 6ನೇ ವಿಶ್ವ ಅಕ್ಕ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿದೆ. ಅಕ್ಕ ಸಮ್ಮೇಳನವೆಂದರೆ ಅದೊಂದು ಕನ್ನಡ ಹಬ್ಬ, ಸಾಹಿತ್ಯ ಜಾತ್ರೆ, ಅನಿವಾಸಿ ಕನ್ನಡಿಗರ ಭಾವ ಸಂಗಮ. ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರೆಲ್ಲರ ಭಾವನೆಗಳು ಮಿಳಿತಗೊಳ್ಳುವ ಭವ್ಯ ವೇದಿಕೆ.

ಅಮೆರಿಕಾದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ತಮ್ಮ ಅದ್ಭುತ ಪ್ರತಿಭೆಯಿಂದ ಸಾಗರದಾಚೆಗಿನ ಊರುಗಳಲ್ಲಿ ತಮ್ಮದೆ ಆದ ನೆಲೆ ಕಂಡುಕೊಂಡಿದ್ದಾರೆ. ಇಷ್ಟಾದರೂ ಅವರೆಲ್ಲರ ಬೇರುಗಳು ಇರುವುದು ಈ ನಾಡಿನ ನೆಲದಲ್ಲಿ. ತಮ್ಮ ನಾಡು ನುಡಿಯ ಬಗ್ಗೆ ತಮಗಿರುವ ಅಪಾರ ಪ್ರೀತಿ, ವಿಶ್ವಾಸ, ಆದರ ಮತ್ತು ಗೌರವವನ್ನು ವ್ಯಕ್ತಪಡಿಸಲು ಅನಿವಾಸಿ ಕನ್ನಡಿಗರು ವಿಶೇಷವಾಗಿ ಅಮೆರಿಕನ್ನಡಿಗರು ಕಟ್ಟಿಕೊಂಡಿರುವ ಸಂಸ್ಥೆ ಅಕ್ಕ. ಪ್ರತಿ 2 ವರ್ಷಕ್ಕೊಮ್ಮೆ ಅಮೆರಿಕಾದ ವಿವಿಧ ಪಟ್ಟಣಗಳಲ್ಲಿ ಆಯೋಜನೆಗೊಳ್ಳುವ ಈ ಸಮ್ಮೇಳನ ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತದೆ. ಕನ್ನಡಾಂಬೆಯ ಈ ಕನ್ನಡ ಹಬ್ಬ ನಿರಂತರವಾಗಿ ಮೂರು ದಿನಗಳ ಕಾಲ ನಡೆಯುತ್ತದೆ. ಅಲ್ಲಿ ಸಂಗೀತ, ಸಾಹಿತ್ಯ, ಕಲೆ, ಆಧ್ಯಾತ್ಮ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂದಿಸಿದಂತೆ ಕಾರ್ಯಕ್ರಮಗಳು ಚರ್ಚಾಗೋಷ್ಠಿಗಳು ಮತ್ತು ವಿಚಾರ ಸಂಕಿರಣಗಳು ಏರ್ಪಾಡಾಗುತ್ತದೆ.

ಅಂತೆಯೇ ಈ ಬಾರಿಯು ಅಕ್ಕ ಸಮ್ಮೇಳನ ಅಮೆರಿಕಾದ ಬಂದರು ನಗರಿ ನ್ಯೂ ಜೆರ್ಸಿಯಲ್ಲಿ. ಹೀಗಾಗಿ ಅಮೆರಿಕಾದ ಕನ್ನಡಿಗರು ಕನ್ನಡದ ತೇರನ್ನು ಎಳೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕರ್ನಾಟಕದಿಂದಲೂ ಅನೇಕ ಕಲಾವಿದರು ರಾಜಕಾರಣಿಗಳು, ಸಾಹಿತಿಗಳು ಮತ್ತು ಮಠಾಧಿಪತಿಗಳು ಪಾಲ್ಗೊಳ್ಳುವವರಿದ್ದಾರೆ. ಈ ಸಮ್ಮೇಳನದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಮತ್ತು ಆ ಸಾಹಿತ್ಯ ಕಲರವವನ್ನು ಆಲಿಸುವ ಅಪೂರ್ವ ಅವಕಾಶ ನನಗೂ ದೊರೆತಿದೆ. ಅದಕ್ಕಾಗಿ ನಾನು ನ್ಯೂ ಜೆರ್ಸಿಗೆ ಹೊರಟು ನಿಂತಿದ್ದೇನೆ.

ಸಮ್ಮೇಳನ ವರ್ಣರಂಜಿತ ಮೆರವಣಿಗೆಯೊಂದಿಗೆ ಪ್ರಾರಂಭವಾಗಲಿದೆ. ಡೊಳ್ಳು ಕುಣಿತ, ವೀರಗಾಸೆಯೊಂದಿಗೆ ಕರ್ನಾಟಕದ ದೇಸಿ ಕಲಾವಿದರು ಮತ್ತು ಅಮೆರಿಕನ್ನಡಿಗರು ಒಟ್ಟಾಗಿ ಕುಣಿಯುತ್ತಾ ಹೆಜ್ಜೆ ಹಾಕುವುದನ್ನು ನೋಡುವುದೇ ರೋಮಾಂಚನಕಾರಿ ಅನುಭವ. ಡಾ|| ಬಾಲಮುರಳಿಕೃಷ್ಣ ನನ್ನ ನೆಚ್ಚಿನ ಗಾಯಕ. ಅವರು ಅಲ್ಲಿಗೆ ಬರುತ್ತಿದ್ದಾರೆ. ಆ ಕೃಷ್ಣನ ಮುರಳಿಗಾನದ ಅಮೃತಪಾನ ಸವಿಯುವ ಅವಕಾಶ ಅಲ್ಲಿನ ಕನ್ನಡಿಗರದು. ಜೊತೆಗೆ ಯಶವಂತ ಸಂದೇಶ್ ಪಾಂಡೆಯವರ ನಾಟಕ, ಪ್ರಭಾತ್ ಕಲಾವಿದರ ನೃತ್ಯ ರೂಪಕ ಮೊದಲ ದಿನದ ಹೈಲೈಟ್ಸ್.

ಇನ್ನು ಮೂರು ದಿನಗಳ ಕಾಲ ನಡೆಯುವ ಸಾಹಿತ್ಯಗೋಷ್ಠಿಗಳು ಸಾಹಿತ್ಯಾಸಕ್ತರ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ಸಪ್ತಸಾಗರದಾಚೆ ಸಾವಿರಾರು ಮೈಲಿ ದೂರದ ನಾಡಿನಲ್ಲಿ ಕನ್ನಡ ಕಾರಂಜಿ ಪುಟಿದೇಳಲಿದೆ. ಅಲ್ಲಿ ಕನ್ನಡದ ದನಿ ಕೇಳುವುದೇ ಕರ್ಣಾನಂದ. ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು.... ಎಂಬ ಕವಿ ವಾಣಿ ಇಲ್ಲಿ ಅಕ್ಷರಶಃ ಅನುಭವಕ್ಕೆ ಬರುತ್ತದೆ. ವಿದೇಶಿ ನೆಲದಲ್ಲಿ ಕನ್ನಡದ ಇಂಪು, ಅದು ಸೂಸುವ ಕಂಪು ಎಂತವರನ್ನು ಮೈಮರೆಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಕ್ಕ ಸಾಹಿತ್ಯ ಬಳಗ ಈ ಬಾರಿ ಯಾವ ಮೋಹನ ಮುರುಳಿ ಕರೆಯಿತೋ... ಎಂಬ ವಿಶಿಷ್ಠ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಸಾಗರದಾಚೆ ಎಲ್ಲೋ ಕುಳಿತ ಕನ್ನಡಿಗರು ಬೆಂಗಳೂರಿನ ನಯನ ಕಲಾಮಂದಿರಲ್ಲಿ ಕುಳಿತ ನಾಡಿನ ಸಾಹಿತ್ಯ ದಿಗ್ಗಜರ ಸಂಪರ್ಕ ಬೆಳೆಸಿ ಚರ್ಚೆ ನಡೆಸುವ ಕಾರ್ಯಕ್ರಮ ಅದು. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಕನ್ನಡಿಗರು ಅಲ್ಲಿ ಪ್ರಧಾನ ವೇದಿಕೆಯಿಂದ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನಯನ ಕಲಾಮಂಟಪಕ್ಕೆ ಕನೆಕ್ಟ್ ಆಗಲಿದ್ದಾರೆ. ಒಂದು ಗಂಟೆ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿನ ಅದ್ವಿತೀಯ ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಆನಂತಮೂರ್ತಿ, ವೆಂಕಟೇಶ್‌ಮೂರ್ತಿ, ಸುಧಾನಾರಾಯಣ ಮೂರ್ತಿ, ಸೇರಿದಂತೆ ಅನೇಕರು ತಮ್ಮ ಶುಭ ಸಂದೇಶವನ್ನು ಅಮೆರಿಕನ್ನಡಿರಿಗೆ ರವಾನಿಸಲಿದ್ದಾರೆ. ಇದಲ್ಲದೆ ನೃತ್ಯ, ಯಕ್ಷಗಾನ, ಹರಿಕಥೆ, ಸಮೂಹ ಗಾಯನ, ಬೊಂಬೆ ಪ್ರದರ್ಶನ, ಲೇಸರ್ ಶೋ, ಹೀಗೆ ಒಂದೇ ಎರಡೇ. ಇಡೀ ಮೂರು ದಿನ ಸಂಭ್ರಮದ ವಾತಾವರಣ ಅಲ್ಲಿ ಸೃಷ್ಟಿಯಾಗಲಿದೆ.

ಇಷ್ಟೆಲ್ಲಾ ಆದಮೇಲೆ ಒಂದಿಷ್ಟು ಹಾಸ್ಯ ಬೇಡವೇ? ಹೌದು! ಅಮೆರಿಕಾದ ಕನ್ನಡಿಗರನ್ನು ನಕ್ಕುನಗಿಸಲು ಯಶವಂತ ಸರದೇಶ ಪಾಂಡೆಯವರೂ ಬರುತ್ತಿದ್ದಾರೆ. ಅವರ ಜನಪ್ರಿಯ ನಾಟಕ ಆಲ್ ದಿ ಬೆಸ್ಟ್ ಕೂಡ ಅಲ್ಲಿ ಪ್ರದರ್ಶನಗೊಳ್ಳುತ್ತಿದೆ. ಜೊತೆಗೆ ನಗೆಲೀಲೆಯ ಮಾಂತ್ರಿಕ ನಮ್ಮ ಪ್ರೀತಿಯ ಕೃಷ್ಣೇಗೌಡರೂ ಅಲ್ಲಿಗೆ ಹಾಜರ್. ಕೃಷ್ಣಗೌಡರು ಬಂದ ಮೇಲೆ ಹಾಸ್ಯಕ್ಕೆ ಬರವೆಲ್ಲಿ.

ಇನ್ನು ಸಮ್ಮೇಳನದ ಅಂಗಳದಲ್ಲಿ ಬಂದವರನ್ನು ಸ್ವಾಗತಿಸುವವರು ನಮ್ಮ ಪುನೀತ್‌ ರಾಜ್‌ಕುಮಾರ್ ಮತ್ತು ಚಿನಕುರಳಿ ಹುಡುಗಿ ರಮ್ಯ. ಇವರಿಬ್ಬರು ಅಕ್ಕ ಸಮ್ಮೇಳನದ ಪ್ರಚಾರದ ರಾಯಭಾರಿಗಳು. ಸಮ್ಮೇಳನ ಎಂದ ಮೇಲೆ ಊಟ ತಿಂಡಿ ಇಲ್ಲದೇ ಇದ್ದೀತೆ? ಬಗೆಬಗೆಯ ಭಕ್ಷ ಬೋಜ್ಯಗಳು ಬಾಯಲ್ಲಿ ನೀರೂರಿಸುವಂತೆ ಮಾಡುವುದು ಖಚಿತ. ಇದೆಲ್ಲವೂ ಆದ ನಂತರ ನ್ಯೂಯಾರ್ಕ್ ನಗರವನ್ನು ಒಂದು ಸುತ್ತಿಹಾಕಿ ಬಂದರೆ ಎಲ್ಲವೂ ಮುಗಿದಂತೆ.

ಒಟ್ಟಿನಲ್ಲಿ 6ನೇ ವಿಶ್ವ ಅಕ್ಕ ಸಮ್ಮೇಳನದ ಒಂದೊಂದು ಕ್ಷಣವೂ ಅಲ್ಲಿನ ಕನ್ನಡಿಗರಿಗೆ ಆನಂದದ ರಸನಿಮಿಷಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more